ಪುತ್ತೂರಿನ ಬಹುಮುಖ ಪ್ರತಿಭೆ ಜ್ಞಾನ ರೈಗೆ ಬೆಂಗಳೂರಿನಲ್ಲಿ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ ಪ್ರದಾನ

0

ಪುತ್ತೂರು: ಪುತ್ತೂರಿನ ಬಹುಮುಖ ಪ್ರತಿಭೆ ಕು. ಜ್ಞಾನ ರೈ ಕುರಿಯರವರಿಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

 

ದಿವ್ಯ ಚೇತನ ಚಾರಿಟೇಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿರಾ ತಾಲೂಕು ಶಿಡ್ಲೆಕೋಣದ ಶ್ರೀ ವಾಲ್ಮೀಕಿ ಆಶ್ರಮದ ಶ್ರೀ ಸಂಜಯಕುಮಾರ ಸ್ವಾಮೀಜಿ, ಪತ್ರಕರ್ತರು ಹಾಗೂ ಸಾಹಿತಿಗಳಾದ ಜಾಣಗೆರೆ ವೆಂಕಟರಾಮಯ್ಯ, ವಿಜಯನಗರ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಎಂ. ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಕೆ.ಎಸ್. ಮೃತ್ಯುಂಜಯ, ಕರ್ನಾಟಕ ರಾಜ್ಯ ಕಲಾವಿದರ ಕಲ್ಯಾಣ ವೇದಿಕೆಯ ರಾಜ್ಯಾಧ್ಯಕ್ಷ ಕೆಂಚನೂರು ಶಂಕರ್, ಅಬಕಾರಿ ಇಲಾಖೆ ಉಪ ಆಯುಕ್ತ ಡಾ.ಬಿ.ಆರ್. ಹಿರೇಮಠ, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ, ಬೆಂಗಳೂರು ಉತ್ತರ ಉಪವಿಭಾಗದ ಉಪವಿಭಾಗಧಿಕಾರಿ ಡಾ.ಎಂ.ಜಿ. ಶಿವಣ್ಣ, ಕರ್ನಾಟಕ ಪ್ರದೇಶ ಜನತಾ ದಳದ ಉಪಾಧ್ಯಕ್ಷ ಭೀಮಪ್ಪ ತಳವಾರ್, ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಮತ್ತು ದಿವ್ಯ ಚೇತನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ರಾಮುರವರು ಜ್ಞಾನ ರೈಯವರಿಗೆ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿದರು.

ಸಿದ್ದಗಂಗಾಶ್ರೀ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ, ಆದಿಗ್ರಾಮೋತ್ಸವ ಪ್ರತಿಭಾ ಸಿರಿ ಗೌರವ ಪ್ರಶಸ್ತಿ , ಸುದ್ದಿ ಬಿಡುಗಡೆಯ ಪ್ರತಿಭಾ ದೀಪ ಪ್ರಶಸ್ತಿ ಪುರಸ್ಕೃತೆಯಾಗಿರುವ ಬಾಲಪ್ರತಿಭೆ ಜ್ಞಾನ ರೈ ಕುರಿಯ ಈಗಾಗಲೇ ಹಲವಾರು ಕಿರುಚಿತ್ರ ಹಾಗೂ ಆಲ್ಬಂ ಸಾಂಗ್ ಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ನೃತ್ಯ, ಅಭಿನಯ ಮಾತ್ರವಲ್ಲದೆ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲೂ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹಲವಾರು ಫೋಟೋ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ವಿಜೇತೆಯಾಗಿರುವ ಇವರು ಜಾಹೀರಾತಿನಲ್ಲೂ ನಟಿಸುತ್ತಾರೆ. ಧಾರ್ಮಿಕ ಶಿಕ್ಷಣದತ್ತ ಒಲವು ತೋರಿರುವ ಇವರು ಕೂಡ್ಲಿಗಿಯ ಗುರುದೇವ ಗುರುಕುಲದ ಶಶಿಧರ್ ಗುರೂಜಿಯವರಿಂದ ಭಗವದ್ಗೀತೆ ಪಠಣ, ನಿತ್ಯ ಶ್ಲೋಕಗಳು, ಅಬಾಕಸ್, ಗಾಂಧಾರಿ ವಿದ್ಯೆಯನ್ನು ಕಲಿತಿದ್ದಾರೆ.
ಪ್ರಸ್ತುತ ಭರತನಾಟ್ಯ, ಸಂಗೀತ, ಯಕ್ಷಗಾನ, ಕರಾಟೆ, ಯೋಗ, ಅಭ್ಯಾಸದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಹನ್ನೊಂದರ ಹರೆಯದ ಜ್ಞಾನ ರೈ ಕುರಿಯ ಉದ್ಯಮಿ ಜಯರಾಮ ರೈ ಹಾಗೂ ಪತ್ರಕರ್ತೆ ಹೇಮಾ ಜಯರಾಮ್ ರೈಯವರ ಪುತ್ರಿ.

LEAVE A REPLY

Please enter your comment!
Please enter your name here