ತಾ|ಸರಕಾರಿ ನೌಕರರ ಸಂಘದಿಂದ ರಾಜ್ಯ ಸರಕಾರಿ ನೌಕರರ ದಿನಾಚರಣೆ, ಸನ್ಮಾನ

0

  • ಜನರಿಗೆ ಪ್ರಾಮಾಣಿಕ ಸೇವೆ ಮಾಡುವವನೇ ನಿಜವಾದ ಸರ್ಕಾರಿ ನೌಕರ-ಗಿರೀಶ್ ನಂದನ್

ಪುತ್ತೂರು: ಸರಕಾರಿ ನೌಕರರಿಗೆ ಸಾರ್ವಜನಿಕ ಸೇವೆ ಮಾಡಲು ಸಿಕ್ಕಿರುವುದು ಅದೃಷ್ಟವೇ ಸರಿ. ಯಾರು ಜನರಿಗೆ ಪ್ರಾಮಾಣಿಕ ಸೇವೆ ಮಾಡುತ್ತಾರೋ ಅವರೇ ನಿಜವಾದ ಸರ್ಕಾರಿ ನೌಕರರನಾಗಿರುತ್ತಾನೆ ಎಂದು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಗಿರೀಶ್ ನಂದನ್‌ರವರು ಹೇಳಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ಪುತ್ತೂರು ಶಾಖೆಯ ವತಿಯಿಂದ ಎ.21 ರಂದು ಸಂಜೆ ಸರಕಾರಿ ನೌಕರರ ಸಂಘದ ಸಮುದಾಯ ಭವನದ ಮೇರಿ ದೇವಾಸಿಯ ಸಭಾಂಗಣದಲ್ಲಿ ಜರಗಿದ ರಾಜ್ಯ ಸರಕಾರಿ ನೌಕರರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸನ್ಮಾನಿತರನ್ನು ಸನ್ಮಾನಿಸಿ ಮಾತನಾಡಿದರು. ಸರಕಾರಿ ಸೇವೆಯಲ್ಲಿ ಸೇವೆ ಮಾಡಲು ಸಾಮರ್ಥ್ಯವಿದ್ದವರು ಅವನ್ನು ಉತ್ತಮ ರೀತಿಯಲ್ಲಿ ಬಳಸುವುದು ಮುಖ್ಯವಾಗುತ್ತದೆ. ಸರಕಾರಿ ಕಛೇರಿಗೆ ಆಗಮಿಸುವ ಸಾರ್ವಜನಿಕರು ಅವರು ಶ್ರೀಮಂತರಾಗಲಿ ಅಥವಾ ಬಡವರಾಗಲಿ, ಅವರನ್ನು ಗೌರವದಿಂದ ಕಾಣುವುದು ಅತೀ ಮುಖ್ಯ. ಸರಕಾರಿ ನೌಕರರು ತಮ್ಮ ಕರ್ತವ್ಯದ ಅವಧಿಯಲ್ಲಿ ಸಮಯಪ್ರಜ್ಞೆ, ಸಮರ್ಪಣಾಭಾವ, ಬದ್ಧತೆ ಹಾಗೂ ಶಿಸ್ತು ಮುಖ್ಯ ಎಂದರು.

ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರಕಾರಿ ನೌಕರರು ಹಾಗೂ ಜನಪ್ರತಿನಿಧಿಗಳ ನಡುವಿನ ಜನಸ್ನೇಹಿ ಸಂಬಂಧಗಳು ಬಹಳ ಹತ್ತಿರದಲ್ಲಿರಬೇಕು. ಸಾರ್ವಜನಿಕರನ್ನು ಬಹಳ ಗೌರವದಿಂದ ಕಾಣುವುದು ಸರಕಾರಿ ನೌಕರರ ಹಾಗೂ ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದೆ. ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಅವುಗಳಿಗೆ ಪೂರಕವಾಗಿ ಸ್ಪಂದನೆ ಕೊಟ್ಟಾಗ ಜನಸ್ನೇಹಿ ಆಡಳಿತ ನಡೆಸಲು ಮತ್ತು ಸಾರ್ವಜನಿಕರ ಪ್ರೀತಿ, ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ. ಸರಕಾರಿ ನೌಕರರು ತಮ್ಮ ಮೇಲಾಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಮೆಚ್ಚಿಸಲು ಕೆಲಸ ಮಾಡದೆ ಆತ್ಮಪೂರ್ವಕವಾಗಿ ಕೆಲಸ ಮಾಡಬೇಕು. ಪುತ್ತೂರಿನ ಸರಕಾರಿ ನೌಕರರು ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ಅಭಿನಂದನೀಯ ಎಂದರು.

ಅಧ್ಯಕ್ಷತೆ ವಹಿಸಿದ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯರವರು ಮಾತನಾಡಿ, ಕೇಂದ್ರ ಸರಕಾರಿ ನೌಕರರ ವೇತನದಂತೆ ರಾಜ್ಯ ಸರಕಾರಿ ನೌಕರರಿಗೆ ಸಿಗುವಂತೆ ಮಾಡಲು ವೇತನ ಆಯೋಗವನ್ನು ರಚನೆ ಮಾಡಲಿದೆ ಎಂದು ಮುಖ್ಯಮಂತ್ರಿಗಳು ಈಗಾಗಲೇ ಆದೇಶ ಹೊರಡಿಸಿರುವುದು ಸರಕಾರಿ ನೌಕರರಿಗೆ ಆಶಾದಾಯಕವಾಗಿದೆ. ಅದರಂತೆ ರಾಜ್ಯ ಸರಕಾರಿ ನೌಕರರ ಸಂಘದಿಂದ ಕೇಂದ್ರ ಮಾದರಿ ವೇತನ ಸಿಗುವಂತೆ ಹಾಗೂ ಎನ್‌ಪಿಎಸ್ ಪಿಂಚಣಿ ಯೋಜನೆ ರದ್ಧತಿ ಬಗ್ಗೆ ಹೋರಾಟ ಜಾರಿಯಲ್ಲಿರಿಸುವುದು ಎಂದು ರಾಜ್ಯಾಧ್ಯಕ್ಷರು ತಿಳಿಸಿರುತ್ತಾರೆ ಎಂದು ಹೇಳಿ ರಾಜ್ಯ ಸರಕಾರಿ ನೌಕರರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಕ್ರೀಡಾಕೂಟದಲ್ಲಿ ನಮಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಹಾಗೂ ದೈಹಿಕ ಶಿಕ್ಷಣ ಪರೀವೀಕ್ಷಣಾಧಿಕಾರಿಯವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿರವರು ಮಾತನಾಡಿ, ತಾಲೂಕು ಸರಕಾರಿ ನೌಕರರ ಸಂಘದಿಂದ ಎಲ್ಲಾ ಇಲಾಖೆಯ ಸರಕಾರಿ ನೌಕರರನ್ನು ಒಗ್ಗೂಡಿಸಿ ವರ್ಷವಿಡೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಬೇಕು ಎಂದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡರವರು ಮಾತನಾಡಿ, ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಸರಕಾರಿ ನೌಕರರಿಗೆ ಕ್ರೀಡಾಕೂಟ ಆಯೋಜನೆ ಮಾಡಿರುವುದು ಶ್ಲಾಘನೀಯ. ಇದು ನಿರಂತರ ಮುಂದುವರೆಯಲಿ ಎಂದರು.

ಬಹುಮಾನ ವಿತರಣೆ:
ರಾಜ್ಯ ಸರಕಾರಿ ನೌಕರರ ದಿನಾಚರಣೆ ಪ್ರಯುಕ್ತ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಜರಗಿದ ಪುತ್ತೂರು ತಾಲೂಕು ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ-೨೦೨೧-೨೨ ಇದರ ವಿವಿಧ ಸ್ಪರ್ಧಾ ವಿಭಾಗಗಳಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜರಗಿದ ಕ್ರೀಡಾಕೂಟದಲ್ಲಿ ವಿಜೇತರಾದ ಸರಕಾರಿ ನೌಕರರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನ ವಿಜೇತರ ಪಟ್ಟಿಯನ್ನು ಸ್ಮಿತಾಶ್ರೀ, ಇಂದಿರಾ ಹಾಗೂ ಮಲ್ಲಿಕ್ ಕುಮಾರ್‌ರವರು ಓದಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ತಾಲೂಕು ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್ ಬಿ, ಕೋಶಾಧಿಕಾರಿ ನಾಗೇಶ್ ಕೆ., ಉಪಾಧ್ಯಕ್ಷರಾದ ರಾಮಚಂದ್ರ ಭಟ್ ಹಾಗೂ ರಾಮಚಂದ್ರರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನ್ಯಾಯಾಂಗ ಇಲಾಖೆಯ ಉಮೇಶ್ ಪ್ರಾರ್ಥಿಸಿದರು. ತಾಲೂಕು ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ರಹಾಂ ಎಸ್.ಎ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಅಶ್ರಫ್ ವಂದಿಸಿದರು. ಚಂದ್ರ ನಾಯ್ಕ, ಸಂದೀಪ್, ಸ್ಮಿತಾಶ್ರೀ, ವಿಜಯಕುಮಾರ್ ಕೆ, ಕೃಷ್ಣಪ್ರಸಾದ್ ಭಂಡಾರಿ, ಮಲ್ಲಿಕ್ ಕುಮಾರ್, ಹೊನ್ನಪ್ಪ ಗೌಡರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ವಿನೋದ್ ಕುಮಾರ್ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು.

ಸರಕಾರಿ ಸೇವೆಗೆ 8+8+8 ಸುಗಮ ಸೂತ್ರ…
ಸರಕಾರಿ ನೌಕರರ ಜವಾಬ್ದಾರಿಗಳು ಮತ್ತು ಸವಾಲುಗಳು ಈ ಕುರಿತು ವಿಶೇಷ ಉಪನ್ಯಾಸ ನೀಡಿದ ವಿಠಲ ನಾಯಕ್ ಬೋಳಂತಿಮೊಗರುರವರು ಮಾತನಾಡಿ, ಸರಕಾರಿ ನೌಕರರಲ್ಲಿ ಪಾಪ-ಭೀತಿ, ದೈವ-ಪ್ರೀತಿ, ಸಂಗ-ನೀತಿ ಎಂಬ ಭಾವನೆ ಹೃದಯ ಹಾಗೂ ಮನಸ್ಸಿನಲ್ಲಿದ್ದರೆ ಖಂಡಿತಾ ತಾನು ನಿರ್ವಹಿಸುವ ಸೇವೆಯಲ್ಲಿ ಯಶಸ್ವಿಯಾಗುತ್ತಾನೆ. ಸರಕಾರಿ ನೌಕರರಲ್ಲಿ ಮೊದಲು ‘ಮನೋಮಾಲಿನ’ವನ್ನು ನಿಯಂತ್ರಣದಲ್ಲಿಟ್ಟುಕೊಂಡಾಗ ಯಾವುದೇ ಧಕ್ಕೆ ಬರೋದಿಲ್ಲ. ಉನ್ನತ ಹುದ್ದೆಯಲ್ಲಿರುವ ಸರಕಾರಿ ನೌಕರರು ಸೇವೆ ನಿರ್ವಹಿಸುವ ಸಂದರ್ಭದಲ್ಲಿ ‘ಪರಿಚಯ’ ಎಂಬ ಪೆಡಂಭೂತ ಅಡ್ಡಿ ಮಾಡದೆ, ಕೆಲಸದ ವಿಷಯದಲ್ಲಿ ಯಾವುದೇ ರಾಜಿ, ಹೊಂದಾಣಿಕೆ ಮಾಡಿಕೊಳ್ಳದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವಂತಾಗಬೇಕು. ಸೇವಾ ಸಂದರ್ಭದಲ್ಲಿ ಸರಕಾರಿ ನೌಕರರು ೮+೮+೮ ಸೂತ್ರ ಅಂದರೆ ಎಂಟು ಗಂಟೆ ನಿದ್ರೆ, ಎಂಟು ಗಂಟೆ ಕೆಲಸ, ಉಳಿದ ಎಂಟು ಗಂಟೆ ಕುಟುಂಬ, ಸ್ನೇಹಿತ, ವಿಶ್ವಾಸ, ಸೋಲು, ಸೇವೆ, ಆರೋಗ್ಯ, ಹೈಜಿನ್, ಹವ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಜೊತೆಗೆ ಉದ್ಯೋಗದಲ್ಲಿ ಪರಸ್ಪರ ಹೋಲಿಕೆ ಹಾಗೂ ಸ್ಪರ್ಧೆಯನ್ನು ದೂರವಿಡಿ ಎಂದು ಹಾಸ್ಯದ ಧಾಟಿಯಲ್ಲಿ ವಿವರಿಸಿದರು.

ಸನ್ಮಾನ..
ಕಾರ್ಯಕ್ರಮದಲ್ಲಿ ಮುಕ್ರಂಪಾಡಿ ಆನಂದಾಶ್ರಮದ ಮುಖ್ಯಸ್ಥೆ ಡಾ.ಗೌರಿ ಪೈ, ಇತ್ತೀಚೆಗೆ ನಿವೃತ್ತರಾದ ಪುತ್ತೂರು ಸಾರ್ವಜನಿಕ ಆಸ್ಪತ್ರೆಯ ಹಿರಿಯ ವಾಹನ ಚಾಲಕ ಸೀತಾರಾಮ, ಕುಂದಾಪುರ ಉಪ ವಲಯ ಅರಣ್ಯಾಧಿಕಾರಿಯಾಗಿ ನೇಮಕಗೊಂಡ ಕೆಪಿಎಸ್‌ಸಿ ಎಸಿಎಫ್ ಆಗಿರುವ ಕು|ಹಸ್ತಾ ಶೆಟ್ಟಿ, ಹಾಗೂ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರಾದ ಆರ್ಯಾಪು ಗ್ರಾಮ ಪಂಚಾಯತ್‌ನ ಪಿಡಿಒ ನಾಗೇಶ್‌ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಕವಿತಾ, ಜ್ಯುಲಿಯಾನಾ ಮೋರಸ್, ಚಂದ್ರ ನಾಯ್ಕ, ರವಿಚಂದ್ರರವರು ಓದಿದರು. ಸನ್ಮಾನಿತರ ಪರವಾಗಿ ಪಿಡಿಒ ನಾಗೇಶ್‌ರವರು ಅನಿಸಿಕೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here