ಪಡಿತರ ವಿತರಣೆಯ ಜವಾಬ್ದಾರಿ ವಹಿಸಿಕೊಂಡ ಗುಂಡೂರಿ ಹಾಲು ಉ.ಸ. ಸಂಘ: ರಸ್ತೆ ಬದಿ ಪಡಿತರ ವಿತರಣೆಗೆ ಮುಕ್ತಿ

0

ವೇಣೂರು: ಮಳೆ, ಬಿಸಿಲಿಗೆ ಸಂಚಾರಿ ವಾಹನದಲ್ಲಿ ರಸ್ತೆಬದಿಯಲ್ಲಿ ಪಡಿತರ ವಿತರಣೆ ಮಾಡುತ್ತಿದ್ದ ನರಕಯಾತನೆಗೆ ಕೊನೆಗೂ ಮುಕ್ತಿ ದೊರೆತಿದೆ. ಗುಂಡೂರಿ ಹಾಲು ಉತ್ಪಾದಕರ ಸಹಕಾರ ಸಂಘವು ಗುಂಡೂರಿಯಲ್ಲಿ ಪಡಿತರ ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಪಡಿತರ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.

ನ.15ರಂದು ಪಡಿತರ ವಿತರಣೆಯನ್ನು ನೂತನ ಗೋಡೌನ್ ಕಟ್ಟಡದಲ್ಲಿ ಆರಂಭಿಸಲಾಗಿದೆ. ಸಂಘದ ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್, ನಿರ್ದೇಶಕರಾದ ಪಿ. ರಮೇಶ್ ಪೂಜಾರಿ ಪಡ್ಡಾಯಿಮಜಲು, ಕುಮಾರು ಹೆಗ್ಡೆ, ಭಾಸ್ಕರ ಬಲ್ಯಾಯ, ಸುನಂದ, ಪಂಚಾಯತ್ ಸದಸ್ಯೆ ತೇಜಸ್ವಿನಿ ಪ್ರವೀಣ್, ಜನಜಾಗೃತಿ ವೇದಿಕೆ ವಲಯಧ್ಯಕ್ಷ ಹರೀಶ್ ಕುಮಾರ್, ಸಂಘದ ಕಾರ್ಯದರ್ಶಿ ರಾಜು ಪೂಜಾರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಬಹುಕಾಲದ ಸಮಸ್ಯೆ ಗುಂಡೂರಿ ಗ್ರಾಮಸ್ಥರಿಗೆ ವೇಣೂರು ಪ್ರಾ.ಕೃ.ಪ.ಸ ಸಂಘದಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿತ್ತು. ಆದರೆ ಐದಾರು ಕಿ.ಮೀ. ದೂರದಿಂದ ಪಡಿತರ ಸಾಗಿಸಲು ತೊಂದರೆ ಆಗುತ್ತಿದೆ ಎಂಬ ಗ್ರಾಹಕರ ದೂರಿನ ಹಿನ್ನೆಲೆಯಲ್ಲಿ ಸಂಚಾರಿ ವಾಹನದಲ್ಲಿ ತಂದು ಪಡಿತರ ವಿತರಣೆ ಮಾಡಲಾಗುತ್ತಿತ್ತು. ಇದು ಮಳೆಗಾಲದಲ್ಲಿ ವಿತರಣೆಗೆ ಸಮಸ್ಯೆ ಆಗುತ್ತಿತ್ತು. ಮತ್ತೊಂದೆಡೆ ಸರ್ವರ್ ಕೊರತೆಯಿಂದ ಪಡಿತರ ವಿತರಣೆ ವಿಳಂಬವಾಗುತ್ತಿತ್ತು. ಈಗಾಗಿ ಇಲ್ಲಿಗೆ ಶಾಶ್ವತ ಪಡಿತರ ವಿತರಣೆ ಕೇಂದ್ರ ಆಗಬೇಕೆಂಬ ಕೂಗು ಕೇಳಿ ಬರುತ್ತಿತ್ತು. ಗ್ರಾಮಸಭೆಗಳಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇದೀಗ ಪಡಿತರ ವಿತರಣೆಯ ಬಹುದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಗುಂಡೂರಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಬಹುಕಾಲದ ಸಮಸ್ಯೆಯೊಂದು ಸುಖಾಂತ್ಯ ಕಂಡಿದೆ.

ಪಂಚಾಯತ್ ಅನುದಾನದಲ್ಲಿ ಗೋಡೌನ್ ಆರಂಬೋಡಿ ಗ್ರಾ.ಪಂ.ನ ಉದ್ಯೋಗ ಖಾತರಿ ಯೋಜನೆ ಹಾಗೂ ಇನ್ನಿತರ ಅನುದಾನ ಬಳಸಿ ಕಳೆದ 4 ವರ್ಷಗಳ ಹಿಂದೆ ಗುಂಡೂರಿಯ ತುಂಬೆದಲೆಕ್ಕಿ ಗೋಡೌನ್ ಕಟ್ಟಡವನ್ನು ನಿರ್ಮಿಸಲಾಗಿತ್ತು. ಇದೇ ಕಟ್ಟಡವನ್ನು ಇದೀಗ ಪಂಚಾಯತ್ ಪಡಿತರ ವಿತರಣೆಗೆ ನೀಡಿದ್ದು, ನ. 15ರಿಂದಲೇ ಗುಂಡೂರಿ ಹಾಲು ಉ.ಸ. ಸಂಘದ ಸಿಬ್ಬಂದಿಗಳು ಪಡಿತರ ವಿತರಣೆಯಲ್ಲಿ ತೊಡಗಿದ್ದಾರೆ. ಸಂಘದ ಈ ನಿರ್ಧಾರ ಗುಂಡೂರಿ ಪಡಿತರ ಗ್ರಾಹಕರ ದೀರ್ಘಕಾಲದ ಸಮಸ್ಯೆಗೆ ಮುಕ್ತಿ ದೊರೆತಂತಾಗಿದೆ.

LEAVE A REPLY

Please enter your comment!
Please enter your name here