ಉಪ್ಪಿನಂಗಡಿಯ 32 ಹಿಂದೂ ವ್ಯಾಪಾರಿಗಳ ಹೆಸರಲ್ಲಿ ವಾಟ್ಸ್‌ಆಪ್ ಸಂದೇಶ ವೈರಲ್ ಪ್ರಕರಣ

0

  • `ವರ್ತಕ-ಗ್ರಾಹಕರ ಸಂಬಂಧಕ್ಕೆ ಧಕ್ಕೆಯಾಗಿಲ್ಲ ವೈರಲ್ ಸಂದೇಶಕ್ಕೂ ನಮಗೂ ಸಂಬಂಧವಿಲ್ಲ’
  • ಸಂತ್ರಸ್ತ ವ್ಯಾಪಾರಿಗಳಿಂದ `ಸುದ್ದಿ’ಗೆ ಪ್ರತಿಕ್ರಿಯೆ
  • ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಒಕ್ಕೊರಳ ಆಗ್ರಹ
  • ಡಿಸಿ,ಎಸ್ಪಿ, ಡಿವೈಎಸ್ಪಿಯವರಿಂದಲೂ ಪ್ರತಿಕ್ರಿಯೆ

ಪುತ್ತೂರು:ನಮ್ಮ ಅಂಗಡಿಯಿಂದ ಯಾವುದೇ ಸಾಮಾಗ್ರಿಗಳನ್ನು ಮುಸ್ಲಿಮರಿಗೆ ಕೊಡುವುದಿಲ್ಲ.ನಮಗೆ ಹಿಂದೂ ಸಹೋದರರ ವ್ಯಾಪಾರವೇ ಧಾರಾಳ ಎಂದು ಉಪ್ಪಿನಂಗಡಿಯ 32 ಹಿಂದೂ ವರ್ತಕರ ವ್ಯಾಪಾರ ಮಳಿಗೆಗಳ ಹೆಸರು ಬಳಸಿ ಸಾಮಾಜಿಕ ಜಾಲತಾಣ

ವಾಟ್ಸ್‌ಆಪ್‌ನಲ್ಲಿ ಸಂದೇಶ ವೈರಲ್ ಆಗಿರುವುದಕ್ಕೆ ಸಂಬಂಽಸಿ `ಸುದ್ದಿ’ಗೆ ಪ್ರತಿಕ್ರಿಯೆ ನೀಡಿರುವ ಸಂತ್ರಸ್ತ ವರ್ತಕರು ವರ್ತಕ-ಗ್ರಾಹಕರ ಸಂಬಂಧಕ್ಕೆ ಧಕ್ಕೆಯಾಗಿಲ್ಲ. ವೈರಲ್ ಆಗಿರುವ ಸಂದೇಶಕ್ಕೂ ಉಪ್ಪಿನಂಗಡಿಯ 32 ಹಿಂದೂ ವ್ಯಾಪಾರಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಮಾಜದ ಶಾಂತಿ ಮತ್ತು ಸಹೋದರತ್ವಕ್ಕೆ ಧಕ್ಕೆ ತರುವ ಯಾವುದೇ ಘಟನೆಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಹೇಳಿದ್ದಾರೆ. ಘಟನೆ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಸ್.ಐ.ಯವರೇ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಹೇಳಿದ್ದಾರೆ.

ಉಪ್ಪಿನಂಗಡಿಯ 32 ಹಿಂದೂ ವರ್ತಕರ ಮಳಿಗೆಯ ಹೆಸರು ನಮೂದಿಸಿ,ನಮ್ಮ ಅಂಗಡಿಯಿಂದ ಯಾವುದೇ ಸಾಮಾಗ್ರಿಗಳನ್ನು ಮುಸ್ಲಿಮರಿಗೆ ಕೊಡುವುದಿಲ್ಲ.ನಮಗೆ ಹಿಂದೂ ಸಹೋದರರ ವ್ಯಾಪಾರವೇ ಧಾರಾಳ-ಹಿಂದೂ ವರ್ತಕರ ಒಕ್ಕೂಟ ರಿ.ಉಪ್ಪಿನಂಗಡಿ ಎಂದು, ಕೋಮು ಭಾವನೆ ಪ್ರಚೋದಿಸುವ ರೀತಿಯ ಸಂದೇಶ ಗುರುವಾರ ವೈರಲ್ ಅಗಿತ್ತು.ಇದರ ಬೆನ್ನಿಗೇ, ಕೆಲವರು ಸಂದೇಶದಲ್ಲಿ ಹೆಸರಿಸಲಾಗಿದ್ದ ಹಿಂದೂ ವರ್ತಕರಿಗೆ ಕರೆ ಮಾಡಿ, `ಈ ರೀತಿಯ ಸಂದೇಶವನ್ನು ಕಳುಹಿಸಿದ ಉದ್ದೇಶವೇನು?’ ಎಂಬ ಪ್ರಶ್ನೆಗಳನ್ನು ಕೇಳಲಾರಂಭಿಸಿದ್ದರು.ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ನೈಜ ಆರೋಪಿಗಳನ್ನು ಬಂಽಸಿ ಕಾನೂನು ಕ್ರಮ ಕೈಗೊಳ್ಳುವಂತೆ ಉಪ್ಪಿನಂಗಡಿ ಪೊಲೀಸ್ ಠಾಣೆ ಹಾಗೂ ಡಿವೈಎಸ್ಪಿ ಅವರಿಗೆ ಉಪ್ಪಿನಂಗಡಿ ವರ್ತಕ ಸಂಘದ ವತಿಯಿಂದ ಮತ್ತು ಸಂತ್ರಸ್ತ ವರ್ತಕರ ವತಿಯಿಂದ ಮನವಿ ನೀಡಲಾಗಿತ್ತು.ಘಟನೆ ಸಂಬಂಧ ಸುವ್ಯ ಕ್ರೀಂ ಪಾರ್ಲರ್‌ನ ಮಾಲಕ ಯತೀಶ್ ಶೆಟ್ಟಿಯವರು ನೀಡಿದ್ದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಕಲಂ 505(2)ಐಪಿಸಿಯಡಿ ಪ್ರಕರಣವೊಂದನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವ್ಯಾಪಾರಿ ವಲಯವನ್ನು ತಲ್ಲಣಗೊಳಿಸಿರುವ ವಾಟ್ಸ್ ಆಪ್ ಸಂದೇಶದ ಹಿಂದೆ ಇರುವ ಕಿಡಿಗೇಡಿಗಳನ್ನು ಪತ್ತೆಹಚ್ಚುವಲ್ಲಿ ಜಿಲ್ಲಾ ಪೊಲೀಸರು ಮುಂದಾಗಿದ್ದು, ಶೀಘ್ರವೇ ಅಪರಾಽಗಳನ್ನು ಪತ್ತೆ ಹಚ್ಚುವ ವಿಶ್ವಾಸವಿದೆ.ಜಿಲ್ಲಾಽಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿಗಳು ಈ ಬಗ್ಗೆ `ಸುದ್ದಿ’ಗೆ ಪ್ರತಿಕ್ರಿಯೆ ನೀಡಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

`ಸುದ್ದಿ’ಯಿಂದ ಸಂತ್ರಸ್ತ ವರ್ತಕರ ಭೇಟಿ-ಅಭಿಪ್ರಾಯ ಸಂಗ್ರಹ:
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ `ಸುದ್ದಿ’ತಂಡ ಉಪ್ಪಿನಂಗಡಿಗೆ ಭೇಟಿ ನೀಡಿ ಸಂತ್ರಸ್ತ ವರ್ತಕರನ್ನು ಭೇಟಿಯಾಗಿ ಘಟನೆ ಕುರಿತು ಪ್ರತಿಕ್ರಿಯೆ ಕೇಳಿದಾಗ, ವೈರಲ್ ಆದ ಸಂದೇಶಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ.ಈ ನಿಟ್ಟಿನಲ್ಲಿ ಪ್ರಕರಣದ ಕುರಿತು ಸಮಗ್ರ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎನ್ನುವುದು ಬಹುತೇಕ ವರ್ತಕರು ನೀಡಿರುವ ಪ್ರತಿಕ್ರಿಯೆಯಾಗಿದೆ. ಸಂತ್ರಸ್ತ 32 ಹಿಂದೂ ವರ್ತಕರ ಪೈಕಿ 30 ವರ್ತಕರು ಸಂಪರ್ಕಕ್ಕೆ ಲಭ್ಯವಾಗಿದ್ದು ಈ ಪೈಕಿ ಕೆಲವರ ಅಭಿಪ್ರಾಯಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ.

ಶಾಂತಿ, ಸಹೋದರತ್ವಕ್ಕೆ ಧಕ್ಕೆ ತರುವ ಘಟನೆಗೆ ಅವಕಾಶ ನೀಡೋದಿಲ್ಲ:ಡಿ.ಸಿ.

ಸಮಾಜದ ಶಾಂತಿ ಹಾಗೂ ಸಹೋದರತ್ವಕ್ಕೆ ಧಕ್ಕೆ ತರುವ ಯಾವುದೇ ಘಟನೆಗೂ ಅವಕಾಶ ನೀಡುವುದಿಲ್ಲ. ಪೊಲೀಸ್ ಇಲಾಖೆಯ ಸೈಬರ್ ಸೆಲ್ ಇಂತಹ ಘಟನೆಗಳ ಮೇಲೆ ಕಣ್ಣಿಟ್ಟಿದ್ದು, ಸೂಕ್ತ ಕ್ರಮ ಕೈಗೊಳ್ಳಲಿದೆ. -ಡಾ.ರಾಜೇಂದ್ರ ಕೆ.ವಿ.,ಜಿಲ್ಲಾಧಿಕಾರಿಗಳು, ದ.ಕ

ಎಸ್.ಐ.ತನಿಖೆ ನಡೆಸುತ್ತಿದ್ದಾರೆ:ಎಸ್ಪಿ

ಸಂದೇಶ ವೈರಲ್ ಮಾಡಿರುವುದರಿಂದ ಕಲಂ505(2)ಐಪಿಸಿ ಅಡಿ ಪ್ರಕರಣ ದಾಖಲಿಸಲಾಗಿದೆ.ಇದನ್ನು ಉಪ್ಪಿನಂಗಡಿ ಠಾಣೆಯ ಪಿಎಸ್‌ಐ ಅವರೇ ತನಿಖೆ ನಡೆಸುತ್ತಿದ್ದಾರೆ- ಹೃಷಿಕೇಶ್ ಸೋನಾವಣೆ, ಎಸ್ಪಿ, ದ.ಕ.

 

ತನಿಖೆ ಪ್ರಗತಿಯಲ್ಲಿದೆ:ಡಿವೈಎಸ್ಪಿ

ಸಂದೇಶ ವೈರಲ್ ಮಾಡಿದ ಪ್ರಕರಣಕ್ಕೆ ಸಂಬಂಽಸಿದಂತೆ ಎಫ್ಐಆರ್ ದಾಖಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ.– ಡಾ.ಗಾನಾ ಪಿ. ಕುಮಾರ್, ಡಿವೈಎಸ್ಪಿ ಪುತ್ತೂರು

ಸಂತ್ರಸ್ತ ವರ್ತಕರು `ಸುದ್ದಿ’ಗೆ ನೀಡಿರುವ ಪ್ರತಿಕ್ರಿಯೆ ಸುದ್ದಿ ನ್ಯೂಸ್ ಪುತ್ತೂರು ಯೂ ಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಾಗಲಿದೆ.

 

 

ಯಾರು ಬಂದರೂ ಎಬ್ಬಿಸುವುದಿಲ್ಲ

ನಮ್ಮದು ಹೊಟೇಲ್ ಆದುದರಿಂದ ಯಾರೇ ವ್ಯಕ್ತಿ ಬಂದು ಕೂತರೂ ಎಬ್ಬಿಸುವಂತಹ ಪವರ್ ನಮಗೆ ಇಲ್ಲ. ಭಿಕ್ಷುಕ ಹೊಟೇಲ್ ಒಳಗೆ ಬಂದು ಕೂತರೂ, ನೀನು ಭಿಕ್ಷುಕ, ನೀನು ಕುಳಿತುಕೊಳ್ಳಬಾರದು ಎಂದು ಹೇಳುವಂತೆಯೂ ಇಲ್ಲ. ಎಷ್ಟೇ ಶ್ರೀಮಂತರ ಜೊತೆ ಬಂದು ಕೂತರೂ ಅವರನ್ನು ಎಬ್ಬಿಸುವಂತಿಲ್ಲ. ನನ್ನ ಬಳಿ ಹಣವಿಲ್ಲದಿದ್ದರೂ, ನಾನು ಅವನಿಗೆ ಊಟ ಕೊಟ್ಟು ಕಳುಹಿಸುತ್ತೇನೆ ಅಥವಾ ಊಟ ಕಳುಹಿಸಿ ಕೊಡುತ್ತೇನೆಯೇ ಹೊರತು ಹೋಗು ಅಂತ ಹೇಳುವ ಹಾಗಿಲ್ಲ.- ವಿಠಲ್ ದೇವಾಡಿಗ, ಹೊಟೇಲ್ ಸ್ಕಂದ, ಉಪ್ಪಿನಂಗಡಿ

ಅಪರಾಧಿಗಳನ್ನು ಹಿಡಿದು ತಕ್ಕ ಶಿಕ್ಷಯಾಗಬೇಕು

ಯಾರೋ ಕಿಡಗೇಡಿಗಳು ಮಾಡಿದಂತಹ ಕೆಲಸ. ಅವರ ಬೇಳೆ ಬೇಯಿಸಿಕೊಳ್ಳಲು ಮತ್ತು ಸಮಾಜದ ಶಾಂತಿ ಹಾಳು ಮಾಡಲು ಮಾಡಿದಂತಹ ಕೆಲಸ. ಇದರಲ್ಲಿ ನಮ್ಮ ಯಾವುದೇ ತರಹದ ಒಪ್ಪಿಗೆ ಇರುವುದಿಲ್ಲ. ಈ ಬಗ್ಗೆ ಪೊಲೀಸ್ ಕಂಪ್ಲೆಂಟ್ ಕೊಟ್ಟು ಆದಷ್ಟು ಬೇಗ ಅಪರಾಽಗಳನ್ನು ಹಿಡಿದು ಈ ವಿಷಯವನ್ನು ಇತ್ಯರ್ಥ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ. ನಾವು ಸುಮಾರು ೪೦ ವರ್ಷದಿಂದ ಮಸೀದಿಯ ಅಂಡರ್‌ನಲ್ಲಿರುವ ಕಟ್ಟಡದಲ್ಲಿ ಬಾಡಿಗೆಗೆ ಇದ್ದೇವೆ. ಹಾಗಾಗಿ ನಮಗೆ ಅಂತಹ ಪ್ರಶ್ನೆಗಳೇ ಬರುವುದಿಲ್ಲ. ಆ ಮೆಸೆಜ್‌ನ್ನು ಓದಿದವರು ಇದನ್ನು ನಂಬುವುದು ಕಷ್ಟ. ನೋಡಿದ ಕೂಡಲೇ ಸುಳ್ಳು ಎಂದು ಗೊತ್ತಾಗುವ ವಿಷಯ. ನಮ್ಮ ಬೇಡಿಕೆ ಏನೆಂದರೆ ಆ ಮೆಸೇಜನ್ನು ಫಾರ್ವರ್ಡ್ ಮಾಡದೆ ಬಂದ ಮೇಸೇಜನ್ನು ಇಗ್ನೋರ್ ಮಾಡಿ ಆದಷ್ಟು ಬೇಗ ಅಪರಾಽಗಳನ್ನು ಹಿಡಿದು ತಕ್ಕ ಶಿಕ್ಷೆಯನ್ನು ನೀಡಬೇಕು ಎಂದು ಕೇಳಿಕೊಳ್ಳುತ್ತೇನೆ. ಡಾ. ಅಜಯ್, ಕಾಂಚನ ಟ್ರೇಡರ್‍ಸ್ ಮಾಲಿಕ ಶಾಂತಾರಾಮ ಅವರ ಪುತ್ರ

ನಮ್ಮ ಮೇಲೆ ನಂಬಿಕೆ ಇದ್ದವರು ಬರುತ್ತಾರೆ

ಕಳೆದ 30ವರ್ಷದಿಂದ ವ್ಯವಹಾರ ಮಾಡುತ್ತಿದ್ದೇವೆ. ನಿನ್ನೆ ವಾಟ್ಸಪ್‌ನಲ್ಲಿ ಹರಡಿದಂತಹ ಮೆಸೇಜ್ ಬಗ್ಗೆ ನಾವು ತಲೆಕೆಡಿಸಿಕೊಳ್ಳಲು ಹೋಗಿಲ್ಲ. ನಾವೇನು ವ್ಯಾಪಾರ ಮಾಡುತ್ತಿದ್ದೇವೆ ಅದನ್ನು ಮಾಡುತ್ತಿದ್ದೇವೆ. ಯಾರೋ -ಕ್ ಮೆಸೆಜ್ ಹಾಕಿದ್ದಾರೆ. ನಾವು ನಂಬಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ನಮ್ಮ ಮೇಲೆ ನಂಬಿಕೆ ಇದ್ದವರು ಬರುತ್ತಾರೆ. ನಾನು ಇದರ ಬಗ್ಗೆ ಕಂಪ್ಲೆಂಟ್ ಕೊಡಲು ಹೋಗಿಲ್ಲ. ರವಿ ಇಳಂತಿಳ, ಶಿಲ್ಪ ಗ್ಲಾಸ್ ಆಂಡ್ ಪ್ಲೈವುಡ್ ಉಪ್ಪಿನಂಗಡಿ

ನಮ್ಮ ನಡುವೆ ದ್ವೇಷ ಹುಟ್ಟಿಸುವ ಕೆಲಸ ಮಾಡಿದ್ದಾರೆ

ಬಹಳ ವರ್ಷಗಳಿಂದ ವ್ಯಾಪಾರ ಮಾಡುತ್ತಿದೇವೆ. ನಮ್ಮಲ್ಲಿ ಯಾವುದೇ ರೀತಿಯ ಭೇದ ಭಾವವಿಲ್ಲ. ನಮ್ಮ ಸಂಸ್ಥೆಗೆ ಎಲ್ಲಾ ಜಾತಿ ಮತ ಭಾಂದವರು ಬರುತ್ತಾರೆ. ನಾವೂ ಕೂಡ ಅವರ ಅಂಗಡಿಗೆ ಹೋಗುತ್ತೇವೆ. ಒಳ್ಳೆಯ ಭಾಂದವ್ಯ ನಮ್ಮಲ್ಲಿದೆ. ಆದರೆ ೨ ದಿನಗಳ ಹಿಂದೆ ಮೊಬೈಲ್‌ನಲ್ಲಿ ವೈರಲ್ ಆದಂತಹ ವಿಷಯವನ್ನು ನಮ್ಮ ನಡುವೆ ದ್ವೇಷ ಹುಟ್ಟಿಸುವಂತಹ ಕೆಲಸವನ್ನು ಮಾಡಿದ್ದಾರೆ. ಆದನ್ನು ಆದಷ್ಟು ಬೇಗ ಪತ್ತೆಹಚ್ಚಿ ಕಾನೂನು ಕ್ರಮಕೈಗೊಳ್ಳಬೇಕು. ಸುಂದರ ಗೌಡ, ಸಚಿನ್ ಜ್ಯೂಸ್ ಸೆಂಟರ್ ಉಪ್ಪಿನಂಗಡಿ

 

LEAVE A REPLY

Please enter your comment!
Please enter your name here