ಮಾರ್ಚ್ 22 ರಿಂದ 27: ಕಾಂಚನ-ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ

0

 

ಉಪ್ಪಿನಂಗಡಿ: ಕಾಂಚನ-ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವವು ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮಾರ್ಚ್ 22 ರಿಂದ 27ರವರೆಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮೊಕ್ತೇಸರ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಹೇಳಿದರು.


ಶ್ರೀ ದೇವಾಲಯದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕಡಬ ತಾಲೂಕಿನ ಆಲಂತಾಯ ಗ್ರಾಮದಲ್ಲಿ ಈ ದೇವಾಲಯವಿದ್ದು, ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಸುಮಾರು 250 ವರ್ಷಗಳ ಇತಿಹಾಸವಿದೆ. ಜೈನ ಅರಸರ ಕಾಲಾವಧಿಯಲ್ಲಿ ಸಂತತಿ ಪ್ರಾಪ್ತಿಗಾಗಿ ಪ್ರತಿದಿನ ಆರಾಧನೆಗಾಗಿ ಈ ದೇವಾಲಯವನ್ನು ಸ್ಥಾಪಿಸಲಾಗಿದ್ದು, ಶಿವಪುತ್ರ ಕುಮಾರಸ್ವಾಮಿಯು ಸಹೋದರ ಸಿದ್ಧಿವಿನಾಯಕನೊಂದಿಗೆ ಪರಿವಾರ ದೈವಗಳಾದ ಪಿಲಿಚಾಮುಂಡಿ, ಕಲ್ಲುರ್ಟಿ, ಪಂಜುರ್ಲಿ ದೈವಗಳಿಂದ ಪರಿವೃತನಾಗಿದ್ದುಕೊಂಡು, ಷಣ್ಮುಖ ಎಂಬ ಹೆಸರಿನೊಂದಿಗೆ ಇಲ್ಲಿ ಕರೆಯಲ್ಪಡುತ್ತಿದ್ದಾರೆ.


ಶ್ರೀ ದೇವರ ಆರಾಧನೆಯಿಂದ ಅಭೀಷ್ಟ ಸಿದ್ಧಿ, ಮನೋರೋಗ ಶಮನ, ಸಂತತಿ ಪ್ರಾಪ್ತಿ ಮುಂತಾದ ಸಮಸ್ಯೆಗಳಿಗೆ ದೊರೆತ ಅನೇಕ ದೃಷ್ಟಾಂತಗಳಿವೆ. ಶ್ರೀ ಕ್ಷೇತ್ರದ ಆಗ್ನೇಯ ದಿಕ್ಕಿನಲ್ಲಿ ಶ್ರೀ ಭದ್ರಕಾಳಿಯ ದಿವ್ಯ ಸನ್ನಿದಿಯಿದ್ದು, ದೇವಾಲಯದ ಸಮೀಪವಿರುವ ದೇವರಗುಡ್ಡೆ ಎಂಬ ಶಿಖರಾಗ್ರವೇ ಷಣ್ಮುಖ ಸ್ವಾಮಿಯ ಮೂಲಸ್ಥಾನ. ಇಲ್ಲಿ ಈಗ ಗುಹೆ, ನಾಗಬನಗಳು ಇವೆ. ದೇವಾಲಯದಲ್ಲಿ ಬಲು ಪುರಾತನವಾದ ಶಿಲಾಶಾಸನವೊಂದಿದ್ದು, ದೇವಾಲಯದ ಇತಿಹಾಸದತ್ತ ಬೆಳಕು ಚೆಲ್ಲುವಂತಿದೆ ಎಂದು ವಿವಿರಿಸಿದರು.

ಊರಿನ ಚಿತ್ರಣವೇ ಬದಲಾಯಿತು…!!
ಕಾಲಕ್ರಮೇಣ ಈ ದೇವಸ್ಥಾನ ಸಂಪೂರ್ಣ ಅಜೀರ್ಣಾವಸ್ಥೆ ತಲುಪಿ, ಪುನರ್ ನಿರ್ಮಾಣಕ್ಕಾಗಿ ಬಾಲಾಲಯದಲ್ಲಿರಿಸಲಾದ ದೇವರು ಸುದೀರ್ಘ ೧೧ ವರ್ಷಗಳ ಕಾಲ ಬಾಲಾಲಯದಲ್ಲಿಯೇ ಇರುವಂತಾಗಿತ್ತು. ಆ ಕಾಲಘಟ್ಟದಲ್ಲಿ ಈ ಊರಲ್ಲಿ ಬರಗಾಲ, ಬಡತನ ತೀವೃವಾಗಿ ಕಾಡಿದ್ದು, ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಿತ್ತು. ಬಾವಿ, ಕೊಳವೆಬಾವಿ ಕೊರೆದಾಗಲೆಲ್ಲಾ ನಿರಾಶೆಯೇ ಕಾಡುತ್ತಿತ್ತು. ಸಾಲದೆಂಬಂತೆ ಊರಿನಲ್ಲಿ ಒಂದೊಂದೇ ಮನೆಗಳು ಬೆಂಕಿಗೆ ಆಹುತಿಯಾಗತೊಡಗಿತು. ಈ ಸೂಕ್ಷ್ಮ ಕಾಲಘಟ್ಟದಲ್ಲಿ ಊರವರು ಜಾಗೃತಗೊಂಡು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದೇವಾಲಯದ ಪುನರ್ ನಿರ್ಮಾಣಕಾರ್ಯವನ್ನು ಪೂರ್ಣೈಸಿ ೨೦೦೭ರ ಮಾರ್ಚ್ ೨೫ರಂದು ಪುನರ್‌ಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ನೆರವೇರಿಸಿತು. ಆ ಬಳಿಕ ಊರು ಪವಾಡ ಸದೃಶ್ಯವೆಂಬಂತೆ ಅಭಿವೃದ್ಧಿಯಾಗತೊಡಗಿತು. ಊರಿನ ಚಿತ್ರಣವೇ ಬದಲಾಯಿತು. ಎತ್ತರ ಪ್ರದೇಶದಲ್ಲೂ ಕೊರೆಯಾಲಾದ ಕೊಳವೆ ಬಾವಿಯಲ್ಲಿ ನೀರು ಉಕ್ಕಿ ಮೇಲೇರಿ ಬಂದಿರುವುದು ಕ್ಷೇತ್ರದ ಮಹತ್ವಕ್ಕೆ ಸಾಕ್ಷಿಯಾಗಿದೆ. ಬ್ರಹ್ಮಕಲಶ ನಡೆದು ೧೨ ವರ್ಷ ಕಳೆದರೂ ದೇವರ ಮೂರ್ತಿಗೆ ಹಾಕಿದ್ದ ಅಷ್ಠಬಂಧ ಗಟ್ಟಿಯಾಗಿದ್ದ ಕಾರಣ ತಂತ್ರಿಗಳ ಮಾರ್ಗದರ್ಶನದಂತೆ ಬ್ರಹ್ಮಕಲಶ ಮಾಡಿರಲಿಲ್ಲ. ಈಗ ಅಷ್ಠಬಂಧದಲ್ಲಿ ಒಡಕು ಮೂಡಿದ್ದು, ಬ್ರಹ್ಮಕಲಶವಾಗಿ ೧೪ ವರ್ಷವಾದ ಬಳಿಕ ಮತ್ತೊಮ್ಮೆ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿ ಮಾಡಲಾಗಿದೆ. ಇದಕ್ಕಾಗಿ ೬೦ ಲಕ್ಷ ರೂಪಾಯಿಗಳ ಯೋಜನೆ ಹಾಕಿಕೊಂಡಿದ್ದು, ಇದರಲ್ಲಿ ಅನ್ನ ಛತ್ರ, ಸಭಾಂಗಣ ಸೇರಿದಂತೆ ಇನ್ನಿತರ ಕಾಮಗಾರಿಗಳು ನಡೆಯುತ್ತಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಪಾಲೇರಿ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ರಮೇಶ್ ಬಿ.ಜಿ., ಪ್ರಧಾನ ಕಾರ್ಯದರ್ಶಿ ಜನಾರ್ದನ ಗೌಡ ಬರಮೇಲು, ಶ್ರೀ ದೇವಾಲಯದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರತಾಪ್‌ಚಂದ್ರ ರೈ ಕುದುಮಾರುಗುತ್ತು, ಕಾರ್ಯದರ್ಶಿ ರಜತ್ ಕುಮಾರ್ ಶಾಂತಿಮಾರು, ಬ್ರಹ್ಮಕಲಶೋತ್ಸವದ ಆಹಾರ ಸಮಿತಿ ಅಧ್ಯಕ್ಷ ರವೀಂದ್ರ ಭಟ್, ಮಾಧ್ಯಮ ಸಮಿತಿ ಸಂಚಾಲಕ ಮೂಲಚಂದ್ರ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here