ಉಪ್ಪಿನಂಗಡಿ : ಪಾದಯಾತ್ರ ಅಭಿಯಾನ ಸಮಾಪನ

0

ಉಪ್ಪಿನಂಗಡಿ: ಲೋಕ ಕಲ್ಯಾಣಕ್ಕಾಗಿ, ಹಿಂದೂ ಧರ್ಮೋತ್ಥಾನಕ್ಕಾಗಿ ಕಳೆದ 5 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ವಿಶಾಖಪಟ್ಟಣದ ಶಾಂತಿ ಆಶ್ರಮದ ಸ್ವಾಮೀಜಿ ಶ್ರೀ ಲಕ್ಷ್ಮೀಪತಿ ಸ್ವಾಮೀಜಿಯವರ ಪಾದಯಾತ್ರಾ ಅಭಿಯಾನವು ಮಂಗಳವಾರದಂದು ಉಪ್ಪಿನಂಗಡಿಯಲ್ಲಿ ಸಮಾಪನಗೊಂಡಿತು.

2016 ನೇ ಇಸವಿ ನವೆಂಬರ್ ತಿಂಗಳಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಪ್ರಾರಂಭಗೊಂಡ ಈ ಪಾದಯಾತ್ರಾ ಅಭಿಯಾನದಲ್ಲಿ ದಕ್ಷಿಣ ಭಾರತದ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ, ಕರ್ನಾಟಕ ರಾಜ್ಯಗಳಲ್ಲಿ ಸಂಚರಿಸಿ ಉಪ್ಪಿನಂಗಡಿಯ ನೇತ್ರಾವತಿ- ಕುಮಾರಧಾರ ನದಿ ಸಂಗಮ ಸ್ಥಳದಲ್ಲಿ ಯಮಧರ್ಮ ರಾಜನಿಗೆ ಜಲಾಭಿಷೇಕವನ್ನು ನೆರವೇರಿಸಿ ಕಾಲ್ನಡಿಗೆ ಯಾತ್ರೆಯನ್ನು ಕೊನೆಗೊಳಿಸಿದರು.

ಪ್ರಕೃತಿಯು ದೇವನಿತ್ತ ಕೊಡುಗೆ, ಇಲ್ಲಿ ಎಲ್ಲರೂ ಸಮಾನರು. ಹಿಂದೂ ಧರ್ಮೀಯರಲ್ಲಿ ಅನುಷ್ಠಾನದಲ್ಲಿರುವ ಜಾತಿ ಪದ್ಧತಿಯನ್ನು ಮೊದಲು ನಿವಾರಿಸಬೇಕು. ದೇವನನ್ನು ಆರಾಧಿಸಲು ಯಾವುದೇ ಜಾತಿ – ಅಂತಸ್ತುಗಳ ಅಗತ್ಯವಿಲ್ಲ. ನಿಷ್ಕಲ್ಮಶ ಭಾವದಿಂದ ಭಗವಂತನನ್ನು ಸ್ಮರಿಸುವುದು, ಪ್ರಾರ್ಥಿಸುವುದೇ ಭಗವಂತನನ್ನು ಒಲಿಸಿಕೊಳ್ಳುವ ಸರಳ ವಿಧಾನ ಎಂದು ಅವರು ತಿಳಿಸಿದರು. ಪಾದಯಾತ್ರೆಯ ವೇಳೆ ಸಮಾಜದ ಎಲ್ಲಾ ವರ್ಗದ ಬಂಧುಗಳ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ್ದೇನೆ. ಎಲ್ಲೆಡೆಯಲ್ಲೂ ಉತ್ತಮ ಸ್ವಾಗತ ದೊರಕಿದೆ. ಯಾತ್ರೆಯುದ್ದಕ್ಕೂ ದೇವರು ನನ್ನ ಆರೋಗ್ಯವನ್ನು ರಕ್ಷಿಸಿ ಕಾಪಾಡಿದ್ದಾನೆ ಎಂದರು.

ವಿಜಯವಾಡದ ರಾವಲಪಾಲಂ ಎಂಬಲ್ಲಿ ಹಾಗೂ ಕರೀಂ ನಗರದ ಒಂದು ಗಲ್ಲಿಯಲ್ಲಿ ಮುಸ್ಲಿಂ ಸಮುದಾಯದ ಕೆಲ ಯುವಕರ ಅಡ್ಡಿ ಆತಂಕ ಎದುರಾಗಿರುವುದು ಬಿಟ್ಟರೆ ಎಲ್ಲೆಡೆ ಎಲ್ಲಾ ಸಮುದಾಯದ ಎಲ್ಲಾ ವರ್ಗದ ಜನರಿಂದ ಉತ್ತಮ ಸ್ವಾಗತ ವ್ಯಕ್ತವಾಗಿತ್ತು.

ಯಮಧರ್ಮನ ಆರಾಧಕರು :

ಪ್ರಸಕ್ತ 75ರ ಹರೆಯದ ಲಕ್ಷ್ಮೀಪತಿ ಸ್ವಾಮೀಜಿಯವರ ವೈಶಿಷ್ಯವೆಂದರೆ ಇವರು ಪ್ರಧಾನವಾಗಿ ಪೂಜಿಸುವ ದೇವರು ಯಮಧರ್ಮರಾಯ ಯಮಧರ್ಮ ರಾಯನ ಚಿತ್ರವನ್ನೂ ತನ್ನ ದೇಹದಲ್ಲಿ ಟ್ಯಾಟೂ ಹಚ್ಚಿಸಿಕೊಂಡಿರುವ ಇವರು ಆತನನ್ನೇ ಸದಾ ಕಾಲ ಸ್ತುತಿಸಿ ಪೂಜಿಸುತ್ತಾರೆ. ಇವರು ಒಂದು ಸಾಮಾನ್ಯ ಮೊಬೈಲ್, ಒಂದು ಚೀಲ, ಮತ್ತು ತಾವು ಧರಿಸುವ ಕಾವಿ ವಸ್ತ್ರ ವನ್ನು ಮಾತ್ರವೇ ಹೊಂದಿದ್ದು, ಎಲ್ಲಿ ಭಿಕ್ಷೆ ದೊರೆಯುತ್ತದೆಯೋ ಅದಷ್ಟೇ ಆ ದಿನದ ಅವರ ಸಂಪತ್ತಾಗಿರುತ್ತದೆ. ಎಲ್ಲಿಯಾದರೂ ಅವರ ಮೇಲಿನ ಪ್ರೀತಿ ಗೌರವದಿಂದ ಹಣ್ಣು ಹಂಪಲುಗಳನ್ನು ಯಥೇಚ್ಚವಾಗಿ ನೀಡಿದರೆ ಅದನ್ನು ಪರಿಸರದ ಜನತೆಗೆ ಹಂಚಿ ಭಾರವ ಕಳೆದು ಮುಂದಡಿ ಇಡುತ್ತಿದ್ದರು. ಪಾದಯಾತ್ರೆಯಿಂದ ಏನನ್ನು ಗಳಿಸಿದ್ದೇನೋ ಅದನ್ನು ಸಮಾಜದ ಉನ್ನತಿಗೆ ಬಳಸುವೆನೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಉಪ್ಪಿನಂಗಡಿಗೆ ಆಗಮಿಸಿದ ಸಂಧರ್ಭದಲ್ಲಿ ಅವರನ್ನು ಸಾಮಾಜಿಕ ಮುಂದಾಳುಗಳಾದ ಸುಧಾಕರ ಶೆಟ್ಟಿ, ಗಂಗಾಧರ ಟೈಲರ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here