ತೆಕ್ಕಾರು: ಗ್ರಾಮ ಪಂಚಾಯಿತಿ ನಿರ್ಮಿಸಿದ ಕಟ್ಟಡದಲ್ಲಿ ಕುಟುಂಬ ವಾಸ್ತವ್ಯ…!!

0

  • ಪರಿಶಿಷ್ಠ ಜಾತಿಗೆ ಸೇರಿದ ಭೂಮಿಯಲ್ಲಿ ಗ್ರಾಮ ಪಂಚಾಯಿತಿ ಅಕ್ರಮ ಕಟ್ಟಡ ನಿರ್ಮಿಸಿದ ಆರೋಪ
  • ಅಧ್ಯಕ್ಷ, ಪಿಡಿಒ., ಇಂಜಿನಿಯರ್ ಸಹಿತ ನಾಲ್ವರ ವಿರುದ್ಧ ದೂರು
  •  ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿದೂರು

ಉಪ್ಪಿನಂಗಡಿ: ಗ್ರಾಮ ಪಂಚಾಯಿತಿ ಕಚೇರಿ ಸಲುವಾಗಿ ನಿರ್ಮಿಸಿದ ಕಟ್ಟಡದಲ್ಲಿ ಪರಿಶಿಷ್ಠ ಜಾತಿಗೆ ಸೇರಿದ ಕುಟುಂಬವೊಂದು ವಾಸ್ತವ್ಯ ಹೂಡಿದ್ದು, ನಮ್ಮ ಕುಟುಂಬದ ಜಾಗದಲ್ಲಿ ಗ್ರಾಮ ಪಂಚಾಯಿತಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದೆ ಎಂದು ಆಪಾದಿಸಿ ಕುಟುಂಬದ ಸದಸ್ಯೆ ಮಹಿಳೆಯೋರ್ವರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಇಂಜಿನಿಯರ್ ಸೇರಿದಂತೆ ನಾಲ್ವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿರುವ ವಿಲಕ್ಷಣ ಘಟನೆಯೊಂದರ ಬಗ್ಗೆ ತೆಕ್ಕಾರು ಗ್ರಾಮದಿಂದ ವರದಿಯಾಗಿದೆ.

ತೆಕ್ಕಾರು ಗ್ರಾಮದ ಬಾಜಾರ ಮನೆ ನಿವಾಸಿ ದಿವಂಗತ ನೇಮು ನಾಯ್ಕ ಎಂಬವರ ಪತ್ನಿ ಯಮುನಾ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ತೆಕ್ಕಾರುಗ್ರಾಮದಲ್ಲಿನ ತನ್ನ ಹಕ್ಕಿನ 103/1ಎ2 ರಲ್ಲಿನ 0.69 ಎಕ್ರೆ ಭೂಮಿಯಲ್ಲಿ ಅಕ್ರಮವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಜಾಕ್, ಮಾಜಿ ಸದಸ್ಯ ಅಬ್ದುಲ್ ರಹಿಮಾನ್, ಪಂಚಾಯತ್ ಪಿಡಿಒ. ಜಿ.ಎಚ್. ಸುಮಯ್ಯ, ಪಂಚಾಯತ್ ರಾಜ್ ವಿಭಾಗದ ಕಿರಿಯ ಇಂಜಿನಿಯರ್ ಗಪೂರ್ ಸಾಬ್ ಎಂಬವರು ಆರು ತಿಂಗಳ ಹಿಂದೆ ಅಕ್ರಮವಾಗಿ ಬುಲ್ಡೋಜರ್‌ನೊಂದಿಗೆ ತನ್ನ ಭೂಮಿಗೆ ಪ್ರವೇಶಿಸಿ ಕೃಷಿ ನಾಶ ಮಾಡಿ ಕಟ್ಟಡ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿರುತ್ತಾರೆ. ಆ ವೇಳೆ ಪ್ರಶ್ನಿಸಿದ ನನ್ನನ್ನು, ನನ್ನ ಜಾತಿಯ ಕಾರಣದಿಂದ ನಿಂದಿಸಿ “ಪ್ರಶ್ನಿಸಿದರೆ ನಿಮ್ಮನ್ನು ಈ ಊರಿನಲ್ಲೇ ಇರಲು ಬಿಡುವುದಿಲ್ಲವೆಂದು ಜೀವ ಬೆದರಿಕೆಯೊಡ್ಡಿದ್ದಾರೆ” ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಆಪಾಸಿದ್ದಾರೆ.

ಈ ಮಧ್ಯೆ ತನ್ನ ಭೂಮಿಯಲ್ಲಿ ನಿರ್ಮಿಸಲಾದ ಕಟ್ಟಡವು ತನಗೇ ಸೇರಿದ್ದೆಂದು ವಾದಿಸಿ ಯಮುನಾ ಮತ್ತು ಅವರ ಕುಟುಂಬ ಸದ್ರಿ ಕಟ್ಟಡದಲ್ಲಿ ಪ್ರವೇಶಗೈದು ವಾಸ್ತವ್ಯವನ್ನು ನಡೆಸುತ್ತಿದ್ದಾರೆ. ಮತ್ತು ಕಟ್ಟಡದ ಸುತ್ತ ತಂತಿ ಬೇಲಿ ಹಾಕಲಾಗಿದೆ. ಈ ಬೆಳವಣಿಗೆ ಪಂಚಾಯಿತಿ ಆಡಳಿತವನ್ನು ಕಂಗೆಡಿಸುವಂತೆ ಮಾಡಿದೆ.

ಪಂಚಾಯಿತಿ ಪ್ರತಿ ದೂರು:
ತೆಕ್ಕಾರು ಗ್ರಾಮ ಪಂಚಾಯಿತಿ ಆಡಳಿತವು ಪ್ರತಿದೂರು ನೀಡಿದ್ದು, “ತಾವು ಕಟ್ಟಡ ನಿರ್ಮಿಸಿದ ಸ್ಥಳವು ಸರ್ವೆ ನಂಬ್ರ ೬೪ರಲ್ಲಿ ಬರುವುದಾಗಿದ್ದು, ಸದ್ರಿ ನಿರ್ಮಾಣ ಹಂತದ ಕಟ್ಟಡವನ್ನು ಯಮುನಾ ಕುಟುಂಬದವರು ಅತಿಕ್ರಮಿಸಿದಲ್ಲದೆ, ಬೇಲಿ ಹಾಕಿ ಪ್ರವೇಶಕ್ಕೆ ತಡೆಯೊಡ್ಡಿದ್ದಾರೆ” ಎಂದು ಆಪಾದಿಸಿದ್ದಾರೆ.

ಮೇಲ್ನೋಟಕ್ಕೆ ಕಾಣುವ ವಾಸ್ತವಾಂಶ ಏನು?
ತೆಕ್ಕಾರು ಗ್ರಾಮ ಪಂಚಾಯತ್ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಸರಕಾರ ೨೦ ಸೆಂಟ್ಸ್ ಭೂಮಿಯನ್ನು ಮಂಜೂರು ಮಾಡಿದ್ದು, ಸದ್ರಿ ಮಂಜೂರಾದ ಭೂಮಿಯು

ಸರ್ವೆ ನಂಬ್ರ
64/1 ರಲ್ಲಿ ಇರುವುದಾಗಿದೆ. ಯಮುನಾರವರು ಆಪಾದಿಸಿರುವಂತೆ ಸದ್ರಿ ಸರ್ವೆ ನಂಬ್ರದ ಭೂಮಿಯು ಕಟ್ಟಡ ನಿರ್ಮಿಸುತ್ತಿರುವ ಸ್ಥಳಕ್ಕಿಂತ ಸುಮಾರು ೧ ಕಿ.ಮೀ. ದೂರದಲ್ಲಿದೆ ಎಂದೂ, ತನ್ನ ಸಾಮಾಜಿಕ ಹಾಗೂ ಆರ್ಥಿಕ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಂಡು ಆರೋಪಿತರು ಅಧಿಕಾರ ದುರುಪಯೋಗಪಡಿಸಿಕೊಂಡು ಪಂಚಾಯತ್ ಕಚೇರಿ ಕಟ್ಟಡವನ್ನು ನಿರ್ಮಿಸುವ ನೆಪದಲ್ಲಿ ತನ್ನ ಭೂಮಿಯನ್ನು ಕಬಳಿಸಲು ತನ್ನ ೧೦೩/೧ಎ೨ರಲ್ಲಿ ಕಟ್ಟಡ ನಿರ್ಮಿಸಲಾಗಿದೆ ಎನ್ನುವುದು ಯಮುನಾ ರವರ ವಾದವಾಗಿದೆ.

ಡಿವೈಎಸ್ಪಿ.ಯವರಿಂದ ತನಿಖೆ:
ಡಿವೈಎಸ್ಪಿ. ಗಾನ ಪಿ. ಕುಮಾರ್‌ರವರು ಪ್ರಕರಣದ ತನಿಖೆ ನಡೆಸುತ್ತಿದ್ದು, ಯಮುನಾರವರು ನೀಡಿದ ದೂರಿನಂತೆ ದಲಿತ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸುವ ಮುನ್ನಾ ಭೂಮಿಯನ್ನು ಸರಕಾರಿ ಭೂ ಮಾಪಕರಿಂದ ಅಳತೆ ಮಾಡಿಸಿ ಭೂಮಿ ಅತಿಕ್ರಮಿಸಿರುವುದು ದೃಢಪಟ್ಟರೆ ಪ್ರಕರಣ ದಾಖಲಿಸಲಾಗುದೆಂದು ಭರವಸೆ ನೀಡಿದ್ದು, ಒಂದು ವೇಳೆ ನಿರ್ಮಿಸಲಾದ ಕಟ್ಟಡವು ಪಂಚಾಯತ್ ಕಟ್ಟಡಕ್ಕೆಂದೇ ಮಂಜೂರಾದ ಭೂಮಿಯಾಗಿದ್ದರೆ ಸರಕಾರಿ ಕಾಮಗಾರಿಗೆ ತಡೆಯೊಡ್ಡಿದ್ದ ಆಪಾದನೆಯನ್ವಯ ಯಮುನಾ ಮತ್ತವರ ಸಂಗಡಿಗರ ವಿರುದ್ದ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here