ಫಿಲೋಮಿನಾ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲ ವಂ|ವಿಜಯ್ ಲೋಬೊರವರಿಗೆ ಬೀಳ್ಕೊಡುಗೆ ಸನ್ಮಾನ

0

  • ವಂ|ವಿಜಯ್‌ರವರ ಶಿಸ್ತು, ಸಮರ್ಪಣಾಭಾವ, ಬದ್ಧತೆಯಿಂದ ಸಂಸ್ಥೆ ಪ್ರಜ್ವಲಿಸಿದೆ-ವಂ|ಜೆರಾಲ್ಡ್

ಪುತ್ತೂರು: ವಂ|ವಿಜಯ್ ಲೋಬೋರವರು ಫಿಲೋಮಿನಾ ಪಿಯು ಕಾಲೇಜಿಗೆ ಆಗಮಿಸುವ ಮುನ್ನ ಕಾಲೇಜಿನಲ್ಲಿ ಎಷ್ಟು ವಿದ್ಯಾರ್ಥಿಗಳ ಸಂಖ್ಯೆಯಿತ್ತು, ಈಗ ಎಷ್ಟಿದೆ ಅಲ್ಲದೆ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಸಂಸ್ಥೆಯು ಎಷ್ಟು ರ್‍ಯಾಂಕ್ ಗಳಿಸಿದೆ ಎಂಬುದನ್ನು ಗಮನಿಸಿದಾಗ ತಿಳಿಯುತ್ತದೆ. ವಂ|ವಿಜಯ್‌ರವರಲ್ಲಿರುವ ಶಿಸ್ತು, ಸಮರ್ಪಣಾಭಾವ ಹಾಗೂ ಬದ್ಧತೆಯ ಗುಣದಿಂದಾಗಿ ಸಂಸ್ಥೆಯು ಇಂದು ಪ್ರಜ್ವಲಿಸುತ್ತಿದೆ ಎಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಹಿಂದಿನ ಸಂಚಾಲಕ ಹಾಗೂ ಕಥೋಲಿಕ್ ಬೋರ್ಡ್ ಆಫ್ ಎಜ್ಯುಕೇಶನ್‌ನ ನಿಕಟಪೂರ್ವ ಕಾರ್ಯದರ್ಶಿಯಾಗಿರುವ ವಂ|ಜೆರಾಲ್ಡ್ ಡಿ’ಸೋಜರವರು ಹೇಳಿದರು.

 


ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ೧೧ ವರ್ಷಗಳಿಂದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಉಜಿರೆಯ ಅನುಗ್ರಹ ಪದವಿ ಪೂರ್ವ ಕಾಲೇಜಿಗೆ ಪ್ರಾಂಶುಪಾಲರಾಗಿ ವರ್ಗಾವಣೆಗೊಳ್ಳುತ್ತಿರುವ ವಂ|ವಿಜಯ್ ಲೋಬೋರವರಿಗೆ ಸಂತ ಫಿಲೋಮಿನಾ ಪ್ರೌಢಶಾಲೆಯ ಸಭಾಂಗಣದಲ್ಲಿ ಮೇ ೨೦ರಂದು ಜರಗಿದ ಬೀಳ್ಕೊಡುಗೆ ಸನ್ಮಾನ ಸಮಾರಂಭದಲ್ಲಿ ಅವರು ನಿರ್ಗಮಿತ ಪ್ರಾಂಶುಪಾಲ ವಂ|ವಿಜಯ್ ಲೋಬೋರವರನ್ನು ಸನ್ಮಾನಿಸಿ ಮಾತನಾಡಿದರು. ಸರಕಾರದ ಅಧಿನಿಯಮದಂತೆ ೨೦೦೧ರಲ್ಲಿ ಫಿಲೋಮಿನಾ ಪದವಿ ಪೂರ್ವ ಕಾಲೇಜು ಎಂದು ನಾಮಾಂಕಿತಗೊಂಡಾಗ ಕಾಲೇಜಿಗೆ ಸಮರ್ಥ ನಾಯಕತ್ವ ಗುಣವಿರುವ ಪ್ರಾಂಶುಪಾಲರ ಅಗತ್ಯವಿದೆ ಎಂಬುದಾಗಿ ತಾನು ಅಂದು ಕಾಲೇಜಿನ ಸಂಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಾಲೇಜಿಗೆ ವಂ|ವಿಜಯ್ ಲೋಬೋರವರ ಅಗತ್ಯತೆ ಇದೆ ಎಂದು ಪೂಜ್ಯ ಬಿಷಪ್‌ರವರಲ್ಲಿ ಮನವಿ ಮಾಡಿಕೊಂಡಿದ್ದೆ. ವಂ|ವಿಜಯ್ ಲೋಬೋರವರು ಕಾಲೇಜಿಗೆ ಆಗಮಿಸಿ ಅಧಿಕಾರವನ್ನು ವಹಿಸಿಕೊಂಡ ಮೇಲೆ ಕಾಲೇಜ್ `ಎ’ ಗ್ರೇಡ್ ಮಾನ್ಯತೆಯೊಂದಿಗೆ ಸಮಗ್ರ ಬದಲಾವಣೆಯ ಪರ್ವ ಉದಯವಾಗಿದೆ ಎಂದರೆ ತಪ್ಪಲ್ಲ ಎಂದ ಅವರು ವಂ|ವಿಜಯ್ ಲೋಬೋರವರು ಪ್ರಾಂಶುಪಾಲ ಹುದ್ದೆಯ ಜೊತೆಗೆ ಕಾಲೇಜ್ ಹಾಸ್ಟೆಲ್ ವಾರ್ಡನ್ ಜವಾಬ್ದಾರಿಯನ್ನು ನಿಭಾಯಿಸುವುದರೊಂದಿಗೆ ತಮ್ಮ ಜೀವನಪಥದಲ್ಲಿ ಸಾಕಷ್ಟು ಯಶ ಕಂಡಿದ್ದಾರೆ. ಬೋಧನಾ ಕ್ಷೇತ್ರವನ್ನು ಆಯ್ದುಕೊಂಡಿರುವ ವಂ|ವಿಜಯ್ ಲೋಬೋರವರು ಮತ್ತೊಮ್ಮೆ ಇದೇ ಕಾಲೇಜಿಗೆ ಪ್ರಾಂಶುಪಾಲರಾಗಿ ಬರಬಹುದಾಗಿದೆ ಎಂದು ಅವರು ಹೇಳಿದರು.

ಆತ್ಮೀಯವಾಗಿ ಬೆರೆಯುವ, ಪ್ರೀತಿಪೂರ್ವಕವಾಗಿ ನಡೆದುಕೊಳ್ಳುವ ಕಲೆಗಾರಿಕೆಯಿದೆ-ವಂ|ಲಾರೆನ್ಸ್:
ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಯಾವುದೇ ವ್ಯಕ್ತಿಯ ಬಗ್ಗೆ ಒಳ್ಳೇದನ್ನು ಮಾತಾಡಿದಾಗ ಅಥವಾ ಕೇಳಿದಾಗ ಸಂತೋಷವಾಗುತ್ತದೆ. ಅದರಂತೆ ವಂ|ವಿಜಯ್ ಲೋಬೋರವರ ವ್ಯಕ್ತಿತ್ವ, ಸಾಮರ್ಥ್ಯ, ಪ್ರತಿಭಾ ಗುಣಗಳ ಬಗ್ಗೆ ಗಣ್ಯರು ಇಲ್ಲಿ ಉತ್ತಮ ರೀತಿಯಲ್ಲಿ ತೆರೆದಿಟ್ಟಿದ್ದಾರೆ. ನಡೆ-ನುಡಿಯಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡಿರುವ ವಂ|ವಿಜಯ್‌ರವರೋರ್ವ ಕೂಲ್ ಪರ್ಸನ್. ಯಾವುದೇ ಸಂದರ್ಭದಲ್ಲೂ, ಯಾವುದೇ ಪರಿಸ್ಥಿತಿಯಲ್ಲೂ ಸಹನೆಯನ್ನು ಕಳೆದುಕೊಳ್ಳದೆ ಅವನ್ನು ನಿಭಾಯಿಸುವ ರೀತಿ ಅವರ ನಿಜವಾದ ಶಕ್ತಿಯಾಗಿದೆ. ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಾ, ಪ್ರೀತಿಪೂರ್ವಕವಾಗಿ ನಡೆದುಕೊಳ್ಳುವ ಉತ್ತಮ ಕಲೆಗಾರಿಕೆ ಅವರಲ್ಲಿದೆ ಎಂದ ಅವರು ಧರ್ಮಗುರುಗಳ ಜೀವನ ಪಯಣದಲ್ಲಿ ಎಲ್ಲಿಗೆ ಹೋಗಬೇಕಾದ ಸಂದರ್ಭದಲ್ಲೂ ಉತ್ತಮ ಸೇವೆ ಮಾಡುತ್ತಾ ಒಳ್ಳೆಯ ಜೀವನ ಸಾಗಿಸುವುದಾಗಿದೆ. ವರ್ಗಾವಣೆಗೊಳ್ಳುತ್ತಿರುವ ಪ್ರಾಂಶುಪಾಲರಾದ ವಂ|ವಿಜಯ್‌ರವರ ಮುಂದಿನ ಸೇವೆಯಲ್ಲಿ ಅಡೆ-ತಡೆಗಳನ್ನು ಮೆಟ್ಟಿ ನಿಲ್ಲುವ ಆಧ್ಯಾತ್ಮಿಕ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಹಾರೈಸಿ ಶುಭ ಹಾರೈಸಿದರು.

ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಹಿತೈಷಿಗಳಿಗೆ ತಮ್ಮ ನಡೆ-ನುಡಿಯಿಂದ `ಟಚ್’ ಮಾಡಿದ್ದಾರೆ-ವಂ|ಆಂಟನಿ ಪ್ರಕಾಶ್:
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ|ಆಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ೧೯೯೪, ಜೂನ್ ೨೧ ರಂದು ನಾನು ಮತ್ತು ವಂ|ವಿಜಯ್‌ರವರು ಒಟ್ಟಿಗೆ ಸೆಮಿನರಿಗೆ ಭರ್ತಿಯಾಗಿದ್ದೆವು. ಅಲ್ಲಿಂದ ಇಲ್ಲಿವರೆಗೆ ನಮ್ಮ ಒಡನಾಟವಿದೆ. ವಂ|ವಿಜಯ್‌ರವರು ಫಿಲೋಮಿನಾ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಯಾಗಿ ೩ ವರ್ಷ, ಪ್ರಾಂಶುಪಾಲರಾಗಿ ೧೧ ವರ್ಷ ಹೀಗೆ ೧೪ ವರ್ಷಗಳನ್ನು ಕಳೆದಿರುತ್ತಾರೆ. ವಂ|ವಿಜಯ್‌ರವರು ಸಾವಿರಾರು ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಹಿತೈಷಿಗಳಿಗೆ ತಮ್ಮ ನಡೆ-ನುಡಿಯಿಂದ `ಟಚ್’ ಮಾಡಿದ್ದಾರೆ. ಅವರೋರ್ವ ಉತ್ತಮ ಸಂವಹನಕಾರ, ಅವರೊಳಗೆ ಸಾಕಷ್ಟು ಭಾವನೆಗಳು ಹಾಗೂ ಪ್ರೀತಿ ಮನೆಮಾಡಿದೆ ಮಾತ್ರವಲ್ಲದೆ ಅವರಲ್ಲಿ ಕೃತಜ್ಞತಾ ಮನೋಭಾವನೆಯಿದೆ ಎಂದರೆ ತಪ್ಪಲ್ಲ ಎಂದು ಹೇಳಿ ಮುಂದಿನ ಧಾರ್ಮಿಕ ಸೇವೆಗೆ ಶುಭವನ್ನು ಕೋರಿದರು.

ಕಾಲೇಜಿನ ಸಮಗ್ರ ಅಭಿವೃದ್ಧಿಯಲ್ಲಿ ಸಾಕಷ್ಟು ಬದಲಾವಣೆ-ಎ.ಜೆ ರೈ:
ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈಯವರು ಮಾತನಾಡಿ, ಕಳೆದ ಹನ್ನೊಂದು ವರ್ಷಗಳಲ್ಲಿ ಕಾಲೇಜಿನ ದಾಖಲಾತಿಯಲ್ಕಿ, ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ, ಕಾಲೇಜಿನ ಸಮಗ್ರ ಅಭಿವೃದ್ಧಿಯಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು ವಂ.ವಿಜಯ್ ಲೋಬೋರವರ ನಾಯಕತ್ವ ಗುಣಕ್ಕೆ ಸಾಕ್ಷಿಯಾಗಿದೆ.ಹಿರಿಯ ವಿದ್ಯಾರ್ಥಿ ಸಂಘದ ಪ್ರತಿಯೋರ್ವ ಸದಸ್ಯರಲ್ಲಿ ವಂ|ವಿಜಯ್‌ರವರು ನಿರಂತರ ಸಂಪರ್ಕದಲ್ಲಿರುತ್ತಿದ್ದರು. ಕಾಲೇಜಿನಲ್ಲಿ ಸಲ್ಲಿಸಿರುವ ನಿಸ್ವಾರ್ಥ ಸೇವೆಯಿಂದ ಅವರು ವಿಶೇಷ ಹೆಸರು ಗಳಿಸಿದ್ದಾರೆ ಎಂಬುದು ಸತ್ಯ. ಪ್ರಸ್ತುತ ವಂ.ವಿಜಯ್‌ರವರು ಉಜಿರೆ ಕಾಲೇಜಿಗೆ ವರ್ಗಾವಣೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಶುಭವನ್ನು ಕೋರುತ್ತಾ ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಎಲ್ಲರನ್ನು ಒಗ್ಗೂಡಿಸಿ ಮುನ್ನೆಡೆಸುವ ಪ್ರಬುದ್ಧತೆ ವಂ|ವಿಜಯ್‌ರವರಲ್ಲಿದೆ-ಸೂರ್ಯನಾರಾಯಣ:
ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷ ಸೂರ್ಯನಾರಾಯಣರವರು ಮಾತನಾಡಿ, ೨೦೧೨ರಲ್ಲಿ ನನ್ನ ಮಕ್ಕಳನ್ನು ಕಾಲೇಜಿಗೆ ಸೇರಿಸಿದ ಸಂದರ್ಭದಲ್ಲಿ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಾಗ ನನ್ನ ಮತ್ತು ಪ್ರಾಂಶುಪಾಲರ ನೇರ ಸಂಪರ್ಕ ಆರಂಭಗೊಂಡಿತ್ತು.ಎಲ್ಲಿ ಮಾತಾಡಬೇಕು, ಹೇಗೆ ಮಾತಾಡಬೇಕು ಎಂದು ತಿಳಿದವರಿಗೆ ವಿರೋಧಿಗಳೇ ಇರುವುದಿಲ್ಲ ಎಂಬುದಕ್ಕೆ ವಂ|ವಿಜಯ್ ಲೋಬೋರವರು ಸಾಕ್ಷಿಯಾಗಿದ್ದಾರೆ. ಯಾರಲ್ಲೂ ಕೋಪ ಮಾಡದೆ, ಯಾರಿಗೂ ಜೋರು ಮಾಡದೆ ಮಕ್ಕಳಲ್ಲಿ ಗೌರವದ ಭಾವನೆಯನ್ನು ಉಂಟು ಮಾಡುವ ಚಾಕಚಾಕ್ಯತೆ ವಂ.ವಿಜಯ್ ರವರಲ್ಲಿದೆ. ಕಾಲೇಜಿನ ವಿದ್ಯಾರ್ಥಿ ಸಂಖ್ಯೆಯಲ್ಲಿ ಹೆಚ್ಚಳ, ಅಭಿವೃದ್ಧಿ ನಿಟ್ಟಿನಲ್ಲಿ ಎಲ್ಲರನ್ನು ಒಗ್ಗೂಡಿಸಿ ಮುನ್ನೆಡೆಸುವ ಪ್ರಬುದ್ಧತೆ ವಂ.ವಿಜಯ್ ರವರಲ್ಲಿದೆ ಎಂದು ಹೇಳಿ ಮುಂದಿನ ಸೇವೆಗೆ ಶುಭ ಹಾರೈಸಿದರು.

ಆತ್ಮೀಯತೆಯ ನಡೆ-ನುಡಿಯ ಕಾರ್ಯವೈಖರಿ ಮಾದರಿ-ಪ್ರತಿಮಾ ಹೆಗ್ಡೆ:
ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಸದಸ್ಯೆ ಪ್ರತಿಮಾ ಹೆಗ್ಡೆರವರು ಮಾತನಾಡಿ, ಹತ್ತು ವರ್ಷದ ಹಿಂದೆ ನನ್ನ ಮಗ ವೈಷ್ಣವ್ ಹೆಗ್ಡೆಯನ್ನು ಕ್ರೀಡಾ ಕೋಟಾದಡಿಯಲ್ಲಿ ಕಾಲೇಜಿಗೆ ದಾಖಲಾತಿ ಮಾಡುವ ಸಂದರ್ಭದಲ್ಲಿ ವೈಷ್ಣವ್ ಹೆಗ್ಡೆಗೆ ಸ್ವಿಮ್ಮಿಂಗ್ ನಲ್ಲಿ ಸಾಧನೆ ಮಾಡಲು ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ ವಂ.ವಿಜಯ್ ಲೋಬೋರವರು. ವಂ.ವಿಜಯ್ ಲೋಬೋರವರ ಆತ್ಮೀಯತೆಯ ನಡೆ-ನುಡಿಯ ಕಾರ್ಯವೈಖರಿ ಮೂಲಕ ಎಲ್ಲರನ್ನು ಟಚ್ ಮಾಡಿದ್ದಾರೆ ಎಂದು ವಂ|ವಿಜಯ್ ಲೋಬೋರವರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿ ಅವರ ಮುಂದಿನ ಸೇವೆಗೆ ಶುಭ ಹಾರೈಸಿದರು.

ಹೂಹಾರ ನೀಡಿ ಗೌರವ:
ಧರ್ಮಗುರುಗಳಾದ ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್‌ನ ವಂ|ವಲೇರಿಯನ್ ಫ್ರ್ಯಾಂಕ್, ಬನ್ನೂರು ಸಂತ ಅಂತೋನಿ ಚರ್ಚ್‌ನ ವಂ|ಪ್ರಶಾಂತ್ ಫೆರ್ನಾಂಡೀಸ್, ವಂ|ಫ್ರಾನ್ಸಿಸ್ ವೇಗಸ್(ಎಸ್‌ವಿಡಿ) ಬೋಪಾಲ್, ಬ್ರದರ್ ರಾಬಿನ್, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಫೆಬಿಯನ್ ಗೋವಿಯಸ್, ಆರ್ಥಿಕ ಸಮಿತಿಯ ಸದಸ್ಯರಾದ ವಿ.ಜೆ ಫೆರ್ನಾಂಡೀಸ್, ಜೆರೋಮಿಯಸ್ ಪಾಸ್, ಝೇವಿಯರ್ ಡಿ’ಸೋಜ, ಜೆ.ಪಿ ರೊಡ್ರಿಗಸ್, ಗೊನ್ಸಾಲ್ವಿಸ್ ಅರ್ಥ್‌ಮೂವರ್‍ಸ್‌ನ ಲಾರೆನ್ಸ್ ಗೊನ್ಸಾಲ್ವಿಸ್, ಪುತ್ತೂರು ವರ್ತಕ ಸಂಘದ ಅಧ್ಯಕ್ಷ ಜೋನ್ ಕುಟಿನ್ಹಾ, ಫಿಲೋಮಿನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕಾರ್ಮಿನ್ ಪಾಸ್, ಫಿಲೋಮಿನಾ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಕೆ ಜಗನ್ನೀವಾಸ್ ರಾವ್, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೋಸ್‌ಲಿನ್ ಲೋಬೋ, ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲೋರಾ, ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆರಿ ಡಿ’ಸೋಜ, ಧರ್ಮಭಗಿನಿಯರು, ಫಿಲೋಮಿನಾ ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾದ ನಿರಂಜನ್ ರೈ ಹಾಗೂ ಜೈರಾಜ್ ಭಂಡಾರಿ, ಫಿಲೋಮಿನಾ ಕಾಲೇಜು ಕ್ಯಾಂಟೀನಿನ ಆನಂದ ಶೆಟ್ಟಿ, ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜನಾರ್ದನ ಹೇರಳೆ, ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರೊ|ಹರ್ಬರ್ಟ್ ನಜ್ರೆತ್, ಆಡಳಿತ ಸಿಬ್ಬಂದಿಗಳಾದ ಶೆರಿ ಮಸ್ಕರೇನ್ಹಸ್, ಸಿರಿಲ್ ವಾಸ್, ಸಿರಿಲ್ ಮೊರಾಸ್, ಜೋನ್ ಡಿ’ಸೋಜ, ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿ’ಸೋಜ, ಹರ್ಷದ್ ಇಸ್ಮಾಯಿಲ್ ದುಬೈ, ಎಲೆಕ್ಟ್ರೀಶಿಯನ್ ಎಡ್ವಿನ್, ಕಾರ್ಪೆಂಟರ್ ರಿಚರ್ಡ್ ರೆಬೆಲ್ಲೋ, ರೊನಾಲ್ಡ್ ಪಿಂಟೋ ದರ್ಬೆ, ನಿವೃತ್ತ ಶಿಕ್ಷಕಿ ಪ್ರೆಸ್ಸಿ ಪಾಸ್, ಮಾಯಿದೆ ದೇವುಸ್ ಶಾಲೆಯ ಶಿಕ್ಷಕಿ ಫ್ಲಾವಿಯಾ ಅಲ್ಬುಕರ್ಕ್, ಫಿಲೋಮಿನಾ ಪದವಿ ಪೂರ್ವ ಕಾಲೇಜು, ಫಿಲೋಮಿನಾ ಕಾಲೇಜು, ಫಿಲೋಮಿನಾ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಫಿಲೋಮಿನಾ ಪ್ರೌಢಶಾಲೆ, ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಸಿಬ್ಬಂದಿ ವರ್ಗ ಸಹಿತ ಹಲವರು ಉಪಸ್ಥಿತರಿದ್ದು ವರ್ಗಾವಣೆಗೊಳ್ಳುತ್ತಿರುವ ವಂ|ವಿಜಯ್ ಲೋಬೋರವರಿಗೆ ಹೂಹಾರ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ರಕ್ಷಕ-ಶಿಕ್ಷಕ ಸಂಘ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ವರ್ಗಾವಣೆಗೊಳ್ಳುತ್ತಿರುವ ಪ್ರಾಂಶುಪಾಲ ವಂ|ವಿಜಯ್ ಲೋಬೋರವರಿಗೆ ಹೂಹಾರ ಹಾಕಿ, ಸನ್ಮಾನಿಸಲಾಯಿತು. ಉಪನ್ಯಾಸಕಿ ಸುಮನಾ ಪ್ರಶಾಂತ್ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಹಿರಿಯ ಉಪನ್ಯಾಸಕಿ ಶ್ರೀಮತಿ ವತ್ಸಲಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ ಸ್ವಾಗತಿಸಿದರು. ಉಪನ್ಯಾಸಕಿ ಡಾ|ಆಶಾ ಸಾವಿತ್ರಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಪ್ರೀತಿಗೆ ಚಿರಋಣಿ, ಆತ್ಮತೃಪ್ತಿಯಿಂದ ನಿರ್ಗಮಿಸುತ್ತಿದ್ದೇನೆ…
ಫಿಲೋಮಿನಾ ಪದವಿ ಪೂರ್ವ ಕಾಲೇಜು ಸಮಾಜಕ್ಕೆ ಸಾಧಕರನ್ನು ಕೊಡುಗೆಯಾಗಿ ನೀಡುವ ಕಾರ್ಖಾನೆಯಂತೆ ಕೆಲಸ ಮಾಡುತ್ತಿದ್ದು, ಈ ಕಾಲೇಜಿನಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ಅತ್ಯಂತ ಹೆಮ್ಮೆಯ ವಿಚಾರ. ಕಳೆದ ಹನ್ನೊಂದು ವರ್ಷಗಳಿಂದ ಈ ಸಂಸ್ಥೆಯಲ್ಲಿ ಪ್ರಾಂಶುಪಾಲನಾಗಿ ಜವಾಬ್ದಾರಿಯನ್ನು ನಿರ್ವಹಿಸಿರುವ ನನಗೆ, ಕಾಲೇಜಿನ ಆಡಳಿತ ಮಂಡಳಿ, ಹೆತ್ತವರು ಮತ್ತು ಶಿಕ್ಷಕರು ಅದೇ ರೀತಿ ಹಿರಿಯ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ ವಿದ್ಯಾರ್ಥಿ ಸಮುದಾಯವು ಸಂಪೂರ್ಣ ಸಹಕಾರವನ್ನು ನೀಡಿರುತ್ತಾರೆ. ನನ್ನ ಸೇವಾ ಅವಧಿಯಲ್ಲಿ ಪುತ್ತೂರಿನ ಜನತೆ ತೋರಿದ ಪ್ರೀತಿ, ನನ್ನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ನನಗೆ ಸಹಕಾರಿಯಾಗಿದ್ದು, ಎಲ್ಲರ ಸಹಕಾರದೊಂದಿಗೆ ವಿದ್ಯಾರ್ಥಿ ಸಮುದಾಯಕ್ಕೆ ನಾನು ನೀಡಿರುವ ಕೊಡುಗೆ ಅತ್ಯಂತ ತೃಪ್ತಿಕರವಾಗಿದೆ. ೨೦೧೧, ಮೇ ೨೩ರಂದು ಆಗಮಿಸಿದ್ದೆ, ಕಾಕತಾಳೀಯವೆಂಬಂತೆ ೨೦೨೨, ಮೇ ೨೩ರಂದೇ ನಿರ್ಗಮಿಸುತ್ತಿದ್ದು ಪುತ್ತೂರಿನ ಪ್ರತಿಯೊಬ್ಬರಿಗೂ ನಾನು ಅಭಾರಿಯಾಗಿರುತ್ತೇನೆ.ವಂ|ವಿಜಯ್ ಲೋಬೋ, ಸನ್ಮಾನಿತ ನಿರ್ಗಮಿತ ಪ್ರಾಂಶುಪಾಲರು, ಸಂತ ಫಿಲೋಮಿನಾ ಪ.ಪೂರ್ವ ಕಾಲೇಜು

ಸ್ವಾಗತ..
ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ.ವಂ.ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರ ಆದೇಶದಂತೆ ವರ್ಗಾವಣೆಗೊಳ್ಳುತ್ತಿರುವ ಪ್ರಾಂಶುಪಾಲ ವಂ|ವಿಜಯ್ ಲೋಬೋರವರ ಸ್ಥಾನಕ್ಕೆ ನೂತನ ಪ್ರಾಂಶುಪಾಲರಾಗಿ ನೇಮಕಗೊಂಡಿರುವ ವಂ|ಅಶೋಕ್ ರಾಯನ್ ಕ್ರಾಸ್ತಾರವರಿಗೆ ಈ ಸಂದರ್ಭದಲ್ಲಿ ಕಾಲೇಜು ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಹೂಗುಚ್ಛ ನೀಡಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here