ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಥಳಿ ಅನಾವರಣದ ಪೂರ್ವಭಾವಿ ಸಭೆ

0

  • ಪುತ್ತೂರು, ಕಡಬ, ಸುಳ್ಯ, ಬೆಳ್ತಂಗಡಿ, ವಿಟ್ಲ, ಮಂಗಳೂರು ಗೌಡ ಸಂಘದ ಪ್ರಮುಖರು ಭಾಗಿ

 

ಪುತ್ತೂರು: ದಕ್ಷಿಣ ಕನ್ನಡದಲ್ಲಿ 1837ರಲ್ಲಿಯೇ ಸಾಮಾನ್ಯ ರೈತಾಪಿ ಜನರು ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾಗಿದ್ದು ಅವರೆಲ್ಲರ ಪೈಕಿ ಮಹತ್ವದ ಪಾತ್ರ ವಹಿಸಿದ್ದ ಮಿತ್ತೂರು ಉಬರಡ್ಕ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಥಳಿಯನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿದೆ,ಮುಂದೆ ಜೂನ್ ಅಂತ್ಯಕ್ಕೆ ಪ್ರತಿಮೆ ಅನಾವರಣದ ಹಿನ್ನಲೆಯಲ್ಲಿ ದಿನ ನಿಗದಿ ಪಡಿಸುವುದು ಮತ್ತು ಕಾರ್ಯಕ್ರಮಕ್ಕೆ ಅತಿ ಹೆಚ್ಚಿನ ಸಂಖ್ಯೆಯ ಜನರು ಸೇರುವಂತೆ ಮಾಡುವುದು ಸೇರಿದಂತೆ ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಮುಖರ ಸಲಹೆಗಳಿಗಾಗಿ ಪೂರ್ವಭಾವಿ ಸಭೆಯು ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ಮೇ18ರಂದು ನಡೆಯಿತು.ಸಭೆಯಲ್ಲಿ ಪುತ್ತೂರು, ಕಡಬ, ಸುಳ್ಯ, ಬೆಳ್ತಂಗಡಿ, ವಿಟ್ಲ ಮತ್ತು ಮಂಗಳೂರು ಗೌಡ ಸಮಾಜದ ಪ್ರಮುಖರು ಭಾಗವಹಿಸಿದ್ದರು.

ಸಮಾಜದ ಧೀಮಂತ ನಾಯಕನ ಪ್ರದರ್ಶನಕ್ಕಾಗಿ ತೆರೆಯಮರೆಯಲ್ಲಿ ಕೆಲಸ ಮಾಡಬೇಕು-ಶ್ರೀ ಧರ್ಮಪಾಲನಾಥ ಸ್ವಾಮೀಜಿ

ಶ್ರೀ ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಎಲ್ಲೋ ಒಂದು ಕಡೆ ಪುಸ್ತಕದ ಅಡಿಯಲ್ಲಿ ಇದ್ದು ಒಂದು ವರ್ಷದ ಈಚೆಗೆ ಅದ್ಭುತವಾದ ರೀತಿಯಲ್ಲಿ ಮುಂದೆ ಸಾಗುತ್ತಿರುವ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ವಿಚಾರ ಕೇವಲ ಒಂದು ಜನಾಂಗದ ಮೂಲಕ ಹೋಗುವಂತದ್ದಲ್ಲ.ಇಡೀ ಸಮಾಜದವರಿಂದ ಮುಂದೆ ಹೋಗುತ್ತಿದೆ.ಇದರ ಪ್ರಭಾವ ಹೇಗಿದೆ ಎಂದರೆ ಮಂಗಳೂರಿನ ಹಂಪನಕಟ್ಟೆಯ ಸಿಗ್ನಲ್‌ನಲ್ಲೂ ರಾಮಯ್ಯ ಗೌಡರ ಚಿತ್ರ ರಚನೆ ಆಗಿದೆ. ಪುತ್ಥಳಿ ನಿರ್ಮಾಣಕ್ಕೆ ಶಂಕುಸ್ಥಾಪನೆ ವೇಳೆ ಶಾಸಕ ವೇದವ್ಯಾಸ ಕಾಮತ್ ಅವರು ಮಂಗಳೂರಿನ ಯಾವುದಾದರೊಂದು ವೃತ್ತಕ್ಕೆ ಕೆದಂಬಾಡಿ ರಾಮಯ್ಯ ಗೌಡರ ಹೆಸರು ನಾಮಕರಣ ಮಾಡುವ ಕುರಿತು ನಿರ್ಣಯ ಮಾಡಲು ವೃತ್ತ ಗುರುತಿಸಿ ಕೊಡುವಂತೆ ನಮ್ಮಲ್ಲಿ ಕೇಳಿಕೊಂಡಿದ್ದಾರೆ ಎಂದರು.ಪುತ್ಥಳಿ ಅನಾವರಣ ಕಾರ್ಯಕ್ರಮ ಬಹಳ ಅರ್ಥಗರ್ಭಿತವಾದ ಕಾರ್ಯಕ್ರಮ ಆಗಲಿದೆ. ಮುಖ್ಯಮಂತ್ರಿಗಳನ್ನು ಕರೆಸಿ ಕಾರ್ಯಕ್ರಮ ಮಾಡಬೇಕಾಗಿದೆ.ಡಿ.ವಿ.ಸದಾನಂದ ಗೌಡ ಮತ್ತು ಸಂಜೀವ ಮಠಂದೂರು ಹಾಗು ಪದಾಧಿಕಾರಿಗಳ ನೇತೃತ್ವದಲ್ಲಿ ಬಹಳ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಯಲಿದ್ದು ಇದೊಂದು ಸರಕಾರದ ಕಾರ್ಯಕ್ರಮವಾಗಿ ಮೂಡಿ ಬರಲಿದೆ ಎಂದು ತಿಳಿದುಕೊಳ್ಳುವುದು ಅಗತ್ಯ ಎಂದು ಹೇಳಿದ ಸ್ವಾಮೀಜಿ, ಇಲ್ಲಿ ಸ್ಥಾನಮಾನವನ್ನು ಬದಿಗಿಟ್ಟು ಸಮಾಜದ ಕಾರ್ಯಕ್ರಮಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.ನಮ್ಮ ಸಮಾಜದ ಧೀಮಂತ ನಾಯಕನ ಧೈರ್ಯ, ಸಾಹಸದ ಪ್ರದರ್ಶನ ಮಾಡಲು ನಾವು ತೆರೆಯ ಮರೆಯ ಹಾಗೆ ಕೆಲಸ ಮಾಡಬೇಕು.ಹಾಗಾಗಿ ಇತರ ಸಮುದಾಯವನ್ನೂ ಜೋಡಣೆ ಮಾಡಿಕೊಂಡು ಕಾರ್ಯಕ್ರಮ ನಡೆಯಬೇಕು ಎಂದರಲ್ಲದೆ, ಪುತ್ತೂರಿನಲ್ಲಿ ಸಮಾಜದ ಮೀಟಿಂಗ್ ಮಾಡಿ ಮಂಗಳೂರಿನಲ್ಲಿ ಎಲ್ಲಾ ಸಮಾಜದವರನ್ನು ಸೇರಿಸಿ ಮೀಟಿಂಗ್ ಮಾಡಲಿದ್ದೇವೆ ಎಂದರು.

ಪುತ್ಥಳಿ ಅನಾವರಣ ಸಂದರ್ಭ ಅತ್ಯಂತ ಹೆಚ್ಚು ಜನ ಸೇರಬೇಕು-ಡಿ.ವಿ.ಸದಾನಂದ ಗೌಡ

ಕೆದಂಬಾಡಿ ರಾಮಯ್ಯ ಗೌಡರ ಪುತ್ಥಳಿ ನಿರ್ಮಾಣದ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವರೂ ಆಗಿರುವ ಲೋಕಸಭಾ ಸದಸ್ಯ ಡಿ.ವಿ.ಸದಾನಂದ ಗೌಡ ಅವರು ಮಾತನಾಡಿ ಒಂದು ಕಾಲದಲ್ಲಿ ಕೋಳಿ ಕಟ್ಟಕ್ಕೆ ಕೋಳಿ ತರಲು, ಕಲ್ಲು ಸಾರಾಯಿ ತರಲು ಗೌಡರು ಇದ್ದರು.ಆದರೆ ಅವೆಲ್ಲ ಈಗ ಹೋಗಿ ಬದಲಾದ ಸಮಾಜದಲ್ಲಿ ನೇತೃತ್ವ ತೆಗೆದುಕೊಳ್ಳುವಂತಹದ್ದು ಮತ್ತು ವಿಚಾರಗಳನ್ನು ಕೊಟ್ಟ ಸಮಾಜ ನಮ್ಮದು.ಆದರೂ ನಮ್ಮಲ್ಲಿ ಸ್ಟೆಬಿಲಿಟಿ ಇಲ್ಲ.ಇದರ ಅವಶ್ಯಕತೆ ಇದೆ ಎಂದರು.ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಪ್ರಬಲ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಕಿಯ ಕಿಡಿ ಹಚ್ಚಿದವರು ಯಾರು ಎಂಬ ಆಲೋಚನೆ ಮಾಡಬೇಕು.೧೮೫೭ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂಬ ಇತಿಹಾಸವಿದೆ.ಆದರೆ ೧೮೩೭ರಲ್ಲೇ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಮಾಡಿದ ತುಳು, ಅರೆಭಾಷೆಯ ಜನಾಂಗದ ಗೌಡ ಸಮುದಾಯದ ಕೆದಂಬಾಡಿ ರಾಮಯ್ಯ ಗೌಡ ನಮ್ಮ ಮುಂದಿದ್ದಾರೆ.ಈ ಕುರಿತು ಸಂಶೋಧನೆ ಆಗಬೇಕು.ದೇಶದ ಸ್ವಾತಂತ್ರ್ಯದ ೭೫ನೇ ವರ್ಷದ ಆಜಾದಿಕ ಅಮೃತ ಮಹೋತ್ಸವ ಆಚರಣೆಯ ಸಂದರ್ಭ ಸ್ವಾತಂತ್ರ್ಯಕ್ಕಾಗಿ ಯಾರು ಹೋರಾಟ ಮಾಡಿದ್ದಾರೋ ಅವರನ್ನು ಜ್ಞಾಪಕ ಮಾಡಿಕೊಳ್ಳುವುದು ನಮ್ಮ ದೇಶದ ಜನರ ಜವಾಬ್ದಾರಿ ಎಂದ ಡಿ.ವಿ.ಯವರು,ಇದಕ್ಕಾಗಿ ನಾವು ಮುಂಚೂಣಿಯಲ್ಲಿರಬೇಕು ಮತ್ತು ವಿಷ್ಪರಿಂಗ್ ಕ್ಯಾಂಪೈನ್ ಮಾಡಬೇಕು.ಇದರ ಕ್ರೆಡಿಟ್ ನಮ್ಮ ಸಮಾಜಕ್ಕೆ ಸಿಗುತ್ತದೆ.ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಹುತಾತ್ಮರಾದವರ ಪಟ್ಟಿಯಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಹೆಸರಿಲ್ಲ.ಅದರಲ್ಲಿರುವಂತೆ ಮಾಡಬೇಕು ಎಂಬ ಮನಸ್ಸಿನಲ್ಲಿರುವ ಭಾವನೆಗೆ ಒತ್ತು ಕೊಡುವ ಕೆಲಸ ಆಗಬೇಕು.ಪುತ್ಥಳಿ ಅನಾವರಣ ದೊಡ್ಡ ಮಟ್ಟದ ಕಾರ್ಯಕ್ರಮ ಆಗಬೇಕು.ಬಹಳ ಜನರು ಸೇರಬೇಕು.ಆದರೆ ಎಲ್ಲೂ ಜಾತಿಯ ಹೆಸರಿನ ಕಾರ್ಯಕ್ರಮ ಆಗದೆ ಸರಕಾರದ ಕಾರ್ಯಕ್ರಮ ಆಗಬೇಕು.ಅದನ್ನು ಗೌಡ ಸಮಾಜದವರು ಬಹಳ ಚೆನ್ನಾಗಿ ಮಾಡಿದ್ದಾರೆ ಎಂದಾದರೆ ಕ್ರೆಡಿಟ್ ನಮಗೆ ಸಿಗುತ್ತದೆ ಎಂದರಲ್ಲದೆ, ಈ ನಿಟ್ಟಿನಲ್ಲಿ ಪ್ರತಿ ತಾಲೂಕಿನಲ್ಲೂ ಒಂದು ಸಮಿತಿ ಆಗಬೇಕು ಎಂದು ಹೇಳಿದರು.

ಆಜಾದಿ ಕಾ ಅಮೃತ ಮಹೋತ್ಸವದ ಒಂದು ಭಾಗವಾಗಿ ಕಾರ್ಯಕ್ರಮ-ಸಂಜೀವ ಮಠಂದೂರು

ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರು ಇತಿಹಾಸದ ಪುಟದಲ್ಲಿ ಸೇರಿದರೂ ಅದನ್ನು ತಿರುಚುವಂತಹದ್ದು, ಮರೆಮಾಚುವ ಕೆಲಸ ಆಗುತ್ತದೆ.ಆ ಸಾಲಿಗೆ ಕೆದಂಬಾಡಿ ರಾಮಯ್ಯ ಗೌಡ ಸೇರಿದ್ದಾರೆ.ಇವತ್ತಿನ ತನಕ ಇತಿಹಾಸದ ಪುಟ ಸೇರದ ಒಬ್ಬ ಕೃಷಿಕ, ಮಣ್ಣಿನ ಮಗ ರಾಷ್ಟ್ರಾಭಿಮಾನವನ್ನು ಹೇಗೆ ಮೂಡಿಸಿದ್ದಾರೆ ಎಂದು ತೋರಿಸವ ಕೆಲಸವನ್ನು ಇವತ್ತಿನ ಪೀಳಿಗೆ ಮಾಡಿ ತೋರಿಸುತ್ತಿದೆ.ಗೌಡ ಸಮಾಜ ಮೂರು ಅಮೂಲ್ಯ ರತ್ನಗಳಾದ ಕೆಂಪೇ ಗೌಡ, ಬಾಲಗಂಗಾಧರನಾಥ ಸ್ವಾಮೀಜಿ, ಕುವೆಂಪು ಅವರನ್ನು ಸಮಾಜಕ್ಕೆ ಕೊಟ್ಟಿದೆ ಎಂದು ಪೇಜಾವರ ಶ್ರೀಗಳು ನುಡಿದಿದ್ದರು.ಆದರೆ ಅಂತಹ ಸಮಾಜದಲ್ಲಿ ಇನ್ನೊಂದಷ್ಟು ಜನ ಸ್ವಾತಂತ್ರ್ಯ ಹೋರಾಟಗಾರರು ಕೂಡಾ ಇದ್ದಾರೆ ಎಂದು ಮುಂದಿನ ಪೀಳಿಗೆಗೆ ತೋರಿಸಿ ಕೊಡುವ ಕೆಲಸ ಇವತ್ತು ಆಗುತ್ತಿದೆ.ಮುಂದೆ ಕೆದಂಬಾಡಿ ರಾಮಯ್ಯ ಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮ ಆಜಾದಿ ಕಾ ಅಮೃತ ಮಹೋತ್ಸವದ ಒಂದು ಭಾಗವಾಗಿ ನಡೆಯಲಿದ್ದು, ಎಲ್ಲಾ ಜನರನ್ನು ಕಾರ್ಯಕ್ರಮದಲ್ಲಿ ಸೇರಿಸುವ ಕೆಲಸ ಆಗಬೇಕು.ಪುತ್ತೂರು, ಸುಳ್ಯ, ಕಡಬ, ವಿಟ್ಲ, ಬೆಳ್ತಂಗಡಿಯಿಂದ ಸಾವಿರಾರು ವಾಹನಗಳ ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಬರುವಂತಹ ವ್ಯವಸ್ಥೆ ಆಗಬೇಕೆಂದರು.

ಒಂದು ತಿಂಗಳೊಳಗೆ ಲೋಕಾರ್ಪಣೆ ಸಾಧ್ಯತೆ- ಕಿರಣ್ ಬುಡ್ಲೆಗುತ್ತು

ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೆದಂಬಾಡಿ ರಾಮಯ್ಯ ಗೌಡ ಅವರ ಹೋರಾಟದ ಅವಿಸ್ಮರಣೀಯ ಸಂಗತಿಗಳನ್ನು ಮುಂದಿನ ತಲೆಮಾರಿಗೆ ನೀಡುವ ಆಶಯದಿಂದ ಅವರ ಪ್ರತಿಮೆಯನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ನಿರ್ಮಿಸುವ ಕಾರ್ಯ ನಡೆಯತ್ತಿದೆ.ಕೆದಂಬಾಡಿ ರಾಮಯ್ಯ ಗೌಡ ಅವರು ಪ್ರತಿ ಸಮಾಜದ ಹೆಮ್ಮೆಯ ಪ್ರತೀಕ.ಈ ಪ್ರತಿಮೆ ಸ್ಥಾಪಿಸಲು ಸುಮಾರು ಒಂದು ವರ್ಷದ ಹಿಂದೆಯೇ ಕೆಲಸ ಕಾರ್ಯ ಆರಂಭಗೊಂಡಿತ್ತು.೨೦೧೯ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಚಾರ ಸಂಕೀರ್ಣ ಮಾಡಿದ್ದೆವು.ಕೊನೆಗೆ ಪ್ರತಿಮೆ ನಿರ್ಮಾಣಕ್ಕೆ ಜಾಗ ಗುರುತು ಮಾಡಿ ಕನ್ನಡ ಸಂಸ್ಕೃತಿ ಇಲಾಖೆಯಿಂದ ರೂ.೧೦ ಲಕ್ಷ, ಮಹಾನಗರ ಪಾಲಿಕೆಯಿಂದ ರೂ.೩೦ ಲಕ್ಷ ಅನುದಾನ ಲಭಿಸಿದೆ.ಈಗ ಕಂಚಿನ ಪ್ರತಿಮೆ ನಿರ್ಮಾಣ ಕಾರ್ಯ ನಡೆಯುತ್ತಿದೆ.ಒಂದು ತಿಂಗಳೊಳಗೆ ಲೋಕಾರ್ಪಣೆ ಸಾಧ್ಯತೆ ಇದೆ ಎಂದರು.ದ.ಕ ಜಿಲ್ಲಾ ಕೊಡಗು ಅಭಿವೃದ್ದಿ ಸಮಿತಿ ಅಧ್ಯಕ್ಷರಾಗಿರುವ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಗೌರವ ಸಲಹೆಗಾರ ನಿತ್ಯಾನಂದ ಮುಂಡೋಡಿ, ಗೌಡ ವಿದ್ಯಾ ಸಂಘದ ಅಧ್ಯಕ್ಷ, ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಗೌರವ ಸಲಹೆಗಾರರೂ ಆಗಿರುವ ಧನಂಜಯ ಅಡ್ಪಂಗಾಯ, ದ.ಕ.ಜಿಲ್ಲಾ ಸಂಘದ ನಿಯೋಜಿತ ಅಧ್ಯಕ್ಷರು ಮತ್ತು ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಗೌರವ ಸಲಹೆಗಾರರಾಗಿರುವ ಲೋಕಯ್ಯ ಗೌಡ, ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಕಾರ್ಯದರ್ಶಿ ರಕ್ಷಿತ್ ಪುತ್ತಿಲ, ಖಜಾಂಜಿ ಶಿವರಾಮ ಗೌಡ ನಿನ್ನಿಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಡಿ.ವಿ.ಸದಾನಂದ ಗೌಡ ಮತ್ತು ಸಂಜೀವ ಮಠಂದೂರು ಸ್ವಾಮೀಜಿಯವರಿಗೆ ತುಳಸಿಮಾಲೆ, ಫಲಪುಷ್ಪ ನೀಡಿ ಗೌರವಿಸಿದರು.ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆ ಸ್ವಾಗತಿಸಿದರು.ಒಕ್ಕಲಿಗ ಗೌಡ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ಹೆಚ್.ಡಿ.ಶಿವರಾಮ್ ವಂದಿಸಿದರು.ಗೌರವ ಸಲಹೆಗಾರ ಚಿದಾನಂದ ಬೈಲಾಡಿ ಕಾರ್ಯಕ್ರಮ ನಿರೂಪಿಸಿದರು.ಸಭೆಯಲ್ಲಿ ಹಲವು ಪ್ರಮುಖರು ಪಾಲ್ಗೊಂಡಿದ್ದರು.

 

ಅಯೋಧ್ಯೆ ರಾಮಮಂದಿರಕ್ಕೆ ಇಟ್ಟಿಗೆ ತಂದಂತೆ
ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ಪ್ರತಿ ಮನೆಯಿಂದ ಒಂದೊಂದು ಇಟ್ಟಿಗೆ ತಂದಂತೆ ಕೆದಂಬಾಡಿ ರಾಮಯ್ಯ ಗೌಡರಿಗೂ ತನ್ನದೊಂದು ಸೇವೆ ಎಂಬ ರೀತಿಯಲ್ಲಿ ಕಾರ್ಯಕ್ರಮ ನಡೆಯಬೇಕು. ಮೀಡಿಯಾದಲ್ಲಿ ವರ್ಷಾನುಗಟ್ಟಲೆ ಚರ್ಚೆ ಮಾಡುವ ಸಂಗತಿ ಆಗಬೇಕು.ಇತಿಹಾಸದ ಪುಟ ಮತ್ತೊಮ್ಮೆ ಹಿಂದೆ ಹೋಗಬೇಕು.ಸ್ವಾತಂತ್ರ ಸಂಗ್ರಾಮದ ಚರಿತ್ರೆ, ಅಧ್ಯಯನ ಪೀಠ ಆಗಬೇಕು. ಇತರ ಸಮಾಜವನ್ನು ಸೇರಿಸಿ ಮುಂದಿನ ಕೆಲಸ ಮಾಡೋಣ. ಡಿ.ವಿ.ಸದಾನಂದ ಗೌಡ, ಸಂಸದ, ಮಾಜಿ ಮುಖ್ಯಮಂತ್ರಿ

 

 

ಪ್ರಧಾನ ಮಂತ್ರಿಯವರ ಮೂಲಕ ಪುತ್ಥಳಿ ಅನಾವರಣ ಮಾಡಬೇಕು

ಕೆದಂಬಾಡಿ ರಾಮಯ್ಯ ಗೌಡ ಪುತ್ಥಳಿ ಅನಾವರಣಕ್ಕೆ ಸಂಬಂಧಿಸಿ ಸಭೆಯ ಸಲಹೆ ಸೂಚನೆಯಲ್ಲಿ ಪ್ರಧಾನ ಮಂತ್ರಿಯವರ ಮೂಲಕ ಪುತ್ಥಳಿ ಅನಾವರಣ ಮಾಡಬೇಕು.ಪ್ರತಿ ತಾಲೂಕಿನಿಂದ ೫ ಸಾವಿರ ಜನಸಂಖ್ಯೆ ಸೇರಿಸುವುದು, ತಾಲೂಕು ಸಮಿತಿ ರಚನೆ ಮಾಡುವುದು, ಪುತ್ಥಳಿ ಕಲಾತ್ಮಕವಾಗಿರಬೇಕು, ಹೋರಾಟದ ಆರಂಭ ಉಬರಡ್ಕ ಮಿತ್ತೂರಿನ ಕೆದಂಬಾಡಿಯಲ್ಲಿರುವ ಸ್ವಾತಂತ್ರ್ಯದ ಹಲವು ಚಿತ್ರಗಳ ಲೋಕಾರ್ಪಣೆಯಿಂದ ಆರಂಭವಾಗಬೇಕು.ಮೆರವಣಿಗೆ ಮಾಡಿ ಸ್ತಬ್ದ ಚಿತ್ರ ಮಾಡುವುದು, ಅಲ್ಲಲ್ಲಿ ರಾಮಯ್ಯ ಗೌಡರ ಚಿತ್ರದ ಕಟೌಟ್ ಅಳವಡಿಸುವುದು ಅಗತ್ಯ ಎಂಬ ಸಲಹೆ ಸೂಚನೆಗಳನ್ನು ಒಕ್ಕಲಿಗ ಗೌಡ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ಹೆಚ್.ಡಿ.ಶಿವರಾಮ್, ಸಲಹೆಗಾರ ಚಿದಾನಂದ ಬೈಲಾಡಿ, ಬೆಳ್ತಂಗಡಿ ತಾಲೂಕು ಗೌಡ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಮಂಗಳೂರು ಸಂಘದ ಅಧ್ಯಕ್ಷ ಸದಾನಂದ ಡಿ.ಪಿ, ಕಡಬದ ಅಧ್ಯಕ್ಷ ತಮ್ಮಯ್ಯ ಗೌಡ, ವಿಟ್ಲದ ಅಧ್ಯಕ್ಷ ಮೋಹನ್ ಕಾಯರ್‌ಮಾರ್, ಸುಳ್ಯ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ಒಕ್ಕಲಿಗ ಗೌಡ ಸೇವಾ ಸಂಘದ ಗೌರವ ಸಲಹೆಗಾರ ಮೋಹನ್ ಗೌಡ ಇಡ್ಯಡ್ಕ, ಭರತ್ ಮುಂಡೋಡಿ, ಜ್ಞಾನೇಶ್, ಪ್ರವೀಣ್ ಕುಂಟ್ಯಾನ ಸೇರಿದಂತೆ ಹಲವಾರು ಮಂದಿ ತಮ್ಮ ಅಭಿಪ್ರಾಯ ಮಂಡಿಸಿದರು.

LEAVE A REPLY

Please enter your comment!
Please enter your name here