ಹಿಜಾಬ್‌ಗೆ ಅವಕಾಶ ನಿರಾಕರಣೆ: ಪರೀಕ್ಷೆ ಬಹಿಷ್ಕರಿಸಿದ ವಿದ್ಯಾರ್ಥಿಗಳು

0

ಉಪ್ಪಿನಂಗಡಿ: ಹಿಜಾಬ್ ಧರಿಸಿ ತರಗತಿಯೊಳಗೆ ಕುಳಿತುಕೊಳ್ಳಲು ಅವಕಾಶ ನೀಡಿಲ್ಲ ಎಂದು ಪರೀಕ್ಷೆಯನ್ನೂ ಕೂಡಾ ಬರೆಯದೇ ಹಿಜಾಬ್‌ ಧಾರಿಣಿ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಮನೆಗೆ ತೆರಳಿದ ಘಟನೆ ಶುಕ್ರವಾರ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.


ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಕೆಲ ವಿದ್ಯಾರ್ಥಿಗಳು ಶುಕ್ರವಾರ ಹಿಜಾಬ್ ಧರಿಸಿಕೊಂಡು ತರಗತಿಯೊಳಗೆ ಪ್ರವೇಶಿಸಲು ಮುಂದಾಗಿದ್ದು, ಆಗ ಹಿಜಾಬ್ ಕುರಿತಾದ ರಾಜ್ಯ ಉಚ್ಛನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಉಪನ್ಯಾಸಕರು ಅದಕ್ಕೆ ಅವಕಾಶ ಕೊಡಲಿಲ್ಲ. ಅದನ್ನು ವಿರೋಧಿಸಿದ ಹಿಜಾಬ್‌ಧಾರಿಣಿ ವಿದ್ಯಾರ್ಥಿನಿಯರು ಕಾಲೇಜಿನ ಆವರಣದಲ್ಲಿ ನಿಂತುಕೊಂಡು ಪ್ರತಿಭಟಿಸತೊಡಗಿದರು. ಇವರಿಗೆ ಬೆಂಬಲವಾಗಿ ತರಗತಿಯೊಳಗಿದ್ದ ಕೆಲ ವಿದ್ಯಾರ್ಥಿಗಳೂ ತರಗತಿ ಬಹಿಷ್ಕರಿಸಿ ಇವರೊಂದಿಗೆ ಸೇರಿಕೊಂಡರು. ಹಿಜಾಬ್ ತೆಗೆದು ತರಗತಿಯೊಳಗೆ ಬನ್ನಿ. ಪರೀಕ್ಷೆ ಇದ್ದವರು ಹಿಜಾಬ್ ತೆಗೆದು ಬಂದು ಪರೀಕ್ಷೆ ಬರೆಯಿರಿ ಎಂದು ಉಪನ್ಯಾಸಕರು ಪರಿಪರಿಯಾಗಿ ವಿದ್ಯಾರ್ಥಿಗಳ ಮನವೊಲಿಕೆಗೆ ಪ್ರಯತ್ನಿಸಿದರೂ, ಅವರು ತಮ್ಮ ಹಠದಿಂದ ಹಿಂದೆ ಸರಿಯದೇ ಅಲ್ಲೇ ನಿಂತುಕೊಂಡರು.

ಬಳಿಕ ಉಪ್ಪಿನಂಗಡಿ ಮಾಲೀಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಾಫ ಕೆಂಪಿ, ಗ್ರಾ.ಪಂ. ಸದಸ್ಯರಾದ ಯು.ಟಿ. ಮುಹಮ್ಮದ್ ತೌಸೀಫ್, ಅಬ್ದುರ್ರಶೀದ್ ಹಾಗೂ ಕೆಲ ಮಕ್ಕಳ ಪೋಷಕರು ಕಾಲೇಜಿಗೆ ಆಗಮಿಸಿದ್ದು, ಪ್ರಾಂಶುಪಾಲರೊಂದಿಗೆ ಸಭೆ ನಡೆಸಿದರು. ಆಗ ಪ್ರಾಂಶುಪಾಲರು ಹೈಕೋರ್ಟ್ ತೀರ್ಪು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ತೀರ್ಮಾನವನ್ನು ಅವರಿಗೆ ತಿಳಿಸಿ ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿಕೊಂಡವರಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದರು.

ಬಳಿಕ ಹೊರಗೆ ಬಂದ ಅವರು ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಹಿಜಾಬ್ ಪರ ನಾವು ಕೂಡಾ ಇದ್ದೇವೆ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಚೆಂಡು ಈಗ ಸುಪ್ರೀಂಕೋರ್ಟ್‌ನ ಅಂಗಳದಲ್ಲಿದೆ. ಆದ್ದರಿಂದ ಇಲ್ಲಿ ಹೋರಾಟ ಮಾಡಿ ಪ್ರಯೋಜನವಿಲ್ಲ ಎಂದರಲ್ಲದೆ, ನಿಮ್ಮ ಶೈಕ್ಷಣಿಕ ಭವಿಷ್ಯಕ್ಕಾಗಿ ಕಾಲೇಜಿನ ತೀರ್ಮಾನಕ್ಕೆ ಒಪ್ಪಿ ನೀವು ತರಗತಿಗೆ ಹಾಜರಾಗಿ ಪರೀಕ್ಷೆ ಬರೆಯುವಂತೆ ಮನವಿ ಮಾಡಿದರು. ಆದರೆ ವಿದ್ಯಾರ್ಥಿಗಳು ಅದನ್ನು ಕೇಳಿಸಿಕೊಳ್ಳದೇ ಯಾವುದೇ ಕಾರಣಕ್ಕೂ ನಾವು ಹಿಜಾಬ್ ತೆಗೆದು ಪರೀಕ್ಷೆ ಕೂಡಾ ಬರೆಯುವುದಿಲ್ಲ ಎಂದು ಪಟ್ಟುಹಿಡಿದರು. ಸತತ ಪ್ರಯತ್ನ ಮಾಡಿಯೂ ಇವರ ಮನವೊಲಿಸಲು ಸಾಧ್ಯವಾಗದಿದ್ದಾಗ ಅಲ್ಲಿದ್ದ ಮುಸ್ಲಿಂ ಮುಖಂಡರು, ನೀವು ತರಗತಿಗೆ ಬರುವುದಿಲ್ಲವಾದರೆ ಮನೆಗೆ ಹೋಗಿ. ಇಲ್ಲಿ ಪರೀಕ್ಷೆ ನಡೆಯುತ್ತಿದೆ. ನೀವು ಹೀಗೆ ಕಾಲೇಜಿನ ಹೊರಗಡೆ ನಿಂತರೆ ಪರೀಕ್ಷೆ ಬರೆಯುತ್ತಿರುವ ಉಳಿದ ಮಕ್ಕಳಿಗೆ ತೊಂದರೆಯಾಗುತ್ತದೆ. ಅವರಿಗೆ ತೊಂದರೆ ಕೊಡುವುದು ಸರಿಯಲ್ಲ. ಹಿಜಾಬ್ ಅವಕಾಶಕ್ಕಾಗಿ ಎಲ್ಲಿ ಹೋರಾಟ ಮಾಡಬೇಕೋ ಅಲ್ಲಿಯೇ ಹೋರಾಟ ಮಾಡೋಣ ಎಂದರು. ಇವರ ಮಾತಿಗೆ ಒಪ್ಪಿದ ವಿದ್ಯಾರ್ಥಿಗಳು ಮತ್ತೆ ಕಾಲೇಜಿನಿಂದ ನಿರ್ಗಮಿಸಿದರು.

ಹಿಜಾಬ್ ಧರಿಸಿ ತರಗತಿಯೊಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂದಿರುವುದಕ್ಕೆ ಇಲ್ಲಿ ಕೆಲ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಲ್ಲಿ ಮಾತನಾಡಿ ಮನವೊಲಿಕೆ ಮಾಡಿ ಎಂದು ಕಾಲೇಜಿನಿಂದ ನನಗೆ ಕರೆ ಬಂದಿತ್ತು. ಅದರಂತೆ ನಾನು ಹಾಗೂ ಇನ್ನು ಕೆಲವರು ಅಲ್ಲಿಗೆ ಹೋಗಿ ಪ್ರಾಂಶುಪಾಲರೊಂದಿಗೆ ಮಾತನಾಡಿ ಹಿಜಾಬ್ ಧಾರಿಣಿಯರಿಗೂ ತರಗತಿ ಪ್ರವೇಶಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಿದೆವು. ಆಗ ಅವರು ಹೈಕೋರ್ಟ್ ತೀರ್ಪು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ತೀರ್ಮಾನವನ್ನು ತಿಳಿಸಿ ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿದವರಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಆದ್ದರಿಂದ ನಾವು ವಿದ್ಯಾರ್ಥಿಗಳಲ್ಲಿ ಬಂದು ಮೊದಲಿಗೆ ತರಗತಿಗೆ ಹೋಗಲು ಮನವಿ ಮಾಡಿದೆವು. ಆದರೆ ಅವರು ಅದನ್ನು ಒಪ್ಪಲಿಲ್ಲ. ಆಗ ಕಾಲೇಜಿನಲ್ಲಿ ಪರೀಕ್ಷೆ ಸೇರಿದಂತೆ ಪಾಠಗಳು ನಡೆಯುತ್ತಿರುವುದರಿಂದ ಇನ್ನುಳಿದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದು ಬೇಡ ಎಂದು ಪ್ರತಿಭಟನೆ ತೋರಿದ ವಿದ್ಯಾರ್ಥಿಗಳನ್ನು ಅಲ್ಲಿಂದ ಮನೆಗೆ ತೆರಳಲು ಸೂಚಿಸಿದೆವು. ಅದರಂತೆ ಅವರು ಇಲ್ಲಿಂದ ನಿರ್ಗಮಿಸಿದ್ದಾರೆ. ನಾವು ಕೂಡಾ ಹಿಜಾಬ್ ಪರನೇ ಇದ್ದೇವೆ. ಅದೀಗ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಕಾಲೇಜು ತರಗತಿಯವರೆಗೆ ಸಮವಸ್ತ್ರದೊಂದಿಗೆ ತಲೆಗೆ ಶಾಲು ಹೊದ್ದುಕೊಳ್ಳಬಹುದಂತೆ ಆದರೆ ತರಗತಿ ಪ್ರವೇಶದ ನಂತರ ಅದನ್ನು ತೆಗೆಯಬೇಕಂತೆ. ತರಗತಿಯಿಂದ ಹೊರಬಂದು ಅದನ್ನು ಹಾಕಬಹುದಂತೆ ಇದು ಸಿಡಿಸಿಯವರದ್ದು ಇದು ಮೂರ್ಖತನದ ನಿರ್ಧಾರ ಹಾಜಿ ಮುಸ್ತಾಫ ಕೆಂಪಿ ಅಧ್ಯಕ್ಷರು, ಮಾಲೀಕುದ್ದೀನಾರ್ ಜುಮಾ ಮಸೀದಿ ಉಪ್ಪಿನಂಗಡಿ

ಹಿಜಾಬ್ ಧರಿಸಿ ತರಗತಿಯೊಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂದಿದ್ದಕ್ಕೆ ಹಿಜಾಬ್‌ಧಾರಿಣಿಯರು ಶಾಲೆಯ ಆವರಣದಲ್ಲಿ ನಿಂತು ಪ್ರತಿಭಟಿಸಿದರು. ಅವರಿಗೆ ಬೆಂಬಲವಾಗಿ ಕೆಲ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬಂದರು. ಇಂದು ದ್ವಿತೀಯ ಪಿಯುಸಿಯವರಿಗೆ ಪೂರ್ವಸಿದ್ಧತಾ ಪರೀಕ್ಷೆ ಇದೆ. ಕಾಲೇಜು ನಿಯಮವನ್ನು ಪಾಲಿಸಿ ನೀವು ಪರೀಕ್ಷೆಗೆ ಹಾಜರಾಗಿ ಎಂದು ಎಷ್ಟು ಮನವೊಲಿಸಿದರೂ, ವಿದ್ಯಾರ್ಥಿಗಳು ಕೇಳಲಿಲ್ಲ. ಹೈಕೋರ್ಟ್ ತೀರ್ಪು ಹಾಗೂ ಸಿಡಿಸಿಯ ತೀರ್ಮಾನದಂತೆ ಹಿಜಾಬ್ ಧರಿಸಿ ತರಗತಿಯೊಳಗೆ ಕುಳಿತುಕೊಳ್ಳಲು ಅವಕಾಶ ನೀಡಲು ಸಾಧ್ಯವಿಲ್ಲ. ಅದನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಬಳಿಕ ಹೊರಗೆ ನಿಂತಿದ್ದ ವಿದ್ಯಾರ್ಥಿಗಳು ಕೆಲ ಸಮಯದ ಬಳಿಕ ಕಾಲೇಜು ಆವರಣದಿಂದ ನಿರ್ಗಮಿಸಿದ್ದಾರೆ. ಸುಧೀರ್ ಕುಮಾರ್ ಎಂ. ಪ್ರಾಂಶುಪಾಲರು, ಸರಕಾರಿ ಪದವಿ ಪೂರ್ವ ಕಾಲೇಜು, ಉಪ್ಪಿನಂಗಡಿ

LEAVE A REPLY

Please enter your comment!
Please enter your name here