ಉಪ್ಪಿನಂಗಡಿ ಮಾಲಿಕ್ ದೀನಾರ್ ಮಸೀದಿಯಲ್ಲಿ ದಾರುಲ್ ಹಿದಾಯ ದರ್ಸ್ ಆರಂಭ

0

  • ಮುಸ್ಲಿಂ ಸಮುದಾಯಕ್ಕೆ ಸಮನ್ವಯ ವಿದ್ಯಾಭ್ಯಾಸದ ಅನಿವಾರ್‍ಯತೆ ಇದೆ-ಜುನೈದ್ ಜಿಫ್ರಿ ತಂಙಳ್

 

 

ಉಪ್ಪಿನಂಗಡಿ: ಮುಸ್ಲಿಂ ಸಮುದಾಯಕ್ಕೆ ಇಂದಿನ ಪರಿಸ್ಥಿತಿಯಲ್ಲಿ ಕೇವಲ ಲೌಕಿಕ ಶಿಕ್ಷಣವೊಂದೇ ಪಡೆದರೆ ಸಾಲದು, ಅದರ ಜೊತೆಗೆ ಧಾರ್ಮಿಕ ಶಿಕ್ಷಣ ಪಡೆಯುವುದು ಅತೀ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಸಮುದಾಯಕ್ಕೆ ಸಮನ್ವಯ ವಿದ್ಯಾಭ್ಯಾಸದ ಅನಿವಾರ್‍ಯತೆ ಇದೆ ಎಂದು ಆತೂರು ಬದ್ರಿಯಾ ಜುಮಾ ಮಸೀದಿಯ ಮುದರ್ರಿಸ್ ಜುನೈದ್ ಜಿಫ್ರಿ ತಂಙಳ್ ಹೇಳಿದರು.

ಅವರು ಮೇ. ೧೮ರಂದು ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿಯಲ್ಲಿ ಆರಂಭಿಸಲಾದ ದಾರುಲ್ ಹಿದಾಯ ದರ್ಸ್ ಉದ್ಘಾಟಿಸಿ, ದುವಾಃ ನೆರವೇರಿಸಿ ಮಾತನಾಡಿ ನಮ್ಮ ವಿದ್ಯಾರ್ಥಿಗಳು ಸಮನ್ವಯ ಶಿಕ್ಷಣ ಪಡೆಯುವಂತಾಗಬೇಕು, ಅದು ಸಂಸ್ಕಾರಯುತ ಜೀವನಕ್ಕೆ ಮಾರ್ಗಸೂಚಿಯಾಗಲಿದೆ ಎಂದ ಅವರು ಉಪ್ಪಿನಂಗಡಿ ಮಸೀದಿಯಲ್ಲಿ ಎಲ್ಲಾ ಸೌಲಭ್ಯಗಳು ಇದ್ದಾಗ್ಯೂ ದರ್ಸ್ ಇಲ್ಲದ ಕಾರಣ ಕೊರತೆಯೊಂದು ಇಲ್ಲಿ ಎದ್ದು ಕಾಣುತ್ತಿತ್ತು. ಇಲ್ಲಿನ ಆಡಳಿತ ಮಂಡಳಿ ಅದನ್ನು ಸ್ಥಾಪಿಸುವ ಮೂಲಕ ತನ್ನ ಹಿರಿಮೆಯನ್ನು ಇಮ್ಮಡಿಗೊಳಿಸಿದ್ದು, ಸಂಸ್ಥೆ ಉತ್ತಮ ರೀತಿಯಲ್ಲಿ ಮುನ್ನಡೆಯಲಿ ಎಂದು ಹಾರೈಸಿದರು.

ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಸಲಾಂ ಫೈಝಿ ಮಾತನಾಡಿ ಮಸೀದಿ, ಮದ್ರಸಗಳು ಪೂರ್ಣ ಪ್ರಮಾಣದ ಧಾರ್ಮಿಕ ಕೇಂದ್ರಗಳಾಗಬೇಕು, ಇಲ್ಲಿ ಇರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಯೋಜನೆ ರೂಪಿಸುವ ಮೂಲಕ ನಮ್ಮ ಮಕ್ಕಳಿಗೆ ಶೈಕ್ಷಣಿಕವಾಗಿ ಮುಂದುವರಿಯಲು ಅವಕಾಶ ಕಲ್ಪಿಸಿಕೊಟ್ಟಾಗ ಮಾತ್ರ ನಮ್ಮ ಶ್ರಮ ಸಾರ್ಥಕವಾಗುವುದು ಮತ್ತು ಆ ಮೂಲಕ ಅಲ್ಲಾಹುವಿನ ಸಂಪ್ರೀತಿ ದೊರಕಲು ಸಾಧ್ಯವಾಗಿದ್ದು, ಮಸೀದಿಯಲ್ಲಿ ಪಳ್ಳಿ ದರ್ಸ್ ಇಂದಿನ ಅವಶ್ಯಕ ಮತ್ತು ಅನಿವಾರ್‍ಯವಾಗಿದ್ದು ಇದರ ಉನ್ನತಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.

ಮೂಲ್ಕಿ ಜುಮಾ ಮಸೀದಿಯ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿ ಮಾತನಾಡಿ ಇಲ್ಲಿ ೩೦ ವರ್ಷಗಳ ಹಿಂದೆಯೇ ದರ್ಸ್ ನಡೆಯುತ್ತಿತ್ತು, ಆ ಬಳಿಕ ಕ್ರಮೇಣ ನಿಂತು ಹೋಯಿತು. ಇದೀಗ ಮತ್ತೆ ಆರಂಭಿಸಿರುವುದು ಉತ್ತಮ ಬೆಳವಣಿಗೆಯಾಗಿದೆ, ಇದರ ಉನ್ನತಿಗೆ ಸರ್ವರ ಸಹಕಾರ ಅತೀ ಅಗತ್ಯ ಎಂದು ಹೇಳಿದರು.

ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಅಧ್ಯಕ್ಷತೆ ವಹಿಸಿ ಮಾತನಾಡಿ ಉಪ್ಪಿನಂಗಡಿ ಮಸೀದಿಗೆ ಅದರದ್ದೇ ಆದ ಪಾವಿತ್ರತೆ ಇದೆ, ಇಲ್ಲಿ ಯಾವುದೇ ಯೋಜನೆ ರೂಪಿಸಿದರೂ ಅದು ಕೇವಲ ಕನಸು ಆಗಿ ಉಳಿದಿಲ್ಲ, ಜಮಾಅತರ ಸರ್ವ ಸಹಕಾರದಿಂದ ಅನುಷ್ಠಾನ ಆಗಿದೆ, ಮುಂದೆ ದಹ್‌ವಾ ಕಾಲೇಜು ಮತ್ತು ಅಕಾಡೆಮಿ ಸ್ಥಾಪನೆಯ ಚಿಂತನೆ ಇದ್ದು, ಮುಂದೊಂದು ದಿನ ಎಲ್ಲರ ಸಹಕಾರದೊಂದಿಗೆ ಅದಕ್ಕೂ ಕಾಲ ಕೂಡಿ ಬರಲಿ, ಇದರ ನಿರ್ಮಾಣಕ್ಕೆ ಪರಸ್ಪರ ಸಹಕಾರಿಗಳಾಗಬೇಕಾಗಿದೆ ಎಂದು ಹೇಳಿದರು.

ಪುತ್ತೂರು ಮಸೀದಿಯ ಮುದರ್ರಿಸ್ ಮೊದು ಫೈಝಿ, ಹೈದರ್ ದಾರಿಮಿ ಕರಾಯ, ಮಸೀದಿ ಸಮಿತಿಯ ಹಮೀದ್ ಕರಾವಳಿ ಸಂದರ್ಭೋಚಿತವಾಗಿ ಮಾತನಾಡಿದರು.

ಸಮಾರಂಭದಲ್ಲಿ ಕುದ್ಲೂರು ಮಸೀದಿ ಖತೀಬ್ ಅದ್ನಾನಿ ಅನ್ಸಾರ್, ಮಾಲಿಕ್ ದೀನಾರ್ ಜುಮಾ ಮಸೀದಿ ಕಾರ್‍ಯದರ್ಶಿ ಶುಕೂರ್ ಹಾಜಿ ಶುಕ್ರಿಯಾ, ಪದಾಧಿಕಾರಿಗಳಾದ ಅಶ್ರಫ್ ಹಾಜಿ ಕರಾಯ, ಹಾಜಿ ಹಾರೂನ್ ರಶೀದ್ ಅಗ್ನಾಡಿ, ಹೆಚ್. ಯೂಸುಫ್ ಹಾಜಿ, ಮುಸ್ತಫಾ, ಸ್ಥಳೀಯ ಪ್ರಮುಖರಾದ ಅಶ್ರಫ್ ಅರ್ಶದಿ, ಝಕರಿಯಾ ಮುಸ್ಲಿಯಾರ್, ಸಿದ್ದಿಕ್ ಫೈಝಿ, ಇಸ್ಮಾಯಿಲ್ ತಂಙಳ್, ಶಬ್ಬೀರ್ ಕೆಂಪಿ, ಇಬ್ರಾಹಿಂ ಆಚಿ, ಸಿದ್ದಿಕ್ ಕೆಂಪಿ, ಎನ್ಮಾಡಿ ಯೂಸುಫ್, ಇಸಾಕ್ ಕಾರ್ಖಾನೆ, ಮಹಮ್ಮದ್ ಕೂಟೇಲು, ರಹೀಂ ಮತ್ತಿತರರು
ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here