ಪೆರಾಬೆ ಗ್ರಾಮಸಭೆ – ಇಡಾಳದಲ್ಲಿ ಜಾಗ ಸ್ವಾಧೀನದ ವೇಳೆ ಕೃಷಿ ನಾಶ; ಆಕ್ರೋಶ

0

ನೆಲ್ಯಾಡಿ: ಇಡಾಳದಲ್ಲಿ ಜಾಗ ಸ್ವಾಧೀನದ ವೇಳೆ ಗ್ರಾಮ ಪಂಚಾಯತ್‌ನಿಂದ ಕೃಷಿ ನಾಶಗೊಳಿಸಲಾಗಿದೆ ಎಂದು ಆರೋಪಿಸಿ, ಗ್ರಾಮ ಪಂಚಾಯತ್‌ನ ನಡೆಗೆ ಆಕ್ರೋಶ ವ್ಯಕ್ತಗೊಂಡ ಘಟನೆ ಪೆರಾಬೆ ಗ್ರಾಮ ಸಭೆಯಲ್ಲಿ ನಡೆದಿದೆ.


ಸಭೆ ಜ.21ರಂದು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ರೈ ಅಗತ್ತಾಡಿಯವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾರವರು ಚರ್ಚಾ ನಿಯಂತ್ರಣಾಧಿಕಾರಿಯಾಗಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ತುಳಸಿ ಹಾಗೂ ಇತರರು, ಇಡಾಳದಲ್ಲಿ ಬಾಲಕೃಷ್ಣ ಪೂಜಾರಿಯವರ ಸ್ವಾಧೀನದಲ್ಲಿದ್ದ ಜಾಗದ ಸ್ವಾಧೀನಕ್ಕೆ ಕೋರ್ಟ್ ತಡೆಯಿದ್ದರೂ ಗ್ರಾಮ ಪಂಚಾಯತ್‌ನಿಂದ ಜಾಗ ಸ್ವಾಧೀನ ಪಡಿಸಲಾಗಿದೆ. ಈ ವೇಳೆ ಸದ್ರಿ ಜಾಗದಲ್ಲಿ ಬೆಳೆದಿದ್ದ 140 ತೆಂಗಿನ ಗಿಡ, ಬಾಳೆ ಹಾಗೂ ಇತರೇ ಕೃಷಿ ನಾಶಪಡಿಸಲಾಗಿದೆ. ಇದು ಸರಿಯೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಶಾಲಿನಿಯವರು, ಸದ್ರಿ ಸರಕಾರಿ ಜಾಗ ಮನೆ ನಿವೇಶನಕ್ಕೆ ಕಾದಿರಿಸಿದ ಜಾಗವಾಗಿದೆ. ಸಹಾಯಕ ಆಯುಕ್ತರ ಆದೇಶದ ಮೇರೆಗೆ ಸದ್ರಿ ಜಾಗವನ್ನು ಪಂಚಾಯತ್‌ನ ಸ್ವಾಧೀನಕ್ಕೆ ತೆಗೆದುಕೊಳ್ಳಲಾಗಿದೆ. ಕೋರ್‍ಟ್ ತಡೆಯಾಜ್ಞೆ ಬಗ್ಗೆ ಪಂಚಾಯತ್‌ಗೆ ಯಾವುದೇ ಮಾಹಿತಿ ಬಂದಿರಲಿಲ್ಲ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತುಳಸಿ ಹಾಗೂ ಇತರರು, ಅಲ್ಲಿನ ಕೃಷಿ ನಾಶ ಮಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು. ಸದ್ರಿ ಜಾಗ ತಕರಾರು ಈಗ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಇಲ್ಲಿ ಚರ್ಚೆ ಬೇಡ. ನಾವು ಸಹಾಯಕ ಆಯುಕ್ತರ ಆದೇಶದಂತೆ ಕ್ರಮ ಕೈಗೊಂಡಿದ್ದೇವೆ ಎಂದು ಪಿಡಿಒ ಶಾಲಿನಿಯವರು ಸ್ಪಷ್ಪಪಡಿಸಿದರು.

ಗ್ರಾಮಸ್ಥರೊಳಗೆ ವಾಗ್ವಾದ:
ಇಡಾಳದಲ್ಲಿ ಬಾಲಕೃಷ್ಣ ಪೂಜಾರಿಯವರ ಜಾಗ ಸ್ವಾಧೀನಕ್ಕೆ ಕೋರ್‍ಟ್ ತಡೆಯಾಜ್ಞೆ ಆದೇಶವಿದ್ದರೂ ಇದರ ಉಲ್ಲಂಘಿಸಿ ಪಂಚಾಯತ್‌ನಿಂದ ಜಾಗ ಸ್ವಾಧೀನಕ್ಕೆ ತೆಗೆದುಕೊಂಡಿರುವುದು ಸರಿಯೇ ಎಂದು ಗ್ರಾಮಸ್ಥರ ನಾಗಪ್ಪ ಗೌಡ ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ಜಯಕುಮಾರಿಯವರು, ಸದ್ರಿ ಜಾಗ ಎಸ್‌ಸಿ,ಎಸ್‌ಟಿಯವರಿಗೆ ನಿವೇಶನಕ್ಕೆ ಕಾದಿರಿಸಿದ ಜಾಗವಾಗಿದೆ. ಈ ವಿಚಾರದಲ್ಲಿ ನಾಗಪ್ಪ ಗೌಡರವರು ಬಾಲಕೃಷ್ಣ ಪೂಜಾರಿಯವರ ಪರ ವಹಿಸಿಕೊಂಡು ಮಾತನಾಡುವ ಅವಶ್ಯಕತೆ ಏನಿದೆ ಎಂದರು. ಬಳಿಕ ಈ ವಿಚಾರದಲ್ಲಿ ಇವರೊಳಗೆ ಪರಸ್ಪರ ಮಾತಿನ ಚಕಮಕಿ, ವಾಗ್ವಾದವೂ ನಡೆಯಿತು. ಈ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿದ ಅಧ್ಯಕ್ಷ ಚಂದ್ರಶೇಖರ್ ರೈಯವರು, ಅಧಿಕಾರಿಗಳ ಆದೇಶದ ಮೇರೆಗೆ ಪಿಡಿಒರವರು ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ಹೆಚ್ಚು ಚರ್ಚೆ ಬೇಡ ಎಂದು ಸ್ಪಷ್ಟಪಡಿಸಿದರು. ಇದೇ ವಿಚಾರವಾಗಿ ಮತ್ತೆ ಚರ್ಚೆ ನಡೆಯುತ್ತಿದ್ದಂತೆ ಮಧ್ಯಪ್ರವೇಶಿಸಿದ ನೋಡೆಲ್ ಅಧಿಕಾರಿ ಶ್ರೀಲತಾರವರು, ಈ ಪ್ರಕರಣದ ವಿಚಾರಣೆ ಕೋರ್‍ಟ್ ಹಂತದಲ್ಲಿರುವುದರಿಂದ ಇಲ್ಲಿ ಹೆಚ್ಚಿನ ಚರ್ಚೆ ಬೇಡ. ಕೋರ್‍ಟ್‌ನ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುವ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.

ರಸ್ತೆ ದುರಸ್ತಿಗೊಳಿಸಿ:
ಬೀರಂತಡ್ಕ, ಕೆದ್ದೋಟ್ಟೆ, ಏನಾಜೆ, ಮಣಿಕ್ಕಳ ರಸ್ತೆ ಆ ಭಾಗದ ಗ್ರಾಮಸ್ಥರಿಗೆ ತೀರಾ ಅಗತ್ಯವಾಗಿದೆ. ಸದ್ರಿ ರಸ್ತೆ ದುರಸ್ತಿಗೆ ಗ್ರಾ.ಪಂ.ನಿಂದ ಅನುದಾನವೇ ವಿನಿಯೋಗಿಸಿಲ್ಲ, ನಾನು 10 ಸಾವಿರ ರೂ.,ಖರ್ಚು ಮಾಡಿ ರಸ್ತೆ ದುರಸ್ತಿ ಮಾಡಿದ್ದೇನೆ. ಗ್ರಾಮದ ಎಲ್ಲಾ ರಸ್ತೆಗಳೂ ದುರಸ್ತಿಗೊಂಡರೂ ಸದ್ರಿ ರಸ್ತೆ ಯಾಕೆ ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರಾಯ್ ಅಬ್ರಹಾಂರವರು ಪ್ರಶ್ನಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಾರ್ಡ್ ಸದಸ್ಯರಾದ ಕೃಷ್ಣ ವೈ., ಪಿ.ಜಿ.ರಾಜುರವರು ಈ ಸಲ ಅನುದಾನ ಕಾದಿರಿಸಲಾಗಿದೆ ಎಂದು ಹೇಳಿದರು.

110 ಕೆ.ವಿ.ಉಪಕೇಂದ್ರಕ್ಕೆ ಬೇಡಿಕೆ:
ಆಲಂಕಾರಿನಲ್ಲಿ ನಿರ್ಮಾಣಗೊಳ್ಳಲಿರುವ 110 ಕೆ.ವಿ.ವಿದ್ಯುತ್ ಉಪಕೇಂದ್ರದ ವಿಳಂಬದ ಬಗ್ಗೆಯೂ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಉಪಕೇಂದ್ರ ಆರಂಭಕ್ಕೆ ಇರುವ ಅಡೆತಡೆ ನಿವಾರಿಸಿಕೊಂಡು ವಿದ್ಯುತ್ ಉಪಕೇಂದ್ರ ಆರಂಭಕ್ಕೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಕಸ ನಿರ್ವಹಣೆ-ಚರ್ಚೆ:
ಮುರ ಚೆಡವುನಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ. ಗ್ರಾಮದ ಸ್ವಚ್ಛತೆಗೆ ಒತ್ತು ಕೊಡುವಂತೆ ಗ್ರಾಮಸ್ಥ ನೌಷಾದ್ ಹೇಳಿದರು. ಕಸ ಎಸೆಯುವವರ ಬಗ್ಗೆ ಮಾಹಿತಿ ನೀಡಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ತಿಳಿಸಿದರು. ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ 30 ರೂ.,ಶುಲ್ಕ ವಿಧಿಸಲಾಗಿದೆ. ಗ್ರಾಮಸ್ಥರು ಸಹಕರಿಸಬೇಕೆಂದು ಪಿಡಿಒರವರು ತಿಳಿಸಿದರು.

ಅಧಿಕಾರಿಗಳ ಗೈರು:
ಕೃಷಿ, ಅರಣ್ಯ, ಪೊಲೀಸ್ ಇಲಾಖೆಯವರು ಗ್ರಾಮಸಭೆಗೆ ಗೈರು ಹಾಜರಿಯಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥ ಜನಾರ್ದನ ಬಿ.ಎಲ್.,ಹಾಗೂ ಇತರರು, ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮಸಭೆಗೆ ಬರಬೇಕೆಂದು ಹೇಳಿದರು. ಎಲ್ಲಾ ಇಲಾಖೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಅಧ್ಯಕ್ಷರು ಹಾಗೂ ಪಿಡಿಒ ಸ್ಪಷ್ಪಪಡಿಸಿದರು.

ಎಕ್ಸ್‌ಪೈರಿ ದಿನಾಂಕ ಆದ ಆಹಾರ ಪದಾರ್ಥಗಳು ಬೂಸ್ಟ್ ಹಿಡಿದಿದ್ದರೂ ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಗುರುರಾಜ್ ರೈ ಒತ್ತಾಯಿಸಿದರು. ಈ ಬಗ್ಗೆ ಆಹಾರ ಇಲಾಖೆಯವರಿಗೆ ಮನವಿ ಮಾಡಲು ನಿರ್ಣಯಿಸಲಾಯಿತು. ಪೆರಾಬೆ ಗ್ರಾಮಕ್ಕೆ ಖಾಯಂ ಗ್ರಾಮಕರಣಿಕರ ನೇಮಕ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಕೆದ್ದೊಟ್ಟೆ ಭಜನಾ ಮಂದಿರದ ಬಳಿಯಿರುವ ಸರಕಾರಿ ಜಮೀನಿನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆಯೂ ಗ್ರಾಮಸ್ಥರು ಒತ್ತಾಯಿಸಿದರು. ಗೂಡಂಗಡಿ ತೆರವಿಗೆ ಸಂಬಂಧಿಸಿ ಗಡಿ ಗುರುತು ಮಾಡಿಕೊಡುವಂತೆ ತಹಶೀಲ್ದಾರ್‌ಗೆ ಬರೆಯಲಾಗಿದ್ದು ಗಡಿ ಗುರುತು ಆದ ಬಳಿಕ ತೆರವುಗೊಳಿಸುತ್ತೇವೆ ಎಂದು ಪಿಡಿಒ ಹೇಳಿದರು. ಕುಂತೂರು-ನೆಲ್ಲೆಜಾಲು ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನಕ್ಕೆ ಶಾಸಕರಿಗೆ ಮನವಿ ಮಾಡಬೇಕೆಂದು ಗ್ರಾಮಸ್ಥ ಹರೀಶ್ ಮನವಿ ಮಾಡಿದರು.

ಪಶು ಸಂಗೋಪನೆ, ಮೆಸ್ಕಾಂ, ಶಿಕ್ಷಣ, ಕಂದಾಯ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಆರೋಗ್ಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಉಪಾಧ್ಯಕ್ಷೆ ಸಂಧ್ಯಾ ಕೆ., ಸದಸ್ಯರುಗಳಾದ ಮೋಹನ್‌ದಾಸ್ ರೈ, ಬಿ.ಕೆ.ಕುಮಾರ, ವೇದಾವತಿ, ಸುಶೀಲ, ಕಾವೇರಿ, ಸಿ.ಎಂ.ಫಯಾಝ್, ಲೀಲಾವತಿ, ಸದಾನಂದ, ಮೇನ್ಸಿಸಾಜನ್, ಮಮತಾ, ಮೋಹಿನಿ, ಪಿ.ಜಿ.ರಾಜು, ಕೃಷ್ಣ ವೈ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here