ಅಡ್ಡಹೊಳೆ: ಬೈಕ್ ಮೇಲೆ ಬಿದ್ದ ಮರ, ಬೈಕ್ ಸವಾರನಿಗೆ ಗಾಯ

0

  • 2 ವಾರದ ಹಿಂದೆ ಕಾರಿನ ಮೇಲೆ ಮರಬಿದ್ದು ಚಾಲಕ ಮೃತಪಟ್ಟ ಸ್ಥಳದಲ್ಲೇ ಮತ್ತೊಂದು ಅವಘಡ

 

ನೆಲ್ಯಾಡಿ: ಎರಡು ವಾರದ ಹಿಂದೆ ಕಾರಿನ ಮೇಲೆ ಮರಬಿದ್ದು ಚಾಲಕ ಮೃತಪಟ್ಟ ಘಟನೆ ಮಾಸುವ ಮುನ್ನವೇ ಗುಂಡ್ಯ ಸಮೀಪದ ಅಡ್ಡಹೊಳೆಯಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಬೈಕ್ ಸವಾರ ಅಲ್ಪಸ್ವಲ್ಪ ಗಾಯಗೊಂಡು ಅಪಾಯದಿಂದ ಪಾರಾಗಿರುವ ಘಟನೆ ಜ.೧೭ರಂದು ಬೆಳಿಗ್ಗೆ ನಡೆದಿದೆ.

 

ಕಾಸರಗೋಡು ನಿವಾಸಿ ಪವನ್(26ವ.)ಗಾಯಗೊಂಡವರಾಗಿದ್ದಾರೆ. ಪವನ್‌ರವರು ಹಾಸನದ ಖಾಸಗಿ ಕಂಪನಿಯೊಂದರಲ್ಲಿ ಮೇನೇಜರ್ ಆಗಿದ್ದು ಜ.17ರಂದು ಬೆಳಿಗ್ಗೆ ಕೆಲಸಕ್ಕೆಂದು ಕಾಸರಗೋಡಿನಿಂದ ತನ್ನ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಗ್ರಾಮದ ಅಡ್ಡಹೊಳೆ-ಗುಂಡ್ಯ ಮಧ್ಯೆ ದೂಪದ ಮರವೊಂದು ಬೈಕ್‌ನ ಹಿಂಬದಿ ಭಾಗದ ಮೇಲೆ ಬಿದ್ದಿದೆ. ಮರ ಬಿದ್ದ ಪರಿಣಾಮ ಬೈಕ್ ಪಲ್ಟಿಯಾಗಿ ಸುಮಾರು ೧೫ ಮೀಟರ್‌ನಷ್ಟೂ ದೂರಕ್ಕೆ ಜಾರಿಗೊಂಡು ಹೋಗಿದ್ದು ಸವಾರ ಪವಾನ್‌ರವರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಗಾಯಾಳುವನ್ನು ಸ್ಥಳೀಯರ ನೆರವಿನೊಂದಿಗೆ ೧೦೮ ಆಂಬುಲೆನ್ಸ್‌ನಲ್ಲಿ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.

ವಿದ್ಯುತ್ ಕಂಬಕ್ಕೂ ಹಾನಿ:
ಮರ ಬಿದ್ದ ಪರಿಣಾಮ ವಿದ್ಯುತ್ ಕಂಬವೊಂದು ಮುರಿದು ಬಿದ್ದಿದ್ದು ವಿದ್ಯುತ್ ತಂತಿಯೂ ತುಂಡಾಗಿದೆ. ಇದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ದೂಪದ ಮರಗಳು ಒಣಗಿ ನಿಂತಿದ್ದು ಆಗಲೋ, ಈಗಾಲೋ ಬೀಳುವ ಹಂತದಲ್ಲಿದೆ. ಜ.೨ರಂದು ಉಡುಪಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರನ್ನು ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಅದರ ಚಾಲಕ ನಿಲ್ಲಿಸಿ ಇಳಿಯುತ್ತಿದ್ದಂತೆ ದೂಪರ ಮರವೊಂದು ಅವರ ಮೇಲೆಯೇ ಬಿದ್ದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಅವಘಡ ನಡೆದಿರುವುದು ವಾಹನ ಸವಾರರಲ್ಲಿ ಅಘಾತ ಉಂಟುಮಾಡಿದೆ. ಅರಣ್ಯ ಇಲಾಖೆಯವರು ಇನ್ನಾದರೂ ಹೆದ್ದಾರಿಯುದ್ದಕ್ಕೂ ಒಣಗಿ ನಿಂತಿರುವ ಅಪಾಯಕಾರಿ ಮರಗಳ ತೆರವಿಗೆ ಮುಂದಾಗಬೇಕೆಂಬ ಒತ್ತಾಯ ಕೇಳಿಬಂದಿದೆ.

 

LEAVE A REPLY

Please enter your comment!
Please enter your name here