ಪ್ರೋಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರಗೆ ಏಕಲವ್ಯ ಪ್ರಶಸ್ತಿ

0

ಪುತ್ತೂರು:ಕ್ರೀಡಾ ಕ್ಷೇತ್ರದ ಸಾಧನೆಗಾಗಿ ನೀಡಲಾಗುವ 2020-21ನೇ ಸಾಲಿನ ಕ್ರೀಡಾ ಪ್ರಶಸ್ತಿಗಳ ಘೋಷಣೆ ಮಾಡಿದ್ದು ಪ್ರೊ ಕಬ್ಬಡಿ ಸೀಸನ್ ೮ರಲ್ಲಿ ಪ್ರತಿಷ್ಠಿತ ಪಾಟ್ನಾ ಪೈರೇಟ್ಸ್ ತಂಡದ ನಾಯಕನಾಗಿದ್ದ, ಕರ್ನಾಟಕದ ತಂಡದ ಮಾಜಿ ನಾಯಕ ಪ್ರಶಾಂತ್ ರೈ ಕೈಕಾರವವರು ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ತಾಲೂಕಿನ ಒಳಮೊಗ್ರು ಗ್ರಾಮದ ಕೈಕಾರ ನಿವಾಸಿ, ಕೆಎಸ್‌ಆರ್‌ಟಿಸಿ ಬಸ್ ಚಾಲಕರಾಗಿದ್ದ ದಿ.ಸೀತಾರಾಮ ರೈಯವರ ಪುತ್ರ ಪ್ರಶಾಂತ್ ರೈ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಪತ್ನಿ ವಜ್ರೇಶ್ವರಿ ರೈ ಮತ್ತು ಪುತ್ರ ಶತಾಯು ರೈ ಜತೆ ಬೆಂಗಳೂರಿನಲ್ಲಿ ವಾಸವಿದ್ದಾರೆ.ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಕಬಡ್ಡಿ ಕ್ರೀಡೆಯನ್ನು ಮೈಗೂಡಿಸಿಕೊಂಡಿದ್ದ ಪ್ರಶಾಂತ್ ರೈ ಅವರು ಕೋಚ್ ಹಬೀಬ್ ಮತ್ತು ಫಿಲೋಮಿನಾ ಕಾಲೇಜಿನ ಕೋಚ್ ಇಲಿಯಾಸ್ ಪಿಂಟೋ ಅವರ ಮಾರ್ಗದರ್ಶನದಲ್ಲಿ ಕಬಡ್ಡಿ ಆಟದ ಕೌಶಲ್ಯಗಳನ್ನು ಬೆಳೆಸಿಕೊಂಡಿದ್ದರು.
ಸತತ ಮೂರು ವರ್ಷ ಕಾಲ ಮಂಗಳೂರು ಅಂತರ್ ಕಾಲೇಜು ಟೂರ್ನಿಗಳಲ್ಲಿ ತಾನು ಕಲಿಯುತ್ತಿದ್ದ ಸಂತ ಫಿಲೋಮಿನಾ ಕಾಲೇಜಿಗೆ ಟ್ರೋಫಿ ಗೆದ್ದುಕೊಟ್ಟ ಪ್ರಶಾಂತ್ ರೈ, ಅಂತರ ವಿಶ್ವವಿದ್ಯಾಲಯಗಳ ಕಬಡ್ಡಿ ಟೂರ್ನಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಫಿಲೋಮಿನಾ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಪ್ರಶಾಂತ್ ರೈ ಅವರು ಬೆಂಗಳೂರಿನ ವಿಜಯ ಬ್ಯಾಂಕ್‌ನಲ್ಲಿ ಉದ್ಯೊಗ ಪಡೆದಿದ್ದು, ಅಲ್ಲಿ ಸಂಜೆ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ಮುಂದುವರಿಸಿದ್ದರು. ವಿಜಯ ಬ್ಯಾಂಕ್ ಮತ್ತು ರಾಜ್ಯ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದರು.

ಆರನೇ ಆವೃತ್ತಿಯ ಹರಾಜಿನಲ್ಲಿ ಪ್ರಶಾಂತ್ ಕುಮಾರ್ ರೈ, ಯುಪಿ ಯೋಧಾಸ್ ತಂಡಕ್ಕೆ ೭೯ ಲಕ್ಷ ರೂ.ಗಳಿಗೆ ಮಾರಾಟಗೊಂಡಿದ್ದರು. ಈ ಮೂಲಕ ರಾಜ್ಯದ ಪರ ಅತ್ಯಧಿಕ ಮೊತ್ತ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದರು.ನಾಲ್ಕನೇ ಆವೃತ್ತಿಯಲ್ಲಿ ದಬಾಂಗ್ ಡೆಲ್ಲಿಗೆ 13 ಲಕ್ಷಕ್ಕೆ ಬಿಕರಿಯಾಗಿದ್ದ ಪ್ರಶಾಂತ್ 5ನೇ ಅವತರಣಿಕೆಯಲ್ಲಿ 21 ಲಕ್ಷ ರೂ.ಗೆ ಹರಾಜುಗೊಂಡಿದ್ದರು. ಇದೀಗ ೬ನೇ ಆವೃತ್ತಿಗೆ ಸುಮಾರು ಮೂರು ಪಟ್ಟು ಹೆಚ್ಚು ಹಣ ಪಡೆಯುವ ಮೂಲಕ ದೇಶದ ಅಗ್ರಮಾನ್ಯ 20 ರೈಡರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಲೀಗ್‌ನ ಮೊದಲ ಮೂರು ಆವೃತ್ತಿಗಳಲ್ಲಿ ಸೂಕ್ತ ಅವಕಾಶ ಸಿಗದೆ ಎಲೆಮರೆಯ ಕಾಯಿಯಂತಿದ್ದ ಪ್ರಶಾಂತ್ ರೈ, ೪ನೇ ಹಾಗೂ ೫ನೇ ಆವೃತ್ತಿಯಲ್ಲಿ ಮುನ್ನಲೆಗೆ ಬರುವ ಮೂಲಕ ತಾವೊಬ್ಬ ಪ್ರತಿಭಾವಂತ ರೈಡರ್ ಎಂಬುದನ್ನು ಸಾಬೀತುಪಡಿಸಿದರು. ಪ್ರತಿ ಸೀಸನ್‌ನಲ್ಲಿಯೂ ಅತ್ಯುನ್ನತ ಪ್ರದರ್ಶನ ನೀಡುತ್ತಲೇ ಸಾಗಿದ್ದರು.

LEAVE A REPLY

Please enter your comment!
Please enter your name here