ಊರು ಲಂಚ, ಭ್ರಷ್ಟಾಚಾರ ಮುಕ್ತವಾಗಬೇಕೆಂದು ಬಯಸುವವರು ಸೆಟೆದು ನಿಲ್ಲಿ-ಅದನ್ನು ಎದುರಿಸಲಾಗದ ಹೇಡಿಗಳಾದರೆ ಮುಂದಿನ ಜನಾಂಗ (ಮಕ್ಕಳು) ಕ್ಷಮಿಸಲಿಕ್ಕಿಲ್ಲ

0

  • ಲಂಚ ಮುಕ್ತವಾಗಲು ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಪ್ರಾರ್ಥಿಸಿರಿ. ಸಭೆಗಳಲ್ಲಿ ಸಂಕಲ್ಪ ಮಾಡಿರಿ

 

 

ಲಂಚ, ಭ್ರಷ್ಟಾಚಾರ ಸಮಾಜದಲ್ಲಿ ತುಂಬಿ ತುಳುಕುತ್ತಿದೆ. ಅದಕ್ಕೆ ಒಳಗಾಗದವರು ಯಾರೂ ಇಲ್ಲ. ಮೇಲಿನಿಂದ ಕೆಳಗೆ, ಕೆಳಗಿನಿಂದ ಮೇಲೆ ಹರಡಿರುವ ಭ್ರಷ್ಟಾಚಾರ ಎಲ್ಲರ ಮೈಗೆ ಅಂಟುವಂತೆ ಮಾಡುವ ವ್ಯವಸ್ಥೆ ನಮ್ಮದಾಗಿದೆ. ಯಾರನ್ನು ಕೇಳಿದರೂ ಒಂದಲ್ಲ ಹಲವು ಬಾರಿ ಅದರ ಪ್ರಭಾವಕ್ಕೆ, ಸಂಕಷ್ಟಕ್ಕೆ, ತೊಂದರೆಗೆ ಒಳಗಾದ ಅನುಭವ ನೀಡುತ್ತಾರೆ. ಬ್ರಹ್ಮಾಂಡವನ್ನು ಆವರಿಸಿರುವ ಲಂಚ, ಭ್ರಷ್ಟಾಚಾರದ ವ್ಯವಸ್ಥೆಯನ್ನು ಎದುರಿಸಲಾಗದ, ಎದುರಿಸಿದ್ದರ ಕೆಟ್ಟ ಅನುಭವ ಹೊಂದಿರುವ ಜನತೆ ಹೆದರಿ ಕಂಗಲಾಗಿದ್ದಾರೆ. ಅದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ ಲಂಚ ಕೊಡದಿದ್ದರೆ ಕೆಲಸವೇ ಆಗುವುದಿಲ್ಲ ಎಂಬ ನಂಬಿಕೆ ಅವರದ್ದಾಗಿದೆ. ಅಂತಹ ಅನುಭವಗಳನ್ನು ಉದಾಹರಣೆಯಾಗಿ ನೀಡುತ್ತಾರೆ. ನನ್ನಲ್ಲೂ ಅಂತಹ ಅನುಭವಗಳಿವೆ.

ಹಾಗಿದ್ದರೆ ಅದರಿಂದ ಹೊರಗೆ ಬರಲು ಸಾಧ್ಯವಿಲ್ಲವೇ? ಇದೆ.! ಅಧಿಕಾರಿಗಳು, ಜನಪ್ರತಿನಿಧಿಗಳು, ಪಕ್ಷಗಳು ನಮ್ಮ ಸೇವೆಗಾಗಿ ಇರುವಂತಹದ್ದು, ನಾವು ರಾಜರುಗಳು. ಎಂಬ ನಂಬಿಕೆ ಊರಿನ ಪ್ರತಿಯೊಬ್ಬ ಪ್ರಜೆಯಲ್ಲಿ ಉಂಟಾದಾಗ ಅದನ್ನು ಅವನು ಕಾರ್ಯರೂಪಕ್ಕೆ ತಂದಾಗ ನಮ್ಮ ಊರು ಲಂಚ, ಭ್ರಷ್ಟಾಚಾರ ಮುಕ್ತವಾಗುತ್ತದೆ. ಲಂಚ, ಭ್ರಷ್ಟಾಚಾರವನ್ನು ಎದುರಿಸುವ ಶಕ್ತಿ ಬರಲಿಕ್ಕಾಗಿ ಮತ್ತು ಮನಸ್ಸು ಎಲ್ಲರಲ್ಲಿಯೂ ಉಂಟಾಗಲಿಕ್ಕಾಗಿ ಪ್ರತಿಯೊಬ್ಬರು ಸೆಟೆದು ನಿಂತು ಸಂಕಲ್ಪ ಮಾಡಬೇಕು. ಸಾರ್ವಜನಿಕವಾಗಿ ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚ್ ಮತ್ತಿತರ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಅವರವರು ಪ್ರಾರ್ಥನೆ ಮಾಡಬೇಕು. ಸಭೆ ಸಮಾರಂಭಗಳಲ್ಲಿ ಧ್ವನಿ ಎತ್ತಿ ಪ್ರತಿಜ್ಞೆ ಮಾಡಬೇಕು. ಮದುವೆ, ಮತ್ತಿತರ ಸಭೆ ಸಮಾರಂಭಗಳಲ್ಲಿ ಲಂಚ, ಭಷ್ಟಾಚಾರ ಮುಕ್ತವಾಗಲಿ ಎಂಬುವುದೇ ಶುಭಾಶಯದ ಹಾರೈಕೆಯಾಗಬೇಕು. ಲಂಚ, ಭ್ರಷ್ಟಾಚಾರ ಎದುರಿಸಲು ಸಾಧ್ಯವಾಗದೆ ಹೇಡಿಗಳ ಬದುಕು ಬದುಕಿದರೆ ಸಮಾಜ, ಊರು, ಜನತೆ ನಾಶವಾಗುವುದು ಖಂಡಿತ. ಅಂತಹ ಲಂಚ, ಭ್ರಷ್ಟಾಚಾರ ತುಂಬಿದ ಸಮಾಜವನ್ನು ನಾವು ಬಿಟ್ಟು ಹೋದರೆ ಮುಂದಿನ ಜನಾಂಗ ಮತ್ತು ಮಕ್ಕಳು ನಮ್ಮನ್ನು ಕ್ಷಮಿಸಲಿಕ್ಕಿಲ್ಲ. ಗೌರವ ಕೊಡಲಿಕ್ಕಿಲ್ಲ. ಹೇಡಿಗಳು, ದೇಶ ದ್ರೋಹಿಗಳು ಎಂದೇ ಪರಿಗಣಿಸಿಯಾರು.

ಊರನ್ನು ಲಂಚ, ಭ್ರಷ್ಟಾಚಾರ ಮುಕ್ತ ಮಾಡುವ ಪ್ರಯತ್ನ ಸುದ್ದಿ ಜನಾಂದೋಲನದಿಂದ ನಡೆಯುತ್ತಿದೆ. ಜನತೆಗೆ ತಮ್ಮ ಕಷ್ಟಗಳನ್ನು, ತೊಂದರೆಗಳನ್ನು ವ್ಯಕ್ತಪಡಿಸಲು, ಧ್ವನಿ ಸಿಕ್ಕಿದೆ. ತಾಲೂಕಿನ ಎಲ್ಲಾ ಕಡೆಗಳಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧದ ಫಲಕ, ಬ್ಯಾನರ್‌ಗಳು ರಾರಾಜಿಸುತ್ತಿವೆ. ಜನರು ತಮ್ಮ ಅನುಭವಗಳನ್ನು, ಶಾಪವನ್ನು ಹಂಚುತ್ತಿದ್ದಾರೆ. ಅವು ಅಧಿಕಾರಿಗಳ ಕಿವಿಗಳನ್ನು ಮುಟ್ಟುತ್ತಿವೆ. ಹಲವು ಕಛೇರಿಗಳಲ್ಲಿ ಲಂಚ ಇಲ್ಲದೆ ಸತಾಯಿಸದೆ ಕೆಲಸಗಳು ನಡೆಯುತ್ತಿವೆ. ಅಧಿಕಾರಿಗಳು ಉತ್ತಮ ಸೇವೆ ಮಾಡುವ ವಿಚಾರವೂ ಹರಡುತ್ತಿದೆ. ಜನರು ರಾಜರುಗಳಾಗುತ್ತಿದ್ದಾರೆ. ಅಧಿಕಾರಿಗಳು ಜನಸೇವಕರಾಗುತ್ತಿದ್ದಾರೆ. ನಾವು ನೀಡಿದ್ದ 100 ದಿನಗಳ ಗಡುವಿನಲ್ಲಿ 49 ದಿನಗಳು ಕಳೆದಿವೆ. ಇನ್ನು 51  ದಿನಗಳು ಬಾಕಿ ಇದೆ. ನಾವು ಅರ್ಧದಾರಿ ಈಗಾಗಲೇ ಸಾಗಿದ್ದೇವೆ.

ಗ್ರಾಮ ಗ್ರಾಮಗಳಲ್ಲಿ , ನಗರದಲ್ಲಿ ಪಥ ಸಂಚಲನ ಮತ್ತು ಅಧಿಕಾರಿಗಳ ಸಭೆ
ಇದರಲ್ಲಿ ಊರಿನ ಎಲ್ಲರೂ ಭಾಗವಹಿಸಿ ಪೂರ್ಣ ಜನಾಂದೋಲನವಾಗಲು ಒಂದು ಸಣ್ಣ ಹೆಜ್ಜೆ ಜನರು ಇಡಬೇಕು. ಇದೇ ಬರುವ ಏಪ್ರಿಲ್ 13 ರಂದು ಸುಳ್ಯದಲ್ಲಿ ಲಂಚ, ಭ್ರಷ್ಟಾಚಾರ ಮುಕ್ತ ಊರು ನಮ್ಮದಾಗಲು ಪಥ ಸಂಚಲನ ಮಾಡಬೇಕೆಂದಿದ್ದೇವೆ. ಅದರ ಉದ್ಘಾಟನೆ ಮಾಡಲು, ನೇತೃತ್ವ ವಹಿಸಲು ಶಾಸಕರನ್ನು ಆಹ್ವಾನಿಸಲಾಗುವುದು. ಸುಳ್ಯ ಪೇಟೆಯಲ್ಲಿ ಬೆಳಿಗ್ಗೆ 9.30ರಿಂದ 10.30ರ ತನಕ ನಡಿಗೆ ನಡೆದು 10.20 ರಿಂದ 1 ಗಂಟೆಯವರೆಗೆ ತಾಲೂಕಿನ ಎಲ್ಲಾ ಅಧಿಕಾರಿಗಳನ್ನು ಕರೆದು ಲಂಚ, ಭ್ರಷ್ಟಾಚಾರ ನಿಲ್ಲಿಸುವ ಬಗ್ಗೆ ಮತ್ತು ಉತ್ತಮ ಸೇವೆ ನೀಡಲು ಜನರಿಗೆ ಮಾಹಿತಿ ಶಿಬಿರವನ್ನು ಏರ್ಪಡಿಸಲಿದ್ದೇವೆ. ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಹಾಗೂ ಸುಳ್ಯ ತಾಲೂಕಿನ ಹಿರಿಯ ಸಿವಿಲ್ ನ್ಯಾಯಾಧೀಶರು ಆಗಿರುವ ಸೋಮಶೇಖರ್.ಎ ರವರು ಕಾರ್ಯಕ್ರಮದಲ್ಲಿ ಜನರಿಗೆ ಮತ್ತು ಅಧಿಕಾರಿಗಳಿಗೆ ಕಾನೂನು ಮಾಹಿತಿಯನ್ನು ನೀಡಲಿದ್ದಾರೆ. ಲಂಚ, ಭ್ರಷ್ಟಾಚಾರ ಮುಕ್ತ ಉತ್ತಮ ಸೇವೆ ನೀಡುವ ಊರಾಗಿ ಮಾಡುವ ಬಗ್ಗೆ ಜನರ ಮತ್ತು ಇಲಾಖಾಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿ ತಿಳಿಸಲಿದ್ದಾರೆ. ಪ್ರತೀ ಗ್ರಾಮ ಪಂಚಾಯತ್‌ನಿಂದ ಆಸಕ್ತ 10 ಜನರು ನಗರಸಭಾ ವಾರ್ಡ್‌ನಿಂದ 5 ಜನರು ಬೆಳಿಗ್ಗೆ ನಡೆಯುವ ಪಥ ಸಂಚಲನದಲ್ಲಿ ಮತ್ತು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅವರು ತಮ್ಮ ತಮ್ಮ ಊರಿನ ಸಮಸ್ಯೆಗಳನ್ನು, ಬೇಡಿಕೆಗಳನ್ನು ಮಂಡಿಸಿ ಉತ್ತರ ಪಡೆಯಲಿದ್ದಾರೆ. ಆ ಸಭೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರುಗಳನ್ನು, ಜನಪ್ರತಿನಿಧಿಗಳನ್ನು ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳ ಪ್ರಮುಖರನ್ನು ಆಹ್ವಾನಿಸಲಾಗುವುದು ಈ ಮೇಲಿನ ಕಾರ್ಯಕ್ರಮ ಸುಳ್ಯವನ್ನು ಲಂಚ, ಭ್ರಷ್ಟಾಚಾರ ಮುಕ್ತ ತಾಲೂಕನ್ನಾಗಿ ಮಾಡುವಲ್ಲಿ ಪ್ರಮುಖ ಹೆಜ್ಜೆಯಾಗಲಿದೆ. ಅದೇ ರೀತಿಯ ಕಾರ್ಯಕ್ರಮ ಪ್ರತೀ ಗ್ರಾಮ ಪಂಚಾಯತ್‌ನಲ್ಲಿ ನಡೆಯಲಿದ್ದು, ಅಲ್ಲಿ ಪ್ರತೀ ಮನೆಯಿಂದ ಓರ್ವನಂತೆ ಲಂಚ, ಭ್ರಷ್ಟಾಚಾರ ಮುಕ್ತ ಊರಿನೆಡೆಗೆ ನಡೆಯಲಿದ್ದಾರೆ. ಪ್ರತಿಜ್ಞೆ ಸ್ವೀಕಾರ, ಘೋಷಣೆಗಳು ಉತ್ತಮ ಸೇವೆಗೆ ಭರವಸೆಗಳು ಅಲ್ಲಿ ದೊರಕಲಿದೆ. ಆ ಮೂಲಕ ತಾಲೂಕಿನ ಎಲ್ಲಾ ಊರುಗಳಲ್ಲಿ ಮತ್ತು ತಾಲೂಕಿನಲ್ಲಿ ಜನಾಂದೋಲನ ನಡೆಯಲಿದ್ದು, ಊರು ಮತ್ತು ತಾಲೂಕು ಲಂಚ, ಭ್ರಷ್ಟಾಚಾರ ಮುಕ್ತವಾಗಲಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂಬ ಕರೆಯನ್ನು, ಆಶಯವನ್ನು ಜನರ ಮುಂದಿಡುತ್ತಿದ್ದೇವೆ.

[box type=”error” bg=”#” color=”#” border=”#” radius=”4″]ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ನೀಡುವ ಹಣಕ್ಕೆ ರಶೀದಿ ಪಡೆಯಿರಿ ಸ್ಥಿರಾಸ್ತಿ ಶುಲ್ಕ 6.60ದಿಂದ 6.65% ಇದೆ. ವ್ಯತ್ಯಾಸಗಳಿದ್ದರೆ ತಿಳಿಯಿರಿ. ಲಂಚ, ಭ್ರಷ್ಟಾಚಾರ ಮುಕ್ತ ಊರನ್ನಾಗಿ ಮಾಡುವ ಸುದ್ದಿ ಜನಾಂದೋಲನವು ಸಬ್ ರಿಜಿಸ್ಟ್ರಾರ್ ಕಛೇರಿಯನ್ನು ಪ್ರಥಮ ಪಂದ್ಯವನ್ನಾಗಿ ಸ್ವೀಕರಿಸಿತ್ತು. ಅದರ ಅಂಗವಾಗಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಆಗುವ ಕೆಲಸಗಳು, ಅದಕ್ಕೆ ತಗಲುವ ವೆಚ್ಚ ಮತ್ತು ನಿಗದಿತ ಸಮಯದ ಬಗ್ಗೆ ಕಳೆದವಾರದ ಸುದ್ದಿ ಪತ್ರಿಕೆಯಲ್ಲಿ “ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಸಿಗುವ ಸೇವೆಗಳು ಮತ್ತು ಕಾಲಮಿತಿ” ಎಂಬ ಶಿರೋ ನಾಮೆಯಡಿಯಲ್ಲಿ ಪ್ರಕಟಿಸಲಾಗಿತ್ತು. (ಅಲ್ಲಿ ನೀಡದೆ ಬಾಕಿಯಾಗಿರುವ ಮಾಹಿತಿಯನ್ನು ಮುಂದಿನ ವಾರ ನೀಡಲಾಗುವುದು) ಸ್ಥಿರಾಸ್ತಿಗೆ ಅಲ್ಲಿ 6.60 ದಿಂದ 6.65 ಶುಲ್ಕ ಸರಕಾರಕ್ಕೆ ಕಟ್ಟಬೇಕಾಗುತ್ತದೆ. ಎಂಬ ಮಾಹಿತಿಯನ್ನು ವಿವರವಾಗಿ ನೀಡಲಾಗಿತ್ತು. ಜನತೆ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಆಗುವ ಎಲ್ಲಾ ಕೆಲಸಗಳಿಗೆ ರಶೀದಿಯನ್ನು ಪಡೆಯಬೇಕು. ಕಾಲಮಿತಿಯನ್ನು, ಅಡ್ಡಿ ಅಡಚಣೆಗಳನ್ನು ಲಿಖಿತವಾಗಿ ಪಡೆಯಬೇಕು. ಲಂಚ, ಭ್ರಷ್ಟಾಚಾರ ಇಲ್ಲದೆ ಅಲ್ಲಿ ವ್ಯವಹಾರ ಮಾಡಲು ತಮ್ಮ ತಮ್ಮ ದಸ್ತಾವೇಜು ಬರಹಗಾರರ ಮತ್ತು ವಕೀಲರ ಸಹಾಯವನ್ನು ಅವರಿಗೆ ನೀಡಬೇಕಾದ ಶುಲ್ಕವನ್ನು ನೀಡಿ ಪಡೆಯುವುದು. ಆ ಮೂಲಕ ಪುತ್ತೂರು ತಾಲೂಕಿನ ಸಬ್‌ರಿಜಿಸ್ಟ್ರಾರ್ ಕಛೇರಿ ಲಂಚ, ಭ್ರಷ್ಟಾಚಾರ ಮುಕ್ತವಾಗಿ ಜನರಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದು ಹಾರೈಸುತ್ತಿದ್ದೇವೆ.[/box]

LEAVE A REPLY

Please enter your comment!
Please enter your name here