16 ವರ್ಷಗಳ ಹಿಂದೆ ಪುತ್ತೂರಿನಲ್ಲಿ ನಡೆದ ಕಳವು ಪ್ರಕರಣದ ಆರೋಪಿಗೆ ಜೈಲು ಶಿಕ್ಷೆ ವಿಧಿಸಿದ ಪುತ್ತೂರು ನ್ಯಾಯಾಲಯ

0

 

ಪುತ್ತೂರು: 16 ವರ್ಷಗಳ ಹಿಂದೆ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕದಲ್ಲಿ ಮನೆಯೊಂದರಿಂದ ಅಪ್ರಾಪ್ತನೊಂದಿಗೆ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಇನ್ನೊಂದು ಪ್ರಕರಣದಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಆರೋಪಿ ನಾಗರಾಜ್ ಬಲೆಗಾರ ಎಂಬವರಿಗೆ ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು, ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ರಮೇಶ್ ಎಂ ಅವರು ೫ ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಆರೋಪಿ ವಿರುದ್ಧ ತೀರ್ಪು ನೀಡಿದ್ದಾರೆ.
2006ರ ಮಾ.14ರಂದು ಆರೋಪಿ ಸುರತ್ಕಲ್ ಸಮೀಪದ ವಿದ್ಯಾನಗರ ನಿವಾಸಿ ನಾಗರಾಜ್ ಬಲೆಗಾರ ಅವರು ತನ್ನೊಂದಿಗೆ ಅಪ್ರಾಪ್ತ ಬಾಲಕನೊಂದಿಗೆ ಮೊಟ್ಟೆತ್ತಡ್ಕದ ಮಹೇಂದ್ರ ಕುಮಾರ್ ಎಂಬವರ ಮನೆಯಿಂದ ಚಿನ್ನಾಭರಣ ಕಳವು ಮಾಡಿದ್ದರು. ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಬ್ಬರನ್ನು ಜಿಲ್ಲಾ ಅಪರಾಧ ಪತ್ತೆದಳದ ನಿರೀಕ್ಷಕರಾಗಿದ್ದ ತಿಲಕ್‌ಚಂದ್ರ ಅವರು ಬಂಧಿಸಿದ್ದರು. ಪುತ್ತೂರು ನಗರ ಪೊಲೀಸ್ ಠಾಣೆಯ ಆಗಿನ ಎಸ್.ಐ ಆಗಿದ್ದ ಕೃಷ್ಣ ನಾಯ್ಕ ಅವರು ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ  ಪೈಕಿ ಅಪ್ರಾಪ್ತನನ್ನು ಬಾಲಾಪರಾಧಿಯ ಹಿನ್ನೆಲೆಯಲ್ಲಿ ಬಾಲನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿತ್ತು. ಇನ್ನೋರ್ವ ಆರೋಪಿ ನಾಗರಾಜ ಬಲೆಗಾರ ಅವರು ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಹೊಂದಿದ್ದರು. ಆಗ ಅವರಿಗೆ 18 ವರ್ಷ ವಯಸ್ಸಾಗಿತ್ತು. ಅಪ್ರಾಪ್ತನಿಗೆ 12 ವರ್ಷ ವಯಸ್ಸಾಗಿತ್ತು. ಈ ನಡುವೆ ನಾಗರಾಜ ಬಲೆಗಾರ ಇನ್ನೊಂದು ಪ್ರಕರಣದಲ್ಲಿ ಉಡುಪಿಯಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾಗಲೇ ಕೊಲೆ ಪ್ರಕರಣದಲ್ಲಿ ಮತ್ತೊಂದು ಕೇಸು ದಾಖಲಾಗಿತ್ತು. ಈ ಪ್ರಕರಣದಲ್ಲಿ ನಾಗರಾಜ ಬಲೆಗಾರ ಅವರು ಗುಲ್ಬರ್ಗ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಜೊತೆಗೆ ಮೊಟ್ಟೆತ್ತಡ್ಕದಲ್ಲಿ ಮನೆಯಿಂದ ಕಳವು ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಆರೋಪಿ ನಾಗರಾಜ್ ಬಲೆಗಾರ ಅವರಿಗೆ ನ್ಯಾಯಾಧೀಶ ರಮೇಶ್ ಎಂ ಅವರು ಸೆಕ್ಷನ್ 457ರಲ್ಲಿ 5 ವರ್ಷ ಕಠಿಣ ಶಿಕ್ಷೆ ಮತ್ತು ಸೆಕ್ಷನ್ 380ರಲ್ಲಿ 4 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರ ಸಹಾಯಕ ಸರಕಾರಿ ಅಭಿಯೋಜಕಿ ಕವಿತಾ ಅವರು ವಾದಿಸಿದರು.

LEAVE A REPLY

Please enter your comment!
Please enter your name here