ಶಿವಮೊಗ್ಗದಲ್ಲಿ ಹಿಂದು ಸಂಘಟನೆ ಕಾರ್ಯಕರ್ತ ಹರ್ಷರವರ ಹತ್ಯೆ ಖಂಡಿಸಿ ವಿಟ್ಲದಲ್ಲಿ ವಿಹಿಂಪ, ಭಜರಂಗದಳದಿಂದ ಪ್ರತಿಭಟನೆ

0

  • ಸಂಘ ಪರಿವಾರದ ಯುವಕರು ಜಾಗೃತರಾಗಿದ್ದಾರೆ – ನಮ್ಮ ತಾಳ್ಮೆಗೂ ಮಿತಿಇದೆ: ಮುರಳೀಕೃಷ್ಣ ಹಸಂತಡ್ಕ

ವಿಟ್ಲ: ಮತೀಯವಾದದ ಹೆಸರಿನಲ್ಲಿ ಈ ದೇಶವನ್ನು ನಾಶ ಮಾಡಬೇಕೆಂದು ಯಾರಾದರೂ ಯೋಚನೆ ಮಾಡಿದ್ದರೆ ಇನ್ನು ನಿಮ್ಮ ಯೋಚನೆ ನಡೆಯಲು ಸಾಧ್ಯವಿಲ್ಲ. ಸಂಘ ಪರಿವಾರದ ಯುವಕರು ಜಾಗೃತರಾಗಿದ್ದಾರೆ. ನಮ್ಮ ತಾಳೆಗೂ ಮಿತಿ ಇದೆ ಎಂದು ಭಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಹೇಳಿದರು.

 

ಅವರು ಶಿವಮೊಗ್ಗದಲ್ಲಿ ನಡೆದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ರವರ ಹತ್ಯೆಯನ್ನು ಖಂಡಿಸಿ  ವಿಶ್ವಹಿಂದೂ ಪರಿಷತ್, ಭಜರಂಗದಳ ವಿಟ್ಲ ಪ್ರಖಂಡದ ವತಿಯಿಂದ ಫೆ.23ರ೦ದು ವಿಟ್ಲದ ಖಾಸಗಿ ಬಸ್ಸುನಿಲ್ದಾಣದಲ್ಲಿ  ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ  ಮಾತನಾಡಿದರು.

ಇಲ್ಲಿಯವರೆಗೆ ಗಾಂಧೀಜಿಯವರು ಹೇಳಿದ್ದನ್ನು ಕೇಳಿದ್ದೇವೆ.ಭಾರತ ಹೇಗೆ ಬದಲಾಗುತ್ತಿದೆಯೋ ಹಾಗೆಯೇ ಈ ದೇಶದ ಸಂಸ್ಕೃತಿ, ಸಮಾಜವೂ ಎಚ್ಚರವಾಗುತ್ತಿದೆ. ಭಾರತ ದೇಶ ಎಂದರೆ ಜಗತ್ತಿನಲ್ಲಿ ಅತ್ಯಂತ ವಿಶಿಷ್ಟ ಸಂಸ್ಕೃತಿ, ಪರಂಪರೆಯನ್ನು ಹೊಂದಿದ ರಾಷ್ಟ್ರದೇಶವು ಗಾಂಧೀಜಿಯವರು ಹೇಳಿದಂತೆ ಸತ್ಯ ಅಹಿಂಸೆಯ ಮಾರ್ಗದಲ್ಲಿ ಹೋರಾಟ ಮಾಡಿ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ಆದರೆ ಅದರ ಹಿಂದಿರುವ ಕ್ರಾಂತಿಕಾರಿಗಳನ್ನು ಮರೆತುಹೋದೆವು. ಜಗತ್ತಿನ ಏಕೈಕ ಹಿಂದೂ ರಾಷ್ಟ್ರದಲ್ಲಿ ಹಿಂದುತ್ವದ ಅಸ್ಥಿತೆಯನ್ನು ಉಳಿಸಿಕೊಳ್ಳಬೇಕಿದ್ದರೆ ನಾವು ಸ್ವಲ್ಪ ಬದಲಾಗಬೇಕಾದ ಅನಿವಾರ್ಯತೆ ಇದೆ. ಭಜರಂಗದಳದ ಕಾರ್ಯಕರ್ತನಷ್ಟು ಸೇವೆಗೆ ಸಜ್ಜಾಗಿರುವ ವ್ಯಕ್ತಿ ಬೇರೆಲ್ಲೂ ಸಿಗಲಿಕ್ಕಿಲ್ಲ, ಭಜರಂಗದಳದ ಕಾರ್ಯಕರ್ತನನ್ನು ಟಾರ್ಗೆಟ್ ಮಾಡಿಕೊಂಡು ಹತ್ಯೆ ಮಾಡುವ ಕೆಲಸವನ್ನು ಮತೀಯ ಶಕ್ತಿಗಳು ಮಾಡಿವೆ. ಇಂದು ಲವ್‌ಜಿಹಾದ್, ಭಯೋತ್ಪಾದನೆಯನ್ನು ನೋಡುತ್ತಿದ್ದೇವೆ. ಮಠ ಮಂದಿರಗಳ ಮೇಲೆ ದಾಳಿ ಮಾಡಿದರು. ಭಯೋತ್ಪಾದನೆಯ ಕರಾಳ ಛಾಯೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ತಂದು ಅಲ್ಲೂ ಜಿಹಾದ್ ಮಾಡುತ್ತೇವೆ ಎಂದು ಹಿಜಾಬ್ ಜಿಹಾದ್‌ನ್ನು ಆರಂಭ ಮಾಡಿದ್ದಾರೆ. ಹಿಂದೂ ಸಮಾಜ ಇದನ್ನು ನೋಡಿಕೊಂಡು ಸುಮ್ಮನಿರಬೇಕೇ ಎ೦ದು ಮುರಳೀ ಕೃಷ್ಣ ಪ್ರಶ್ನಿಸಿದರು. ಸಂಘಟನೆಯ ಕಾರ್ಯಕರ್ತರ ಹತ್ಯೆ ಮಾಡಿದರೆ ಸಂಘಟನೆ ನಿಲ್ಲುತ್ತದೆ ಎ೦ದು ಯೋಚನೆ ಮಾಡಬೇಡಿ. ಭಜರಂಗದಳದ ಕಾರ್ಯಕರ್ತ ಎನ್ನುವ ಚಿತ್ರಣವನ್ನು ಇಟ್ಟುಕೊಂಡು ಹರ್ಷರನ್ನು ಹತ್ಯೆ ಮಾಡಿದ್ದಾರೆ. ನಿಮ್ಮ ವಿನಾಶ ಆರಂಭಗೊಂಡಿದೆ ಎಂದರ್ಥ ಎಂದು ಮುರಳೀಕೃಷ್ಣ ಹಸಂತಡ್ಕ ಎಚ್ಚರಿಸಿದರು.

ಜಿಲ್ಲಾ ಸಹಕಾರ್ಯದರ್ಶಿ ಗೋವರ್ದನ್ ಇಡ್ಯಾಳ,  ವಿಟ್ಲ ಪ್ರಖಂಡ ಸಂಯೋಜಕ ಚಂದ್ರಹಾಸ ಕನ್ಯಾನ, ಕಾರ್ಯದರ್ಶಿ ನಾಗೇಶ್ ಸಾಲೆತ್ತೂರು, ಪ್ರಮುಖರಾದ ದಯಾನಂದ ಶೆಟ್ಟಿ ಉಜಿರೆಮಾರ್, ರಾಮ್ ದಾಸ್ ಶೆಣೈ, ಮೋಹನದಾಸ್ ಉಕ್ಕುಡ, ಅರುಣ್ ವಿಟ್ಲ, ಕರುಣಾಕರ ನಾಯ್ತೋಟು, ಹರೀಶ್‌ ಸಿ.ಹೆಚ್, ಯತೀಶ್ ಪೆರುವಾಯಿ, ಪುನಿತ್ ಮಾಡ್ತಾರ್,  ಉದಯ ಆಲಂಗಾರು ಮೊದಲಾದವರು ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡದ ಅಧ್ಯಕ್ಷ ಪದ್ಮನಾಭ ಕಟ್ಟೆರವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here