ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಜಾನುವಾರು ಪಾಲನಾ ಮಾಹಿತಿ ಶಿಬಿರ

0


ಪುತ್ತೂರು : ಕರ್ನಾಟಕ ಸರಕಾರ ದ.ಕ. ಜಿಲ್ಲಾ ಪಂಚಾಯತ್ ಮಂಗಳೂರು, ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ಪುತ್ತೂರು, ಪ್ರಾಥಮಿಕ ಪಶು ಚಿಕಿತ್ಸೆ ಕೇಂದ್ರ ತಿಂಗಳಾಡಿ ಮತ್ತು ಹಾಲು ಉತ್ಪಾದಕರ ಮಹಿಳಾ ಸಂಘ ಕೆದಂಬಾಡಿ ಸಂಯುಕ್ತ ಆಶ್ರಯದಲ್ಲಿ ಜಾನುವಾರು ಬಂಜೆತನ ನಿವಾರಣಾ ಚಿಕಿತ್ಸೆ ಹಾಗೂ ಮಾಹಿತಿ ಶಿಬಿರ ಜ. ೨೫ರಂದು ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಜರಗಿತು. ಕಾರ್ಯಕ್ರಮ ಉದ್ಘಾಟಿಸಿದ ಕೆ. ಎಂ. ಎಫ್. ಮಾಜಿ ನಿರ್ದೇಶಕಿ, ಸನ್ಯಾಸಿಗುಡ್ಡೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ವೀಣಾ ಆರ್. ರೈ ಮಾತನಾಡಿ ‘ಜಾನುವಾರು ಪಾಲನೆ ಮಾಹಿತಿಯನ್ನು ಪಡೆದುಕೊಂಡು ಪಶುಪಾಲನೆ ಮಾಡಿದರೆ ಲಾಭದಾಯಕವಾಗಿ ಜೀವನ ನಿರ್ವಹಣೆಯನ್ನು ಮಾಡಬಹುದೆಂದು ಹೇಳಿ ಶುಭ ಹಾರೈಸಿದರು.


ಪುತ್ತೂರು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಪ್ರಸನ್ನ ಕುಮಾರ್ ಹೆಬ್ಬಾರ್ ರವರು ಮಾಹಿತಿ ನೀಡಿ, ‘ಹೈನುಗಾರಿಕೆ ಸವಾಲಿನ ಉದ್ಯಮವಾಗಿದೆ. ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಬೇಕು. ಕರ್ನಾಟಕ ಸರಕಾರದ ಪಶುಸಂಗೋಪನ ಇಲಾಖೆಯು ಎಲ್ಲಾ ರೀತಿಯ ಚಿಕಿತ್ಸೆ, ಸೌಲಭ್ಯ, ಸಹಕಾರ ಮತ್ತು ಮಾಹಿತಿ ನೀಡಲು ಬದ್ಧವಾಗಿದೆ. ಸಾಂಪ್ರದಾಯಿಕವಾಗಿದ್ದ ಹಾಲು ಉತ್ಪಾದನೆ ಇಂದು ಉದ್ಯಮ ಕ್ಷೇತ್ರವಾಗಿ ಪರಿವರ್ತನೆಯಾಗಿದೆ. ಪುತ್ತೂರು ತಾಲ್ಲೂಕಿನಲ್ಲಿ ೫೯ ಹಾಲು ಉತ್ಪಾದಕ ಸಹಕಾರಿ ಸಂಘವಿದೆ. ಕಡಬದಲ್ಲಿ ೩೦ ಹಾಲು ಉತ್ಪಾದಕರ ಸಂಘಗಳಿವೆ. ಹಾಲು ಉತ್ಪಾದಕರ ಸಹಕಾರಿ ಸಂಘಗಳಿಂದಲೂ ಹಾಲು ಉತ್ಪಾದಕರಿಗೆ ಸ್ಥಿರ ಮಾರುಕಟ್ಟೆಯಿದೆ. ಪಶುಪಾಲನೆಗೆ ಸಹಕಾರಿ ಸಂಘಗಳು ಮತ್ತು ಬ್ಯಾಂಕ್‌ಗಳು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯದ ವ್ಯವಸ್ಥೆ ಮಾಡುತ್ತಿವೆ. ಹೈನುಗಾರಿಕೆ ಯಲ್ಲಿ ಪಶು ಆಹಾರದ ಬೆಲೆ ಏರಿಕೆ, ಹುಲ್ಲಿನ ಸಮಸ್ಯೆ, ಜಾಗದ ಸಮಸ್ಯೆ , ಹಾಲುದರದಲ್ಲಿ ವ್ಯತ್ಯಾಸ, ದನಗಳಿಗೆ ಗಬ್ಬ ನಿಲ್ಲದ ಸಮಸ್ಯೆ, ಹಲವಾರು ರೋಗಗಳ ಸಮಸ್ಯೆ ಇದಕ್ಕೆಲ್ಲಾ ಸೂಕ್ತ ಮಾಹಿತಿಯನ್ನು ತೆಗೆದುಕೊಂಡು ಪಶುಪಾಲನೆ ಮಾಡಿದರೆ ಉತ್ತಮ. ವಿಶೇಷ ಆದಾಯದ ಮೂಲವಾಗಿ ಸೆಗಣಿ ಗಂಜಲ, ಹಟ್ಟಿಗೊಬ್ಬರ, ಕೃಷಿಗೆ ಮೂಲವಾಗಿರುತ್ತದೆ. ರೈತ ದೇಶದ ಬೆನ್ನೆಲುಬು, ರೈತನ ಬೆನ್ನೆಲುಬು ಜಾನುವಾರು. ಕೃಷಿಗೆ ಜಾನುವಾರು ಸಾಕಾಣೆ ಪೂರಕ ಆರೋಗ್ಯ ಮತ್ತು ಆರ್ಥಿಕ ದೃಷ್ಠಿಯಿಂದಲೂ ಹೈನುಗಾರಿಕೆ ಒಳಿತು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪಶುಪಾಲಕ ಕಡಮಜಲು ಸುಭಾಸ್ ರೈ ಮಾತಾನಾಡಿ , ಗೋವು ಬಾರತದ ಸಂಸ್ಕೃತಿ ಮತ್ತು ಸಂಪತ್ತು. ಗೋವುಗಳನ್ನು ಸಾಕುವುದರಿಂದ ಗೋ ಮಾತೆಗೆ ಕೊಟ್ಟ ಗೌರವ ಹೆತ್ತ ತಾಯಿಗೆ ಮತ್ತು ಭೂ ತಾಯಿ ಗೆ ಕೊಟ್ಟಂತಾಗುತ್ತದೆ. ನಿತ್ಯ ನಿರಂತರ ಆದಾಯದ ಮೂಲಕ ಹೈನುಗಾರಿಕೆ ಲಾಭವನ್ನು ಎಣಿಸದೇ ಪಶುಪಾಲನೆ ಮಾಡುವುದು ನಮ್ಮ ಆದ್ಯ ಕರ್ತವ್ಯವೆಂದು ಹೇಳಿದರು. ಕೆದಂಬಾಡಿ ಗ್ರಾ.ಪಂ ಸದಸ್ಯ ಕೃಷ್ಣ ಕುಮಾರ್ ಗೌಡ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ತಿಂಗಳಾಡಿ ಪಶುಕೇಂದ್ರದ ಅಧಿಕಾರಿ ಕುಮಾರ್ ರವರು ಪ್ರಾಸ್ತವಿಕ ವಾಗಿ ಮಾತನಾಡಿದರು.

ಶ್ರೇಷ್ಟ ಮಟ್ಟದ ಮಾಹಿತಿ ನೀಡಿದ ಡಾ. ಹೆಬ್ಬಾರ್ ರವರನ್ನು ಸಿರಿಕಡಮಜಲು ಕೃಷಿಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೆದಂಬಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಉಪಾಧ್ಯಕ್ಷೆ ಸುಜಾತ ಯಶೋಧರ ಚೌಟ ಹಾಗೂ ನಿರ್ದೇಶಕರು, ಕೆದಂಬಾಡಿ ಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷ ಬಶೀರ್ ಬೂಡಿಯಾರ್ ಉಪಸ್ಥಿತರಿದ್ದರು. ೫೦ ಮಂದಿ ಫಲಾನುಭವಿಗಳಿಗೆ ಪಶು ವೈದ್ಯಕೀಯ ಕಿಟ್ ವಿತರಿಸಲಾಯಿತು. ಪ್ರೀತಿ ಎಸ್. ರೈ ಅತಿಥಿಗಳನ್ನು ಬರಮಾಡಿಕೊಂಡು ಸತ್ಕರಿಸಿದರು. ಸನ್ಯಾಸಿಗುಡ್ಡೆ ಹಾಲು ಉತ್ಪಾದಕರ ಮಹಿಳಾ ಸಂಘದ ಕಾರ್ಯದರ್ಶಿ ಅಮಿತ ವಿ. ರೈ ವಂದಿಸಿದರು.

LEAVE A REPLY

Please enter your comment!
Please enter your name here