ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರ ನಿರ್ಮೂಲನೆ ಅಗತ್ಯ : ಎಂ.ಎಂ. ಬೊಳ್ಳಪ್ಪ

0

 

ಯಾವುದೇ ದೇಶ ಅಭಿವೃದ್ಧಿಗೊಳ್ಳಬೇಕಾದರೆ ಆ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಅತಿ ಅವಶ್ಯಕವಾಗಿದೆ. ಸಣ್ಣ ಕಿಡಿಯಾಗಿ ಬೆಳೆದು ಬಂದ ಭ್ರಷ್ಟಾಚಾರವು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಪ್ರತಿಯೊಬ್ಬ ಪ್ರಜೆಯು ಇದರ ಬಗ್ಗೆ ಹೋರಾಟ ಮಾಡಿದರೆ ಮಾತ್ರ ಈ ಭ್ರಷ್ಟಾಚಾರವನ್ನು ನಿಯಂತ್ರಿಸಬಹುದು ಎಂದು ಹಿರಿಯ ವಕೀಲ ಎಂ ಎಂ ಬೊಳ್ಳಪ್ಪ ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಆಯೋಜಿಸಲಾದ ಭ್ರಷ್ಟಾಚಾರ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಭ್ರಷ್ಟಾಚಾರ ವಿರೋಧಿ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಕಾನೂನು ಪ್ರಾಧಿಕಾರದ ವತಿಯಿಂದ ನವಂಬರ್ ೧ ರಿಂದ ೧೩ ರವರೆಗೆ ಭ್ರಷ್ಟಾಚಾರ ಜಾಗೃತಿ ಅರಿವು ಸಪ್ತಾಹದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ೩ನೇಯ ದಿನದ ಕಾರ್ಯಕ್ರಮವನ್ನು ಇಂದು ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ಆಚರಿಸಲಾಯಿತು.


ತಾಲೂಕು ಕಾನೂನು ಸೇವೆಗಳ ಸಮಿತಿ ಸುಳ್ಯ, ತಾಲೂಕು ಆಡಳಿತ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ, ಸುದ್ದಿ ಸಮೂಹ ಮಾಧ್ಯಮ, ನಗರ ಪಂಚಾಯತ್ ಸುಳ್ಯ ಇವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುಳ್ಯ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶೆ, ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ ಕು.ಅರ್ಪಿತಾ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಭ್ರಷ್ಟಾಚಾರ ನಿರ್ಮೂಲನ ಜಾಗೃತಿ ಕುರಿತು ಮಾತನಾಡಿ ಸರಕಾರಿ ಇಲಾಖೆಗಳಲ್ಲಿ ಜನಸಾಮಾನ್ಯರು ಯಾವುದೇ ಕೆಲಸ ಕಾರ್ಯಗಳಿಗೆ ಸರಕಾರಿ ಕಚೇರಿಗಳಿಗೆ ಬಂದರೆ ಕಾನೂನಿನ ಎಲ್ಲಾ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಮತ್ತು ಇಲಾಖೆಯಿಂದ ನೀಡುವ ಸಮಯವನ್ನು ತಾಳ್ಮೆಯಿಂದ ಕಾದು ಅವುಗಳನ್ನು ಪಡೆದುಕೊಳ್ಳಬೇಕು.ಅದಲ್ಲದೆ ತಾನು ತರುವ ದಾಖಲೆ ಪತ್ರಗಳು ಪೂರಕವಾಗಿ ಇಲ್ಲದೇ ಇದ್ದಾಗ, ಅಥವಾ ಇಲಾಖೆಯವರು ನೀಡುವ ಸಮಯವನ್ನು ಕಾಯುವಷ್ಟು ತಾಳ್ಮೆಗಳು ಇಲ್ಲದಿದ್ದಾಗ ಅಂಥವರು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುವ ಕೆಲಸಕ್ಕೆ ಮುಂದಾಗುತ್ತಾರೆ.ಇದನ್ನು ಮೊದಲು ಸರಿಪಡಿಸಿಕೊಳ್ಳ
ಬೇಕೆಂದು ಹೇಳಿದರು.


ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುಳ್ಯ ವಕೀಲರ ಸಂಘದ ಅಧ್ಯಕ್ಷ ಕೆ ನಾರಾಯಣ ಮಾತನಾಡಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ಮಕ್ಕಳಲ್ಲಿ ಮತ್ತು ಯುವಜನತೆಯಲ್ಲಿ ಪ್ರಾಮಾಣಿಕತೆಯ ಅರಿವನ್ನು ಮೂಡಿಸಬೇಕು. ಮತ್ತು ಅವರಲ್ಲಿ ಜಾಗೃತಿ ಮೂಡಿಸಿ ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕಾಗಿ ತನ್ನ ಪಾತ್ರವಿರಬೇಕೆಂಬ ಮನಸ್ಸು ಅವರಲ್ಲಿ ಬರುವಂತೆ ಅರಿವು ಮೂಡಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಸುಳ್ಯ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಅರೋನ್ ಡಿಸೋಜ, ಪ್ಯಾನಲ್ ವಕೀಲರುಗಳಾದ ಹರೀಶ್ ಬಿ , ಉಷಾ ಪಿ ಸಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ನ್ಯಾಯಾಧೀಶೆ ಕು. ಅರ್ಪಿತಾ ಭ್ರಷ್ಟಾಚಾರ ನಿರ್ಮೂಲನೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ನಗರ ಪಂಚಾಯತ್ ಸದಸ್ಯರುಗಳಾದ ಶಿಲ್ಪಾ ಸುದೇವ್, ಶಶಿಕಲಾ ನೀರಬಿದ್ರೆ,ಕಿಶೋರಿ ಶೇಟ್, ಬುದ್ಧನ್ಯಾಕ್, ಬಾಲಕೃಷ್ಣ, ಯತೀಶ್ ಬೀರಮಂಗಲ, ಎಂ ವೆಂಕಪ್ಪಗೌಡ, ಹಾಗೂ ನಗರ ಪಂಚಾಯತ್ ಸಿಬ್ಬಂದಿ ವರ್ಗದವರು, ವಕೀಲರ ಸಂಘದ ಪದಾಧಿಕಾರಿಗಳು ಸದಸ್ಯರು, ನ್ಯಾಯಾಲಯದ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಗರ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.
ನ್ಯಾಯಾಲಯದ ಪ್ಯಾನಲ್ ವಕೀಲ ಹರೀಶ್ ಬಿ ವಂದಿಸಿದರು.

 

LEAVE A REPLY

Please enter your comment!
Please enter your name here