ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ವಿತರಣೆಗೆ ಪುತ್ತೂರಿನಲ್ಲಿ ಚಾಲನೆ

ಪುತ್ತೂರು: ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ಓಮಿಕ್ರಾನ್ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ 60 ವರ್ಷ ದಾಟಿದ ಅನಾರೋಗ್ಯ ಪೀಡಿತರು, ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮುಂಜಾಗ್ರತಾ ಡೋಸ್ (ಬೂಸ್ಟರ್ ಡೋಸ್) ಲಸಿಕಾ ಅಭಿಯಾನಕ್ಕೆ ಪುತ್ತೂರು ತಾಲೂಕಿಗೆ ಸಂಬಂಧಿಸಿ ಜ.10ರಂದು ಪುತ್ತೂರು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಾಲನೆ ನೀಡಿದರು.

ಆರೋಗ್ಯ ಯುದ್ದದಲ್ಲಿ ಭಾರತ ಗೆಲುವು ಸಾಧಿಸಿದೆ:
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ವಿಶ್ವವನ್ನೇ ಕಾಡಿದ ಮಹಾಮಾರಿ ಕೊರೋನಾದ ವಿರುದ್ದ ಆರೋಗ್ಯ ಯುದ್ಧವನ್ನು ಸಾರುವ ಮೂಲಕ ಭಾರತವು ಗೆದ್ದಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರವು ಕೊರೋನಾ ತಡೆಯುವಲ್ಲಿ ಪ್ರತೀ ಹಂತದಲ್ಲೂ ಯಶಸ್ವಿಯಾಗಿದೆ. ಈಗಾಗಲೇ ದೇಶದಲ್ಲಿ 140 ಕೋಟಿ ಜನರಿಗೆ ಕೊರೋನಾ ವಿರುದ್ಧದ ಲಸಿಕೆ ನೀಡಲಾಗಿದೆ. ಇದೀಗ ಅತೀ ಅಗತ್ಯವುಳ್ಳವರಿಗೆ ಬೂಸ್ಟರ್ ಡೋಸ್ ಲಸಿಕೆಯನ್ನು ನೀಡಲು ಸರಕಾರ ಮುಂದಾಗಿದೆ ಎಂದರು.

ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜೈನಾಭ, ಮೂರನೇ ಅಲೆಯನ್ನು ತಡೆಯಲು ಬೂಸ್ಟರ್ ಡೋಸ್‌ನ್ನು ನೀಡಲು ಮುಂದಾಗಿದೆ. ಎರಡು ಡೋಸ್ ಲಸಿಕೆ ಪಡೆದವರು ಎರಡನೇ ಡೋಸ್ ಪಡೆದ ೯ ತಿಂಗಳ ಬಳಿಕ ೬೦ ವರ್ಷ ವಯಸ್ಸು ಮೀರಿದರೆ ಬೂಸ್ಟರ್ ಡೋಸ್ ಪಡೆಯಬಹುದು. ಹೃದ್ರೋಗ, ಡಯಾಬಿಟಿಸ್, ರಕ್ತದೊತ್ತಡ ಕಾಯಿಲೆಯಿಂದ ಬಳಲುವವರು ಬೂಸ್ಟರ್ ಡೋಸ್ ಪಡೆದುಕೊಳ್ಳುವಂತೆ ಅವರು ಸಲಹೆ ಮಾಡಿದರು. ವೇದಿಕೆಯಲ್ಲಿ ನಗರಸಭಾ ಉಪಾಧ್ಯಕ್ಷೆ ಹಾಗೂ ಆರೋಗ್ಯ ರಕ್ಷಾ ಸಮಿತಿಯ ಸದಸ್ಯೆ ವಿದ್ಯಾ ಆರ್. ಗೌರಿ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ರಫೀಕ್ ದರ್ಬೆ, ಡಾ. ಕೃಷ್ಣ ಪ್ರಸನ್ನ ಉಪಸ್ಥಿತರಿದ್ದರು. ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ಪುತ್ತೂರಾಯ ಸ್ವಾಗತಿಸಿ, ವಂದಿಸಿದರು.

ಯಾರಿಗೆಲ್ಲ ಬೂಸ್ಟರ್ ಡೋಸ್ ಲಸಿಕೆ:
ಮುನ್ನೆಚ್ಚರಿಕೆಯ ಲಸಿಕೆ ಡೋಸ್‌ಗಳಿಗೆ ತೆಗೆದುಕೊಳ್ಳುವವರು ಮುಂಚಿತವಾಗಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ಅರ್ಹರು ನೇರವಾಗಿ ಲಸಿಕೆ ಹಾಕಿಸಿಕೊಳ್ಳಲು ಸಮಯ ನಿಗದಿಪಡಿಸಿಕೊಳ್ಳಬಹುದು ಅಥವಾ ನೇರವಾಗಿ ಯಾವುದೇ ಲಸಿಕೆ ಕೇಂದ್ರಕ್ಕೆ ಹೋಗಬಹುದು. ಪ್ರಸ್ತುತ ಮುಂಚೂಣಿ ಕಾರ್ಯಕರ್ತರು, ಹಿರಿಯರಿಗೆ ಮಾತ್ರ ಬೂಸ್ಟರ್ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಎಲ್ಲ ವಯೋಮಾನದವರಿಗೂ ಬೂಸ್ಟರ್ ಡೋಸ್ ನೀಡುವ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವವರು, ಪೊಲೀಸ್ ಸೇರಿದಂತೆ ಇನ್ನಿತರ ಮುಂಚೂಣಿ ಕಾರ್ಯಕರ್ತರು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಇತರ ದೀರ್ಘಕಾಲದ ಕಾಯಿಲೆಗಳಂತಹ ಸಹ ಅಸ್ವಸ್ಥತೆಗಳನ್ನು ಹೊಂದಿರುವ 60 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ವೈದ್ಯರ ಸಲಹೆಯ ಮೇರೆಗೆ ಮುನ್ನೆಚ್ಚರಿಕೆ ಡೋಸ್ ಅನ್ನು ಪಡೆಯುವ ಆಯ್ಕೆ ಹೊಂದಿರುತ್ತಾರೆ. ಬೂಸ್ಟರ್ ಲಸಿಕೆಗಳನ್ನು ತೆಗೆದುಕೊಳ್ಳಲು ಅರ್ಹರಾಗಿರುವವರು, ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದ 9 ತಿಂಗಳ ನಂತರ ಮಾತ್ರ ಪಡೆಯಬಹುದು. ಮೊದಲ ಮತ್ತು ಎರಡನೇ ಡೋಸ್ ನಲ್ಲಿ ಸ್ವೀಕರಿಸಿದ ಲಸಿಕೆಯನ್ನೇ ಮೂರನೇ ಡೋಸ್ ನಲ್ಲಿಯೂ ಪಡೆಯಬೇಕು. ಕೋವಿಶಿಲ್ಡ್ ತೆಗೆದುಕೊಂಡಿದ್ದವರು ಮತ್ತೆ ಕೋವಿಶಿಲ್ಡ್ ಅನ್ನೇ ತೆಗೆದುಕೊಳ್ಳಬೇಕು. ಕೋ ವ್ಯಾಕ್ಸಿನ್ ತೆಗೆದುಕೊಂಡಿದ್ದವರು ಬೂಸ್ಟರ್ ಡೋಸ್ ಆಗಿ ಅದನ್ನೇ ತೆಗೆದುಕೊಳ್ಳಬೇಕು. ಇದರಲ್ಲಿ ಯಾವುದೇ ಮಿಕ್ಸ್ ಅಂಡ್ ಮ್ಯಾಚ್ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.