ಲಂಚ, ಭ್ರಷ್ಟಾಚಾರ ತುಂಬಿ ಬಿಟ್ಟಿದೆ. ಕೆಲಸಕ್ಕೆ ಇಷ್ಟು ಹಣ ಬೇಕು ಎಂದು ನೇರವಾಗಿ ಕೇಳುವ ಪರಿಸ್ಥಿತಿ ಬಂದಿದೆ – ಕಾಣಿಯೂರುಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು

0

ಕಾಣಿಯೂರು: ಲಂಚ, ಭ್ರಷ್ಟಾಚಾರ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ನಡೆಯುವ ಕಾರ್ಯಕ್ರಮಗಳಿಗೆ ಪೂರ್ಣ ಸಹಕಾರ ನೀಡುವುದಾಗಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದ್ದು ಜನರನ್ನು ಎಚ್ಚರಿಸುವ ಕಾರ್ಯಗಳು ಸುದ್ದಿ ಪತ್ರಿಕೆಯ ಮೂಲಕ ನಡೆಯಲಿ ಸುದ್ದಿ ಜನಾಂದೋಲನ ಯಶಸ್ವಿಯಾಗಲಿ ಎಂದು ಶುಭಹಾರೈಸಿದ್ದಾರೆ.

ಸುದ್ದಿ ಜನಾಂದೋಲನಕ್ಕೆ ಬೆಂಬಲ ಫಲಕ ಸ್ವೀಕಾರ

 

ಮಾ.17ರಂದು ಕಾಣಿಯೂರು ಮಠದಲ್ಲಿ ನಡೆದ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆಂದು ಆಗಮಿಸಿದ್ದ ಶ್ರೀಗಳನ್ನು ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ಭೇಟಿಯಾಗಿ ಲಂಚ-ಭ್ರಷ್ಟಾಚಾರ ವಿರುದ್ಧದ ಫಲಕ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, `ಇವತ್ತು ಅನೇಕ ಕಡೆಗಳಲ್ಲಿ ಭ್ರಷ್ಟಾಚಾರ, ಲಂಚ ಇವೆಲ್ಲಾ ತುಂಬಿ ಬಿಟ್ಟಿದೆ.ಯಾವುದಾದರೂ ಒಂದು ಅಧಿಕಾರಿಗಳ ಕಡೆ ಹೋಗಿ ಕೆಲಸವನ್ನು ಮಾಡಿಸಬೇಕಾದರೂ ಇಷ್ಟು ಹಣ ಬೇಕು, ಇಷ್ಟು ಲಂಚ ಕೊಡಬೇಕು ಎಂಬುದಾಗಿ ನೇರವಾಗಿ ಕೇಳುವಂತಹ ಪರಿಸ್ಥಿತಿ ನಮ್ಮಲ್ಲಿ ಒದಗಿ ಬಂದಿದೆ.ಹಿಂದೆಲ್ಲ ಮುಚ್ಚುಮರೆಯಿತ್ತು. ಯಾರಿಗೂ ಗೊತ್ತಾಗದ ರೀತಿಯಲ್ಲಿ ಹಣ ತೆಗೆದುಕೊಳ್ಳುವ ಪರಿಸ್ಥಿತಿ ಹಿಂದೆ ಸಮಾಜದಲ್ಲಿತ್ತು. ಆದರೆ ಇದೀಗ ನೇರವಾಗಿ ಲಂಚವನ್ನು ಕೇಳುವ ಅಽಕಾರಿಗಳನ್ನು ನೋಡುತ್ತಾ ಇದ್ದೇವೆ.ಶುದ್ಧವಾದ ರೀತಿಯಲ್ಲಿ ಜನಸೇವೆ ಮಾಡುವಂತಹ ಅಽಕಾರಿಗಳ ಸಂಖ್ಯೆ ಕಡಿಮೆಯಾಗಿ, ಪ್ರಾಮಾಣಿಕತೆಯೇ ಹೋಗಿ ಬಿಟ್ಟಿದೆ.ಇಂತಹ ಸನ್ನಿವೇಶದಲ್ಲಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡಬೇಕು. ಲಂಚ, ಭ್ರಷ್ಟಾಚಾರಗಳು ಯಾವುದು ಇರದೇನೇ ಸ್ವಚ್ಛವಾದ ರೀತಿಯಲ್ಲಿ ಜನಸೇವೆ ನಡೆಯಬೇಕೇಂಬ ಸುದ್ದಿ ಜನಾಂದೋಲನದ ಮೂಲಕವಾಗಿ ಲಂಚ, ಭ್ರಷ್ಟಾಚಾರ ನಿರ್ಮೂಲನೆಯೇ ದೊಡ್ಡ ಜನಸೇವೆ ಮತ್ತು ದೇಶ ಸೇವೆ ಕಾರ್ಯಕ್ರಮ ಆಯೋಜಿಸಿರುವುದು ಒಳ್ಳೆಯ ಉದ್ದೇಶ ಹೊಂದಿದೆ. ಸುದ್ದಿ ಬಿಡುಗಡೆ ಪತ್ರಿಕೆಯ ಮೂಲಕ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಪೂರ್ಣ ಸಹಮತ ವ್ಯಕ್ತಪಡಿಸುತ್ತಾ, ಜನರನ್ನು ಎಚ್ಚರಿಸುವ ಕಾರ್ಯಗಳು ಸುದ್ದಿ ಪತ್ರಿಕೆಯ ಮೂಲಕ ನಡೆಯಲಿ’ ಎಂದರು.

LEAVE A REPLY

Please enter your comment!
Please enter your name here