ʼಸುದ್ದಿʼ ಗ್ರಾಮೋತ್ಸವ ಮಾದರಿ ಕಾರ್ಯಕ್ರಮ‌ – ಯೋಜನೆಯ ಯಶಸ್ಸಿಗಾಗಿ ಕೆಲಸ ಮಾಡಲು ಪಿಡಿಓಗಳಿಗೆ ಜಿಪಂ ಸಿಇಓ ನಿರ್ದೇಶನ

0

  • ತಾಪಂ ಇಒ, ಗ್ರಾಪಂ ಪಿಡಿಓಗಳ ಜೊತೆ ಜಿಪಂ ಸಿಇಓ ವೀಡಿಯೋ ಸಂವಾದ

ಪುತ್ತೂರು: ಸುದ್ದಿ ಗ್ರಾಮೋತ್ಸವ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ. ಕುಮಾರ್ ಅವರು ಪುತ್ತೂರು, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ತಾಲೂಕಿನ ಪಿಡಿಓಗಳ ಜೊತೆ ವೀಡಿಯೋ ಸಂವಾದ ನಡೆಸಿದರು.

ವೀಡಿಯೋ ಸಂವಾದದಲ್ಲಿ ಮಾತನಾಡಿದ ಡಾ| ಕೆ. ಕುಮಾರ್ ಅವರು, ಸುದ್ದಿ ಗ್ರಾಮೋತ್ಸವದ ಮೂಲಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶಗಳ ಹಾಗೂ ಜನರ ಸರ್ವತೋಮುಖ ಅಭಿವೃದ್ಧಿ ಆಗಬೇಕಿದೆ. ಇದಕ್ಕಾಗಿ ಸರಕಾರದ ಯೋಜನೆಗಳನ್ನು ಬಳಸಿಕೊಂಡು, ಸ್ಥಳೀಯ ಸಂಘ – ಸಂಸ್ಥೆಗಳ ಸಹಭಾಗಿತ್ವ ಪಡೆದುಕೊಂಡು ಯೋಜನೆಯನ್ನು ಸುದ್ದಿ ಬಳಗ ರೂಪಿಸಿದೆ. ಇದರ ಸಾಕಾರಕ್ಕೆ ಎಲ್ಲಾ ಗ್ರಾಮ ಪಂಚಾಯತ್‍ಗಳೂ ಕೂಡ ಶ್ರಮಿಸಬೇಕು ಎಂದು ಪಿಡಿಓಗಳಿಗೆ ನಿರ್ದೇಶನ ನೀಡಿದರು.

ಮೊದಲಿಗೆ ತೀರಾ ಹಿಂದುಳಿದಿರುವ ಗ್ರಾಮ ಪಂಚಾಯತ್‍ಗಳನ್ನು ಗುರುತಿಸುವ ಕೆಲಸವನ್ನು ಪಿಡಿಓಗಳು ಮಾಡಬೇಕು. ಇದರ ಜೊತೆಗೆ ಅಲ್ಲಿನ ಅವಶ್ಯಕತೆಗಳ ಬಗ್ಗೆಯೂ ತಿಳಿದುಕೊಂಡು, ಪಟ್ಟಿ ಮಾಡಿಡಬೇಕು. ಮುಂದೆ ಸಮಿತಿಯನ್ನು ರಚಿಸಿ, ಆ ಸಮಿತಿಯ ಮುಂದೆ ಅವಶ್ಯಕತೆಗಳ ಪಟ್ಟಿಯನ್ನು ಇಡಲಾಗುವುದು. ಅಲ್ಲಿ ಚರ್ಚೆ ನಡೆದು, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಯಾವ ಯೋಜನೆಯನ್ನು ಆ ಭಾಗಕ್ಕೆ ಅನ್ವಯಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ನಂತರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಒಟ್ಟಿನಲ್ಲಿ ಇದು ಕಲೆಕ್ಟಿವ್ ಎಫರ್ಟ್ ಆಗಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮೋತ್ಸವದಲ್ಲಿ ಆಸುಪಾಸಿನ ಎನ್‍ಜಿಓಗಳನ್ನು ಸೇರಿಸಿಕೊಳ್ಳಲಾಗುವುದು. ಎಲ್ಲರನ್ನೂ ಒಗ್ಗೂಡಿಸಿಕೊಂಡು, ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಕೆಲಸ ನಡೆಸಬೇಕಿದೆ. ಇದರ ಜೊತೆಗೆ ಈ ಕಾರ್ಯಕ್ರಮಕ್ಕೆ ರಾಜಕೀಯ ಬಣ್ಣ ಬಾರದಂತೆ ಎಚ್ಚರಿಕೆ ವಹಿಸುವ ಕೆಲಸವೂ ಆಗಬೇಕಿದೆ. ಸುದ್ದಿಯ ತಂಡ ಗ್ರಾಮ ಪಂಚಾಯತ್‍ಗಳಿಗೆ, ಗ್ರಾಮಗಳಿಗೆ ಭೇಟಿ ನೀಡಲಿದೆ. ಆ ಸಂದರ್ಭ ಸುದ್ದಿ ತಂಡದೊಂದಿಗೆ ಸಹಕರಿಸಿ. ಈ ಕಾರ್ಯಕ್ರಮ ಒಂದು ಮಾದರಿ ಕಾರ್ಯಕ್ರಮವಾಗಿ ಮೂಡಿಬರಲು ಶ್ರಮಿಸಿ ಎಂದು ಡಾ| ಕುಮಾರ್ ಸಲಹೆ ನೀಡಿದರು.

12 ಗ್ರಾಪಂಗಳಲ್ಲಿ ಸುದ್ದಿ ಗ್ರಾಮೋತ್ಸವ: ಸುದ್ದಿ ಗ್ರಾಮೋತ್ಸವದ ಬಗ್ಗೆ ಮಾಹಿತಿ ನೀಡಿದ ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಪಿ. ಶಿವಾನಂದ್, ನಿರಂತರವಾಗಿ ಜನಮುಖಿ ಕಾರ್ಯಕ್ರಮ ರೂಪಿಸುತ್ತಿರುವ ಸುದ್ದಿ ಸಮೂಹ ಸಂಸ್ಥೆಗಳು, ಈ ಬಾರಿ ಗ್ರಾಮೋತ್ಸವ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಇದಕ್ಕೆ ಪ್ರಥಮ ಹಂತದಲ್ಲಿ ತಾಲೂಕಿನಲ್ಲಿ 12 ಗ್ರಾಮ ಪಂಚಾಯತ್‍ಗಳನ್ನು ಗುರುತಿಸಿದ್ದು, 3 ಗ್ರಾಮ ಪಂಚಾಯತ್‍ಗಳನ್ನು ದತ್ತು ತೆಗೆದುಕೊಳ್ಳಲಾಗುವುದು.

ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಸಮುದಾಯದವರು ಒಟ್ಟು ಸೇರಿ ನಡೆಸುವ ಈ ಕಾರ್ಯಕ್ರಮ ಜನರ ಉತ್ಸವವಾಗಬೇಕು. ಜನರ ನೇತೃತ್ವದಲ್ಲೇ ಈ ಕಾರ್ಯಕ್ರಮ ನಡೆಯಲಿದ್ದು, ಸುದ್ದಿ ಸಮೂಹ ಮಾಧ್ಯಮ ಸಂಪೂರ್ಣ ಸಹಕಾರ ನೀಡಲಿದೆ. ಈ ಕಾರ್ಯಕ್ರಮದಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶ ಇಲ್ಲ. ಆಯಾ ಊರುಗಳ ಸಂಘ – ಸಂಸ್ಥೆಗಳ ಭಾಗೀದಾರಿಕೆಯೊಂದಿಗೆ ಕಾರ್ಯಕ್ರಮ ನಡೆಯಲಿದೆ. ಜನರಿಗೆ ಬೇಕಾದ ವಿವಿಧ ಮಾಹಿತಿ ಪ್ರದರ್ಶನ ನಡೆಸಲಾಗುವುದು. ಗ್ರಾಮದ ಕೃಷಿ, ಉದ್ದಿಮೆ, ವಿವಿಧ ಕಸುಬು ಸೇರಿದಂತೆ ಧಾರ್ಮಿಕ, ಶೈಕ್ಷಣಿಕ ಸೇರಿದಂತೆ ಇತರ ಎಲ್ಲಾ ರಂಗಗಳ ಮಾಹಿತಿಯ ಪ್ರದರ್ಶನ ಮಾಡಲಾಗುವುದು. ಉಚಿತ ಆರೋಗ್ಯ ಶಿಬಿರ, ಸರ್ಕಾರಿ ಯೋಜನೆಗಳ ಮಾಹಿತಿ, ಖಾಸಗಿ ಕಂಪೆನಿಗಳ ಮಾಹಿತಿ ನೀಡಲಾಗುವುದು. ಸಂಜೀವಿನಿ ಗ್ರೂಪ್‍ಗಳ ಜೊತೆ ಸೇರಿಸಿಕೊಳ್ಳುವ ಪ್ರಯತ್ನ ಮಾಡಲಾಗುವುದು ಸುದ್ದಿಯಿಂದ ಮಾರುಕಟ್ಟೆ ಮಾಹಿತಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.

ದತ್ತು ತೆಗೆದುಕೊಳ್ಳುವ ಪಂಚಾಯತ್‍ಗಳಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಸರಕಾರದ ಯೋಜನೆಗಳಲ್ಲದೆ ಸಾರ್ವಜನಿಕರ ಸಹಭಾಗಿತ್ವ ಮತ್ತು ಕೊಡುಗೆಯ ಪ್ರಯೋಜನ ಪಡೆಯಲಾಗುವುದು, ಅದನ್ನು ಮಾದರಿ ಗ್ರಾಮ ಪಂಚಾಯತ್ ಆಗಿ ಮಾಡಲಾಗುವುದು. ಪ್ರತಿ ಮನೆಯವರು ಇದರಲ್ಲಿ ಪಾಲ್ಗೊಳ್ಳಬೇಕು ಆ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು ಎಂದು ಡಾ. ಯು.ಪಿ. ಶಿವಾನಂದರು ಮನವಿ ಮಾಡಿಕೊಂಡರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಕುಮಾರ್ ನಡೆಸಿಕೊಟ್ಟ ವೀಡಿಯೋ ಸಂವಾದದಲ್ಲಿ ಬೆಳ್ತಂಗಡಿ ತಾಪಂ ಕಾರ್ಯನಿರ್ವಾಹಕಾಧಿಕಾರಿ ಕುಸುಮಾಧರ್, ಮಡಂತ್ಯಾರು ಗ್ರಾಪಂ ಪಿಡಿಓ ಪುರುಷೋತ್ತಮ, ಉಜಿರೆ ಗ್ರಾಪಂ ಪಿಡಿಓ ಪ್ರಕಾಶ್ ಶೆಟ್ಟಿ ನೊಚ್ಚ, ಸುಳ್ಯ ತಾಲೂಕು ಪಂಚಾಯತ್ ಮ್ಯಾನೇಜರ್ ಹರೀಶ್, ತಾಪಂ ಸಹಾಯಕ ನಿರ್ದೇಶಕಿ ಸರೋಜಿನಿ, ಮಂಡೆಕೋಲು ಗ್ರಾಪಂ ಪಿಡಿಓ ರಮೇಶ್, ಅರಂತೋಡು ಗ್ರಾಪಂ ಪಿಡಿಓ ಜಯಪ್ರಕಾಶ್, ಪುತ್ತೂರು ತಾಲೂಕಿನ ಕಬಕ ಗ್ರಾಮ ಪಂಚಾಯತ್ ಪಿಡಿಓ ಆಶಾ ಇ., ಕೊಡಿಪ್ಪಾಡಿ ಪಿಡಿಓ ಶರೀಫ್, ಕೆದಂಬಾಡಿ ಪಿಡಿಓ ಅಜಿತ್, ನೆಕ್ಕಿಲಾಡಿ ಪಿಡಿಓ ಕುಮಾರಯ್ಯ ಮೊದಲಾದವರು ಪಾಲ್ಗೊಂಡರು.

LEAVE A REPLY

Please enter your comment!
Please enter your name here