`ಏರೆಗಾವುಯೇ ಕಿರಿಕಿರಿ’ ತುಳು ಸಿನಿಮಾ ಅರುಣಾ ಚಿತ್ರಮಂದಿರದಲ್ಲಿ ಬಿಡುಗಡೆ

0

ಪುತ್ತೂರು: ವೇಗಸ್ ಫಿಲಮ್ ಲಾಂಛನದಲ್ಲಿ ಹಿರಿಯ ನಿರ್ದೇಶಕ ರಾಮ್ ಶೆಟ್ಟಿ ನಿರ್ದೇಶನದ ರೋಶನ್ ವೇಗಸ್ ನಿರ್ಮಾಣದ ಏರೆಗಾವುಯೆ ಕಿರಿಕಿರಿ ತುಳು ಸಿನಿಮಾ ಪುತ್ತೂರಿನ ಅರುಣಾ ಚಿತ್ರ ಮಂದಿರದಲ್ಲಿ ಮಾರ್ಚ್  11 ಬಿಡುಗಡೆಗೊಂಡಿತು.

 

ಸುಮಾರು 2 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಚಿತ್ರ ಈಗಾಗಲೇ ಹಲವು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಪುತ್ತೂರಿನಲ್ಲಿ ಚಿತ್ರವನ್ನು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ದೀಪ ಪ್ರಜ್ವಲಿಸಿ ಬಿಡುಗಡೆಗೊಳಿಸಿ ಮಾತನಾಡಿ ನಗುವಿನಿಂದ ಆರೋಗ್ಯ ಎಂಬಂತೆ ಹಾಸ್ಯ ಇರುವುದು ತುಳುವಿನಲ್ಲಿ ಮಾತ್ರ. ಇಂತಹ ಚಲನ ಚಿತ್ರವನ್ನು ನೋಡಿ ಮನತುಂಬಿ ನಕ್ಕು ಆರೋಗ್ಯ ವೃದ್ಧಿಸುವುದು ಉತ್ತಮ. ಇದರ ಜೊತೆಗೆ ತುಳು ಭಾಷೆಗೂ ಪ್ರಾದಾನ್ಯತೆ ಕೊಡುವಂತಾಗಬೇಕು. ಇವತ್ತು ತುಳು ಹಾಸ್ಯ ಚಲನಚಿತ್ರ ‘ಏರೆಗಾವುಯೇ ಕಿರಿಕಿರಿ’ ಎಂಬ ಪದವನ್ನು ರಾಜಕೀಯ ಕ್ಷೇತ್ರದಲ್ಲೂ ಆಗಾಗೆ ಬಳಸುತ್ತೇವೆ ಎಂದು ಹಾಸ್ಯದಲ್ಲೇ ಮಾತನಾಡಿದರು.

ಸಿನಿಮಾ ನೋಡಿ ಮನೋರಂಜನೆ ಪಡೆದು ಕೊಳ್ಳಿ:
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮಾತನಾಡಿ ಕೋವಿಡ್ ಬಳಿಕ ಚಿತ್ರಮಂದಿರಗಳು ತೆರೆದಾಗ ಆರಂಭದಲ್ಲಿ ತುಳು ಚಿತ್ರವೊಂದು ಪ್ರದರ್ಶನಗೊಳ್ಳುವುದು ಉತ್ತಮ ವಿಚಾರ. ನಮ್ಮ ಭಾಷೆಗೆ ತುಳುವಿಗೆ ಹೆಚ್ಚಿನ   ಪ್ರಾಶಸ್ತ್ಯ  ಕೊಡಬೇಕು. ಅದೇ ರೀತಿಯಾಗಿ ಪ್ರೇಕ್ಷಕರು ಸಿನಿಮಾ ನೋಡಿ ಮನೋರಂಜನೆ ಪಡೆದು ಕೊಳ್ಳಿ ಎಂದು ವಿನಂತಿಸಿದರು.

ತುಳುವಿಗೆ ಪ್ರೋತ್ಸಾಹ ಸಿಗಬೇಕು:
ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಮಾತನಾಡಿ ತುಳುವಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಾದರೆ ಎಲ್ಲರು ಕುಟುಂಬ ಸಮೇತ ಬಂದು ಚಲನಚಿತ್ರ ನೋಡಿ ಪ್ರೋತ್ಸಾಹಿಸಿ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿನೋದ್ ಕುಮಾರ್ ಶೆಟ್ಟಿ ಅರಿಯಡ್ಕ, ಅಮ್ಮಣ್ಣ ರೈ ಪಾಪೆಮಜುಲು, ಪ್ರವೀಣ್ ಕುಂಜಾಡಿ, ಉದ್ಯಮಿ ಅಜಿತ್ ಕುಮಾರ್ ಶೆಟ್ಟಿ, ಅಜಿತ್ ಕುಮಾರ್ ಶೆಟ್ಟಿ ಮೆರ್ಲ, ಶರತ್‌ಕುಮಾರ್ ರೈ ಕಾವು, ಕರುಣಾ ರೈ ಬಿಜಳ ಉಪಸ್ಥಿತರಿದ್ದರು. ಚಿತ್ರದ ನಿರ್ಮಾಪಕ ರೋಶನ್ ವೇಗಸ್, ರಂಗ್‌ದ ರಾಜೆ ಸುಂದರ್ ರೈ ಮಂದಾರ ಅವರು ಚಿತ್ರದ ಕುರಿತು ಮಾಹಿತಿ ನೀಡಿ ಎಲ್ಲರ ಸಹಕಾರ ಯಾಚಿಸಿದರು. ಚಲನಚಿತ್ರ ವಿತರಕ ಬಾಲಕೃಷ್ಣ ರೈ ಕುಕ್ಕಾಡಿ ಅತಿಥಿಗಳನ್ನು ಗೌರವಿಸಿದರು. ಶರತ್ ಆಳ್ವ ಸ್ವಾಗತಿಸಿ, ವಂದಿಸಿದರು.

ಹಾಸ್ಯಮಯ ಸನ್ನಿವೇಶಗಳೊಂದಿಗೆ ಯಾರದೋ ತಪ್ಪಿಗೆ ಇನ್ನಾರೋ ಕಿರಿಕಿರಿ ಅನುಭವಿಸುವುದು, ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡು ಸತ್ಯದ ದಾರಿಯಲ್ಲಿ ಬಾಳುವುದೇ ಜೀವನ ಎಂಬ ಸಂದೇಶವನ್ನು ಸಾರುವ ಕತೆಯನ್ನು ಏರೆಗಾವುಯೆ ಕಿರಿಕಿರಿ ಹೊಂದಿದೆ. ಸ್ಟಂಟ್ ಮಾಸ್ಟರ್ ರಾಮ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ, ರೋಷನ್ ವೇಗಸ್ ಬಂಡವಾಳ ಹಾಕಿರುವ ತುಳು ಸಿನಿಮಾ. ಚಿತ್ರ ಮಂದಿರದಲ್ಲಿ ಕುಟುಂಬ ಸಮೇತ ಬಂದು ಚಲನಚಿತ್ರ ನೋಡುವಂತೆ ಚಿತ್ರದ ತಂಡ ವಿನಂತಿಸಿದೆ.

LEAVE A REPLY

Please enter your comment!
Please enter your name here