ತಂದೆಯಿಂದಲೇ ಮಗನ ಕೊಲೆ ವಿಟ್ಲ ಕಾಂತಮೂಲೆಯಲ್ಲಿ ನಡೆದ ಹೃದಯ ವಿದ್ರಾವಕ ಘಟನೆ ಆರೋಪಿಯನ್ನು ಬಂಧಿಸಿದ ಪೊಲೀಸರು ಜಗಳ ನಡೆದುದನ್ನು ಒಪ್ಪಿಕೊಂಡ ಆರೋಪಿ

0

ವಿಟ್ಲ:ವ್ಯಕ್ತಿಯೋರ್ವರು ಕುಡಿತದ ಮತ್ತಿನಲ್ಲಿ ತನ್ನ ಮಗನನ್ನೇ ಹೊಡೆದು ಕೊಲೆಗೈದ ಹೃದಯವಿದ್ರಾವಕ ಘಟನೆ ವಿಟ್ಲಮುಡ್ನೂರು ಗ್ರಾಮದ ಕಾಂತಮೂಲೆ ಎಂಬಲ್ಲಿ ಫೆ.೨೩ರಂದು ರಾತ್ರಿ ನಡೆದಿದೆ.ವಿಟ್ಲಮುಡ್ನೂರು ಗ್ರಾಮದ ಕಾಂತಮೂಲೆ ನಿವಾಸಿ ದಿನೇಶ್(೪೦ ವ.)ರವರು ಕೊಲೆಯಾದವರು.ಅವರ ತಂದೆ ವಸಂತ ಗೌಡ ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ದಿನೇಶ್ ವಿವಾಹಿತರಾಗಿದ್ದು ಸಾಂಸಾರಿಕ ಕಲಹಗಳಿಂದಾಗಿ ಅವರ ಪತ್ನಿ ಕೆಲ ವರ್ಷಗಳ ಹಿಂದೆಯೇ ಅವರನ್ನು ತೊರೆದು ಹೋಗಿದ್ದಾರೆ.ಕಾಂತಮೂಲೆಯ ಮನೆಯಲ್ಲಿ ತಂದೆ, ಮಗ ಮಾತ್ರವೇ ವಾಸವಾಗಿದ್ದು, ಅವರಿಬ್ಬರ ನಡುವೆ ಆಗಾಗ ಸಣ್ಣಪುಟ್ಟ ಗಲಾಟೆ ನಡೆಯುತ್ತಿತ್ತು.ಫೆ.೨೩ರಂದು ಕೂಡಾ ಅವರಿಬ್ಬರ ಮಧ್ಯೆ ಜಗಳ, ಗಲಾಟೆ ನಡೆದಿತ್ತು.ಗಲಾಟೆ ತಾರಕಕ್ಕೇರಿ ಮನೆಯಲ್ಲಿದ್ದ ಮರದ ತುಂಡಿನಿಂದ ವಸಂತ ಗೌಡರು ಮಗ ದಿನೇಶ್ ಅವರಿಗೆ ಹಲ್ಲೆ ನಡೆಸಿದ್ದರು.ಹಲ್ಲೆಯಿಂದ ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದರಿಂದ ರಕ್ತ ಸ್ರಾವವಾಗಿ ದಿನೇಶ್ ಅವರು ಮೃತಪಟ್ಟಿದ್ದಾರೆ.ಮೃತದೇಹವು ಮನೆಯ ಕೋಣೆಯೊಂದರಲ್ಲಿ ಪತ್ತೆಯಾಗಿದೆ ಎಂದು ವಿಟ್ಲ ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಬಂಧನ:
ಘಟನೆ ಬಗ್ಗೆ ಮಾಹಿತಿ ಅರಿತ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿ ವಸಂತ ಗೌಡರನ್ನು ಬಂಧಿಸಿದ್ದಾರೆ.ಫೆ.೨೩ರಂದು ರಾತ್ರಿ ನಮ್ಮಿಬ್ಬರ ಮಧ್ಯೆ ಕಲಹ ನಡೆದಿರುವುದಾಗಿ ಆರೋಪಿ ವಸಂತ ಗೌಡರು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here