ಭೂಗತ ಪಾತಕಿ ಬನ್ನಂಜೆ ರಾಜಾನಿಗೆ ಜೀವಾವಧಿ ಶಿಕ್ಷೆ ಪ್ರಕರಣ: ಪರಿಣಾಮಕಾರಿ ವಕಾಲತ್ತು ಮಂಡಿಸಿದ ಪುತ್ತೂರಿನ ಶಿವಪ್ರಸಾದ್ ಆಳ್ವರಿಗೆ ಪೊಲೀಸ್ ಅಧಿಕಾರಿಗಳಿಂದ ಪ್ರಶಂಸಾ ಪತ್ರ

0

  • ರಾಜ್ಯದ ಪ್ರಥಮ ‘ಕೋಕಾ’ ನ್ಯಾಯಾಲಯದ ವಿಚಾರಣೆಗಾಗಿ ‘ಮೋಕಾ’ದ ಅಧ್ಯಯನ ಮಾಡಿದ್ದ ಶಿವಪ್ರಸಾದ್ ಆಳ್ವ

 

ಪುತ್ತೂರು: ಅಂಕೋಲಾದಲ್ಲಿ ಉದ್ಯಮಿಯಾಗಿದ್ದ ಬಿಜೆಪಿ ನಾಯಕ ಆರ್.ಎನ್.ನಾಯಕ್ ಹತ್ಯಾ ಪ್ರಕರಣದಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ ಮತ್ತು ಆತನ ಸಹಚರರಿಗೆ ಜೀವಾವಧಿ ಶಿಕ್ಷೆ ಕೊಡಿಸಲು ಪರಿಣಾಮಕಾರಿ ವಕಾಲತ್ತು ಮಂಡಿಸಿದ್ದ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿಯಾಗಿರುವ ಪುತ್ತೂರಿನ ಕೆ.ಶಿವಪ್ರಸಾದ್ ಆಳ್ವರವರಿಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ.

2013ರಲ್ಲಿ ನಡೆದಿದ್ದ ಆರ್.ಎನ್. ನಾಯ್ಕ್ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಹಫ್ತಾ ನೀಡಲು ನಿರಾಕರಿಸಿದಕ್ಕಾಗಿ ಭೂಗತ ಪಾತಕಿಯಾಗಿ ಗುರುತಿಸಿಕೊಂಡು ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಉಡುಪಿ ಜಿಲ್ಲೆಯ ಬನ್ನಂಜೆ ರಾಜಾ ಮತ್ತು ಆತನ ಸಹಚರರು ಈ ಕೊಲೆ ಕೃತ್ಯ ನಡೆಸಿರುವುದು ಬಯಲಾಗಿತ್ತು. 2014ರಲ್ಲಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿತ್ತು. ಬಳಿಕ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ(ಕೋಕಾ)ಯಡಿ ಪ್ರಕರಣ ದಾಖಲಿಸಲಾಗಿತ್ತು. ಕೊಲೆ, ಕೊಲೆ ಯತ್ನ, ಹಫ್ತಾ ವಸೂಲಿ, ಬೆದರಿಕೆ ಇತ್ಯಾದಿ ಅಪರಾಧ ಕೃತ್ಯ ಎಸಗಿರುವ ಆರೋಪ ಎದುರಿಸುತ್ತಿದ್ದ ಬನ್ನಂಜೆ ರಾಜಾನನ್ನು ನಕಲಿ ಪಾಸ್ಪೋರ್ಟ್ ಹೊಂದಿದ್ದ ಆರೋಪದಲ್ಲಿ ಮೊರೊಕ್ಕೋ ದೇಶದಲ್ಲಿ ಬಂಧಿಸಿ ಕರ್ನಾಟಕಕ್ಕೆ ಕರೆ ತರಲಾಗಿತ್ತು. ಬಳಿಕ ನಿರಂತರ ಏಳು ವರ್ಷ ವಿಚಾರಣೆ ನಡೆಸಲಾಗಿತ್ತು. ಬೆಳಗಾವಿಯ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ ನ್ಯಾಯಾಲಯ ಆರ್.ಎನ್.ನಾಯ್ಕ್ ಹತ್ಯಾ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಬನ್ನಂಜೆ ರಾಜಾ ಮತ್ತು ಆತನ ಸಹಚರರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ‘ಕೋಕಾ’ ಕಾಯ್ದೆಯಡಿ ವಿಚಾರಣೆ ನಡೆದ ಪ್ರಥಮ ಕೇಸ್ ಇದಾಗಿತ್ತು. ಈ‌ ಪ್ರಕರಣದಲ್ಲಿ‌ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಲು ಸರಕಾರ ಕೆ. ಶಿವಪ್ರಸಾದ್ ಆಳ್ವರನ್ನು ನೇಮಿಸಿತ್ತು. ಕೋಕಾ ಕಾಯ್ದೆ ಜಾರಿಯಾಗುವ ಮೊದಲು ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿದ್ದ ‘ಮೋಕಾ’ ಕಾಯ್ದೆಯ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದ ಶಿವಪ್ರಸಾದ್ ಆಳ್ವರವರು ಪರಿಣಾಮಕಾರಿ ವಾದ ಮಂಡಿಸಿದ್ದರು. ಸಮರ್ಥ ದಾಖಲೆಗಳೊಂದಿಗೆ ಶಿವಪ್ರಸಾದ್ ಆಳ್ವರವರು ವಾದ ಮಂಡಿಸಿರುವುದರಿಂದ ಕರ್ನಾಟಕದ ಪ್ರಥಮ ‘ಕೋಕಾ’ ಪ್ರಕರಣದಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ನಿಟ್ಟಿನಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿದ್ದ ಶಿವಪ್ರಸಾದ್ ಆಳ್ವರವರಿಗೆ ಕಾರವಾರದಲ್ಲಿ ನಡೆದ ಸಮಾರಂಭದಲ್ಲಿ ಎಡಿಜಿಪಿ ಪ್ರತಾಪ ರೆಡ್ಡಿಯವರು ಪ್ರಶಂಸಾ ಪತ್ರ ನೀಡಿ ಗೌರವಿಸಿದರು. ಐಜಿಪಿ ದೇವಜ್ಯೋತಿ ರೇ, ಎಸ್ಪಿ ಸುಮನಾ ಪನ್ನೇಕರ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಪುತ್ತೂರು ದರ್ಬೆ ಕಾವೇರಿಕಟ್ಟೆ ನಿವಾಸಿಯಾಗಿರುವ ಶಿವಪ್ರಸಾದ್ ಆಳ್ವರವರು ಪುತ್ತೂರು ಸಹಿತ ವಿವಿಧ ನ್ಯಾಯಾಲಯಗಳಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾಗಿ, ಅಭಿಯೋಜಕರಾಗಿ, ವಿಶೇಷ ಸರಕಾರಿ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿದ್ದು ಪ್ರಸ್ತುತ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕಾರವಾರ ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿಯಾಗಿದ್ದಾರೆ. ವಿಶೇಷ ಪ್ರಕರಣಗಳಲ್ಲಿ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಲು ಶಿವಪ್ರಸಾದ್ ಆಳ್ವರವರನ್ನು ಸರಕಾರ ನೇಮಿಸುತ್ತಿದೆ.

LEAVE A REPLY

Please enter your comment!
Please enter your name here