ನೆಲ್ಯಾಡಿ: ಸಂತಜಾರ್ಜ್ ವಿದ್ಯಾಸಂಸ್ಥೆಗಳ ಪ್ರಾರಂಭೋತ್ಸವ

0

 

ನೆಲ್ಯಾಡಿ: ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಗಳ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2022-23ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಮೇ.16ರಂದು ನಡೆಯಿತು.

 


೮ ಮತ್ತು ೯ನೇ ತರಗತಿಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಮೆರವಣಿಗೆಯ ಮೂಲಕ ಬರಮಾಡಿಕೊಂಡು ವಿದ್ಯಾಸಂಸ್ಥೆಗೆ ಸ್ವಾಗತಿಸಲಾಯಿತು. ಸಂತಜಾರ್ಜ್ ವಿದ್ಯಾಸಂಸ್ಥೆಗಳ ಸಂಚಾಲಕ ಅಬ್ರಹಾಂ ವರ್ಗೀಸ್‌ರವರು ಪುಷ್ಪಗುಚ್ಛ ನೀಡಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅಬ್ರಹಾಂ ವರ್ಗೀಸ್‌ರವರು, ‘ಜಗದ ಜನಕ ನಮಗೆ ಬೆಳಕ ತೋರು ಕರುಣಿಯೇ ” ಎಂಬ ಶಾಲಾ ಪ್ರಾರ್ಥನೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ವಿದ್ಯಾರ್ಥಿಗಳು ಈ ವಿದ್ಯಾಸಂಸ್ಥೆಯಲ್ಲಿ ಯಾವುದೇ ಆತಂಕ ಇಲ್ಲದೆ ನಿರ್ಭಯವಾಗಿ ಅಧ್ಯಾಪಕ ವೃಂದದ ಜೊತೆ ಪ್ರೀತಿಯಿಂದ ಕಲೆತು ವಿದ್ಯಾರ್ಜನೆ ಮಾಡುವ ಮೂಲಕ ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಶಾಲೆ ಬೆಳೆದು ಬಂದ ಇತಿಹಾಸವನ್ನು ಸಂಕ್ಷಿಪ್ತವಾಗಿ ವಿವರಿಸಿದ ಅವರು ವಿದ್ಯಾರ್ಥಿಗಳು ಉತ್ತಮವಾದ ನಡತೆಯನ್ನು ರೂಢಿಸಿಕೊಳ್ಳಬೇಕು ಮತ್ತು ಯಾವುದೇ ಕಾರಣಕ್ಕೂ ಕೆಟ್ಟ ಶಬ್ದಗಳನ್ನು ಬಳಸಬಾರದು. ಶಾಲೆ ಎಂಬುದು ವಿದ್ಯಾಮಂದಿರ, ಇಲ್ಲಿ ಮಕ್ಕಳು ದೇವರ ವಿಗ್ರಹಗಳು, ಅಧ್ಯಾಪಕರೇ ಇಲ್ಲಿ ಪೂಜಾರಿಗಳು. ಸುಂದರವಾದ ಗುರು-ಶಿಷ್ಯ ಸಂಬಂಧ ಇಲ್ಲಿ ಮೂಡಿ ಬರಬೇಕು ಎಂದು ಅವರು ಹೇಳಿದರು.

ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಏಲಿಯಾಸ್ ಎಂ.ಕೆ., ರವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯಗುರು ತೋಮಸ್ ಎಂ.ಐ. ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಗುರು ಹರಿಪ್ರಸಾದ್ ಕೆ., ರವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಸಂತಜಾರ್ಜ್ ವಿದ್ಯಾಸಂಸ್ಥೆಗಳ ಅಧ್ಯಾಪಕ ವೃಂದ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here