ಡಬ್ಬಲ್ ಟ್ಯಾಕ್ಸ್ ಪಾವತಿಸಿದ ಅನಧಿಕೃತ ಖಾತೆಗಳನ್ನು ಅಧಿಕೃತಗೊಳಿಸಲು ಸರಕಾರಕ್ಕೆ ಮನವಿ

0

  • ನಗರ ಸಭಾ ವಿಶೇಷ ಸಭೆಯಲ್ಲಿ ನಿರ್ಧಾರ

ಪುತ್ತೂರು: ಈ ಹಿಂದೆ ನಗರ ಸ್ಥಳೀಯ ಸಂಸ್ಥೆಗಳ ಸಕ್ಷಮ ಪ್ರಾಧಿಕಾರಗಳಿಂದ ವಿನ್ಯಾಸ ಅನುಮೋದನೆ ಪಡೆಯದೆ ಇರುವ ನಿವೇಶನಗಳಿಗೆ ಡಬ್ಬಲ್ ಟ್ಯಾಕ್ಸ್ ಪಾವತಿಸಿ ಅನಧಿಕೃತ ಖಾತೆ ಎಂದು ದಾಖಲು ಮಾಡಿ ನೀಡಲಾಗಿರುವ ಖಾತೆಗಳಿಗೆ ಅಧಿಕೃತ ಖಾತೆ ನೀಡಲು ಅವಕಾಶ ನೀಡುವಂತೆ ಸರಕಾರಕ್ಕೆ ಪತ್ರ ಬರೆಯಲು ನಗರಸಭೆ ವಿಶೇಷ ಸಾಮಾನ್ಯ ಸಭೆ ನಿರ್ಧರಿಸಲಾಗಿದೆ.

ವಿಶೇಷ ಸಾಮಾನ್ಯ ಸಭೆಯು ಫೆ.9 9ರಂದು ಅಧ್ಯಕ್ಷ ಜೀವಂಧರ್ ಜೈನ್ ಅಧ್ಯಕ್ಷತೆಯಲ್ಲಿ ನಗರಸಭಾ ಸಭಾಂಗಣದಲ್ಲಿ ನಡೆಯಿತು. ವಿಷಯ ಪ್ರಸ್ತಾವಿಸಿದ ಅಧ್ಯಕ್ಷ ಜೀವಂಧರ್ ಜೈನ್‌ರವರು, ರಾಮನಗರದ ಪ್ರಕರಣವೊಂದರ ಆಧಾರದಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ವಿನ್ಯಾಸ ಅನುಮೋದನೆ ಪಡೆಯದೆ ಇರುವ ನಿವೇಶನಗಳಿಗೆ ಖಾತೆ ನೀಡದಂತೆ ಸರಕಾರ ಸುತ್ತೋಲೆ ಹೊರಡಿಸಿದೆ. ಇ-ತಂತ್ರಾಂಶದಲ್ಲಿದ್ದ ಅನಧಿಕೃತ ಅವಕಾಶದ ಆಪ್ಶನ್‌ನ್ನು ತೆಗೆಯಲಾಗಿದೆ. ಇನ್ನೊಂದು ಪ್ರಕರಣದ ಆಧಾರದಲ್ಲಿ 2017ರ ಹಿಂದೆ ಡಬ್ಬಲ್ ಟ್ಯಾಕ್ಸ್ ಪಡೆದು ಅನಧಿಕೃತ ಎಂದು ದಾಖಲು ಮಾಡಿರುವ ಖಾತೆಗಳನ್ನು ರದ್ದು ಮಾಡುವಂತೆ ಲೋಕಾಯುಕ್ತ ಸೂಚಿಸಿದೆ. ಹೀಗಾಗಿ ೨೦೧೭ರ ಮೊದಲು ಡಬ್ಬಲ್ ಟ್ಯಾಕ್ಸ್ ಪಡೆದು ಅನಧಿಕೃತ ಎಂದು ದಾಖಲು ಮಾಡಿಕೊಂಡಿರು ಖಾತೆಗಳನ್ನು ಹೊಂದಿರುವವರಿಗೆ ತೊಂದರೆ ಉಂಟಾಗಲಿದ್ದು ಇವುಗಳಿಗೆ ಅಧಿಕೃತ ಖಾತೆ ನೀಡುವಂತೆ ಮನವಿ ಮಾಡಲಾಗುವುದು ಎಂದರು. ಬಾಮಿ ಅಶೋಕ್ ಶೆಣೈ ಹಾಗೂ ಶಕ್ತಿ ಸಿನ್ಹಾ ಈ ವಿಷಯದಲ್ಲಿ ಚರ್ಚೆಯಲ್ಲಿ ಪಾಲ್ಗೊಂಡರು.

ಸ್ಥಾಯಿ ಸಮಿತಿಗೆ ಆಯ್ಕೆ:
ಸ್ಥಾಯಿ ಸಮಿತಿ ಸದಸ್ಯರ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ೯ ಹೊಸ ಸದಸ್ಯರ ಆಯ್ಕೆ ನಡೆದು ಆಡಳಿತ ಪಕ್ಷದ ೮ ಹಾಗೂ ಪ್ರತಿ ಪಕ್ಷದ ಓರ್ವ ಸದಸ್ಯರಿಗೆ ಅವಕಾಶ ನೀಡಲಾಯಿತು. ಹೊಸ ಸದಸ್ಯರ ಹೆಸರನ್ನು ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಸೂಚಿಸಿದರೆ, ಭಾಮಿ ಅಶೋಕ್ ಶೆಣೈ ಅನುಮೋದಿಸಿದರು. ಆಡಳಿತ ಪಕ್ಷದ ಬಾಲಚಂದ್ರ ಕೆ, ಸುಂದರ ಪೂಜಾರಿ, ಶಶಿಕಲಾ ಸಿ.ಎಸ್., ಸಂತೋಷ್ ಕುಮಾರ್ ಕೆ, ಇಂದಿರಾ ಪಿ, ಮೋಹಿನಿ ವಿಶ್ವನಾಥ, ರೋಹಿಣಿ ಕೇಶವ, ಪ್ರತಿಪಕ್ಷದ ಶೈಲಾ ಪೈ ಅವರನ್ನು ಆಯ್ಕೆ ಮಾಡಲಾಯಿತು.

ಶೌಚಾಲಯ ಅನುದಾನಕ್ಕೆ ಜಿಲ್ಲಾಧಿಕಾರಿಗಳಿಂದ ಒಪ್ಪಿಗೆ:
ನಗರದ ಬೊಳುವಾರು ಹಿ.ಪ್ರಾ.ಶಾಲೆ, ಶಿವರಾಮ ಕಾರಂತ ಪ್ರೌಢಶಾಲೆ, ಕೆಮ್ಮಾಯಿ ಸ.ಹಿ.ಪ್ರಾ.ಶಾಲೆಯಿಂದ ಶೌಚಾಲಯ ನಿರ್ಮಿಸಿಕೊಡುವಂತೆ ನಗರಸಭೆಗೆ ಅರ್ಜಿ ಬಂದಿರುವ ಬಗ್ಗೆ ಪ್ರಸ್ತಾವಿಸಲಾಯಿತು. ಅನುದಾನ ನೀಡುವ ಬಗ್ಗೆ ಜಿಲ್ಲಾಧಿಕಾರಿಯ ಒಪ್ಪಿಗೆ ಪಡೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.

ಇನ್ನೊಂದು ವಾರ್ಡ್ ಸದಸ್ಯರ ಭೇಟಿಗೆ ಆಕ್ಷೇಪ:
ನನ್ನ ವಾರ್ಡ್‌ಗೆ ಇನ್ನೊಂದು ವಾರ್ಡ್‌ನ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಭೇಟಿ ನೀಡಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದು, ವಾರ್ಡ್‌ನಲ್ಲಿ ಚುನಾಯಿತ ಸದಸ್ಯರು ಇರುವಾಗಲೇ ಈ ರೀತಿ ಮಾಡುವುದು ಸರಿ ಅಲ್ಲ ಎಂದು ಕಾಂಗ್ರೆಸ್ ಬೆಂಬಲಿತ ನಗರಸಭೆ ಸದಸ್ಯೆ ಸದಸ್ಯೆ ಶೈಲಾ ಪೈ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಜೀವಂಧರ್ ಜೈನ್‌ರವರು, ಜಗನ್ನಿವಾಸ ರಾವ್ ಅವರು ಭಾರತೀಯ ಜನತಾ ಪಕ್ಷದ ನಗರ ಮಂಡಲದ ಅಧ್ಯಕ್ಷರು. ಹಾಗಾಗಿ ಅವರು ಪ್ರತಿ ವಾರ್ಡ್‌ನಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿ ಸಭೆ ಮಾಡಿ ಅಹವಾಲು ಆಲಿಸುವುದು ಅವರ ಜವಾಬ್ದಾರಿ. ಅದಕ್ಕಾಗಿ ತೆರಳಿದ್ದಾರೆ ಹೊರತು ಬೇರೆ ಯಾವುದೇ ಉದ್ದೇ ಶದಿಂದ ಹೋಗಿಲ್ಲ ಎಂದರು. ನನ್ನ ಗಮನಕ್ಕೆ ಬಾರದೆ ನನ್ನ ವಾರ್ಡ್‌ಗೆ ಭೇಟಿ ನೀಡಿ ಭರವಸೆ ನೀಡುವುದು ಎಷ್ಟು ಸರಿ ಎಂದು ಸದಸ್ಯೆ ಶೈಲಾ ಪೈ ಮರು ಪ್ರಶ್ನಿಸಿದಾಗ, ಇದು ಪಕ್ಷದ ಕಾರ್ಯ ಚಟುವಟಿಕೆ. ನಿಮ್ಮಲ್ಲಿ ಹೇಳಿ ಹೋಗುವಂತಹದಲ್ಲ. ನೀವು ನಮ್ಮ ಪಕ್ಷದ ಸದಸ್ಯರಾಗಿದ್ದರೆ ಮಾತ್ರ ಹೇಳಲು ಸಾಧ್ಯ. ನೀವು ಬಿಜೆಪಿಗೆ ಬರುವುದಾದರೆ ಸ್ವಾಗತ ಎಂದರು.

ಬಜೆಟ್‌ಗೆ ಸದಸ್ಯರ ಸಲಹೆ:
ಫೆ.೨೩ ರಂದು ಬಜೆಟ್ ಮಂಡಿಸುವ ಬಗ್ಗೆ ಯೋಚನೆ ಮಾಡಲಾಗಿದ್ದು ಬಜೆಟ್‌ನಲ್ಲಿ ಸೇರಿಸಬೇಕಾದ ಅಂಶಗಳ ಬಗ್ಗೆ ಸದಸ್ಯರು ಸಲಹೆ ನೀಡುವಂತೆ ಅಧ್ಯಕ್ಷ ಜೀವಂಧರ್ ಜೈನ್ ತಿಳಿಸಿದರು. ಸದಸ್ಯ ಜಗನ್ನಿವಾಸ ರಾವ್ ವಾರ್ಡ್‌ಗಳಲ್ಲಿನ ಗಿಡ ಗಂಟಿ ತೆರೆವು ಅನುದಾನ ಹೆಚ್ಚಳ, ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ, ಬೀದಿ ದೀಪಗಳಿಗೆ ಹೆಚ್ಚುವರಿ ವಿದ್ಯುತ್ ಲೈನ್ ಮೊದಲಾದ ಅಂಶಗಳ ಬಗ್ಗೆ ಸಲಹೆ ನೀಡಿದರು. ಸುಂದರ ಪೂಜಾರಿ ಬಡಾವುರವರು, ನಗರ ಸಭೆಗೆ ಸೇರ್ಪಡೆಗೊಂಡ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಶೈಲಾ ಪೈಯವರು ಬೀದಿ ದೀಪಗಳ ಅಳವಡಿಸಲು, ಮನೋಹರ್ ಕಲ್ಲಾರೆ, ರಸ್ತೆ ಅಭಿವೃದ್ಧಿ ಪ್ರಾಧಾನ್ಯತೆ ನೀಡುವುದು, ಶಕ್ತಿ ಸಿಹ್ನಾ ಬಾವಿಗಳ ಪುನಶ್ಚೇತನ, ಬಾಲಚಂದ್ರ ತ್ಯಾಜ್ಯ ವಿಲೇವಾರಿ, ಪದ್ಮನಾಭವರು ಚರಂಡಿಗಳ ದುರಸ್ಥಿ, ಫಾತಿಮತ್ ಝೂರ ನೀರಿನ ಸಮಸ್ಯೆಗಳ ಪೂರೈಕೆ ಹಾಗೂ ರಿಯಾಝ್‌ರವರು ರಸ್ತೆ ಅಭಿವೃದ್ಧಿಗಳ ಬಗ್ಗೆ ಸಲಹೆ ನೀಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಪೌರಯುಕ್ತ ಮಧು ಎಸ್ ಮನೋಹರ್, ಪ್ರೊಭೆಷನರಿ ಅಧಿಕಾರಿ ಅಕ್ರಂ ಪಾಷಾ, ಉಪಸ್ಥಿತರಿದ್ದರು. ಶಿವರಾಮ್ ಎಸ್., ಮೋಹಿನಿ ವಿಶ್ವನಾಥ, ಲೀಲಾವತಿ ಅಣ್ಣು ನಾಯ್ಕ, ರಾವಿನ್ ತಾವ್ರೋ, ಪ್ರೇಮ್ ಕುಮಾರ್, ಪ್ರೇಮಲತಾ ಜಿ., ಸಂತೋಷ್ ಕುಮಾರ್, ನವೀನ್ ಕುಮಾರ್, ಯಶೋಧ ಹರೀಶ್, ದೀಕ್ಷಾ ಪೈ, ಇಂದಿರಾ ಪಿ, ಶಶಿಕಲಾ ಸಿ.ಎಸ್, ರೋಹಿಣಿ ಕೇಶವ ಪೂಜಾರಿ, ಮಮತ ರಂಜನ್, ಇಸುಬು, ಮಹಮ್ಮದ್ ರಿಯಾಜ್, ಶೀನಪ್ಪ ನಾಯ್ಕ, ಪೂರ್ಣಿಮಾ ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here