ಮಾಡಾವು ಹೊಳೆಗೆ ತ್ಯಾಜ್ಯ ಸುರಿಯುತ್ತಿರುವವರು ಕಂಡು ಬಂದಲ್ಲಿ 5 ಸಾವಿರ ದಂಡ!

0

  • ಬ್ಯಾನರ್ ಅಳವಡಿಕೆಗೆ ಇನ್ನು ಮುಂದೆ ಪರವಾನಗೆ ಕಡ್ಡಾಯ-ನಿರ್ಣಯ
  • ಕೆಯ್ಯೂರು ಗ್ರಾಪಂ ಸಾಮಾನ್ಯ ಸಭೆ

 

 

ಪುತ್ತೂರು: ಮಾಡಾವು ಹೊಳೆಗೆ ತ್ಯಾಜ್ಯ ಸುರಿಯುತ್ತಿರುವುದು ಕಂಡು ಬಂದಿದೆ. ಹೊಳೆಯಲ್ಲಿ ಕೋಳಿ ತ್ಯಾಜ್ಯ ಸೇರಿದಂತೆ ಗೋಣಿ ಚೀಲಗಳಲ್ಲಿ ಕಟ್ಟಿರುವ ತ್ಯಾಜ್ಯಗಳು ತೇಲಾಡುತ್ತಿವೆ. ಕೆಲವು ಕಿಡಿಗೇಡಿಗಳು ರಾತ್ರೋ ರಾತ್ರಿ ಸೇತುವೆ ಮೇಲಿಂದ ತ್ಯಾಜ್ಯವನ್ನು ನದಿಗೆ ಎಸೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನದಿಗೆ ತ್ಯಾಜ್ಯ ಎಸೆದು ನೀರನ್ನು ಮಲೀನ ಮಾಡುತ್ತಿರುವುದು ಸರಿಯಲ್ಲ ಆದ್ದರಿಂದ ತ್ಯಾಜ್ಯ ಎಸೆಯುವವರ ಪತ್ತೆಗೆ ಪಂಚಾಯತ್ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ತ್ಯಾಜ್ಯ ಎಸೆಯುವವರು ಕಂಡು ಬಂದಲ್ಲಿ ಅವರಿಗೆ 5 ಸಾವಿರದ ತನಕ ದಂಡ ವಿಧಿಸುವುದು ಮತ್ತು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದು ಎಂದು ಕೆಯ್ಯೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರ ಒಮ್ಮತದಂತೆ ನಿರ್ಣಯ ಕೈಗೊಳ್ಳಲಾಗಿದೆ.

 


ಸಭೆಯು ಗ್ರಾಪಂ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿಯವರ ಅಧ್ಯಕ್ಷತೆಯಲ್ಲಿ ಮಾ.16 ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷರ ಅನುಮತಿ ಮೇರೆಗೆ ಇತರ ವಿಷಯಗಳ ಚರ್ಚೆಯ ಸಂದರ್ಭದಲ್ಲಿ ಜಯಂತ ಪೂಜಾರಿ ಕೆಂಗುಡೇಲುರವರು ವಿಷಯ ಪ್ರಸ್ತಾಪಿಸಿ, ಮಾಡಾವು ಹೊಳೆಗೆ ತ್ಯಾಜ್ಯಗಳನ್ನು ಹಾಕಲಾಗುತ್ತಿದೆ. ಹೊಳೆಯಲ್ಲಿ ಗೋಣಿ ಚೀಲದ ಕಟ್ಟುಗಳು ತೇಲಾಡುತ್ತಿವೆ. ರಾತ್ರೋ ರಾತ್ರಿ ಸೇತುವೆ ಮೇಲಿಂದ ತ್ಯಾಜ್ಯವನ್ನು ಎಸೆಯುತ್ತಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯವಾಗಿದೆ. ನದಿಯ ನೀರನ್ನು ಮಲೀನ ಮಾಡುವ ಕೆಲಸ ಸರಿಯಲ್ಲ ಆದ್ದರಿಂದ ನದಿಯ ಆಯ್ದ ಜಾಗಗಳಲ್ಲಿ ಸೂಚನ ಫಲಕಗಳನ್ನು ಅಳವಡಿಸುವುದು ಮತ್ತು ತ್ಯಾಜ್ಯ ಎಸೆಯುವವರ ಪತ್ತೆಗೆ ಸೂಕ್ತ ವ್ಯವಸ್ಥೆ ಮಾಡಬೇಕು ಮತ್ತು ತ್ಯಾಜ್ಯ ಎಸೆಯುವವರು ಸಿಕ್ಕಿದರೆ ಅವರಿಗೆ ದಂಡ ವಿಧಿಸುವ ಕೆಲಸ ಕೂಡ ಆಗಬೇಕು ಎಂದು ತಿಳಿಸಿದರು. ಇದಕ್ಕೆ ಶರತ್ ಕುಮಾರ್ ಮಾಡಾವುರವರು ಧ್ವನಿಗೂಡಿಸಿದರು. ತ್ಯಾಜ್ಯ ಎಸೆಯುವವರು ಸಿಕ್ಕಿದರೆ ಅವರಿಗೆ ಕನಿಷ್ಠ ೫ ಸಾವಿರದ ತನಕ ದಂಡ ವಿಧಿಸಬೇಕು ಮತ್ತು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಈ ಬಗ್ಗೆ ನಿರ್ಣಯ ಮಾಡಲಾಯಿತು.

ಬ್ಯಾನರ್ ಹಾಕುವ ಮೊದಲು ಪರವಾನಗೆ ಪಡೆದುಕೊಳ್ಳಿ
ಗ್ರಾಮದಲ್ಲಿ ಎಲ್ಲಾ ಕಡೆ ಬ್ಯಾನರ್‌ಗಳು ಜಾಸ್ತಿಯಾಗುತ್ತಿವೆ. ಬ್ಯಾನರ್ ಅಳವಡಿಸುವವರು ಪಂಚಾಯತ್‌ನಿಂದ ಪರವಾನಗೆ ಪಡೆದುಕೊಳ್ಳುವುದಿಲ್ಲ ಮುಂದಿನ ದಿನಗಳಲ್ಲಿ ಬ್ಯಾನರ್ ವಿಷಯದಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಪಂಚಾಯತ್‌ಗೆ ತೊಂದರೆಯಾಗುತ್ತದೆ ಆದ್ದರಿಂದ ಬ್ಯಾನರ್ ಅಳಡಿಸುವ ಮುನ್ನ ಪಂಚಾಯತ್‌ನಿಂದ ಪರವಾನಗೆ ಪಡೆದುಕೊಳ್ಳಬೇಕು ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಿ ಎಂದು ಜಯಂತ ಪೂಜಾರಿ ಕೆಂಗುಡೇಲು ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಶರತ್ ಕುಮಾರ್ ಮಾಡಾವುರವರು ದೇವಸ್ಥಾನದ ಜಾತ್ರೆಯ ಬ್ಯಾನರ್ ಅಳವಡಿಕೆಗೆ ಪರವಾನಗೆ ಪಡೆದುಕೊಳ್ಳಲಾಗಿದೆ ಎಂದರು. ಇದಕ್ಕೆ ಉತ್ತರಿಸಿದ ಜಯಂತ ಪೂಜಾರಿಯವರು, ದೇವಸ್ಥಾನ ಮಾತ್ರವಲ್ಲ ಮಸೀದಿ, ಚರ್ಚ್, ಧಾರ್ಮಿಕ ಕೇಂದ್ರಗಳ ಬ್ಯಾನರ್ ಅಳವಡಿಕೆಗೆ ಸೇರಿದಂತೆ ರಾಜಕೀಯ, ಸಾಂಸ್ಕೃತಿಕ ಹೀಗೆ ಎಲ್ಲಾ ಬ್ಯಾನರ್ ಅಳವಡಿಕೆಗೂ ಪರವಾನಗೆ ಪಡೆದುಕೊಳ್ಳಬೇಕು ಇದರಿಂದ ಪಂಚಾಯತ್‌ಗೂ ಆದಾಯ ಬರುತ್ತದೆ ಮತ್ತು ಮುಂದಿನ ದಿನಗಳಲ್ಲಿ ಏನಾದರೂ ತೊಂದರೆ ಸಂಭವಿಸುವುದು ಕೂಡ ತಪ್ಪುತ್ತದೆ ಎಂದರು. ಬ್ಯಾನರ್ ಅಳವಡಿಸುವವರು ಕಡ್ಡಾಯವಾಗಿ ಪಂಚಾಯತ್‌ನಿಂದ ಪರವಾನಗೆ ಪಡೆದುಕೊಳ್ಳುವುದು ಮತ್ತು ಪರವಾನಗೆ ಪಡೆಯದೇ ಹಾಕಿದ ಬ್ಯಾನರ್ ಅನ್ನು ತೆರವು ಮಾಡುವುದು ಮತ್ತು ಪರವಾನಗೆ ಪಡೆದು ಅಳವಡಿಸಿದ ಬ್ಯಾನರ್‌ನಲ್ಲಿ ಉಲ್ಲೇಖಿಸಿದ ಕಾರ್ಯಕ್ರಮ ಮುಗಿದು ೧ ವಾರದೊಳಗೆ ಬ್ಯಾನರ್ ಅನ್ನು ತೆರವು ಮಾಡುವುದು ಮತ್ತು ಸಾರ್ವಜನಿಕ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಬ್ಯಾನರ್ ಅಳವಡಿಸುವುದು ಎಂಬಿತ್ಯಾದಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಪರಿಶಿಷ್ಟ ಜಾತಿಯವರಿಗೆ ಬಂದಿದ್ದು ಕೇವಲ 7 ಮನೆಗಳು?!
ಕೆಯ್ಯೂರು ಗ್ರಾಮ ಪಂಚಾಯತ್‌ಗೆ ಮನೆ ಹಂಚಿಕೆಯಲ್ಲಿ ಪರಿಶಿಷ್ಠ ಜಾತಿಯವರಿಗೆ ಕೇವಲ 7 ಮನೆಗಳು ಮಾತ್ರ ಬಂದಿವೆ. ಇದು ಏನೇನು ಸಾಲದು, ಮನೆ ಇಲ್ಲದೇ ಇರುವವರು ಬಹಳಷ್ಟು ಮಂದಿ ಇದ್ದಾರೆ. ದೇರ್ಲದಲ್ಲೇ ಹಲವು ಮಂದಿಗೆ ಮನೆಯ ಅವಶ್ಯಕತೆ ಇದೆ. ಟಾರ್ಪಲ್ ಹಾಕಿ ವಾಸ ಮಾಡುವವರು ಈಗಲೂ ಇದ್ದಾರೆ. ಇಂಥವರಿಗೆ ಅರ್ಜಿ ಹಾಕಿದರೂ ಮನೆ ಸಿಗುತ್ತಿಲ್ಲ ಎಂದು ಶೇಷಪ್ಪ ದೇರ್ಲರವರು ಸಭೆಗೆ ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಜಯಂತ ಪೂಜಾರಿ ಕೆಂಗುಡೇಲುರವರು, ಈ ಸಲದ ಮನೆ ಹಂಚಿಕೆಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಪಂಗಡಕ್ಕೆ ಮನೆ ಅತೀ ಕಡಿಮೆ ಹಂಚಿಕೆ ಮಾಡಲಾಗಿದೆ. ಪರಿಶಿಷ್ಠ ಪಂಗಡದವರಿಗೆ ಕೇವಲ ೩ ಮನೆಗಳನ್ನು ಮಾತ್ರ ನೀಡಲಾಗಿದೆ. ಆದ್ದರಿಂದ ಎಸ್‌ಸಿ ಮತ್ತು ಎಸ್‌ಟಿಯವರಿಗೆ ಹೆಚ್ಚುವರಿ ಮನೆ ಅದರಲ್ಲೂ ಪರಿಶಿಷ್ಟ ಜಾತಿಯವರಿಗೆ ಹೆಚ್ಚುವರಿ ಮನೆ ಮಂಜೂರು ಮಾಡಬೇಕು ಎಂದು ಶಾಸಕರಿಗೆ, ತಾಪಂ ಕಾರ್ಯನಿರ್ವಹಣಾಧಿಕಾರಿಯವರಿಗೆ ಹಾಗೂ ಸರಕಾರಕ್ಕೆ ಮನವಿ ಮಾಡಿಕೊಳ್ಳುವ ಎಂದು ತಿಳಿಸಿದರು. ಇದಕ್ಕೆ ಅಬ್ದುಲ್ ಖಾದರ್ ಮೇರ್ಲ, ಶರತ್ ಕುಮಾರ್ ಮಾಡಾವು ಮತ್ತಿತರರು ಧ್ವನಿಗೂಡಿಸಿದರು. ಅದರಂತೆ ನಿರ್ಣಯಿಸಲಾಯಿತು.

ವ್ಯಾಪಾರ ಪರವಾನಗೆ ಕೂಡಲೇ ನವೀಕರಿಸಿ
ಪರವಾನಗೆ ಇಲ್ಲದೆ ಬಹಳಷ್ಟು ಮಂದಿ ಗ್ರಾಮದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ತಳ್ಳುವ ಗಾಡಿ ಎಂದು ಹೇಳಿಕೊಂಡು ಅದಕ್ಕೆ ಗೋಡೆ ಕಟ್ಟಿ ವ್ಯಾಪಾರ ಮಾಡುತ್ತಿದ್ದಾರೆ ಇಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ, ಅಲ್ಲದೆ ಅಂಗಡಿ ಬಾಡಿಗೆ ಕೂಡ ಸರಿಯಾಗಿ ಬರುತ್ತಿಲ್ಲ ಇದರ ಬಗ್ಗೆಯೂ ಗಮನ ಹರಿಸಬೇಕಾಗಿದೆ ಎಂದು ಅಬ್ದುಲ್ ಖಾದರ್ ಮೇರ್ಲ, ಜಯಂತ ಪೂಜಾರಿ ಕೆಂಗುಡೇಲು ತಿಳಿಸಿದರು. ಈ ಬಗ್ಗೆ ಪರಿಶೀಲನೆ ಮಾಡುವುದು ಎಂದು ನಿರ್ಣಯಿಸಲಾಯಿತು. ಪರವಾನಗೆ ಪಡೆದುಕೊಂಡವರು ಮಾರ್ಚ್ ೩೧ ರೊಳಗೆ ನವೀಕರಿಸುವುದು ನವೀಕರಿಸದೆ ಇದ್ದರೆ ದಂಡನೆ ವಿಧಿಸುವುದು ಎಂದು ನಿರ್ಣಯಿಸಲಾಯಿತು.

ಹೊಸ ಅಂಗನವಾಡಿ ಕೇಂದ್ರ ಬೇಕು
ಗ್ರಾಮದ ನೂಜಿ ಸಮೀಪದ ಮೇರ್ಲ ಎಂಬಲ್ಲಿ ಸುಮಾರು ೫೦ ಕ್ಕೂ ಅಧಿಕ ಮನೆಗಳಿದ್ದು ಈ ಭಾಗದಲ್ಲಿ ಎಲ್ಲಿಯೂ ಅಂಗನವಾಡಿ ಕೇಂದ್ರಗಳಿಲ್ಲ ಇದರಿಂದ ಮಕ್ಕಳಿಗೆ ತುಂಬಾ ತೊಂದರೆಯಾಗಿದೆ ಆದ್ದರಿಂದ ಮೇರ್ಲ ಎಂಬಲ್ಲಿ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಬೇಕು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವ ಎಂದು ಅಬ್ದುಲ್ ಖಾದರ್ ಮೇರ್ಲ ತಿಳಿಸಿದರು. ಅದರಂತೆ ನಿರ್ಣಯಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ಗಿರಿಜಾ ಕಣಿಯಾರು, ಸದಸ್ಯರುಗಳಾದ ಅಬ್ದುಲ್ ಖಾದರ್ ಮೇರ್ಲ, ಶರತ್ ಕುಮಾರ್ ಮಾಡಾವು, ಬಟ್ಯಪ್ಪ ರೈ, ಶೇಷಪ್ಪ ದೇರ್ಲ, ವಿಜಯ ಕುಮಾರ್ ಸಣಂಗಳ, ಜಯಂತ ಪೂಜಾರಿ ಕೆಂಗುಡೇಲು, ಸುಭಾಷಿಣಿ, ಮೀನಾಕ್ಷಿ ವಿ.ರೈ, ಅಮಿತಾ ಎಚ್.ರೈ, ಮಮತಾ ರೈ, ಸುಮಿತ್ರಾ ಪಲ್ಲತ್ತಡ್ಕ, ನೆಬಿಸಾ ಕೆಯ್ಯೂರು ಚರ್ಚೆಯಲ್ಲಿ ಪಾಲ್ಗೊಂಡರು. ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆಯವರು ಅರ್ಜಿಗಳನ್ನು, ಸರಕಾರದ ಸುತ್ತೋಲೆಗಳನ್ನು ಓದಿ ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿಗಳಾದ ಶಿವಪ್ರಸಾದ್, ರಾಕೇಶ್, ಧರ್ಮಣ್ಣ, ಮಾಲತಿ, ಜ್ಯೋತಿ ಸಹಕರಿಸಿದ್ದರು.

ಮಾ.19 ಮಹಿಳಾ ಗ್ರಾಮಸಭೆ
ಕೆಯ್ಯೂರು ಗ್ರಾಮ ಪಂಚಾಯತ್‌ನ ಮಹಿಳಾ ಗ್ರಾಮಸಭೆಯು ಮಾ.೧೯ ರಂದು ಕೆಯ್ಯೂರು ದೇವಿನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಮನವಿ ಮಾಡಿಕೊಂಡರು.

LEAVE A REPLY

Please enter your comment!
Please enter your name here