ತೆಂಕಿಲ ವಿವೇಕಾನಂದ ಕ.ಮಾ.ಶಾಲೆಯಿಂದ ‘ಸಾನಿಧ್ಯ’-ಮನೆ-ಮನ ಭೇಟಿ ವೇದಿಕೆಗೆ ಚಾಲನೆ

0

ಪುತ್ತೂರು : ಸಮಯವಿದ್ದಾಗ ಆಪ್ತರನ್ನು ಕಾಣಲು ಮಾತನಾಡಿಸಲು ಹೋಗುವ ಜನರ ಬಗೆಯೊಂದಾದರೆ, ಸಮಯ ಹೊಂದಿಸಿಕೊಂಡು ಸಹಸಂಬಂಧ ಗಟ್ಟಿಗೊಳಿಸುವವರು ಒಂದಷ್ಟು ಮಂದಿ. ಶಾಲೆಯಿಂದ ಮಕ್ಕಳ ಭೇಟಿ ಈ ಉದ್ದೇಶದಿಂದ ನಡೆಯಬೇಕಿದೆ. ಶಾಲೆ ಸಮಾಜದ ಬಹುಮುಖ್ಯ ಅಂಗ. ನಮ್ಮ ಶಾಲೆಯಲ್ಲಿ ಕಲಿತು ತೆರಳುವ ಮಕ್ಕಳು ಇಲ್ಲಿನ ಕಾರ್ಯಚಟುವಟಿಕೆಗಳ ಪ್ರತಿಬಿಂಬದಂತೆ. ವಿದ್ಯಾರ್ಥಿಯ ಜೀವನದಲ್ಲಿ ಪೋಷಕರೂ, ಶಿಕ್ಷಕರೂ, ಸಮಾಜವೂ ಪ್ರಮುಖ ಪಾತ್ರವಹಿಸುತ್ತದೆ. ಇಂದಿನ ವಿದ್ಯಾರ್ಥಿ ಕೇಂದ್ರಿತ ವ್ಯವಸ್ಥೆಯಲ್ಲಿ ಶಿಕ್ಷಕರು- ಪೋಷಕರು -ಆಡಳಿತ ಮಂಡಳಿ ಸದಸ್ಯರು ಒಂದು ತ್ರಿಕೋನದಂತೆ ಕಾರ್ಯನಿರ್ವಹಿಸಬೇಕಾಗಿದೆ ಈ ಸದುದ್ದೇಶದಿಂದ ‘ಸಾನಿಧ್ಯ’ ಮನೆ-ಮನ ಭೇಟಿಯನ್ನು ಪ್ರಸಕ್ತ ಶೈಕ್ಷಣಿಕ ವರ್ಷವೂ ಮುಂದುವರಿಸುತ್ತಿದ್ದೇವೆ. ಹಲವಾರು ಕಾರ್ಯಭಾರಗಳ ನಡುವೆ ಸಮಯ ಹೊಂದಿಸಿಕೊಂಡು ಈ ಕಾರ್ಯಕ್ಕೆ ತೆರಳುತ್ತಿರುವ ಶಿಕ್ಷಕರು ನಿಜಕ್ಕೂ ಶ್ಲಾಘನಾರ್ಹರು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಆಡಳಿತ ಮಂಡಳಿ ವಸಂತಮಾಧವ ಹೇಳಿದರು.

 

ಮಕ್ಕಳ ಕಲಿಕಾ ಸಾಧ್ಯತೆಗಳು, ಸಮಯ ಹೊಂದಾಣಿಕೆ, ಆಹಾರ-ಆರೋಗ್ಯ, ಮನೆಯ ಆರೋಗ್ಯಕರ ವಾತಾವರಣದ ಹಿನ್ನೆಲೆಯಲ್ಲಿ ಮನೆ ಭೇಟಿಯನ್ನು ಹಮ್ಮಿಕೊಳ್ಳಲಿರುವ ಬಗ್ಗೆ ಆಡಳಿತ ಮಂಡಳಿ ಹಾಗೂ ಶಿಕ್ಷಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾಹನ ವ್ಯವಸ್ಥೆ ಇಲ್ಲದೆ ಕಾಲ್ನಡಿಗೆಯಲ್ಲಿ ಬರುವ ಮಕ್ಕಳು, ತೀರಾ ಬಡತನದ ಕೌಟುಂಬಿಕ ಹಿನ್ನೆಲೆಯಿಂದ ಬರುತ್ತಿರುವ ಮಕ್ಕಳ ಮನೆಯ ಪರಿಸ್ಥಿತಿಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿ ಕೇವಲ ಪಠ್ಯ ವಿಷಯಗಳ ಬೋಧನೆ ಅಥವಾ ತರಗತಿ ಕೋಣೆಗೆ ಸೀಮಿತವಾಗದೆ ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಬಂಧ, ಎದುರಿಸುತ್ತಿರುವ ಸನ್ನಿವೇಶ- ಸಂದರ್ಭ, ಯೋಚನೆ-ವರ್ತನೆಗಳ ಅಭಿವ್ಯಕ್ತಿಗೆ ಕಾರಣವಾಗಿರುವ ಅಂಶಗಳ ಬಗ್ಗೆ ಸಭೆಯಲ್ಲಿ ಸಂವಾದ ನಡೆಯಿತು.

LEAVE A REPLY

Please enter your comment!
Please enter your name here