ಜಿ.ಪಂ,ತಾ.ಪಂ.ಚುನಾವಣೆಗೆ ಸಂಬಂಧಿಸಿದ ಆಯೋಗದ ಅರ್ಜಿ ವಿಚಾರಣೆ ಮೇ 23ಕ್ಕೆ ಮುಂದೂಡಿದ ಹೈಕೋರ್ಟ್

0

ಬೆಂಗಳೂರು:ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮೇ 23ಕ್ಕೆ ಮುಂದೂಡಿದೆ.

 

 


ಕ್ಷೇತ್ರ ಪುನರ್ ವಿಂಗಡಣೆಗೆ ಮತ್ತು ಮೀಸಲಾತಿ ನಿಗದಿಗೆ ರಾಜ್ಯ ಸರ್ಕಾರ ಆಯೋಗವನ್ನು ರಚನೆ ಮಾಡಿದೆ.ಇದರಿಂದ ಚುನಾವಣೆ ವಿಳಂಬವಾಗುತ್ತಿದೆ. ಆದ್ದರಿಂದ ಅರ್ಜಿ ವಿಚಾರಣೆಯನ್ನು ತುರ್ತಾಗಿ ನಡೆಸಬೇಕೆಂದು ಕೋರಿ ರಾಜ್ಯ ಚುನಾವಣಾ ಆಯೋಗ ಜ್ಞಾಪನಾಪತ್ರ ಸಲ್ಲಿಸಿತ್ತು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್.ಜಿ ಪಂಡಿತ್ ಮತ್ತು ಎಂ.ಜಿ ಉಮಾ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಚುನಾವಣಾ ಆಯೋಗವನ್ನು ಪ್ರಶ್ನಿಸಿದ ಪೀಠ, ತಾ.ಪಂ ಮತ್ತು ಜಿ.ಪಂ ಚುನಾವಣೆಗಳನ್ನು ತಕ್ಷಣವೇ ನಡೆಸುವಂತೆ ಕಳೆದ ವಾರ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.ಅದರಂತೆ ಆಯೋಗ ಚುನಾವಣೆಗಳನ್ನು ನಡೆಸುವ ಬದಲು ಬಾಕಿ ಇರುವ ಈ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಆಯೋಗ ಮನವಿ ಸಲ್ಲಿಸಿರುವುದೇಕೆ ಎಂದು ಪ್ರಶ್ನಿಸಿತು.ಈ ವೇಳೆ ಚುನಾವಣಾ ಆಯೋಗದ ಪರ ವಕೀಲರು ವಿವರಣೆ ನೀಡಿ, ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಪಟ್ಟಿಯನ್ನು ರಚಿಸುವ ಚುನಾವಣಾ ಆಯೋಗದ ಅಧಿಕಾರವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.ಇವುಗಳಿಲ್ಲದೆ ರಾಜ್ಯ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ವಾದ ಆಲಿಸಿದ ಪೀಠ, ಈ ಕುರಿತಂತೆ ವಿವರವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು ವಿಚಾರಣೆಯನ್ನು ಮೇ 23ಕ್ಕೆ ಮುಂದೂಡಿತು.

ಸ್ಥಳೀಯ ಸಂಸ್ಥೆಗಳಿಗೆ ತಕ್ಷಣವೇ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ನ್ಯಾಯಮೂರ್ತಿಗಳಾದ ಬಿಎಂ ಶ್ಯಾಮ್ ಪ್ರಸಾದ್ ಮತ್ತು ಎಂಜಿಎಸ್ ಕಮಲ್ ಅವರ ರಜಾಕಾಲದ ಪೀಠಕ್ಕೆ ಮೆಮೊ ಸಲ್ಲಿಸಿತ್ತು.ಸುಪ್ರೀಂ ಕೋರ್ಟ್‌ನ ಆದೇಶದಿಂದಾಗಿ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದು ಚುನಾವಣಾ ಆಯೋಗವು ಹೈಕೋರ್ಟ್‌ನಲ್ಲಿ ಮನವಿ ಮಾಡಿತ್ತು.ಚುನಾವಣಾ ಆಯೋಗದ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರು, ಜಿಪಂ, ತಾಪಂ ಚುನಾವಣೆ ನಡೆಸುವ ಕುರಿತು ಚುನಾವಣಾ ಆಯೋಗ ಸಲ್ಲಿಸಿರುವ ಅರ್ಜಿಯು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಹಾಗಾಗಿ ಈ ಪ್ರಕರಣದ ಶೀಘ್ರ ವಿಚಾರಣೆಗೆ ಮೆಮೊ ಸಲ್ಲಿಸಲಾಗಿತ್ತು.೨೦೨೧ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಜಿ.ಪಂ,ತಾ.ಪಂ.ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ತಯಾರಿ ನಡೆಸಿತ್ತು ಎಂದು ವಾದ ಮಂಡಿಸಿದರು.

ಕ್ಷೇತ್ರಗಳ ಡಿಲಿಮಿಟೇಶನ್ ಪ್ರಕ್ರಿಯೆ ಪೂರ್ಣಗೊಂಡಿದೆ ಮತ್ತು ಮತದಾರರ ಅಂತಿಮ ಪಟ್ಟಿಯನ್ನು ಎಸ್‌ಇಸಿ ಪ್ರಕಟಿಸಿದೆ. ಕಳೆದ ವರ್ಷ ಮೀಸಲಾತಿ ಕರಡನ್ನು ಕೂಡ ಪ್ರಕಟಿಸಲಾಗಿತ್ತು. ಆದರೆ ಎಸ್‌ಇಸಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು, ರಾಜ್ಯ ಸರ್ಕಾರವು ಕ್ಷೇತ್ರಗಳನ್ನು ಮರು ವಿನ್ಯಾಸಗೊಳಿಸುವ ಮತ್ತು ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸುವ ಎಸ್‌ಇಸಿಯ ಅಧಿಕಾರವನ್ನು ಹಿಂತೆಗೆದುಕೊಂಡಿತು.ಪ್ರಕ್ರಿಯೆ ನಡೆಸಲು ಸರ್ಕಾರ ಹೊಸ ಡಿಲಿಮಿಟೇಶನ್ ಪ್ಯಾನೆಲ್ ಅನ್ನು ರಚಿಸಿದೆ. ಚುನಾವಣಾ ಆಯೋಗವು ಈ ಸಮಿತಿ ರಚನೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು.ಈ ಅರ್ಜಿ ವಿಚಾರಣೆಗೆ ಬಾಕಿ ಇತ್ತು.ಎಸ್‌ಇಸಿಯ ಮೆಮೊದ ನಂತರ, ಹೈಕೋರ್ಟ್ ಈ ವಿಷಯದ ವಿಚಾರಣೆಯನ್ನು ಮೇ ೧೭ ಕ್ಕೆ ಮುಂದೂಡಿತ್ತು.ಇದೀಗ ವಿಚಾರಣೆಯನ್ನು ಮೇ ೨೩ಕ್ಕೆ ಮುಂಡೂಡಲಾಗಿದೆ.

LEAVE A REPLY

Please enter your comment!
Please enter your name here