ವಿಟ್ಲ: ಬಾವಿಗೆ ಬಿದ್ದ ಕೋಳಿ ಮರಿಯ ರಕ್ಷಣೆ ವೇಳೆ ಕುಸಿದ ಕಟ್ಟೆ-ಯುವಕನ ದುರ್ಮರಣ

0

 

 

ವಿಟ್ಲ: ಕೋಳಿ ಮರಿಯನ್ನು ರಕ್ಷಿಸಲು ಹೋದ ವ್ಯಕ್ತಿಯೋರ್ವರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕರೋಪಾಡಿ ಗ್ರಾಮದ ಮದರಮೂಲೆ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.


ಕರೋಪಾಡಿ ಗ್ರಾಮದ ಮದರಮೂಲೆ ದಿ. ಮುದ್ದ ಮುಗೇರರವರ ಪುತ್ರ ವಸಂತ ಮುಗೇರ(37 ವ.) ಮೃತಪಟ್ಟವರು. ಮಂಜೇಶ್ವರ ತಾಲೂಕಿನ ಉಪ್ಪಳದ ವಿದ್ಯುತ್ ಗುತ್ತಿಗೆದಾರರೋರ್ವರ ಜೊತೆ ಕೆಲಸ ಮಾಡಿಕೊಂಡಿದ್ದ ವಸಂತರವರು ಕೇರಳದಲ್ಲಿ ನಡೆಯುತ್ತಿರುವ ಖಾಸಗಿ ಬಸ್ ಮುಷ್ಕರದಿಂದಾಗಿ ರಜೆಯಲ್ಲಿದ್ದರು. ಮಾ.26ರಂದು ಸಾಯಂಕಾಲದ ವೇಳೆ ಮನೆ ಮುಂದಿನ ಬಾವಿಗೆ ಕೋಳಿ ಮರಿಯೊಂದು ಬಿದ್ದಿದ್ದು ಅದನ್ನು ಮೇಲೆತ್ತುವ ಪ್ರಯತ್ನದಲ್ಲಿರುವ ವೇಳೆ ಬಾವಿಯ ಕಟ್ಟೆ ಕುಸಿದು ವಸಂತರವರು ಬಾವಿಗೆ ಬಿದ್ದಿದ್ದರು. ಈ ವೇಳೆ ಮನೆಮಂದಿ ಸ್ಥಳೀಯರನ್ನು ಕರೆದು ಮೇಲಕ್ಕೆತ್ತುವ ಪ್ರಯತ್ನ ಮಾಡಿದರಾದರೂ ರಕ್ಷಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಮುರಳೀಧರ ವಿಟ್ಲ ನೇತೃತ್ವದ    ಫ್ರೆಂಡ್ಸ್ ವಿಟ್ಲ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆ ತೆಗೆದರು.

ವಿಟ್ಲ ಠಾಣಾ ಎಸ್.ಐ ಸಂದೀಪ್ ಕುಮಾರ್ ಸಿಬ್ಬಂದಿಗಳಾದ ಪ್ರಸನ್ನ, ಜಯಕುಮಾರ್, ಅಶೋಕ್‌ರವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here