ಮಾ.12ಕ್ಕೆ ಪುತ್ತೂರಿನಲ್ಲಿ ಮೆಗಾ ಲೋಕ್ ಅದಾಲತ್ – ಕಕ್ಷಿದಾರರು ವಾಟ್ಸಪ್ ಮೂಲಕ ವಿಡಿಯೋ ಕಾಲ್ ಮಾಡಿ ಅಹವಾಲು ನೀಡಬಹುದು- ನ್ಯಾಯಾಧೀಶ ರಮೇಶ್ ಎಂ

0


ಪುತ್ತೂರು: ಎಲ್ಲ ವರ್ಗದ ಕಕ್ಷಿದಾರರ ಅನುಕೂಲಕ್ಕಾಗಿ ಹಾಗೂ ರಾಜೀ ಮೂಲಕ ಪ್ರಕರಣಗಳ ಇತ್ಯರ್ಥಕ್ಕಾಗಿ ಮುಂದಿನ ತಿಂಗಳು ಮಾ.12ರಂದು ಮೆಗಾ ಲೋಕ್ ಅದಾಲತ್ ನಡೆಸಲಾಗುತ್ತಿದ್ದು, ಈ ಬಾರಿ ಲೋಕ ಅದಾಲತ್‌ನಲ್ಲಿ ಕಕ್ಷಿದಾರರು ನೇರವಾಗಿ ಕಲಾಪದಲ್ಲಿ ಭಾಗವಹಿಸಬೇಕಾಗಿಲ್ಲ. ಆನ್‌ಲೈನ್ (ವರ್ಚುವಲ್) ಮೂಲಕ ಭಾಗವಹಿಸಲು ಹಿಂದಿಗಿಂತಲೂ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ವಾಟ್ಸಪ್ ಇದ್ದರೆ ಸಾಕು ವಿಡಿಯೋ ಕಾಲ್ ಮೂಲಕ ಅಹವಾಲು ನೀಡಬಹುದು ಎಂದು ಪುತ್ತೂರಿನ ಪ್ರಧಾನ ಹಿರಿಯ ವ್ಯಾವಹಾರಿಕ ನ್ಯಾಯಾಧೀಶರು, ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾಗಿರುವ ರಮೇಶ್ ಎಂ ತಿಳಿಸಿದ್ದಾರೆ.
ನ್ಯಾಯಾಲಯದ ಆವರಣದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು ಇದರ ಮೂಲಕ ನಡೆಯಲಿರುವ ಮೆಗಾ ಲೋಕ್ ಅದಾಲತ್‌ನಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ನೇರವಾಗಿ ಬರಲು ಆಗದವರಿಗೆ ವರ್ಚುವಲ್ ಮೂಲಕ ಅಂದರೆ ವಾಟ್ಸಪ್ ವಿಡಿಯೋ ಕಾಲ್,  ಆನ್‌ಲೈನ್ ಮೂಲಕ ತಮ್ಮ ಅಹವಾಲುಗಳನ್ನು ನೀಡಬಹುದು. ನೇರವಾಗಿ ಬರುವಂತಹ ಅವಶ್ಯತೆ ಇಲ್ಲ. ಅಗತ್ಯವಿದ್ದರೆ ಮಾತ್ರ ನ್ಯಾಯಾಲಯದಲ್ಲಿ ಅವರ ಹಾಜರಾತಿ ಬೇಕೋ ಬೇಡವ ಎಂದು ನಾವು ತೀರ್ಮಾನ ಮಾಡುತ್ತೇವೆ ಎಂದ ಅವರು ಈ ಹಿಂದಿನ ಲೋಕ ಅದಾಲತ್‌ಗಳಲ್ಲಿ ವರ್ಚುವಲ್ ಕಲಾಪಕ್ಕೆ ಅವಕಾಶ ನೀಡಲಾಗಿತ್ತಾದರೂ ಈ ಬಾರಿಯಷ್ಟು ಸರಳವಾಗಿರಲಿಲ್ಲ ಎಂದರು.
ನ್ಯಾಯಾಲಯಗಳಲ್ಲಿ ಚಾಲ್ತಿ ಇರುವ ಪ್ರಕರಣಗಳು ಹಾಗೂ ಇನ್ನೂ ನ್ಯಾಯಾಲಯಕ್ಕೆ ದಾಖಲಿಸದೇ ಇರುವ ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳು ಅಂತಾ ಪರಿಗಣಿಸಿ ವಿವಿಧ ಪ್ರಕರಣಗಳಾದ ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ಅಸಲು ದಾವೆಗಳು, ಬ್ಯಾಂಕುಗಳಿಗೆ ಸಂಬಂಧಿಸಿದ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ವೈವಾಹಿಕ ಹಾಗೂ ಜೀವನಾಂಶ, ಸೈಬರ್ ಕ್ರೈಂ ಮತ್ತು ಕಾನೂನಿನ್ವಯ ರಾಜೀ ಆಗಬಹುದಾದ ಎಲ್ಲ ತರಹದ ಪ್ರಕರಣಗಳನ್ನು ಅದಾಲತ್ ನಲ್ಲಿ ಇತ್ಯರ್ಥಪಡಿಸಲಾಗುವುದು ಎಂದು ವಿವರಿಸಿದ ಅವರು ಈಗಾಗಲೇ ಜಿಲ್ಲಾ ಅಡಳಿತ ನ್ಯಾಯಾಧೀಶರಾದ ಸೋಮಶೇಖರ್ ಅವರು 2 ಬಾರಿ ಸಮಾಲೋಚನಾ ಸಭೆ ನಡೆಸಿದ್ದಾರೆ. ವಕೀಲರ ಜತೆಗೂ ಆನ್‌ಲೈನ್ ಮಾತುಕತೆ ನಡೆಸಿದ್ದಾರೆ. ಇಡೀ ರಾಜ್ಯದಲ್ಲಿ ಮೆಗಾ ಲೋಕ ಅದಾಲತ್ ಯಶಸ್ಸಿಗೆ ಸಿದ್ಧತೆ ನಡೆಯುತ್ತಿದೆ ಎಂದರು.
ವಕೀಲರು ಅದಾಲತ್‌ಗೆ ಪೂರ್ಣ ಬೆಂಬಲ ಕೊಡುತ್ತಾರೆ:
ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅವರು ಮಾತನಾಡಿ ವಕೀಲರು ಈ ಹಿಂದೆ ಸಾಕಷ್ಟು ಅದಾಲತ್‌ಗೆ ಬೆಂಬಲ ಕೊಟ್ಟಿದ್ದಾರೆ. ಅದಾಲತ್‌ನಲ್ಲಿ ಪ್ರಕರಣ ಒಮ್ಮೆ ರಾಜಿಯಲ್ಲಿ ಕೊನೆಗೊಂಡರೆ ಮತ್ತೆ ಅಪೀಲು ಇರುವುದಿಲ್ಲ. ಇದರ ಜೊತೆಗೆ ನ್ಯಾಯಾಲಯಕ್ಕೆ ಪಾವತಿ ಮಾಡಿದ ಶುಲ್ಕ ಸಂಪೂರ್ಣ ಮರು ಪಾವತಿ ಆಗುತ್ತದೆ. ಇದೊಂದು ಸೌಲಭ್ಯ ಅದಾಲತ್‌ನಲ್ಲಿ ಮಾತ್ರ ಸಿಗುವುದು. ಈ ನಿಟ್ಟಿನಲ್ಲಿ ಕಕ್ಷಿದಾರರಿಗೆ ಮನವರಿಕೆ ಮಾಡಿ ರಾಜಿಗೆ ಒಪ್ಪಿಸಲಾಗುತ್ತಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ. ಹೇಳಿದರು. ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ, ಪ್ರಧಾನ ಸಿವಿಲ್ ನ್ಯಾಯಾಧೀಶರು ಜೆಎಂಎಫ್‌ಸಿ ಪುತ್ತೂರು ಬಿ ಅರುಣ್ ಕುಮಾರ್ ಉಪಸ್ಥಿತರಿದ್ದರು.

ಕಳೆದ 2021ರ ಡಿಸೆಂಬರ್ 18ರಂದು ನಡೆದ ಮೆಗಾ ಲೋಕ ಅದಾಲತ್‌ನಲ್ಲಿ ಪುತ್ತೂರಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವೂ ಸೇರಿದಂತೆ ಇಲ್ಲಿನ ಆರು ನ್ಯಾಯಾಲಯ ವ್ಯಾಪ್ತಿಯಲ್ಲಿ ಒಟ್ಟು 599ಪ್ರಕರಣಗಳನ್ನು ರಾಜಿಯಲ್ಲಿ ಮುಗಿಸಲಾಗಿತ್ತು. ಈ ಮೂಲಕ ಕಕ್ಷಿದಾರರಿಗೆ 2,83,21,621 ಕೋಟಿ ರೂಪಾಯಿಗಳನ್ನು ಮರಳಿಸಲಾಗಿತ್ತು. ಈ ಬಾರಿ ಇಲ್ಲಿಯವರೆಗೆ ೬ ನ್ಯಾಯಾಲಯದಲ್ಲಿ 707 ಪ್ರಕರಣಗಳು ನೋಂದಣಿಯಾಗಿವೆ. ಇದರಲ್ಲಿ ಶೇ.೯೯ ರಾಜಿಯಾಗುವ ನಿರೀಕ್ಷೆ ಇದೆ. 100 ಶೇಕಡಾ ಸಾಧನೆಗೆ ಪ್ರಯತ್ನಿಸಲಾಗುತ್ತಿದೆ. ಈ ಭಾಗದಲ್ಲಿ ಅತ್ಯಂತ ಹೆಚ್ಚು ಅಪಘಾತ ಪ್ರಕರಣಗಳಿವೆ. ಹಾಗಾಗಿ ಎಲ್ಲಾ ಇನ್ಸುರೆನಸ್ ಕಂಪೆನಿಗಳೊಂದಿಗೆ ಮೀಟಿಂಗ್ ಮಾಡಲಾಗಿದೆ. ಈಗಾಗಲೇ ವಕೀಲರ ಸಹಕಾರದಿಂದ ಎರಡೂ ಕಡೆಯ ಕಕ್ಷಿದಾರರ ಜತೆ ಮಾತುಕತೆ ನಡೆಸಲಾಗುತ್ತಿದೆ. ಲೋಕ ಅದಾಲತ್ ವೇಳೆಗೆ ಬಹುತೇಕ ರಾಜಿ ಸಂಧಾನ ಅಂತಿಮಗೊಂಡಿರುತ್ತದೆ. ಆದಿನ ಅಂತಿಮ ರಾಜಿ ಸೂತ್ರ ಘೋಷಣೆ ಮಾಡಲಾಗುತ್ತದೆ.
ರಮೇಶ್ ಎಮ್. ನ್ಯಾಯಾಧೀಶರು

LEAVE A REPLY

Please enter your comment!
Please enter your name here