ಹಿರೇಬಂಡಾಡಿ: ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

0

  • ಬೇಡಿಕೆ ಈಡೇರದಿದ್ದಲ್ಲಿ ಶಾಸಕರ ಸ್ವಗ್ರಾಮದಲ್ಲಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಉಪ್ಪಿನಂಗಡಿ: ತೀರ ಹದಗೆಟ್ಟು ಜನ ಸಂಚಾರ, ವಾಹನ ಸಂಚಾರಕ್ಕೆ ಅಯೋಗ್ಯವಾಗಿರುವ ರಸ್ತೆಯನ್ನು ಶೀಘ್ರವೇ ದುರಸ್ತಿ ಪಡಿಸಿಕೊಡಬೇಕೆಂದು ಆಗ್ರಹಿಸಿ ಸ್ತ್ರೀ ಶಕ್ತಿ ಸಂಘಟನೆಯ ಸದಸ್ಯರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ಶಾಸಕ ಸಂಜೀವ ಮಠಂದೂರು ಅವರ ಸ್ವಗ್ರಾಮ ಹಿರೇಬಂಡಾಡಿಯಲ್ಲಿ ಮೇ.17ರಂದು ನಡೆದಿದ್ದು, ಮುಂದಿನ ಚುನಾವಣೆಯ ಮೊದಲು ಹದಗೆಟ್ಟಿರುವ ಮುರದಮೇಲು- ಶ್ರೀ ಷಣ್ಮುಖ ದೇವಾಲಯ ರಸ್ತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಮುಂಬರುವ ಚುನಾವಣೆಯನ್ನು ಈ ಭಾಗದವರು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.

 


ಹಿರೇಬಂಡಾಡಿ ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಿದ ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಹಾಗೂ ಸ್ಥಳೀಯರು, ಮುರದಮೇಲು – ಶ್ರೀ ಷಣ್ಮುಖ ದೇವಸ್ಥಾನ ರಸ್ತೆಯು ತೀರಾ ಹದಗೆಟ್ಟಿದ್ದು, ಈಗ ಬಂದಿರುವ ಮಳೆಗೆ ಸಂಪೂರ್ಣ ಕೆಸರುಮಯವಾಗಿದೆ. ಇದರಿಂದ ನಡೆದುಕೊಂಡು ಹೋಗದ ಸ್ಥಿತಿ ಇಲ್ಲಿದ್ದು, ಇದರಿಂದ ಮಕ್ಕಳಿಗೆ ಶಾಲೆಗೆ ಹೋಗಲಿಕ್ಕೂ ಸಮಸ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 


ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೀರ್ತಿ ಸ್ತ್ರೀ ಶಕ್ತಿ ಸಂಘದ ಸದಸ್ಯೆ ರಮ್ಯಜ್ಯೋತಿ, ಮಳೆ ಬಂದ ಬಳಿಕ ಈ ರಸ್ತೆ ಸಂಪೂರ್ಣ ಕೆಸರು ಮಯವಾಗಿದ್ದು, ನಡೆದುಕೊಂಡು ಹೋಗದಂತಹ ಪರಿಸ್ಥಿತಿ ಇದೆ. ಇಲ್ಲಿ ವಾಹನಗಳು ಜಾರುತ್ತಿವೆ. ಇದನ್ನು ಸರಿಪಡಿಸಿಕೊಡಿ ಎಂದು ಮನವಿ ಮಾಡಿದರೂ, ಆಡಳಿತಗಾರರಿಂದ ಸರಿಯಾದ ಸ್ಪಂದನೆ ದೊರಕುತ್ತಿಲ್ಲ ಎಂದರು.

ಸ್ಥಳೀಯರಾದ ಚೆನ್ನಕೇಶವ ಕನ್ಯಾನ ಮಾತನಾಡಿ, ಈ ರಸ್ತೆಯ ಬಗ್ಗೆ ಹಲವು ಬಾರಿ ಗ್ರಾಮ ಸಭೆಗಳಲ್ಲಿ ಪ್ರಸ್ತಾಪ ಮಾಡಿದ್ದೇವೆ. ಆದರೂ ಇದಕ್ಕೆ ಪರಿಹಾರ ಸಿಕ್ಕಿಲ್ಲ. ಆದ್ದರಿಂದಾಗಿ ಈಗ ಮಳೆ ಬಂದು ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಇದರಿಂದ ಈ ರಸ್ತೆಯಲ್ಲಿ ನಡೆದಾಡಲು ಕಷ್ಟವಾಗಿದ್ದು, ದೇವಾಲಯಕ್ಕೆ ತೆರಳುವ ಭಕ್ತಾದಿಗಳಿಗೂ ತೊಂದರೆಯಾಗಿದೆ. ಇದು ಯಾವುದೇ ರಾಜಕೀಯ ಪ್ರೇರಿತ ಪ್ರತಿಭಟನೆ ಅಲ್ಲ. ಇದು ನಮ್ಮ ಮೂಲ ಸೌಕರ್ಯಕೋಸ್ಕರ ಮಾಡುತ್ತಿರುವ ಪ್ರತಿಭಟನೆ. ಆದ್ದರಿಂದ ಜನಪ್ರತಿನಿಧಿಗಳು ಶೀಘ್ರವಾಗಿ ಈ ರಸ್ತೆಯನ್ನು ದುರಸ್ತಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಸ್ಥಳೀಯರಾದ ರಾಮಕೃಷ್ಣ ಹೊಸಮನೆ ಮಾರ್ಮಿಕವಾಗಿ ಮಾತನಾಡಿ, ವರ್ಷಗಳ ಹಿಂದೆ ಶ್ರೀ ಷಣ್ಮುಖ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭ ಆ ರಸ್ತೆಯಲ್ಲಿ ಹೊಂಡಗುಂಡಿಗಳಿತ್ತು. ಆದ್ದರಿಂದ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ತೊಂದರೆಯಾಗಬಾರದು. ಪರವೂರಿನಿಂದ ಬರುವವರು ನಮ್ಮೂರನ್ನು ಹೀಯಾಳಿಸಬಾರದು ಎಂಬ ದೃಷ್ಟಿಯಲ್ಲಿ ಊರವರೇ ಸೇರಿ ರಸ್ತೆಗೆ ಮಣ್ಣನ್ನು ಹಾಕಿದ್ದೇವೆ. ಆ ಸಮಯಕ್ಕೆ ಅದು ಸರಿಯಾಗಿತ್ತು. ಆದರೆ ಈಗ ಅಲ್ಲಿ ಸಮಸ್ಯೆಯಾಗಿದೆ. ಅಲ್ಲಿನ ಸಮಸ್ಯೆಯನ್ನು ಕಂಡು ಅದನ್ನು ಬಗೆಹರಿಸುವ ಬಗ್ಗೆ ಯಾರೂ ಕಾಳಜಿ ತೋರಲಿಲ್ಲ. ಆದರೆ ಅದರ ಬದಲು ಕೆಲ ಗ್ರಾ.ಪಂ. ಸದಸ್ಯರು `ಆ ಭಾಗದವರು ಅನುಭವಿಸಲಿ. ಹಾಕಿದ ಮಣ್ಣನ್ನು ಅವರೇ ತೆರವುಗೊಳಿಸಲಿ’ ಎಂಬಂತಹ ಮಾತುಗಳನ್ನಾಡಿದ್ದಾರೆ. ನಾವು ಇವತ್ತು ಶ್ರೀ ಷಣ್ಮುಖ ದೇವರ ಭಕ್ತರಾಗಿ ರಸ್ತೆಯ ಸಮಸ್ಯೆಯನ್ನು ಸರಿಪಡಿಸಿ ಎಂದು ನಿಮ್ಮ ಬಾಗಿಲಿಗೆ ಬಂದಿದ್ದೇವೆ. ಆದ್ದರಿಂದ ಅಂತಹ ಉಡಾಫೆಯ ಮಾತುಗಳು ಬೇಡ. ಆ ಭಾಗ ಅಂದರೆ ಅದು ಸುಬ್ರಹ್ಮಣ್ಯ ದೇವರ ಭಾಗ. ಸರ್ಪ ಹೆಡೆ ಎತ್ತಿ ನಿಂತಿರುವ ಜಾಗ. ಅದನ್ನು ಕಚ್ಚುವಂತೆ ಮಾಡಬೇಡಿ. ದೇವರ ಹತ್ತಿರ ನೋಡಿಯಾದರೂ ಸರಿಯಾಗಿ ಕೆಲಸ ಮಾಡಿ. ನಿಮಗೆ ಯಾವ ಸಹಕಾರ ಬೇಕೋ ಅದನ್ನು ನಾವು ಕೊಡುತ್ತೇವೆ. ಗ್ರಾ.ಪಂ.ನವರು ನಮ್ಮಿಂದ ಆ ರಸ್ತೆಯ ಮಣ್ಣನ್ನು ತೆಗೆಯಲು ಆಗುವುದಿಲ್ಲ ಎಂದು ಲಿಖಿತವಾಗಿ ಕೊಡಲಿ. ಊರಿನವರು ಹಾಕಿದ ಮಣ್ಣನ್ನು ಊರಿನವರೇ ತೆರವುಗೊಳಿಸಲು ಸಿದ್ಧರಿದ್ದೇವೆ ಎಂದರು.

ಅಲ್ಲಿಯ ಮಣ್ಣನ್ನು ತೆಗೆದು, ಚರಂಡಿಯನ್ನು ಮಾಡಿ ನಾಳೆಯೇ ಅಲ್ಲಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಲಾಗುವುದು ಹಾಗೂ ಶಾಶ್ವತ ಕಾಮಗಾರಿಯ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗ್ರಾ.ಪಂ. ಪಿಡಿಒ ದಿನೇಶ್ ಶೆಟ್ಟಿಯವರು ಭರವಸೆ ನೀಡಿದರು. ಬಳಿಕ ಗ್ರಾ.ಪಂ. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ ಅವರಿಗೆ ಮನವಿ ನೀಡಿದ ಪ್ರತಿಭಟನಕಾರರು, ಮುಂದಿನ ಚುನಾವಣೆಯ ಮೊದಲು ಹದಗೆಟ್ಟಿರುವ ಈ ರಸ್ತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಮುಂಬರುವ ಚುನಾವಣೆಯನ್ನು ಈ ಭಾಗದವರು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭ ಗ್ರಾ.ಪಂ. ಕಾರ್ಯದರ್ಶಿ ಪರಮೇಶ್ವರ, ಸದಸ್ಯರಾದ ಹಮ್ಮಬ್ಬ ಶೌಕತ್ ಅಲಿ, ನಿತಿನ್ ತಾರಿತ್ತಡಿ, ಹೇಮಂತ್ ಮೈತ್ತಳಿಕೆ, ಸತೀಶ್ ಹೆನ್ನಾಳ, ಲಕ್ಷ್ಮೀಶ ನಿಡ್ಡೆಂಕಿ ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ಸ್ತ್ರೀ ಶಕ್ತಿ ಸಂಘದ ರಾಜಿತಾ, ಸುಮಲತಾ, ಭವ್ಯ ಎಚ್., ಉಮಾವತಿ, ತಿಮ್ಮಕ್ಕ ಗ್ರಾಮಸ್ಥರಾದ ಜನಾರ್ದನ ಹೊಸಮನೆ, ಶೇಷಪ್ಪ ನೆಕ್ಕಿಲು, ಹರಿಪ್ರಸಾದ್ ಜಾಡೆಂಕಿ, ರವೀಂದ್ರ ಪಟಾರ್ತಿ, ವಸಂತ ಶೆಟ್ಟಿ, ಜನಾರ್ದನ ಕನ್ಯಾನ, ಗುರುರಾಜ ಹೊಸಮನೆ, ದೇವಪ್ಪ ಹೊಸಮನೆ, ಹೇಮಲತಾ, ಶಶಿಕಲಾ ಹೊಸಮನೆ ಮತ್ತಿತರರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here