ಫಿಲೋಮಿನಾದಲ್ಲಿ `ಎಸ್‌ಪಿಎಲ್ ಸೀಸನ್-2′ ಲೀಗ್ ಕ್ರಿಕೆಟ್

0

  • ಜನಪ್ರಿಯ ತಂಡ ಚಾಂಪಿಯನ್, ಬ್ಲ್ಯಾಕ್ ಫ್ಯಾಂಥರ್‍ಸ್ ರನ್ನರ್ಸ್

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಕಾಲೇಜಿನ ಕ್ರೀಡಾಪಟುಗಳಿಗಾಗಿ `ಸಂತ ಫಿಲೋಮಿನಾ ಪ್ರೀಮಿಯರ್ ಲೀಗ್(ಎಸ್‌ಪಿಎಲ್) ಸೀಸನ್-೨’ ಓವರ್‌ಆರ್ಮ್ ಕ್ರಿಕೆಟ್ ಪಂದ್ಯಾಟವು ಕಾಲೇಜಿನ ಕ್ರೀಡಾಂಗಣದಲ್ಲಿ ಮಾ.12 ರಂದು ಜರಗಿದ್ದು, ಪಂದ್ಯಾಕೂಟದಲ್ಲಿ ಜನಪ್ರಿಯನ್ಸ್ ತಂಡವು ಸೀಸನ್-2 ಚಾಂಪಿಯನ್ ಎನಿಸಿಕೊಂಡಿದೆ. ಬ್ಲ್ಯಾಕ್ ಫ್ಯಾಂಥರ್‍ಸ್ ತಂಡವು ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಮೂರನೇ ಹಾಗೂ ಚತುರ್ಥ ಸ್ಥಾನಿಯಾಗಿ ಟೀಮ್ ಡಿಎಂಎಕ್ಸ್ ಹಾಗೂ ಎಕ್ಸ್ 69 ತಂಡಗಳು ಗುರುತಿಸಿಕೊಂಡಿತು.


ಸಂಜೆ ಜನಪ್ರಿಯ ತಂಡ ಹಾಗೂ ಬ್ಲ್ಯಾಕ್ ಫ್ಯಾಂಥರ್‍ಸ್ ತಂಡದ ನಡುವೆ ನಡೆದ ಪ್ರಶಸ್ತಿ ಸುತ್ತಿನ ಫೈನಲ್ ಹೋರಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಜನಪ್ರಿಯ ತಂಡವು ತಂಡದ ಕಪ್ತಾನ ಶ್ರೇಯಸ್‌ರವರ ಹೊಡಿಬಡಿಯ ೪ ಸಿಕ್ಸರ್ ಒಳಗೊಂಡ ೩೨, ನವಾಜ್(೧೧)ರನ್‌ಗಳ ಬೀಸುವಿಕೆಯಿಂದ ಮೂರು ಓವರ್(ಬೆಳಕಿನ ಅಭಾವವಿದ್ದುದರಿಂದ)ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ೪೯ ರನ್‌ಗಳನ್ನು ಪೇರಿಸಿತ್ತು. ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಬ್ಲ್ಯಾಕ್ ಫ್ಯಾಂಥರ್‍ಸ್ ತಂಡದ ಆರಂಭಿಕ ಆಟಗಾರ ಗ್ಲ್ಯಾನಿ(ಅಜೇಯ ೨೦ರನ್)ರವರ ಮೂರು ಸಿಕ್ಸರ್‌ಗಳ ಹೊರತಾಗಿಯೂ ಕೇವಲ ೨೪ ರನ್‌ಗಳಷ್ಟೇ ಪೇರಿಸಲು ಶಕ್ತವಾಗಿ ಸೋಲೊಪ್ಪಿಕೊಂಡಿತು. ಉತ್ತಮ ಬ್ಯಾಟರ್ ಆಗಿ ಬ್ಲ್ಯಾಕ್ ಫ್ಯಾಂಥರ್‍ಸ್ ತಂಡದ ಗ್ಲ್ಯಾನಿ, ಉತ್ತಮ ಬೌಲರ್ ಆಗಿ ಎಕ್ಸ್ ೬೯ ತಂಡದ ಲೋಯ್, ಉತ್ತಮ ಅಲ್‌ರೌಂಡರ್ ಆಗಿ ಜನಪ್ರಿಯ ತಂಡದ ಶ್ರೇಯಸ್‌ರವರು ಆಯ್ಕೆಯಾದರು. ಚಾಂಪಿಯನ್ ತಂಡಕ್ಕೆ ರೂ.೧೧ ಸಾವಿರ ನಗದು ಹಾಗೂ ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ.೭ ಸಾವಿರ ನಗದು ಹಾಗೂ ಟ್ರೋಫಿ, ತೃತೀಯ ಹಾಗೂ ಚತುರ್ಥ ಸ್ಥಾನಿಗೆ ರೂ.೨ ಸಾವಿರ ಸಮಾಧಾನಕರ ಬಹುಮಾನವನ್ನು ನೀಡಲಾಯಿತು.

ಕ್ವಾಲಿಫೈಯರ್/ಎಲಿಮಿನೇಟರ್:
ಇದಕ್ಕೂ ಮೊದಲು ನಡೆದ ಕ್ವಾಲಿಫೈಯರ್-೧ ಪಂದ್ಯಾಟದಲ್ಲಿ ಬ್ಲ್ಯಾಕ್ ಫ್ಯಾಂಥರ್‍ಸ್ ತಂಡವು ಐದು ಓವರ್‌ಗಳಲ್ಲಿ ಆರಂಭಿಕ ಆಟಗಾರ ಗ್ಲ್ಯಾನಿರವರ ಐದು ಸಿಕ್ಸರ್‌ವನ್ನೊಳಗೊಂಡ ೩೬ ರನ್‌ಗಳ ಅಬ್ಬರದ ಬ್ಯಾಟಿಂಗ್‌ನಿಂದ ಎಕ್ಸ್ ೬೯ ತಂಡ(೪೪ ರನ್ ಟಾರ್ಗೆಟ್)ದ ವಿರುದ್ಧ ಗೆದ್ದು ಪ್ರಥಮ ಸ್ಥಾನಿಯಾಗಿ ನೇರವಾಗಿ ಫೈನಲ್ ಹಂತಕ್ಕೆ ತೇರ್ಗಡೆ ಹೊಂದಿತ್ತು. ದ್ವಿತೀಯ ಎಲಿಮಿನೇಟರ್ ಪಂದ್ಯಾಟದಲ್ಲಿ ಜನಪ್ರಿಯ ತಂಡ(೭೬ ರನ್)ವು ಟೀಮ್ ಡಿಎಂಎಕ್ಸ್(೫೨ ರನ್)ದ ವಿರುದ್ಧ ಗೆದ್ದು ಕ್ವಾಲಿಫೈಯರ್-೨ ಹಂತಕ್ಕೆ ಅರ್ಹತೆ ಪಡೆಯಿತು. ಟೀಮ್ ಡಿಎಂಎಕ್ಸ್ ತಂಡವು ನಿರಾಶಾ ಭಾವನೆಯಿಂದ ಕೂಟದಿಂದ ನಿರ್ಗಮಿಸಿತು. ಕ್ವಾಲಿಫೈಯರ್-೨ ಪಂದ್ಯಾಟದಲ್ಲಿ ಜನಪ್ರಿಯ ತಂಡವು ಎಕ್ಸ್ ೬೯ ತಂಡದ ವಿರುದ್ಧ ೧೮ ರನ್‌ಗಳ ಜಯಗಳಿಸಿ ಪ್ರತಿಷ್ಠಿತ ಫೈನಲಿಗೆ ಮುನ್ನೆಡೆದಿತ್ತು. ಫಿಲೋ ಹಾಕ್ಸ್, ಮಾಸ್ಟರ್ ಕ್ರಿಕೆಟರ್‍ಸ್, ಫಿಲೋ ಮ್ಯಾಡ್ ಡೆವಿಲ್ಸ್, ಟೀಮ್ ಮೆವರಿಕ್ಸ್ ತಂಡಗಳು ಲೀಗ್ ಹಂತದಲ್ಲಿಯೇ ಕೂಟದಿಂದ ಹೊರಬಿದ್ದಿದ್ದವು.
ಅಂಪೈರುಗಳಾಗಿ ಲೋಹಿತ್, ಮೇಗಸ್ ಮಸ್ಕರೇನ್ಹಸ್, ರಿತೇಶ್, ನವಾಜ್ ಕೂರ್ನಡ್ಕ, ಅಮಿತ್, ಸ್ಕೋರರ್ ಆಗಿ ಪ್ರಮಿತ್, ಅನೀಶ್ ಎ.ಜೆ, ವೀಕ್ಷಕ ವಿವರಣೆಗಾರರಾಗಿ ವಿಲಿಯಂ, ಅಲ್ತಾಫ್ ಮಡ್ಡಡ್ಕ, ಆದರ್ಶ್ ಬಿರ್ವರವರು ಸಹಕರಿಸಿದರು. ವೇದಿಕೆಯಲ್ಲಿ ಉದ್ಯಮಿ ಪ್ರವೀಣ್ ಭಂಡಾರಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ ಭಾರತಿ ಎಸ್.ರೈ, ವಾಣಿಜ್ಯ ವಿಭಾಗದ ಉಪನ್ಯಾಸಕ ಧನ್ಯ ಪಿ.ಟಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಖ್ಯಾತ್ ಟಿ.ಜೆ, ಜೊತೆ ಕಾರ್ಯದರ್ಶಿ ಮಹಾಲಸಾ ಪೈರವರು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮಿತ್ ಎಸ್.ಆರಾನ್ಹಾ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ವಿಜೇತರ ಪಟ್ಟಿ ವಾಚಿಸಿ, ವಂದಿಸಿದರು. ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ ಸಹಕರಿಸಿದರು.

ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾಪಟು ಉದ್ಭವಗೊಳ್ಳಲಿ…
೧೨ ವರ್ಷದ ಹಿಂದೆ ಫಿಲೋಮಿನಾ ಕಾಲೇಜಿನಲ್ಲಿ ನಾನು ವಿದ್ಯಾರ್ಥಿ ಕ್ರೀಡಾಪಟುವಾಗಿದ್ದ ಸಂದರ್ಭದಲ್ಲಿ ನನಗೆ ಕ್ರೀಡಾಂಗಣವು ಕೈಬೀಸಿ ಕರೆಯುತ್ತಿತ್ತು. ಈಗ ಇದೇ ಕ್ರೀಡಾಂಗಣದಲ್ಲಿನ ವೇದಿಕೆಯು ಕೈ ಬೀಸಿ ಕರೆಯುತ್ತಿದೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋರವರ ಭಾವುಕತೆಯ ಕಣ್ಣೀರ ಜೊತೆಯಲ್ಲಿ ಇಂದು ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್ ರೈಯವರಂತೆ ಪ್ರತಿ ವರ್ಷ ಓರ್ವ ರಾಷ್ಟ್ರೀಯ ಕ್ರೀಡಾಪಟು ಎಲ್ಯಾಸ್ ಪಿಂಟೋರವರ ಭಾವುಕತೆಯ ಕಣ್ಣೀರಡಿಯಲ್ಲಿ ಉದ್ಭವಗೊಳ್ಳಬೇಕು.
-ನವನೀತ್ ಬಜಾಜ್, ಕಾಲೇಜಿನ ಹಿರಿಯ ವಿದ್ಯಾರ್ಥಿ ಕ್ರೀಡಾಪಟು

ಕ್ರೀಡಾಪಟುಗಳಿಗೆ ಮೇಲ್ಪಂಕ್ತಿ..
ಫಿಲೋಮಿನಾ ಕಾಲೇಜು ಅಂದಿನಿಂದಲೂ ಇಂದಿನವರೆಗೂ ಕ್ರೀಡೆಗೆ ಪ್ರಸಿದ್ಧಿ ಪಡೆದ ಸಂಸ್ಥೆಯಾಗಿದೆ. ಫಿಲೋಮಿನಾದ ಐತಿಹಾಸಿಕ ಕ್ರೀಡಾಂಗಣದಿಂದ ಅನೇಕ ಪ್ರತಿಭಾವಂತ ಕ್ರೀಡಾಪಟುಗಳು ಉದ್ಭವರಾಗಿ ಇಂದು ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ಕ್ರೀಡೆಯಲ್ಲಿ ಅನೇಕ ಕ್ರೀಡಾಪಟುಗಳಿಗೆ ಮೇಲ್ಪಂಕ್ತಿಯನ್ನು ಒದಗಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ಮುಂದುವರೆಯುತ್ತಾ ಕಾಲೇಜು ಮತ್ತಷ್ಟು ಉನ್ನತ ಹಂತಕ್ಕೇರಲಿ. ಮೌರಿಸ್ ಮಸ್ಕರೇನ್ಹಸ್, ಉಪಾಧ್ಯಕ್ಷರು, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ

LEAVE A REPLY

Please enter your comment!
Please enter your name here