ಸುದಾನದಲ್ಲಿ ಅಖಿಲ ಕರ್ನಾಟಕ 18ನೇ ಹಸ್ತಪ್ರತಿ ಸಮ್ಮೇಳನ

0

  • ರೆವೆ|ಜಿ.ಎಫ್.ಕಿಟ್ಟೆಲ್‌ರವರ ಸಾಹಿತ್ಯ ಸಂಸ್ಮರಣೆ
  • ಹಸ್ತಪ್ರತಿಗಳ ಸಂರಕ್ಷಣೆ, ಡಿಜಿಟಲೀಕರಣದಿಂದ ಜ್ಞಾನಸಂಪತ್ತು ವೃದ್ಧಿ-ಪ್ರೊ|ಎ.ವಿ ನಾವಡ

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪೊಟೊ ವಾಟ್ಸಪ್-ಸುದಾನ(ಉದ್ಘಾಟನೆ ಲೀಡ್, ಉಳಿದವು ಕಂಟಿನ್ಯೂ. ಅದರಲ್ಲಿ ಎರಡು ಸನ್ಮಾನದ ಪೊಟೊಗಳು ಜೋಡಿಸಿ)

 

ಪುತ್ತೂರು: ಹಸ್ತಪ್ರತಿಗಳು ನಮ್ಮ ನಾಡಿನ ಜ್ಞಾನ ಪರಂಪರೆಯ ಕಣಜ, ಸಂಸ್ಕೃತಿಯ ವಾಹಕಗಳು. ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿ ಹಸ್ತಪ್ರತಿಗಳ ಸಂರಕ್ಷಣೆಯ ಜೊತೆಗೆ ಡಿಜಿಟಲೀಕರಣ ಕಾರ್ಯ ಸಾಕಷ್ಟು ಪ್ರಗತಿಯಲ್ಲಿದ್ದು ಅದರೊಳಗೆ ಜ್ಞಾನಸಂಪತ್ತು ವೃದ್ಧಿಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಕನ್ನಡದ ಹಿರಿಯ ವಿದ್ವಾಂಸರು ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ|ಎ.ವಿ.ನಾವಡರವರು ಹೇಳಿದರು.


ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿ ವಿಭಾಗ ಹಾಗೂ ಸುದಾನ-ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್ ಪುತ್ತೂರು ಸಹಯೋಗದಲ್ಲಿ ಪುತ್ತೂರಿನ ಸುಧಾನ ವಸತಿ ಶಾಲೆಯ ಸಭಾಂಗಣದಲ್ಲಿ ಮಾ.೫ ಮತ್ತು ೬ರಂದು ನಡೆಯಲಿರುವ ಅಖಿಲ ಕರ್ನಾಟಕ ೧೮ನೆಯ ಹಸ್ತಪ್ರತಿ ಸಮ್ಮೇಳನ ಮತ್ತು ರೆವೆ|ಜಿ.ಎಫ್ ಕಿಟ್ಟೆಲ್ ಸಾಹಿತ್ಯ ಸಂಸ್ಮರಣೆ ಕಾರ್ಯಕ್ರಮದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿದರು. ಪುತ್ತೂರು ಕಲೆ-ಸಾಹಿತ್ಯ-ಸಂಸ್ಕೃತಿ ಸಂಶೋಧನೆಗಾಗಿ ಹೆಸರು ಮಾಡಿದ ನೆಲ. ಸರ್ವಧರ್ಮ ಸಮನ್ವಯದ ಬೀಡು. ಕನ್ನಡ, ತುಳು ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲಿ ಅನೇಕ ಹೊಸತುಗಳನ್ನು ಹುಟ್ಟುಹಾಕಿ ಕರಾವಳಿಯನ್ನು ಆಧುನಿಕತೆಗೆ ತೆರೆದುಕೊಳ್ಳುವಂತೆ ಮಾಡಿದ ಬಾಸೆಲ್ ಮಿಶನರಿಗಳ ಆಡುಂಬೊಲ ಈ ಪುತ್ತೂರು ಆಗಿದೆ. ಆಧುನಿಕ ಪೂರ್ವ ಕನ್ನಡ ಸಾಹಿತ್ಯ ಸಂಸ್ಕೃತಿಯ ಅಧ್ಯಯನದ ಆಕರಗಳಾದ ತಾಡೋಲೆ-ಕೋರಿಕಾಗದ-ಕಡತ ರೂಪದ ಹಸ್ತಪ್ರತಿಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದ ಅವರು ಓರ್ವ ಸಾಹಿತ್ಯಚರಿತ್ರಕಾರನಾಗಿ, ಅನುವಾದಕರಾಗಿ, ಶಾಸನತಜ್ಞರಾಗಿ, ಸಾಂಸ್ಕೃತಿಕ ಕವಿಯಾಗಿ, ವೇದ ಪಂಡಿತರಾಗಿ, ಲಿಂಗಾಯತ ಅಧ್ಯಯನಕಾರರಾಗಿ, ಸಂಗೀತ ತಜ್ಞರಾಗಿ ಎಲ್ಲಕ್ಕಿಂತ ಮೇಲಾಗಿ ಭಾರತೀಯ ಚಿಂತನೆಯನ್ನು ನಮ್ಮ ನೆಲದಲ್ಲಿ ಭಿತ್ತಿದ ಕಿಟ್ಟೆಲ್ಲರ ಬಹುಮುಖಿ ಬಹುಶ್ರುತತ್ವವನ್ನು ಈ ಎರಡು ದಿನಗಳ ಸಮ್ಮೇಳನದಲ್ಲಿ ಚರ್ಚಿಸಲಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಪುತ್ತೂರಿನ ಸುದಾನ ಸಂಸ್ಥೆಯು ಕಿಟೆಲರನ್ನು ನೆನಪಿಸಿಕೊಳ್ಳುವ ಮೂಲಕ ಅವರ ಅಲೋಚನೆಗಳನ್ನು ಹೊಸ ಕಾಲಕ್ಕೆ ಅನುಸಂಧಾನಗೊಳಿಸುತ್ತದೆ ಎಂದು ಅವರು ಹೇಳಿದರು.

ಅಧ್ಯಯನ, ಸಂಶೋಧನೆಗಳು, ಭಾಷಾ ಬೆಳೆಸುವಿಕೆ ಅಭಿನಂದನೀಯ-ಡಾ|ಅಜೆಕ್ಕಳ ಗಿರೀಶ್ ಭಟ್:
ಬೆಂಗಳೂರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ|ಅಜೆಕ್ಕಳ ಗಿರೀಶ್ ಭಟ್‌ರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಮಿಷನರಿಗಳು ಈ ಭಾಗದಲ್ಲಿ ಹಲವಾರು ನಡೆಸಿದ ಅಧ್ಯಯನ, ಸಂಶೋಧನೆಗಳು, ಭಾಷಾ ಬೆಳೆಸುವಿಕೆ ಅಭಿನಂದನೀಯ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಕಿಟ್ಟೆಲ್ ಸಾಹಿತ್ಯ ಸಂಸ್ಮರಣೆ ಔಚಿತ್ಯಪೂರ್ಣವಾಗಿದೆ. ಹಂಪಿ ವಿಶ್ವವಿದ್ಯಾಲಯವು ಹಸ್ತಪ್ರತಿ ಶಾಸ್ತ್ರಕ್ಕೆ ಗಟ್ಟಿ ಅಡಿಪಾಯವನ್ನು ಹಾಕಿದೆ. ಕಳೆದ ಸುಮಾರು ೧೪ ವರ್ಷಗಳ ಹಿಂದೆ ಸರ್ಕಾರವು ಹಸ್ತಪ್ರತಿ ಸಂಗ್ರಹ ಅಭಿಯಾನ ನಡೆಸಿದ್ದ ಸಂದರ್ಭದಲ್ಲಿ ಈ ಭಾಗದ ವಿಟ್ಲ ಹಾಗೂ ಸುತ್ತಮುತ್ತಲಿನಲ್ಲಿ ಸಾಕಷ್ಟು ಮನೆಗಳಿಗೆ ಸುತ್ತಾಡಿ ಹಸ್ತಪ್ರತಿಗಳ ಸಂಗ್ರಹ ಹಾಗೂ ಜಾಗೃತಿ ಮೂಡಿಸಿದ ಅನುಭವ ನನಗಿದೆ ಎಂದ ಅವರು ಹಸ್ತಪ್ರತಿ ಅಧ್ಯಯನವು ಅಷ್ಟೊಂದು ಆಕರ್ಷಣೀಯ ಕ್ಷೇತ್ರವಲ್ಲ. ಇತರ ಕ್ಷೇತ್ರಗಳಂತೆ ಗ್ಲಾಮರ್ ಈ ಕ್ಷೇತ್ರಕ್ಕಿಲ್ಲ. ಆದರೆ ಇದೊಂದು ವಿದ್ವತ್, ಶ್ರಮ ಮತ್ತು ಸಮಯಗಳನ್ನು ಬೇಡುವ ಕೆಲಸವಾಗಿದೆ. ಇತ್ತೀಚೆಗಿನ ಅಧ್ಯಯನದ ದಿಕ್ಕುಗಳನ್ನು ನೋಡಿದರೆ ಹಸ್ತಪ್ರತಿ ವರ್ತಮಾನಕ್ಕೆ ತಳಕು ಹಾಕುತ್ತಿದೆ. ನಮ್ಮಲ್ಲಿನ ಸಾಕಷ್ಟು ಧಾರ್ಮಿಕ ಕೇಂದ್ರಗಳು ಹಸ್ತಪ್ರತಿಗಳನ್ನು ಸಂಗ್ರಹಿಸಿ ಸಂರಕ್ಷಿಸಿ ಪೋಷಿಸುತ್ತಿದೆ. ಹಸ್ತಪ್ರತಿಯಿಂದ ಲಿಪಿಯ ವಿಕಾಸದ ಚರಿತ್ರೆ ತಿಳಿಯಲು ಸಾಧ್ಯವಿದೆ ಎಂದು ಅವರು ಹೇಳಿದರು.

ಹಸ್ತಪ್ರತಿಗಳ ಗ್ರಂಥಗಳು ಬೆಳಕನ್ನು ಚೆಲ್ಲುವ ಗ್ರಂಥಗಳಾಗಿವೆ-ಡಾ|ತಾಳ್ತಜೆ ವಸಂತ ಕುಮಾರ್:
ಪ್ರೊ|ಎ.ವಿ.ನಾವಡರವರು ಸಂಪಾದಿಸಿದ ಕಿಟ್ಟೆಲ್ ವಾಚಿಕೆ, ಸಿಲೆಕ್ಟೆಡ್ ರೈಟಿಂಗ್ ಆಫ್ ರೆ|ಕಿಟ್ಟೆಲ್ ಇನ್ ಕನ್ನಡ ಲ್ಯಾಂಗ್ವೇಜ್ ಲಿಟರೇಚರ್ ಆಂಡ್ ಕಲ್ಚರ್, ಕಿಟ್ಟೆಲ್‌ರವರ ಕ್ರಿಸ್ತೀಯ ಕಾವ್ಯ ಕಥಾಮಾಲೆ ಹಾಗೂ ಡಾ|ವೀರೇಶ ಬಡಿಗೇರರವರು ಸಂಪಾದಿಸಿದ ಹಸ್ತಪ್ರತಿ ವ್ಯಾಸಂಗ-೨೧, ಕನ್ನಡ ಅಧ್ಯಯನ ೧೦-೧, ೨ ಕನ್ನಡ ಅಧ್ಯಯನ ೧೧.೧,೨ -ಹೀಗೆ ಆರು ಪುಸ್ತಕಗಳನ್ನು ಕನ್ನಡದ ಹಿರಿಯ ವಿದ್ವಾಂಸರಾದ ಉಪ್ಪಿನಂಗಡಿಯ ಡಾ|ತಾಳ್ತಜೆ ವಸಂತಕುಮಾರ್‌ವರು ಲೋಕಾರ್ಪಣೆ ಮಾಡುವ ಮೂಲಕ ಮಾತನಾಡಿ, ಪುತ್ತೂರಿನಲ್ಲಿ ಅನೇಕ ಸಾಹಿತ್ಯ ಸಮ್ಮೇಳನ ನಡೆಸಿದ ಇತಿಹಾಸವಿದೆ. ಹತ್ತೂರು ಬಿಟ್ಟೇವು, ಪುತ್ತೂರು ಬಿಡೆವು ಎಂಬಂತೆ ನಮಗೆ ನಮ್ಮ ಪುತ್ತೂರು ಊರಿನ ಮೇಲೆ ಅಗಾಧ ಪ್ರೀತಿಯಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಪ್ರೊ.ನಾವಡರವರು ಕಟ್ಟಿ ಬೆಳೆಸಿದವರಾಗಿದ್ದಾರೆ. ಮಾತ್ರವಲ್ಲ ಈ ವಿಶ್ಚವಿದ್ಯಾಲಯವು ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆಯನ್ನು ಕೂಡ ನೀಡಿದೆ. ಈ ವಿಶ್ವವಿದ್ಯಾನಿಲಯದಲ್ಲಿ ಪ್ರೊ.ನಾವಡರವರ ನೇತೃತ್ವದಲ್ಲಿ ಹಸ್ತಪ್ರತಿ ಅಧ್ಯಯನ ವಿಭಾಗವಿರುವುದು ಬಹುದೊಡ್ಡ ಹೆಗ್ಗಳಿಕೆಯಾಗಿದೆ. ಹಸ್ತಪ್ರತಿಗಳ ಗ್ರಂಥಗಳು ಬೆಳಕನ್ನು ಚೆಲ್ಲುವ ಗ್ರಂಥಗಳಾಗಿವೆ ಎಂದರು.

 


ಹಿರಿಯರ ಮಾರ್ಗದರ್ಶನ, ಪ್ರೀತಿ, ಸಲಹೆಯಿದ್ದಾಗ ಉನ್ನತಿ-ಡಾ|ಸ.ಚಿ ರಮೇಶ್:
ಅಧ್ಯಕ್ಷತೆ ವಹಿಸಿದ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|ಸ.ಚಿ.ರಮೇಶ್‌ರವರು ಮಾತನಾಡಿ, ಪ್ರೊ|ನಾವಡರವರು ವಿಶ್ರಾಂತರಾಗಿ ಅನೇಕ ವರ್ಷಗಳೇ ಸಂದಿವೆ. ಆದರೂ ಅವರನ್ನು ಅಖಿಲ ಕರ್ನಾಟಕ ೧೮ನೇ ಹಸ್ತಪ್ರತಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಮಾನವ ಸಂಬಂಧಗಳಿಗೆ ಹಾಗೂ ಗುರು-ಹಿರಿಯರಿಗೆ ಬೆಲೆ ನೀಡುವ ಕಾರ್ಯವನ್ನು ಮಾಡಲಾಗಿದೆ. ಭೂಮಿಯ ಸಾರವನ್ನು ತಿಳಿದವರು ಅದರಿಂದ ಫಲವನ್ನು ಪಡೆಯಲು ಸಾಧ್ಯವಾಗುತ್ತದೆ. ಅದರಂತೆ ಹಿರಿಯರ ಮಾರ್ಗದರ್ಶನ, ಪ್ರೀತಿ, ಸಲಹೆ ಇದ್ದರೆ ಉನ್ನತಿ ಪಡೆಯಲು ಸಾಧ್ಯ ಎನ್ನುವುದಕ್ಕೆ ಈವರೆಗೆ ನಡೆದ ಸಮ್ಮೇಳನಗಳೇ ಸಾಕ್ಷಿಯಾಗಿದೆ ಎಂದ ಅವರು ದಾಸರು ಹೇಳಿದಂತೆ `ಆಗುವುದೆಲ್ಲ ಒಳ್ಳೆಯದಕ್ಕೇ’ ಎಂಬಂತೆ ಧನಾತ್ಮಕವಾಗಿ ಮುನ್ನುಡಿಯಿಡಬೇಕು. ಹಸ್ತಪ್ರತಿಗಳಲ್ಲಿ ನಮಗೆ ತಿಳಿಯದೆ ಹಾಗೆ ಎಷ್ಟೋ ರಹಸ್ಯಗಳಿವೆ. ಈ ರಹಸ್ಯಗಳನ್ನು ಬೇಧಿಸಿಕೊಳ್ಳುವಂತಹ ಬೀಗದ ಕೈಗಳು ನಾವಾಗಬೇಕಿದೆ ಎಂದು ಅವರು ಹೇಳಿದರು.

ಹಸ್ತಪ್ರತಿಗಳು ಅಧ್ಯಯನಾಶಕ್ತರಿಗೆ ಬಹಳ ಮುಖ್ಯ ಗ್ರಂಥಗಳಾಗಿವೆ-ಡಾ|ಎಫ್.ಟಿ ಹಳ್ಳಿಕೇರಿ:
ಪ್ರಾಸ್ತಾವಿಕವಾಗಿ ಮಾತನಾಡಿದ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ|ಎಫ್.ಟಿ ಹಳ್ಳಿಕೇರಿರವರು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಅಧ್ಯಯನಕ್ಕೆ ಹಸ್ತಪ್ರತಿಗಳು ಬಹುಮುಖ್ಯ ಆಕರಗಳಾಗಿವೆ. ಹಸ್ತಪ್ರತಿಗಳಿಗೆ ಸಾವಿರಾರು ವರ್ಷದ ಸುದೀರ್ಘ ಇತಿಹಾಸವಿದೆ, ಪರಂಪರೆಯಿದೆ. ಹಸ್ತಪ್ರತಿಗಳಲ್ಲಿ ಪ್ರಾಚೀನ ಕಾಲದ ಕವಿಗಳ ಪ್ರತಿಭೆ, ಪಾಂಡಿತ್ಯ, ವೈವಿಧ್ಯತೆ ಹಾಗೂ ವೈಶಿಷ್ಟ್ಯತೆ ಒಳಗೊಂಡಿದೆ. ಹಸ್ತಪ್ರತಿಗಳ ಕುರಿತು ಸರ್ವೇಕ್ಷಣೆ ಸಂಗ್ರಹ, ಸಂರಕ್ಷಣೆ, ಪರಿಷ್ಕರಣೆ, ಪ್ರಕಟಣೆ, ಅಧ್ಯಯನ, ಅಧ್ಯಾಪನ ಹೀಗೆ ವಿವಿಧ ಆಯಾಮಗಳಿಂದ ಅಧ್ಯಯನಗಳು ನಡೆದಿವೆ. ಇದರಿಂದಾಗಿ ಲಕ್ಷೆಪಲಕ್ಷ ಹಸ್ತಪ್ರತಿಗಳು ಶೋಧಗೊಂಡು ಸಂರಕ್ಷಣೆಗೊಂಡಿವೆ ಎಂದ ಅವರು ಪ್ರಸ್ತುತ ಐದು ಸಾವಿರ ಸಂಖ್ಯೆಯಷ್ಟು ಹಸ್ತಪ್ರತಿಗಳು ನಶಿಸಿ ಹೋಗದಂತೆ ಮಾತ್ರವಲ್ಲದೆ ಅವುಗಳು ಧೂಳು, ಕ್ರಿಮಿ, ಕೀಟ ಹಿಡಿಯದಂತೆ ಅವುಗಳನ್ನು ಆಧುನಿಕ ತಂತ್ರಜ್ಞಾನದಂತೆ ಸ್ಕ್ಯಾನ್ ಮಾಡಿ, ಡಿಜಿಲೈಶೇಷನ್‌ಗೊಳಿಸಿ ಸಂರಕ್ಷಣೆ ಮಾಡಲಾಗಿದೆ. ಹಸ್ತಪ್ರತಿಗಳು ಅಧ್ಯಯನಾಶಕ್ತರಿಗೆ ಬಹಳ ಮುಖ್ಯ ಗ್ರಂಥಗಳಾಗಿವೆ. ಮಂಗಳೂರಿನಿಂದ ಬೆಳಗಾವಿಯವರೆಗೆ ಅಲ್ಲದೆ ಇತರೆಡೆ ಈಗಾಗಲೇ ಹದಿನೇಳು ಹಸ್ತಪ್ರತಿ ಸಮ್ಮೇಳನವನ್ನು ಹಮ್ಮಿಕೊಂಡು ಪ್ರಸ್ತುತ ಪುತ್ತೂರಿನಲ್ಲಿ ೧೮ನೇ ಹಸ್ತಪ್ರತಿ ಸಮ್ಮೇಳನವನ್ನು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಕನ್ನಡ ಭಾಷೆ, ಸಂಸ್ಕೃತಿಯನ್ನು ಕಿಟ್ಟೆಲ್‌ರವರು ಅಪ್ಪಿಕೊಂಡು ಬೆಳೆಸಿದ್ದಾರೆ-ರೆ|ಹಾರ್ವಿನ್:
ಸುದಾನ ವಸತಿ ಶಾಲೆಯ ಸಂಚಾಲಕರಾದ ರೆ|ವಿಜಯ ಹಾರ್ವಿನ್‌ರವರು ಹಸ್ತಪ್ರತಿ ಮತ್ತು ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಧರ್ಮ ಪ್ರಚಾರಕ್ಕೆ, ಧರ್ಮದ ಅಭಿವೃದ್ಧಿಗೆ, ಕ್ರಿಸ್ತನ ಸಂದೇಶ ಪ್ರಚಾರಕ್ಕೆಂದು ಕಿಟ್ಟೆಲ್‌ರವರನ್ನು ಕಳುಹಿಸಿ ಕೊಡುತ್ತಾರೆ. ಆದರೆ ದೇವರ ಸೇವೆಯೇ ಮಾನವ ಸೇವೆ, ಜೊತೆಗೆ ಸಾಹಿತ್ಯ ಸೇವೆ ಎಂಬ ದೃಷ್ಟಿಯ ನಿಲುವು ಹಾಗೂ ಅಲೋಚನೆಯಿತ್ತು ಕಿಟ್ಟೆಲ್‌ರವರಿಗೆ. ಕನ್ನಡ, ಕನ್ನಡ ಭಾಷೆ, ಸಂಸ್ಕೃತಿಯನ್ನು ಅಪ್ಪಿಕೊಂಡು ಅದನ್ನು ವಿಶೇಷವಾಗಿ ಬೆಳೆಸುವಲ್ಲಿ ಕಿಟ್ಟೆಲ್‌ರವರು ಬಹಳಷ್ಟು ಶ್ರಮ ವಹಿಸಿದ್ದಾರೆ. ವಿದ್ಯಾರ್ಥಿಗಳು ಮುಂದೆ ಬಂದು ಕಿಟ್ಟೆಲ್‌ರವರು ಭಿತ್ತಿದ ಬೀಜವನ್ನು ಫಲವನ್ನಾಗಿ ಮಾರ್ಪಡಿಸಬೇಕಾಗಿದೆ ಎಂದರು.
ಸುದಾನದ ವಿದ್ಯಾರ್ಥಿಗಳು ನಾಡಗೀತೆ ಹಾಡುವ ಮೂಲಕ ಪ್ರಾರ್ಥಿಸಿದರು. ಸುದಾನ ಕಿಟ್ಟೆಲ್ ಸೆಂಟರ್ ಪುತ್ತೂರು ಇದರ ನಿರ್ದೇಶಕರಾದ ಡಾ|ಪೀಟರ್ ವಿಲ್ಸನ್ ಪ್ರಭಾಕರ್‌ರವರು ಸ್ವಾಗತಿಸಿದರು. ಸುದಾನ ಕಿಟ್ಟೆಲ್ ಸೆಂಟರ್‌ನ ಕೋಶಾಧಿಕಾರಿ ಆಸ್ಕರ್ ಆನಂದ್, ಜೊತೆ ಕಾರ್ಯದರ್ಶಿ ಸಿಲ್ವಿಯಾ ಡಿ’ಸೋಜ, ಮೌನೇಶ್ ವಿಶ್ವಕರ್ಮ, ಡಾ.ಶೇಖರ್ ನಾಕ್, ಅಮೃತವಾಣಿರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಸುದಾನ ವಿದ್ಯಾರ್ಥಿಗಳು ರೆ|ಜಿ.ಎಫ್ ಕಿಟ್ಟೆಲ್ ರವರ ಸಂಗೀತವನ್ನು ಹಾಡಿದರು.ಸುದಾನ ವಸತಿ ಶಾಲೆಯ ಶಿಕ್ಷಕಿ ಶ್ರೀಮತಿ ಶೋಭಾ ನಾಗಾರಾಜ್ ವಂದಿಸಿದರು. ಸುದಾನ ಶಾಲೆಯ ಶಿಕ್ಷಕಿ ಶ್ರೀಮತಿ ಕವಿತಾ ಅಡೂರು ಸನ್ಮಾನಿತರ ಪರಿಚಯ ಮಾಡಿ, ಕಾರ್ಯಕ್ರಮ ನಿರೂಪಿಸಿದರು.

ಕಿಟ್ಟೆಲ್ ಸಾಹಿತ್ಯ ಸಂಸ್ಮರಣೆ ಗೋಷ್ಠಿ…
ಮಧ್ಯಾಹ್ನ 2 ಗಂಟೆಯಿಂದ ಗೋಷ್ಠಿಗಳು ಆರಂಭವಾಗಿದ್ದು, ರೆ|ಕಿಟ್ಟೆಲ್ ಅವರ ಸಾಹಿತ್ಯ ಸಾಧನೆ ಕುರಿತು ಮೊದಲ ಗೋಷ್ಠಿಗಳಲ್ಲಿ ಕಿಟ್ಟೆಲ್‌ರವರ ಜೀವನ ಪಥ(ಡಾ.ಎಫ್.ಟಿ ಹಳ್ಳಿಕೇರಿ ಹಂಪಿ), ನಿಘಂಟು-ವ್ಯಾಕರಣ(ಡಾ.ಶ್ರೀಕೃಷ್ಣ ಭಟ್ ಮಂಗಳೂರು), ಪಠ್ಯಪುಸ್ತಕ ರಚನೆ(ಡಾ.ಕೆ.ಎನ್ ಶೈಲಾ ಮಂಗಳೂರು), ಗ್ರಂಥ ಸಂಪಾದನೆ(ಡಾ.ವೀರೇಶ ಬಡಿಗೇರ ಹಂಪಿ), ದ್ವಿತೀಯ ಗೋಷ್ಟಿಯಲ್ಲಿ ಕಾವ್ಯ(ಡಾ.ಜಿ.ಕೆ ರವಿಶಂಕರ ಉಜಿರೆ), ಸಂಶೋಧನೆ(ಡಾ.ಎಸ್.ಎನ್ ಅಂಗಡಿ ಬೆಳಗಾವಿ), ಧಾರ್ಮಿಕ ಸಾಹಿತ್ಯ(ಡಾ.ಬಾಲಕೃಷ್ಣ ಹೊಸಂಗಡಿ ಕಾಸರಗೋಡು), ಸಾಹಿತ್ಯ ಚರಿತ್ರೆ(ಡಾ.ಕೆ ರವೀಂದ್ರನಾಥ ಹಂಪಿ) ಕುರಿತು ಚಿಂತನ ಮಂಥನದ ಜೊತೆಗೆ ೮ ಸಂಪ್ರಬಂಧಗಳು ಮಡನೆಯಾಯಿತು. ಮೊದಲ ಗೋಷ್ಠಿಯಲ್ಲಿ ಹಂಪಿ ಕನ್ನಡ ವಿ.ವಿಯ ಡೀನ್, ಭಾಷಾನಿಕಾಯ ಡಾ.ವೀರೇಶ ಬಡಿಗೇರ, ದ್ವಿತೀಯ ಗೋಷ್ಠಿಯಲ್ಲಿ ಹಂಪಿ ಕನ್ನಡ ವಿ.ವಿಯ ಡೀನ್, ಲಲಿತಕಲೆಗಳ ನಿಕಾಯ ಡಾ.ಕೆ.ರವೀಂದ್ರನಾಥರವರು ಅಧ್ಯಕ್ಷತೆ ವಹಿಸಿದ್ದರು.

 

ಸನ್ಮಾನ
ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಕನ್ನಡದ ಹಿರಿಯ ವಿದ್ವಾಂಸರು ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತ ಪ್ರತಿಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ|ಎ.ವಿ.ನಾವಡ ದಂಪತಿ ಹಾಗೂ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|ಸ.ಚಿ.ರಮೇಶ್‌ರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಆಧುನಿಕ ಗ್ರಂಥ ಸಂಪಾದನೆಯಲ್ಲಿ ಮೌಖಿಕ ಸಾಹಿತ್ಯಗಳನ್ನು ಸಂಗ್ರಹಿಸುವ ಸಾಕಷ್ಟು ಕೆಲಸಗಳು ನಡೆದಿದೆ. ಅವು ಲಿಪಿ ಸಂಕೇತವಾಗಿ ಸಮಗ್ರವಾಗಿ ವ್ಯಾಪಿಸಿದೆ. ಸಾಹಿತ್ಯ ವಿಭಾಗದಲ್ಲಿ ಹಳೆಗನ್ನಡಕ್ಕೆ ಬೆಲೆ ಕಡಿಮೆ ಆಗಿರುವ ಈ ಸಂದರ್ಭದಲ್ಲಿ ಅದಕ್ಕೂ ಹಳೆಯದಾದ ಹಸ್ತಪ್ರತಿಯು ಕಡೆಗಣನೆಗೆ ಒಳಗಾಗಿದೆ. ಈ ನಡುವೆ ತಂತ್ರಜ್ಞಾನಗಳು ಸಾಕಷ್ಟು ಮುಂದುವರಿದಿದ್ದು, ಮುಂದಿನ ಮೂರ್‍ನಾಲ್ಕು ವರ್ಷಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬರೆಯದೆ ಪಾಸಾಗುವ ವ್ಯವಸ್ಥೆಯೂ ಬರಲು ಸಾಧ್ಯವಿದೆ ಡಾ|ಅಜೆಕ್ಕಳ ಗಿರೀಶ್ ಭಟ್, ಅಧ್ಯಕ್ಷರು, ಬೆಂಗಳೂರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

LEAVE A REPLY

Please enter your comment!
Please enter your name here