ಆಲಂಕಾರು: ಎಂಡೋ ಸಂತ್ರಸ್ತರ ಶಾಶ್ವತ ಪುನರ್ವಸತಿ ಕೇಂದ್ರಕ್ಕೆ ಮೀಸಲಿಟ್ಟ ಜಾಗದ ಪರಿಶೀಲನೆ

0

ಪುತ್ತೂರು: ಎಂಡೋ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಆಲಂಕಾರಿನಲ್ಲಿ ಮೀಸಲಿಟ್ಟಿರುವ ಜಾಗಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದ ತಂಡ ಫೆ.28ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದೆ.


ಕಳೆದ ಜನವರಿಯಲ್ಲಿ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಯವರ ಅಧ್ಯಕ್ಷತೆಯಲ್ಲಿ ಎಂಡೋಸಲ್ಫಾನ್ ಕಾರ್ಯಕಾರಿ ಸಮಿತಿ ಸಭೆ ನಡೆದಿದ್ದು ಈ ಸಭೆಯಲ್ಲಿ ಎಂಡೋ ಸಂತ್ರಸ್ತರಿಗೆ ಆಲಂಕಾರಿನಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪನೆ ಕುರಿತಂತೆ ಗಮನ ಸೆಳೆಯಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಈಗ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಮೀಸಲಿಟ್ಟಿರುವ ಜಾಗದ ಪ್ಲಾಟಿಂಗ್, ಗಡಿ ಗುರುತು ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ನೋಡೆಲ್ ಅಧಿಕಾರಿ ಡಾ.ನವೀನಚಂದ್ರ ಕುಲಾಲ್, ಎಂಡೋ ಸಲ್ಫಾನ್ಸ್ ಕೋಶದ ಸಂಯೋಜಕ ಸಜೀವುದ್ದೀನ್, ಮಾನಸಿಕ ತಜ್ಞ ಡಾ. ಅನಿರುದ್ಧ್ ಶೆಟ್ಟಿಯವರ ನೇತೃತ್ವದ ತಂಡ ಆಲಂಕಾರಿಗೆ ಭೇಟಿ ನೀಡಿ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪನೆಗೆ ನಿಗದಿಗೊಳಿಸಿದ ಜಾಗದ ಪರಿಶೀಲನೆ ನಡೆಸಿದರು. ದ.ಕ.ಜಿಲ್ಲಾ ಎಂಡೋ ಸಲ್ಫಾನ್ ಹೋರಾಟ ಸಮಿತಿಯ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್, ಉಪಾಧ್ಯಕ್ಷ ಪದ್ಮನಾಭ ಗೌಡ ಆಲಡ್ಕ, ಪ್ರಧಾನ ಕಾರ್ಯದರ್ಶಿ ಜಯಕರ ಪೂಜಾರಿ ಕಲ್ಲೇರಿಯವರು ಅಧಿಕಾರಿಗಳ ತಂಡಕ್ಕೆ ಮಾಹಿತಿ ನೀಡಿದರು.

ಎಂಡೋ ಸಲ್ಫಾನ್ ದುರಂತದಿಂದಾಗಿ ಮಾಡಿಲ್ಲದ ತಪ್ಪಿಗೆ ಅದೆಷ್ಟೋ ಜನರು ಭವಿಷ್ಯ ಕಳೆದುಕೊಂಡು ನರಕಯಾತನೆ ಅನುಭವಿಸುವಂತಾಗಿದೆ. ಸಂತ್ರಸ್ತರ ನರಳಾಟ, ಚೀರಾಟ, ವೇದನೆ, ನೋವು, ಸಂಕಟ ಸಹಿಸಿಕೊಂಡು ಹೆತ್ತವರೂ ನರಕಯಾತನೆ ಅನುಭವಿಸುತ್ತಿದ್ದಾರೆ. ಸಂತ್ರಸ್ತರು ದೈನಂದಿನ ಚಟುವಟಿಕೆಗಳಿಗೆ ಹತ್ತವರನ್ನೇ ಅವಲಂಬಿಸಿದ್ದಾರೆ. ಹೆತ್ತವರ ಮರಣ ನಂತರ ಸಂತ್ರಸ್ತರ ಗತಿ ಏನು ?, ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪನೆ ಆಗಬೇಕೆಂದು ನಾವು ಹೋರಾಟ ನಡೆಸುತ್ತಿದ್ದೇವೆ. ಆಲಂಕಾರಿನಲ್ಲಿ ಇದಕ್ಕಾಗಿ 5 ಎಕ್ರೆ ಜಾಗವನ್ನೂ ಕಾದಿರಿಸಲಾಗಿದೆ ಪೀರ್ ಮಹಮ್ಮದ್ ಸಾಹೇಬ್ ಅಧ್ಯಕ್ಷರು
ದ.ಕ.ಜಿಲ್ಲಾ ಎಂಡೋಸಲ್ಫಾನ್ ವಿರೋಧಿ ಹೋರಾಟ ಸಮಿತಿ

LEAVE A REPLY

Please enter your comment!
Please enter your name here