ಧರ್ಮಸ್ಥಳ: ಚಿತ್ತಾರ ಕಲೆ ರಚನಾ ತರಬೇತಿ ಶಿಬಿರ ಉದ್ಘಾಟನೆ

0

ಧರ್ಮಸ್ಥಳ: ಅನೇಕ ತರಹದ ಪ್ರಾಚೀನ ಕಲೆಗಳು ಇಂದಿನ ದಿನಗಳಲ್ಲಿ ನಶಿಸುತ್ತಿವೆ. ಅವುಗಳನ್ನು ಉಳಿಸಿ ಬೆಳೆಸುವ ಬಗ್ಗೆ ಚಿಂತನೆ ನಡೆಯಬೇಕಿದೆ. ಹಳ್ಳಿಗಳ ಪ್ರತಿ ಮನೆಯಲ್ಲೂ ಹಾಸುಹೊಕ್ಕಿದ್ದ ಕಲೆಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಕಲಾಸಕ್ತರಿಗೆ ವಿಶೇಷ ತರಬೇತಿ ನೀಡುವ ಕಾರ್ಯಾಗಾರ, ಎಲ್ಲಡೆ ನಡೆಯಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಎರಡು ದಿನಗಳ ಚಿತ್ತಾರ ಕಲೆ ರಚನಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ ಡಾ. ಹೇಮಾವತಿ ವೀ. ಹೆಗ್ಗಡೆಯವರು ಮಾತನಾಡಿ, ಹಳ್ಳಿಗಳಲ್ಲಿ ಹಸೆ, ರಂಗೋಲಿ, ಕಸೂತಿ ಕಲೆ ಮುಂತಾದ ಅನೇಕ ಕಲಾ ನೈಪುಣ್ಯಗಳು ಜನ ಜೀವನದೊಂದಿಗೆ ಬೆಸೆದಿದ್ದವು. ಕಾಲ ಕಳೆದಂತೆ ಇವೆಲ್ಲ ತೆರೆಮರೆಗೆ ಸರಿದಿದ್ದು, ಇವುಗಳ ಪುನರುಜೀವಗೊಳಿಸುವ ಪ್ರಕ್ರಿಯೆ ನಡೆಯಬೇಕಿದೆ. ನಮ್ಮ ನೆಲದ ಕಲಾ ವೈಭವವಕ್ಕೆ ಇಂತಹ ಶಿಬಿರಗಳು ಕನ್ನಡಿಯಾಗಲಿದೆ. ಶ್ರೀ ಕ್ಷೇತ್ರದ ಮಂಜೂಷಾ ಮ್ಯೂಸಿಯಂನ ಮೂಲಕ ಪ್ರಾಚೀನ ಕಲೆಗಳ ಮಾಹಿತಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದರು.

ಕಾರ್ಯಾಗಾರದಲ್ಲಿ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳಾಗಿ ‘ಸ್ಥಳೀಯ ಕಲೆ  ಪುನರು ಜ್ಜೀವನ ಸಂಸ್ಥೆ’ಯ ಸ್ಥಾಪಕಿ ಗೀತಾ ಭಟ್ ಮತ್ತು ಕಲಾವಿದ, ಕಲಾಶಿಕ್ಷಕ ಸುನಿಲ್ ಮಿಶ್ರಾ ಶಿರ್ವ ಆಗಮಿಸಿದ್ದರು. ಸುಮಾರು 50ಕ್ಕೂ ಹೆಚ್ಚು ಕಲಾಸಕ್ತರು ಶಿಬಿರದಲ್ಲಿ ಭಾಗವಹಿಸಿದ್ದರು. ಮಂಜೂಷಾ ಮ್ಯೂಸಿಯಂನ ಪುಷ್ಪದಂತ ಹೆಗ್ಡೆ, ರಿತೇಶ್ ಶರ್ಮಾ, ಚೈತಾ ರಾವ್ ಸುಭಾಶ್ ಜೈನ್, ರಾಜೇಶ್ ದೇವಾಡಿಗ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here