ಮೇ 14-18: ಹಣಿಯೂರು ಗುತ್ತು ಪರಿವಾರ ಬಂಟರ ತರವಾಡು ಮನೆಯ ದೈವಗಳ ಪುನರ್‌ಪ್ರತಿಷ್ಠೆ, ನೂತನ ದೈವಸ್ಥಾನ ಮತ್ತು ತರವಾಡು ಮನೆಯ ಗೃಹಪ್ರವೇಶ, ಧರ್ಮನೇಮೋತ್ಸವ

0

ಪುತ್ತೂರು: ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಹಣಿಯೂರು ಗುತ್ತು ಪರಿವಾರ ಬಂಟರ ತರವಾಡು ದೈವಸ್ಥಾನದ ಶ್ರೀ ಧೂಮಾವತಿ-ಬಂಟ, ವರ್ಣರ ಪಂಜುರ್ಲಿ, ಕಲ್ಲುಟಿ ಕೊರತಿ, ಜಾವತೆ, ಗುಳಿಗೆ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಮತ್ತು ನೂತನ ದೈವಸ್ಥಾನ ಮತ್ತು ತರವಾಡು ಮನೆಯ ಗೃಹಪ್ರವೇಶ ಹಾಗೂ ಶ್ರೀ ದೈವಗಳ ಧರ್ಮ ನೇಮೋತ್ಸವವು ಮೇ. 14  ರಿಂದ ಮೇ. 18ರವರೆಗೆ ವೇದಮೂರ್ತಿ ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಲಿದೆ ಎಂದು ಹಣಿಯೂರು ಫ್ಯಾಮಿಲಿ ಡೈಟಿಸ್ ಟ್ರಸ್ಟ್‌ನ ಅಧ್ಯಕ್ಷ ಡಾ.ಕೆ.ಸಿ. ನಾಯ್ಕ್ ಹೇಳಿದ್ದಾರೆ.


ಎ.೨೦ರಂದು ಸುದ್ದಿ ಸ್ಟುಡಿಯೋದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿ, ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.
ಪುರಾತನ ಇತಿಹಾಸವುಳ್ಳ ಹಣಿಯೂರು ಗುತ್ತಿನ ಮನೆ ಮತ್ತು ದೈವಸ್ಥಾನ ನವೀಕರಣಗೊಳ್ಳಬೇಕೆನ್ನುವುದು ನಮ್ಮೆಲ್ಲರ ಬಹಳ ವರ್ಷದ ಆಕಾಂಕ್ಷೆಯಾಗಿದ್ದು, ಈಗ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿದೆ. ಕುಟುಂಬಸ್ಥರು ಸುಮಾರು ೨ ಎಕರೆ ಜಾಗವನ್ನು ದಾನವಾಗಿ ನೀಡಿದ್ದಾರೆ. ಸುಮಾರು ಒಂದೂಕಾಲು ಕೋಟಿ ರೂ. ವೆಚ್ಚದಲ್ಲಿ ಗುತ್ತಿನಮನೆ, ದೈವಸ್ಥಾನ ಮತ್ತು ಪಾಕಶಾಲೆ, ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಸಭಾಭವನ ನಿರ್ಮಾಣಗೊಂಡಿದೆ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.

ಪ್ರಮುಖರಾದ ಸತೀಶ್ ನಾಯ್ಕ್ ಮಾತನಾಡಿ, ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಮೇ 14ರಂದು ಬೆಳಗ್ಗೆ 7 ಗಂಟೆಗೆ ತಂತಿಗಳ ಆಗಮನ, ಸಾಮೂಹಿಕ ಪ್ರಾರ್ಥನೆ, ಸ್ಥಳ ಶುದ್ಧಿ ಮತ್ತು ದೈವಗಳ ಭಂಡಾರಗಳನ್ನು ನೂತನ ತರವಾಡು ಮನೆಗೆ ತರುವ ಕಾರ್ಯಕ್ರಮ ನಡೆಯುತ್ತದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆದು ಅಪರಾಹ್ನ 3  ಗಂಟೆಗೆ ಹೊರಕಾಣಿಕೆ ಕಬಕ ಮಹಾದೇವಿ ದೇವಸ್ಥಾನದಿಂದ ಮೆರವಣಿಗೆ ಹೊರಡಲಿದೆ. ಸಂಜೆ ೫ ಗಂಟೆಗೆ ಶ್ರೀ ಮಹಾದೇವಿ ಭಜನಾ ಮಂಡಳಿ ಅರ್ಕ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ ೫.೩೦ರಿಂದ ಖನನಾದಿ ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತುಹೋಮ, ರಾಕ್ಷೆಘ್ನ ಹೋಮ, ವಾಸ್ತು ಬಲಿ, ನೂತನ ಆಯುಧಗಳ ಜಲಾಧಿವಾಸ ಕ್ರಿಯೆ, ಧಾನ್ಯಾಧಿವಾಸ ಕ್ರಿಯೆ, ಅಸ್ತ್ರ ಕಲಶ ಪೂಜೆ, ಅಸ್ತ್ರಕಲಶಾಧಿವಾಸ ಕ್ರಿಯೆಗಳು, ಪ್ರಾಯಶ್ಚಿತ್ತ, ಕಲಶಾಭಿಷೇಕ ನಡೆದು ರಾತ್ರಿ ೯ರಿಂದ ಅನ್ನಸಂತರ್ಪಣೆ ನಡೆಯಲಿದೆ.

ಮೇ 15  ಭಾನುವಾರ ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ, ನಾಗತಂಬಿಲ, ಚಂಡಿಕಾಹೋಮ, ಹರಿಸೇವೆ ನಡೆಯಲಿದೆ. ಬೆಳಗ್ಗೆ 9.52 ರಿಂದ 10:22 ಬೆಳಗ್ಗಿನ ಮಿಥುನ ಲಗ್ನ ಸುಮುಹೂರ್ತಕ್ಕೆ ದೈವಗಳ ಪುನರ್ ಪ್ರತಿಷ್ಠೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೦೪ ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಸಂಜೀವ ಮಠಂದೂರು ವಹಿಸಲಿದ್ದಾರೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮೀನುಗಾರಿಕಾ, ಬಂದರು, ಒಳನಾಡು ಸಚಿವ ಎಸ್. ಅಂಗಾರ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೊಡಿಪ್ಪಾಡಿ ಜನಾರ್ಧನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ಧನ ಎರ್ಕಡಿತ್ತಾಯ, ಪರಿವಾರ ಬಂಟರ ಸಂಘದ ಅಧ್ಯಕ್ಷ ಎ.ಸಂತೋಷ್  ಕುಮಾರ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮೇ 15ರಂದು ಸಂಜೆ 7 ಗಂಟೆಗೆ ವರ್ಣರ ಪಂಜುರ್ಲಿ ಮತ್ತು ಜಾವತೆ ದೈವಗಳ ಭಂಡಾರ ತೆಗೆಯುವುದು ಹಾಗೂ ನೇಮೋತ್ಸವ ನಡೆದು ರಾತ್ರಿ 9ಕ್ಕೆ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆಯಾಗಲಿದೆ. ಮೇ 16ರಂದು ಸೋಮವಾರ ಸಂಜೆ ೪ಗಂಟೆಗೆ ಪಂಜುರ್ಲಿ ಕಲ್ಲುರ್ಟಿ, ಕೊರತಿ ದೈವಗಳ ಭಂಡಾರ ತೆಗೆಯುವುದು ಮತ್ತು ನೇಮೋತ್ಸವ ನಡೆಯಲಿದೆ. ರಾತ್ರಿ 9ರಿಂದ ಅನ್ನಸಂತರ್ಪಣೆಯಾಗಲಿದೆ. ಮೇ 17ರಂದು ಮಂಗಳವಾರ ಸಂಜೆ 6 ಗಂಟೆಗೆ ಶ್ರೀ ಧರ್ಮ ದೈವ ಧೂಮಾವತಿ ಬಂಟ ದೈವಗಳ ಭಂಡಾರ ತೆಗೆಯುವುದು ಹಾಗೂ ನೇಮೋತ್ಸವ ಮತ್ತು ಗುಳಿಗ ನೇಮೋತ್ಸವ ನಡೆಯಲಿದೆ. ರಾತ್ರಿ ೯ರಿಂದ ಅನ್ನಸಂತರ್ಪಣೆಯಾಗಲಿದೆ. ಮೇ 18ರಂದು ಬುಧವಾರ ಪ್ರಾತಃಕಾಲ ದೈವಗಳಿಗೆ ಕುರಿತಂಬಿಲ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕುಟುಂಬದ ಹಿರಿಯರಾದ ಶ್ರೀನಿವಾಸ ನಾಯ್ಕ್, ಪುರುಷೋತ್ತಮ ನಾಯ್ಕ್ ಹಣಿಯೂರು, ಅಶೋಕ್ ನಾಯ್ಕ್ ಹಣಿಯೂರು, ಕೀರ್ತನ್ ನಾಯ್ಕ್ ಹಣಿಯೂರು, ಸುಕೇಶ್ ನಾಯ್ಕ್ ಹಣಿಯೂರು ಉಪಸ್ಥಿತರಿದ್ದರು. 

ದಾನಿಗಳ ಕೊಡುಗೆ ಅಪಾರ

ಹಣಿಯೂರು ಗುತ್ತು ಪರಿವಾರ ಬಂಟರ ತರವಾಡು ದೈವಸ್ಥಾನದ ನಿರ್ಮಾಣದಲ್ಲಿ ದಾನಿಗಳ ಕೊಡುಗೆ ಮಹತ್ವದ್ದಾಗಿದೆ. ಮೈಸೂರಿನ ರಾಧಾಕೃಷ್ಣ ನಾಯ್ಕ್, ಕೊಡಿಪ್ಪಾಡಿಯ ಶ್ರೀನಿವಾಸ ನಾಯ್ಕ್, ಅಶೋಕ್ ನಾಯ್ಕ್, ಪುರುಷೋತ್ತಮ ನಾಯ್ಕ್ ಮತ್ತು ಹಣಿಯೂರು ಕುಟುಂಬದ ಯಜಮಾನರಾದ ಬಾಲಕೃಷ್ಣ ನಾಯ್ಕ್ ರವರು ಜಾಗವನ್ನು ಉಚಿತವಾಗಿ ಟ್ರಸ್ಟ್‌ಗೆ ದಾನ ಮಾಡಿದ್ದಾರೆ. ಸತೀಶ್ ನಾಯ್ಕ್ ಅವರು ತರವಾಡು ಮನೆ, ದೈವಸ್ಥಾನ ನಿರ್ಮಾಣಕ್ಕೆ ಅವಶ್ಯಕವಾಗಿದ್ದ ಮರಮುಟ್ಟುಗಳ ಪೈಕಿ ೬೦ಶೇ. ಮರಮುಟ್ಟನ್ನು ಒದಗಿಸಿದ್ದಾರೆ ಎಂದು ಕೆ.ಸಿ. ನಾಯ್ಕ್ ಅವರು ದಾನಿಗಳ ಸಹಕಾರಕ್ಕೆ ಕೃತಜ್ಞತೆಗಳನ್ನು ಅರ್ಪಿಸಿದರು.

LEAVE A REPLY

Please enter your comment!
Please enter your name here