ರಾಮಕುಂಜ: ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ

0

  • ವಾಲಿಬಾಲ್ ಆಟಗಾರರಿಗೆ ಸಂಸ್ಥೆಯಿಂದ ಹೆಚ್ಚಿನ ಪ್ರೋತ್ಸಾಹ: ಹರೀಶ್‌ಕುಮಾರ್

 

ರಾಮಕುಂಜ: ದ.ಕ.ಜಿಲ್ಲಾ ವಾಲಿಬಾಲ್ ಸಂಸ್ಥೆ ಆಶ್ರಯದಲ್ಲಿ ಕಡಬ ತಾಲೂಕು ವಾಲಿಬಾಲ್ ಸಂಸ್ಥೆ ಸಹಯೋಗದೊಂದಿಗೆ ದಿ.ಎನ್.ದೇವಿ ಸ್ಮರಣಾರ್ಥ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ’ಜಿಲ್ಲಾ ಚಾಂಪಿಯನ್ ಶಿಪ್-2022′ ಮಾ.20ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಮೈದಾನದಲ್ಲಿ ನಡೆಯಿತು.

ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ವಾಲಿಬಾಲ್ ಸಂಸ್ಥೆ ಅಡ್‌ಹಾಕ್ ಸಮಿತಿ ಬೆಂಗಳೂರು ಇದರ ಅಧ್ಯಕ್ಷ ಎಸ್.ಹರೀಶ್‌ಕುಮಾರ್‌ರವರು, ಕ್ರೀಡಾಪಟುಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಮಿಂಚಲು ಸಾಕಷ್ಟು ಅವಕಾಶಗಳಿವೆ. ವಾಲಿಬಾಲ್ ಸೇರಿದಂತೆ ಇತರೇ ಕ್ರೀಡೆಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಕ್ರೀಡಾಪಟುಗಳಿಗೆ ಸರಕಾರಿ ಉದ್ಯೋಗಗಳು ಸಿಗುತ್ತಿವೆ. ಬ್ಯಾಂಕ್, ಪೊಲೀಸ್ ಇಲಾಖೆಗಳಲ್ಲಿ ಹೆಚ್ಚಿನ ಕ್ರೀಡಾಪಟುಗಳು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಕರ್ನಾಟಕ ವಾಲಿಬಾಲ್ ಸಂಸ್ಥೆಯೂ ಇದಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ವಾಲಿಬಾಲ್ ಸಂಸ್ಥೆ ಅಧ್ಯಕ್ಷ ಬಿ.ಎಸ್.ಸತೀಶ್‌ಕುಮಾರ್‌ರವರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾಕೂಟ ಆಯೋಜಿಸುವುದರಿಂದ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಸಿಗುತ್ತದೆ. ಆಟಗಾರರು ಇದರ ಸದುಪಯೋಗ ಪಡೆದುಕೊಂಡು ಮುಂದೆ ಬರಬೇಕೆಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಇಲ್ಲಿನ ಉಪನಿರ್ದೇಶಕ ಪ್ರದೀಪ್ ಡಿ.ಸೋಜ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣ ಕುವೆಚ್ಚಾರು, ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ್ ಕುಂಬ್ಳೆರವರು ಶುಭಹಾರೈಸಿದರು.

ಸನ್ಮಾನ:
ವಾಲಿಬಾಲ್ ಕೋಚ್ ರಾಜಾರಾಂ ಮಂಗಳೂರು, ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಬಿ.ನರೇಂದ್ರ ಕುಮಾರ್, ಎನ್.ದೇವಿಯವರ ಪುತ್ರ, ಬೆಂಗಳೂರಿನ ಉದ್ಯಮಿ ಕಿರಣ್‌ಚಂದ್ರ ಪುಷ್ಪಗಿರಿ, ಕಡಬ ತಾಲೂಕು ವಾಲಿಬಾಲ್ ಸಂಸ್ಥೆ ಅಧ್ಯಕ್ಷ ಲಕ್ಷ್ಮೀನಾರಾಯಣ ರಾವ್ ಆತೂರುರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕರ್ನಾಟಕ ವಾಲಿಬಾಲ್ ಸಂಸ್ಥೆ ಅಡ್‌ಹಾಕ್ ಸಮಿತಿ ಬೆಂಗಳೂರು ಇದರ ಅಧ್ಯಕ್ಷ ಎಸ್.ಹರೀಶ್‌ಕುಮಾರ್‌ರವರಿಗೆ ವಾಲಿಬಾಲ್ ಚೆಂಡಿನ ಮಾಲೆ ಹಾಕಿ ಸನ್ಮಾನಿಸಿ ಗೌರವಿಸಲಾಯಿತು. ದ.ಕ.ಜಿಲ್ಲಾ ವಾಲಿಬಾಲ್ ಸಂಸ್ಥೆ ಸಂಘಟನಾ ಕಾರ್ಯದರ್ಶಿ ಅಹಮ್ಮದ್ ಮುಸ್ತಾಫಾ ಸ್ವಾಗತಿಸಿ, ಕಡಬ ತಾಲೂಕು ವಾಲಿಬಾಲ್ ಸಂಸ್ಥೆ ಕಾರ್ಯದರ್ಶಿ ಮೋಹಿತ್ ಏನೆಕಲ್ಲು ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಅಬ್ರಹಾಂ ನಿರೂಪಿಸಿದರು.


ಪುರುಷರ ವಿಭಾಗ-ಉಳ್ಳಾಲ ಪ್ರಥಮ
ಮಹಿಳೆಯರ ವಿಭಾಗ-ಉಜಿರೆ ಪ್ರಥಮ
ಮಹಿಳೆಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ 3 ತಂಡಗಳು ಭಾಗವಹಿಸಿದ್ದು ಉಜಿರೆ ತಂಡ ಪ್ರಥಮ ಹಾಗೂ ಮಂಗಳೂರು ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು. ಪುರುಷರ ವಿಭಾಗದಲ್ಲಿ 13 ತಂಡಗಳು ಭಾಗವಹಿಸಿದ್ದು ಉಳ್ಳಾಲ ತಂಡ ಪ್ರಥಮ ಹಾಗೂ ಮಂಗಳೂರು ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು. ವಿಜೇತ ತಂಡಕ್ಕೆ ನಗದು ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು. ದ.ಕ.ಜಿಲ್ಲಾ ವಾಲಿಬಾಲ್ ಸಂಸ್ಥೆ ಅಧ್ಯಕ್ಷ ಬಿ.ಎಸ್.ಸತೀಶ್‌ಕುಮಾರ್, ಕಾರ್ಯದರ್ಶಿ ಶಂಕರ್ ಶೆಟ್ಟಿ ಪರಾರಿಗುತ್ತು, ಕಡಬ ತಾಲೂಕು ವಾಲಿಬಾಲ್ ಸಂಸ್ಥೆ ಅಧ್ಯಕ್ಷ ಲಕ್ಷ್ಮೀನಾರಾಯಣ ರಾವ್ ಆತೂರು, ಕಾರ್ಯದರ್ಶಿ ಮೋಹಿತ್ ಏನೆಕಲ್ಲು ಹಾಗೂ ಇತರೇ ಮುಖಂಡರು ವಿಜೇತ ತಂಡಕ್ಕೆ ಟ್ರೋಫಿ, ನಗದು ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here