







ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಒಂಬತ್ತು ದಿನಗಳ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ನವರಾತ್ರಿ ಉತ್ಸವಗಳಿಗೆ ಅ.11ರಂದು ಚಾಲನೆ ನೀಡಲಾಯಿತು.


ಕ್ಷೇತ್ರದಲ್ಲಿ ಬೆಳಗ್ಗಿನ ನಿತ್ಯ ಪೂಜೆಯ ಬಳಿಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಗನ್ನಾಥ ರೈ ಅವರು ನವರಾತ್ರಿ ಉತ್ಸವ ದೀಪ ಬೆಳಗಿಸುವ ಮೂಲಕ ಉತ್ಸವಗಳಿಗೆ ಚಾಲನೆ ನೀಡಿದರು. ನಂತರ ಒಂಬತ್ತು ದಿನಗಳ ಕಾಲ ವಿವಿಧ ಭಜನಾ ಮಂಡಳಿಗಳಿಂದ ನಡೆಯಲಿರುವ ಭಜನಾ ಸೇವೆಯನ್ನು ಕ್ಷೇತ್ರದ ಹಿರಿಯ ಅರ್ಚಜ ಕೇಶವ ಭಟ್ ದೀಪ ಬೆಳಗಿಸಿ ಚಾಲನೆ ನೀಡಿದರು. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.




ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ
ನವರಾತ್ರಿ ಉತ್ಸವದಲ್ಲಿ 9 ದಿನಗಳ ಕಾಲ ನಡೆಯಲಿರುವ ಲಲಿತ ಕಲಾ ಸೇವೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಜೆ ಚಾಲನೆ ದೊರೆಯಲಿದ್ದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಚಾಲನೆ ನೀಡಲಿದ್ದಾರೆ. ನಂತರ ಪ್ರಥಮ ದಿನದ ಕಾರ್ಯಕ್ರಮದಲ್ಲಿ ಮಂಜುಳಾ ಸುಬ್ರಹ್ಮಣ್ಯಂ ಅವರ ನೇತೃತ್ವದ ಖ್ಯಾತ ಭರತನಾಟ್ಯ ತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ನವರಾತ್ರಿ ಉತ್ಸವದ ಅಂಗವಾಗಿ ಒಂಬತ್ತು ದಿನಗಳ ಕಾಲ ನಿರಂತರವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಗನ್ನಾಥ ರೈ ತಿಳಿಸಿದ್ದಾರೆ.










