ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಾಲಾ ನೂತನ ಕಟ್ಟಡಗಳ ಲೋಕಾರ್ಪಣೆ

0

  • 4 ವರ್ಷದಲ್ಲಿ ರಾಜ್ಯದಲ್ಲಿ 7 ಸಾವಿರ ಶಾಲಾ ಕೊಠಡಿಗಳ ನಿರ್ಮಾಣವಾಗಿದೆ: ಬಿ ಸಿ ನಾಗೇಶ್

 

ಪುತ್ತೂರು: ರಾಜ್ಯ ಸರಕಾರ ಶಿಕ್ಷಣದ ಕಡೆ ಹೆಚ್ಚು ಒಲವು ತೋರುತ್ತಿದ್ದು ಕಳೆದ ನಾಲ್ಕು ವರ್ಷದಲ್ಲಿ ರಾಜ್ಯದಲ್ಲಿ ಒಟ್ಟು 7000 ತರಗತಿ ಕೊಠಡಿಗಳ ನಿರ್ಮಾಣ ಕಾರ್ಯ ನಡೆದಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.

 


ಅವರು ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ ಶಾಲಾ ಕೊಠಡಿಗಳ ಲೋಕಾರ್ಪಣೆ ಮಾಡಿ ಮಾತನಾಡಿದರು. ಸರಕಾರಿ ಶಾಲೆಗಳು ಮೂಲಭೂತ ಸೌಕರ್ಯದಿಂದ ವಂಚಿತ ಆಗಬಾರದು ಎಂಬ ಉದ್ದೇಶದಿಂದ ಶೌಚಾಲಯ, ಪ್ರಯೋಗಾಲಯ  ಸೇರಿದಂತೆ ಬೇಡಿಕೆ ಇರುವ ಎಲ್ಲಾ ಸೌಲಭ್ಯಗಳ ಕಡೆ ಹೆಚ್ಚು ಒತ್ತು ನೀಡುವ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ವ್ಯವಸ್ಥೆಯನ್ನು ಮಾಡಲಾಗಿದೆ. ಸರಕಾರಿ ಶಾಲೆಗಳಲ್ಲಿರುವ ಎಸ್‌ಡಿಎಂಸಿ ಸಮಿತಿಯು ಹೆಚ್ಚು ಸಕ್ರೀಯವಾಗಿದ್ದು ಇದು ಉತ್ತಮ ಬೆಳವಣಿಗೆಯಾಗಿದೆ ಎಂದ ಅವರು ಶಾಲೆಯ ಅಭಿವೃದ್ದಿ ವಿಚಾರದಲ್ಲಿ ಪೋಷಕರ ಸಹಬಾಗಿತ್ವ ಅತೀ ಅಗತ್ಯವಾಗಿದೆ ಎಂದು ಹೇಳಿದರು.

 

15,000 ಶಿಕ್ಷಕರ ನೇಮಕ
ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದೆ. ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಶಿಕ್ಷಕರ ಕೊರತೆಯನ್ನು ನೀಗಿಸುವಲ್ಲಿ ಸರಕಾರ ಎಲ್ಲಾ ವ್ಯವಸ್ಥೆಗಳನ್ನು ಮಾಡಲಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ಇದರಿಂದ ತುಂಬಾ ಪ್ರಯೋಜನವಾಗಲಿದೆ ಎಂದು ಸಚಿವರು ಹೇಳಿದರು. ದೇಶದಲ್ಲಿ   ಬ್ರಿಟಿಷರ     ಕಾಲದ ಶಿಕ್ಷಣ   ಪದ್ಧತಿ ಇತ್ತು ನಾವು ಬ್ರಿಟೀಷರ ಗುಲಾಮರಾಗುವುದು ಬೇಡ ಎಂಬ ಉದ್ದೇಶದಿಂದ ಹೊಸ ಶೈಕ್ಷಣಿಕ ನೀತಿಯನ್ನು ಜಾರಿ ಮಾಡಲಾಗಿದೆ. ಮಕ್ಕಳ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ನೀತಿಯನ್ನು ರೂಪಿಸಲಾಗಿದೆ ಎಂದು ಹೇಳಿದರು. ಮಕ್ಕಳು ಒಂದೇ ರೀತಿಯ ಪ್ರತಿಭೆಯನ್ನು ಹೊಂದಿರುವುದಿಲ್ಲ ಪ್ರತೀಯೊಬ್ಬ ವಿದ್ಯಾರ್ಥಿಯ ಪ್ರತಿಭೆಗೂ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಪುತ್ತೂರು ಕ್ಷೇತ್ರದಲ್ಲಿ 40 ಕೋಟಿ ಕಾಮಗಾರಿ: ಮಠಂದೂರು
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾಲ್ಕು ವರ್ಷದಲ್ಲಿ ಶಾಲಾ ಕೊಠಡಿ ಮತ್ತು ಶಾಲಾ ಮೂಲಭೂತ ಸೌಕರ್ಯ ವೃದ್ದಿಗಾಗಿ ಒಟ್ಟು 40 ಕೋಟಿ ಅನುದಾನವನ್ನು ನೀಡಲಾಗಿದೆ. ಬೇಡಿಕೆ ಮತ್ತು ಅಗತ್ಯವಿರುವ ಎಲ್ಲಾ ಸರಕಾರಿ ಶಾಲೆಗಳಿಗೆ ಸಮಪ್ರಮಾಣದಲ್ಲಿ ಅನುದಾನವನ್ನು ಹಂಚಲಾಗಿದೆ. ಮಕ್ಕಳ ಶ್ರೇಯೋಭಿವೃದ್ದಿಗಗಿ ಕೊರತೆ ಇರುವ ಶಾಲೆಗಳಲ್ಲಿ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಸರಕಾರಿ ಶಾಲೆಗಳು ಈಗ ಮೊದಲಿನಂತಿಲ್ಲ ಎಲ್ಲಾ ವ್ಯವಸ್ಥೆಗಳೂ ಇದ್ದು ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಬೇಕಾಗಿದೆ ಎಂದು ಹೇಳಿದರು. ಪೋಷಕರ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಪ್ರತೀಯೊಂದು ಮಗು ಶಿಕ್ಷಣ ಕಲಿಯಬೆಕು ಯಾರೂ ಶಿಕ್ಷಣದಿಂದ ವಂಚಿತರಾಗಬೇಕು ಈ ಕಾರಣಕ್ಕೆ ಸರಕಾರ ಸರಕಾರಿ ಶಾಲೆಗಳಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡುತ್ತಿದೆ ಇದಕ್ಕೆ ಪೋಷಕರ ಸಹಬಾಗಿತ್ವ ಅತೀ ಅಗತ್ಯವಾಗಿದೆ. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲಾ ಮಕ್ಕಳು ಹೆಚ್ಚಿನ ಫಲಿತಾಂಶವನ್ನು ತಂದಿರುವುದು ಅಭಿನಂದನಾರ್ಹ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ನೀಡಲಾಗುವುದು ಎಂದು ಹೇಳಿದರು.

ಸಭಾ ಕಾರ್ಯಕ್ರಮವನ್ನು ಸಚಿವರು ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಲೆಯ ನೂತನ ಎರಡು ಕೊಠಡಿ ಮ್ತತು ಪ್ರಯೋಗಾಲಯವನ್ನು ರಿಬ್ಬನ್ ಕತ್ತರಿಸುವ ಮೂಲಕ ಸಚಿವರು ಉದ್ಘಾಟಿಸಿದರು.

ಶಾಲಾ ಎಸ್‌ಡಿಎಂಸಿ ಸಮಿತಿ ವತಿಯಿಂದ ಸಚಿವರು ಹಾಗೂ ಶಾಸಕರನ್ನು ಪೋಷಕರ ಪರವಾಗಿ ಶಾಲುಹೊದಿಸಿ, ಪೇಟ ತೊಡಿಸಿ ಸನ್ಮಾನಿಸಲಾಯಿತು. ಕಟ್ಟಡದ ಗುತ್ತಿಗೆದಾರರಾದ ಪ್ರಭಾಕರ್ ಮಾಸ್ಟರ್ ಪ್ಲಾನರಿ, ಕುಂಬ್ರದ ಯುವರಾಜ್ ಹಾಗೂ ಆಶಿಕ್ ರವರನ್ನು ಸಚಿವರು ಶಾಲು ಹೊದಿಸಿ ಸನ್ಮಾನಿಸಿದರು. ಈ ಬಾರಿ ಎಸ್ಸೆಸ್ಸೆಲ್ಸಿಯನ್ನು ಅತ್ಯಧಿಕ ಅಂಕಪಡೆದ ಖತೀಜತ್ ಶಮ್ಲಾ, ಆಯಿಷತ್ ಅರ್ಫಾನ ಮತ್ತು ವೀಕ್ಷ ರವರನ್ನು ಸಚಿವರು ಶಾಲು ಹೊದಿಸಿ ಸನ್ಮಾನಿಸಿದರು.

ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಕುಂಬ್ರ ಕೆಪಿಎಸ್ ಸ್ಕೂಲ್ ಕಾರ್ಯಾಧ್ಯಕ್ಷ ನಿತೀಶ್‌ಕುಮಾರ್ ಶಾಂತಿವನ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಳ್ಳತ್ತಾರು, ಪಪೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಯಣ್ಣ ಸಿ ಡಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಉಪಸ್ಥಿತರಿದ್ದರು. ಅಭಿವೃದ್ದಿ ಸಮಿತಿ ಸದಸ್ಯರಾದ ಮಾಧವ ರೈ ಕುಂಬ್ರ, ಒಳಮೊಗ್ರು ಗ್ರಾಪಂ ಸದಸ್ಯ ಲತೀಫ್ ಕುಂಬ್ರ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಒಳಮೊಗ್ರು ಬಿಜೆಪಿ ಆಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಒಳಮೊಗ್ರು ಗ್ರಾಪಂ ಸದಸ್ಯರಾದ ಅಶ್ರಫ್ ಉಜಿರೋಡಿ, ಶೀನಪ್ಪ ನಾಯ್ಕ್, ಚಿತ್ರಾ ಬಿ ಸಿ, ನಿಮಿತಾ, ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ಸಿಆರ್‌ಪಿ ಶಶಿಕಲಾ ಟೀಚರ್, ಕೆದಂಬಾಡಿ ಗ್ರಾಪಂ ಸದಸ್ಯ ಕೃಷ್ಣ, ಸುಧಾಕರ್ ರೈ ಕುಂಬ್ರ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕೆಪಿಎಸ್ ಸ್ಕೂಲ್ ಪ್ರಾಂಶುಪಾಲರಾದ ಗೋಪಾಲಕೃಷ್ಣ ಉಪಾಧ್ಯಾಯ ಸ್ವಾಗತಿಸಿದರು. ಶಿಕ್ಷಕಿ ಮಮತಾ ಕೆಎಸ್ ವಂದಿಸಿದರು. ಶಿಕ್ಷಕಿ ಪ್ರಶಾಂತಿ ಮತ್ತು ಶ್ರೀನಿವಾಸ್ ಬಡೆಕಿಲ್ಲಾಯ ಕಾರ್ಯಕ್ರಮ ನಿರೂಪಿಸಿದರು.  ಮುಖ್ಯ ಶಿಕ್ಷಕಿ ವೀಣಾ ಕುವೆಲ್ಲೋ, ಶಿಕ್ಷಕಿಯರಾದ ಸಂದ್ಯಾ, ಶಾರದಾ, ಜೂಲಿಯಾನ ಮೊರಾಸ್, ಎಲ್‌ಕೆಜಿ ಶಿಕ್ಷಕಿ ಚಿತ್ರಾ ಸಹಕರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here