ತೆಗ್ಗುವಿನಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ – ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ

0

 

ಪುತ್ತೂರು: ಸುಮಾರು 300 ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಅತ್ಯಂತ ಕಾರಣಿಕತೆಯಿಂದ ಕೂಡಿರುವ ಕೆಯ್ಯೂರು ಗ್ರಾಮದ ತೆಗ್ಗು ಶಾಲಾ ಬಳಿಯ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.29 ರಂದು ವಿಜ್ರಂಭಣೆಯಿಂದ ನಡೆಯಿತು. ಕೋಡಂಬು ಕುಟುಂಬಸ್ಥರಾದ ಪಕೀರರವರು ಆರಾಧಿಸಿಕೊಂಡು ಬಂದಿರುವ ಶ್ರೀವಿಷ್ಣುಮೂರ್ತಿ ದೈವದ ಒತ್ತೆಕೋಲವನ್ನು ಅವರ ಬಳಿಕ ಪೊಡಿಯ, ಕುಂಞ್‌ರವರುಗಳು ನಡೆಸಿಕೊಂಡು ಬಂದರು. ಪ್ರಸ್ತುತ ಬಾಬು ತೆಗ್ಗು ಹಾಗೂ ಕುಟುಂಬಸ್ಥರು ಊರಪರವೂರ ಭಕ್ತಾದಿಗಳ, ದಾನಿಗಳ ಸಹಕಾರ ಪಡೆದುಕೊಂಡು ನಡೆಸಿಕೊಂಡು ಬರುತ್ತಿದ್ದಾರೆ.

 

ಬೆಳಿಗ್ಗೆ ಗಣಪತಿ ಹೋಮ ನಡೆದು, ಸಂಜೆ ಭಂಡಾರ ತೆಗೆದು ರಾತ್ರಿ ಮೇಲೆರಿಗೆ ಅಗ್ನಿಸ್ಪರ್ಶ ನಡೆಯಿತು. ಇದೇ ಸಂದರ್ಭದಲ್ಲಿ ಕೆಯ್ಯೂರು ಶ್ರೀ ದುರ್ಗಾ ಭಜನಾ ಮಂಡಳಿ ಮತ್ತು ಶುತಿ ಯುವತಿ ಮಂಡಲ ಮರ್ಕಂಜ ಸುಳ್ಯ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಕುಳಿಚ್ಚಾಟ ದೈವದ ನರ್ತನ ನಡೆದು ಮರುದಿನ ಪ್ರಾತಃಕಾಲದ ಹೊತ್ತಿಗೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು. ಬೆಳಿಗ್ಗೆ ಗುಳಿಗ ದೈವದ ಕೋಲ ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು. ಊರ ಪರವೂರ ಸಾವಿರಾರು ಭಕ್ತರು ಒತ್ತೆಕೋಲದಲ್ಲಿ ಪಾಲ್ಗೊಂಡು ಶ್ರೀದೈವದ ಗಂಧ ಪ್ರಸಾದ ಸ್ವೀಕರಿಸಿದರು. ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಶ್ರೀ ಮಹಾವಿಷ್ಣು ದೈವಸ್ಥಾನದ ಮುಖ್ಯ ಪಾತ್ರಿ ಬಾಬು ತೆಗ್ಗು ಹಾಗೂ ಕುಟುಂಬಸ್ಥರು,ಊರಪರವೂರ ಹತ್ತು ಸಮಸ್ತರು ಉಪಸ್ಥಿತರಿದ್ದರು.

ಮನರಂಜನಾ ಕಾರ್ಯಕ್ರಮ: ಒತ್ತೆಕೋಲದ ಪ್ರಯುಕ್ತ ರಾತ್ರಿ ಊರ ಹಾಗೂ ಪರವೂರ ಪ್ರತಿಭೆಗಳಿಂದ ವಿವಿಧ ವಿನೋದಾವಳಿಗಳು, ರಾಜ್ಯ ಪ್ರಶಸ್ತಿ ಪುರಸ್ಕೃತ ರಮೇಶ್ ಮೆಟ್ಟಿನಡ್ಕ ಸಾರಥ್ಯದ ರಂಗ್ ಮೆಲೋಡಿ ಮೆಟ್ಟಿನಡ್ಕ ಇವರಿಂದ ಭಕ್ತಿಸಂಗಮ ರಸಮಂಜರಿ ಮನರಂಜಿಸಿತು.

LEAVE A REPLY

Please enter your comment!
Please enter your name here