ಗ್ರಾಮ ಸ್ವರಾಜ್ಯ- ಗ್ರಾಮ ಸ್ವಾವಲಂಬನೆಗೆ ಸಂಜೀವಿನಿ ಸಂತೆ ಕೆದಂಬಾಡಿ, ಕೆಯ್ಯೂರು ಗ್ರಾಪಂನಲ್ಲಿ ಮೇಳೈಸಿದ ಸಂತೆ ವ್ಯಾಪಾರ

0

 

ಪುತ್ತೂರು: ಗ್ರಾಮದಲ್ಲಿ ಬೆಳೆದ ತರಕಾರಿ, ಮನೆ ಮನೆಗಳಲ್ಲಿ ತಯಾರಾದ ನಿತ್ಯಬಳಕೆಯ ಕರಕುಶಲ ವಸ್ತುಗಳು ಇನ್ನು ಮುಂದೆ ಮಾರುಕಟ್ಟೆ ಹುಡುಕುತ್ತಾ ನಗರ ಪ್ರದೇಶಕ್ಕೆ ಹೋಗಬೇಕಿಲ್ಲ. ಅಳಿದು ಹೋಗುತ್ತಿರುವ ಪ್ರಾಚೀನ ಮನೆ ಬಳಕೆಯ ವಸ್ತುಗಳು ಎಲ್ಲಿ ಸಿಗಲಿದೆ ಎಂಬ ಚಿಂತೆ ಗ್ರಾಮಸ್ಥರಿಗೂ ಇರಬೇಕಿಲ್ಲ. ಯಾಕೆಂದರೆ ಇಲ್ಲೊಂದು ಅಪೂರ್ವ ಸಂಜೀವಿನಿ ಸಂತೆ ಆರಂಭಗೊಂಡಿದೆ.


ಇದು ಗ್ರಾಮೀಣ ಬದುಕಿನ ಬೇಡಿಕೆ ಮತ್ತು ಪೂರೈಕೆ ಎರಡೂ ಮಗ್ಗುಲುಗಳನ್ನು ಸಮಾನವಾಗಿ ನಿರ್ವಹಿಸಲಿದೆ. ಮಧ್ಯವರ್ತಿಗಳ ವ್ಯವಸ್ಥೆಯನ್ನು ನಿವಾರಿಸಿ ರೈತರಿಗೂ ಉತ್ತಮ ಧಾರಣೆ ನೀಡಲಿದೆ. ಗ್ರಾಹಕರಿಗೂ ನ್ಯಾಯಯುತ ದರದಲ್ಲಿ ವಸ್ತುಗಳು ಸಿಗಲಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಈ ವ್ಯವಸ್ಥೆಯನ್ನು ನಿರ್ವಹಿಸಲಿರುವ ಸಂಜೀವಿನಿ ಮಹಿಳಾ ಒಕ್ಕೂಟಕ್ಕೆ ಲಾಭಾಂಶ ತಂದುಕೊಡಲಿದೆ. ಈ ಮೂಲಕ ಮಹಾತ್ಮಾ ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕಲ್ಪನೆ ಮತ್ತು ಪ್ರಧಾನಿಯವರ ಆತ್ಮನಿರ್ಭರ ಭಾರತ ಕಲ್ಪನೆ ಸಾಕಾರಗೊಳ್ಳಲಿದೆ. ಇಂಥದೊಂದು ಅಪೂರ್ವ ಗ್ರಾಮೀಣ ಸಂತೆ ಪುತ್ತೂರು ತಾಲೂಕಿನ ಕೆದಂಬಾಡಿ ಮತ್ತು ಕೆಯ್ಯೂರು ಗ್ರಾಮ ಪಂಚಾಯತ್‌ಗಳಲ್ಲಿ ಆರಂಭಗೊಂಡಿದೆ.

ಸಂಜೀವಿನಿ ಮಹಿಳೆಯರ ಸಾಧನೆ
ಸಂಜೀವಿನಿ ಮಹಿಳಾ ಒಕ್ಕೂಟಗಳು ಪ್ರತೀ ಗ್ರಾಪಂಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸರಕಾರದ ಮಾನ್ಯತೆ ಪಡೆದಿರುವ ಸಂಸ್ಥೆಗಳಾಗಿವೆ. ಸಾಮಾನ್ಯವಾಗಿ ಎಲ್ಲ ಬಿಪಿಎಲ್ ಕುಟುಂಬಗಳ ಮಹಿಳೆಯರು ಇದರಲ್ಲಿ ಸದಸ್ಯರಾಗಿದ್ದು, ಎಪಿಎಲ್ ಕುಟುಂಬಗಳ ಸದಸ್ಯರಿಗೂ ಅವಕಾಶವಿದೆ. ಈ ಒಕ್ಕೂಟಗಳ ಆರ್ಥಿಕ ಸ್ವಾವಲಂಬನೆ ದೃಷ್ಟಿಯಿಂದ ಮಾಡುವ ಚಟುವಟಿಕೆಗೆ ಲೋನ್ ಸೌಲಭ್ಯ ನೀಡಲಾಗುತ್ತಿದೆ. ಒಕ್ಕೂಟದವರೇ ತರಕಾರಿ ಮತ್ತಿತರ ಮನೆ ಬಳಕೆ ವಸ್ತುಗಳನ್ನು ರೈತರಿಂದ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಸಾಮಾನ್ಯವಾಗಿ ಅಂಗಡಿಗಳಿಗೆ ಮಾರುವಾಗ ರೈತರಿಗೆ ಸಿಗುವ ಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ ಇವರು ಖರೀದಿಸುವ ಕಾರಣ ರೈತರಿಗೆ ಲಾಭವಾಗಲಿದೆ. ಅದೇ ರೀತಿ ಅಂಗಡಿಗಳಲ್ಲಿ ಸಿಗುವ ದರಕ್ಕಿಂತ ಕಡಿಮೆ ದರದಲ್ಲಿ ಮಾರುವ ಕಾರಣ ಗ್ರಾಹಕರಿಗೂ ಲಾಭವಾಗುತ್ತದೆ.

ರೈತರಿಗೆ ಉತ್ತಮ ಧಾರಣೆ ಸಿಗಬೇಕು. ಗ್ರಾಹಕರಿಗೂ ಕಡಿಮೆ ದರದಲ್ಲಿ ವಸ್ತುಗಳು ಸಿಗಬೇಕು. ಹಿಂದಿನ ಕಾಲದಲ್ಲಿ ಬಳಸುತ್ತ್ತಿದ್ದ ಅಪೂರ್ವ ವಸ್ತುಗಳನ್ನು ತಯಾರಿಸಲು ಗ್ರಾಮಸ್ಥರಿಗೆ ಪ್ರೋತ್ಸಾಹ ನೀಡಲಿದ್ದೇವೆ. ಆ ಮೂಲಕ ಅಂಥ ವಸ್ತುಗಳಿಗೂ ಜನ ನಮ್ಮೂರಿಗೆ ಬರುವಂತಾಗಬೇಕು. ಒಟ್ಟಿನಲ್ಲಿ ಆತ್ಮನಿರ್ಭರ ಭಾರತದ ಪರಿಕಲ್ಪನೆಯಂತೆ ನಮ್ಮ ಗ್ರಾಮ ಆರ್ಥಿಕ ಸ್ವಾವಲಂಬಿಯಾಗಬೇಕು. ನಮ್ಮ ಗ್ರಾಮದಲ್ಲಿ ೯೦೦ ಮನೆಗಳಿವೆ. ಎಲ್ಲ ಮನೆಗಳಿಗೂ ಫಲ ಸಿಗಬೇಕು. ಭವಿಷ್ಯದಲ್ಲಿ ಗ್ರಾಮೀಣ ಸಂತೆಗಾಗಿ ಪ್ರತ್ಯೇಕ ಸಂತೆ ಕಟ್ಟೆ ರಚಿಸುವ ಉದ್ದೇಶವಿದೆ. ಸದ್ಯ ಪ್ರತೀ ಶುಕ್ರವಾರ ಸಂಜೀವಿನಿ ಸಂತೆ ನಡೆಯಲಿದ್ದು, ಭವಿಷ್ಯದಲ್ಲಿ ಪರಿಸ್ಥಿತಿ ನೋಡಿಕೊಂಡು ವಾರದ ಇತರ ದಿನಗಳಿಗೂ ವಿಸ್ತರಿಸುವ ಬಗ್ಗೆ ಯೋಚಿಸಲಾಗುವುದು. ರತನ್ ರೈ ಕುಂಬ್ರ, ಅಧ್ಯಕ್ಷರು, ಕೆದಂಬಾಡಿ ಗ್ರಾಪಂ.

ಗ್ರಾಮೀಣ ಪ್ರದೇಶದಲ್ಲಿ ಬೆಳೆದ ತರಕಾರಿ ಮತ್ತು ಇತರ ಕರಕುಶಲ ವಸ್ತುಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ಸ್ವತಃ ಬೆಳೆಗಾರರೇ ಮಾರಾಟ ಮಾಡುವ ಸಲುವಾಗಿ ಆರಂಭವಾಗಿರುವ ಸಂಜೀವಿನಿ ಸಂತೆ ಒಂದು ಒಳ್ಳೆಯ ಯೋಜನೆಯಾಗಿದೆ. ಕೆಯ್ಯೂರಿನಲ್ಲಿ ಆರಂಭದ ದಿನವೇ ಒಳ್ಳೆಯ ಜನಬೆಂಬಲ ಸಿಕ್ಕಿದೆ. ಮುಂದಿನ ದಿನಗಳಲ್ಲಿ ವಾರದಲ್ಲಿ ಒಂದು ದಿನ ಸಂತೆ ಮಾಡುವ ಯೋಚನೆ ಇದೆ. ಸದ್ಯಕ್ಕೆ ಜಾಗದ ಸಮಸ್ಯೆ ಇದೆ. ಸರಿಯಾದ ಜಾಗ ಸಿಕ್ಕಿದರೆ ಸಂತೆ ವಾರವಾರ ನಡೆಯಲಿದೆ ಈ ಬಗ್ಗೆ ಪಂಚಾಯತ್ ಕೂಡ ಗಮನ ಹರಿಸಲಿದೆ.
– ಜಯಂತಿ ಎಸ್.ಭಂಡಾರಿ, ಅಧ್ಯಕ್ಷರು ಕೆಯ್ಯೂರು ಗ್ರಾಪಂ


ಸಂತೆಯಲ್ಲಿ ಏನೇನಿತ್ತು?
ತಿಂಗಳಾಡಿ ಜಂಕ್ಷನ್‌ನಲ್ಲಿ ಮತ್ತು ಕೆಯ್ಯೂರು ಅಂಬೇಡ್ಕರ್ ಭವನ ನಡೆದ ಸಂಜೀವಿನಿ ಸಂತೆಯಲ್ಲಿ ಸ್ಥಳೀಯವಾಗಿ ಬೆಳೆದ ಸೊಪ್ಪು ತರಕಾರಿಗಳು, ಬಸಳೆ, ತಿಮರೆ, ತೊಂಡೆಕಾಯಿ, ಸುವರ್ಣ ಗೆಡ್ಡೆ, ಉಪ್ಪಿನಕಾಯಿ, ಪೊರಕೆ, ಚಪ್ಪಲಿ, ಸೀರೆ, ಲುಂಗಿ ಸೇರಿದಂತೆ ೩೦ ಬಗೆಯ ವಸ್ತುಗಳು ಗ್ರಾಮೀಣ ಸಂತೆಯಲ್ಲಿದ್ದವು. ಒಕ್ಕೂಟ ಸದಸ್ಯೆಯರೇ ಮನೆ ಮನೆ ಭೇಟಿ ಮಾಡಿ ರೈತರಿಂದ ಖರೀದಿಸಿ ತಂದು ಇಲ್ಲಿ ಮಾರಿದ್ದಾರೆ. ಭವಿಷ್ಯದಲ್ಲಿ ರೈತರೇ ನೇರವಾಗಿ ಇಲ್ಲಿಗೆ ತಂದು ಮಾರಬಹುದು.

`` ಶ್ರೀ ದುರ್ಗಾಂಭಿಕಾ ಸಂಜೀವಿನಿ ಒಕ್ಕೂಟ ಕೆಯ್ಯೂರು ಇದರ ಅಡಿಯಲ್ಲಿ ಒಟ್ಟು ೨೬ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ. ಸ್ವ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು ೧ ಗುಂಪಿಗೆ ರೂ.೭೫ ಸಾವಿರ ಸಾಲ ನೀಡಲಾಗುತ್ತದೆ. ಈಗಾಗಲೇ ೧೪ ಲಕ್ಷದಷ್ಟು ಸಾಲ ನೀಡಲಾಗಿದೆ. ಮಹಿಳೆಯರು ಸ್ವಾವಲಂಭಿ ಜೀವನ ನಡೆಸಬೇಕು ಮತ್ತು ಮನೆಯಲ್ಲಿ ಬೆಳೆಸಿದ ತರಕಾರಿಗಳನ್ನು ತಾವೇ ನೇರವಾಗಿ ಮಾರಾಟ ಮಾಡಬೇಕು ಎಂಬ ಉದ್ದೇಶದಿಂದ ಸಂಜೀವಿನಿ ಸಂತೆ ಮಾಡಲಾಗಿದೆ. ಪ್ರತಿ ವಾರ ಸಂತೆ ಮಾಡಬೇಕೆಂದಿದ್ದೇವೆ ಆದರೆ ಸ್ಥಳದ ಅಭಾವ ಇದೆ. ಸರಿಯಾದ ಜಾಗ ದೊರೆತರೆ ಪ್ರತಿ ವಾರ ಸಂತೆ ಮಾಡುತ್ತೇವೆ.ರೂಪ ಎಸ್.ರೈ ಮಾಡಾವು, ಎಂ.ಬಿ.ಕೆ ಸಂಜೀವಿನಿ ಒಕ್ಕೂಟ

 

‘ಕೆದಂಬಾಡಿ ಗ್ರಾಮವನ್ನು ೩ ವಾರ್ಡ್‌ಗಳಾಗಿ ವಿಂಗಡಿಸಿ ೨೩ ಗುಂಪು ರಚಿಸಿದ್ದೇವೆ. ಸುಮಾರು ೩೦೦ ಸದಸ್ಯೆಯರಿದ್ದಾರೆ. ಎನ್‌ಆರ್‌ಎಲ್‌ಎಂ ಅಡಿಯಲ್ಲಿ ಪ್ರತೀ ಗುಂಪುಗಳಿಗೂ ಆರ್ಥಿಕ ಚಟುವಟಿಕೆಗಾಗಿ ಈಗ ೭೫ ಸಾವಿರ ರೂ. ಸಾಲ ನೀಡಲಾಗುತ್ತಿದೆ. ಗ್ರಾಮ ಸಂತೆಯ ಯಶಸ್ಸಿನ ಬಗ್ಗೆ ಭಯವಿತ್ತು. ಮೊದಲ ದಿನವೇ ಆ ಭಯ ನಿವಾರಣೆಯಾಗಿದೆ. ಪೇಟೆಯಲ್ಲಿ ಸಿಗದ ಅಪೂರ್ವ ವಸ್ತುಗಳನ್ನು ತಯಾರಿಸಿ ಕೊಡುವಂತೆ ಗ್ರಾಮದ ಜನರಿಗೆ ಉತ್ತೇಜನ ನೀಡಲಿದ್ದೇವೆ. ಅಂಥ ವಸ್ತುಗಳಿಗೆ ಗ್ರಾಹಕರು ಸಾಕಷ್ಟಿದ್ದಾರೆ’. ಪೂರ್ಣಿಮಾ, ಸ್ಥಳಿಯ ಸಮುದಾಯ ಸಂಪನ್ಮೂಲ ವ್ಯಕ್ತಿ, ಆಸರೆ ಸಂಜೀವಿನಿ ಒಕ್ಕೂಟ, ಕೆದಂಬಾಡಿ

LEAVE A REPLY

Please enter your comment!
Please enter your name here