ವಿವೇಕಾನಂದ ಮಹಾವಿದ್ಯಾಲಯದಲ್ಲಿ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

0

ಪುತ್ತೂರು: ಪ್ರತಿಯೊಬ್ಬ ಮನುಷ್ಯನಿಗೂ ಕುಟುಂಬದಿಂದ, ಸಮಾಜದಿಂದ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತವೆ. ಅಂತಹ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ಒಬ್ಬ ನಾಯಕನಲ್ಲಿ ಇರಬೇಕು. ಭಾರತ ಒಂದು ಯುವದೇಶ. ನಮ್ಮ ದೇಶದಲ್ಲಿ ಅವಕಾಶ ಹೆಚ್ಚು ಆದರೆ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ರಾಷ್ಟ್ರೀಯ ತರಬೇತಿಗಾರ ಕೃಷ್ಣ ಮೋಹನ್ ಕೆ.ಎಸ್. ಹೇಳಿದರು.

ಅವರು ವಿವೇಕಾನಂದ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಿದ್ದ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ (soft skill and personality development) ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳವಾರ ಮಾತನಾಡಿದರು.

ಒಬ್ಬ ನಾಯಕನಿಗೆ ನಾಯಕತ್ವದ ಜವಾಬ್ದಾರಿ ತಿಳಿದಿರಬೇಕು. ನಾಯಕನಿಗೆ ಎಲ್ಲ ವಿಷಯಗಳ ಕುರಿತು ತಿಳಿದಿರಬೇಕು. ಸಮಸ್ಯೆಗಳಿಗೆ ಕಾರಣ ಏನು? ಅವುಗಳಿಗೆ ಸಮರ್ಥನೀಯ ಪರಿಹಾರ ಏನು ಎಂದು ಎಲ್ಲರೊಂದಿಗೆ ಚರ್ಚಿಸಿ ಅರ್ಹ ನಿರ್ಧಾರವನ್ನು ಕೈಗೊಳ್ಳುವ ಸಾಮರ್ಥ್ಯ ನಾಯಕನಾದವನಿಗೆ ಇರಬೇಕು ಎಂದು ತಿಳಿಸಿದರು.

ಓದಿ ಅಂಕ ಪಡೆಯುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಅದರಲ್ಲಿ ಸಾಧನೆ ಮಾಡಬೇಕು. ನಾವು ಕಾಲೇಜಿನಲ್ಲಿ ಮಾಡುವ ಪ್ರತಿ ಕಾರ್ಯಕ್ರಮವನ್ನು ಕ್ರಮಬದ್ಧವಾಗಿ ಮಾಡಿ, ದಾಖಲೆಗಳನ್ನು ನಿರ್ವಹಿಸಬೇಕು. ಅವು ನಮ್ಮ ವ್ಯಕ್ತಿತ್ವ ಬೆಳವಣಿಗೆಯ ಜೊತೆಗೆ ಕಾಲೇಜಿನ ಬೆಳವಣಿಗೆ ಸಹಾಯಕವಾಗುವುದು ಎಂದು ನುಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here