ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಕಡಬ ತಾಲೂಕಿಗೆ ಸತತ ೨ನೇ ಬಾರಿ ಜಿಲ್ಲೆಯಲ್ಲೇ ಗುರಿ ಮೀರಿದ ಸಾಧನೆಯ ಹೆಗ್ಗಳಿಕೆ

0

  • 4 ಗ್ರಾ.ಪಂ.ಗಳಲ್ಲಿ 20 ಸಾವಿರಕ್ಕಿಂತ ಅಧಿಕ ಮಾನವ ದಿನಗಳ ಸೃಜನೆ
  • ಶಿರಾಡಿ ಗ್ರಾ.ಪಂ.ನಲ್ಲಿ ಹೆಚ್ಚಿನ ಅಕುಶಲ ಉದ್ಯೋಗ ಹಂಚಿಕೆ

 

ಕಡಬ: ಗೋಳಿತೊಟ್ಟು ಗ್ರಾ.ಪಂ. ವ್ಯಾಪ್ತಿಯ ಕಲ್ಲಡ್ಕದಲ್ಲಿ ನರೇಗಾದಡಿ ನಿರ್ಮಿಸಲಾಗುತ್ತಿರುವ ಕಿಂಡಿ ಅಣೆಕಟ್ಟನ್ನು ರಾಜ್ಯ ಗುಣಮಟ್ಟ ನಿಯಂತ್ರಕರ ತಂಡ ಪರಿಶೀಲಿಸಿತು.

ಕಡಬ: ಕಡಬ ತಾಲೂಕು ಪುತ್ತೂರಿನಿಂದ ಪ್ರತ್ಯೇಕಗೊಂಡು ೨ ಆರ್ಥಿಕ ವರ್ಷಗಳಾಗಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ೨೦೨೧-೨೨ ನೇ ಸಾಲಿನಲ್ಲಿ ದ.ಕ. ಜಿಲ್ಲೆಯಲ್ಲೇ ಗುರಿ ಮೀರಿದ ಸಾಧನೆಯನ್ನು ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ತಾಲೂಕಿನ ವ್ಯಾಪ್ತಿಯ ೨೧ ಗ್ರಾ.ಪಂ. ಗಳ ಮೂಲಕ ಸರಕಾರದ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ ಗ್ರಾಮೀಣ ಜನತೆಗೆ ಅಕುಶಲ ಉದ್ಯೋಗವನ್ನು ನೀಡುತ್ತಾ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದೆ. ಸರಕಾರ ೨೦೨೧-೨೨ ರಲ್ಲಿ ೨,೦೦,೫೦೯ ಮಾನವ ದಿನ ಸೃಜಿಸುವ ವಾರ್ಷಿಕ ಗುರಿಯನ್ನು ನಿಗದಿಪಡಿಸಿತ್ತಾದರೂ, ನವೆಂಬರ್ ೨೦೨೧ ರಲ್ಲಿಯೇ ತಾಲೂಕು ಶೇ. ೧೦೦ ಗುರಿಯನ್ನು ಸಾಧಿಸಿ ಮಾರ್ಚ್ ಅಂತ್ಯಕ್ಕೆ ೨,೭೮,೦೮೧ ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ.೧೩೯ ಸಾಧನೆಯನ್ನು ಮಾಡಿ ಜಿಲ್ಲೆಯಲ್ಲೇ ಅಧಿಕ ಗುರಿಯನ್ನು ಸಾಧಿಸಿದ ತಾಲೂಕಾಗಿ ಗುರುತಿಸಿಕೊಂಡಿದೆ. ೧೬,೦೭೩ ಕುಟುಂಬಗಳು ಉದ್ಯೋಗ ಚೀಟಿ ಪಡೆದುಕೊಂಡಿದ್ದು. ೧೫೬ ಫಲಾನುಭವಿಗಳು ವಾರ್ಷಿಕ ೧೦೦ ದಿನ ಪೂರೈಸಿರುತ್ತಾರೆ. ಮಹಿಳೆಯರು ೧,೨೯,೭೯೨ ಮಾನವ ದಿನಗಳನ್ನು ಸೃಜಿಸಿದ್ದು, ಮಹಿಳಾ ಭಾಗವಹಿಸುವಿಕೆ ಶೇ. ೪೬.೬ ರಷ್ಟಿದೆ. ಪ.ಜಾತಿ, ಪ.ಪಂ.ಗಳ ಫಲಾನುಭವಿಗಳು ೩೨೯೭೧ ಮಾನವ ದಿನಗಳನ್ನು ಸೃಜಿಸಿರುತ್ತಾರೆ.

ವೈಯಕ್ತಿಕ ಕಾಮಗಾರಿಗಳೇ ಹೆಚ್ಚು: ತಾಲೂಕಿನಲ್ಲಿ ಒಟ್ಟಾರೆ ಬಾವಿ ೧೨೫, ತೋಟಗಾರಿಕಾ ಅಭಿವೃದ್ಧಿ ೧೩೬೨, ಆಡು ಶೆಡ್ ೨೬, ದನದ ಹಟ್ಟಿ ೨೮೪, ಹಂದಿ ಶೆಡ್ ೧೪, ಕೋಳಿ ಶೆಡ್ ೭೦, ಸೋಕ್ ಪಿಟ್ ೨೧೯, ಕೃಷಿ ಹೊಂಡ ೯, ಶೌಚಾಲಯ ನಿರ್ಮಾಣ ೬೧, ಎರೆಹುಳು ಗೊಬ್ಬರ ಘಟಕ ೪೦, ಮಳೆ ನೀರು ಇಂಗು ಗುಂಡಿ ಕಾಮಗಾರಿ ೭೩, ಗೋಬರ್ ಗ್ಯಾಸ್ ಘಟಕ ೧೨, ಮೀನುಗಾರಿಕಾ ಹೊಂಡ ೬, ಗೊಬ್ಬರ ಗುಂಡಿ ನಿರ್ಮಾಣ ೪೩ ಹೀಗೆ ಒಟ್ಟು ೨೪೦೯ ವೈಯಕ್ತಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕ ಕಾಮಗಾರಿಗಳಲ್ಲಿ ೫ ಕಿಂಡಿ ಅಣೆಕಟ್ಟು, ೧ ಅಂಗನವಾಡಿ ಕೇಂದ್ರ, ೬೩ ಸಿ.ಸಿ. ರಸ್ತೆ, ೬ ಸಾರ್ವಜನಿಕ ತೆರೆದ ಬಾವಿ, ೩ ಗ್ರಾಮೀಣ ಉದ್ಯಾನವನ ನಿರ್ಮಾಣ, ೫೦ ತೋಡಿನ ಹೂಳೆತ್ತುವ ಕಾಮಗಾರಿ, ೫ ಪೌಷ್ಠಿಕ ತೋಟ ರಚನೆ, ೧೬ ಗ್ರಾ.ಪಂ. ಹಾಗೂ ಶಾಲಾ ಕಟ್ಟಡಗಳಿಗೆ ಮಳೆ ನೀರು ಕೊಯ್ಲು, ೧೪ ಸಾರ್ವಜನಿಕ ಪ್ರದೇಶದಲ್ಲಿ ಮಳೆ ನೀರು ಇಂಗು ಗುಂಡಿ ನಿರ್ಮಾಣ, ೧೧ ಶಾಲಾ ಆವರಣ ಗೋಡೆ ರಚನೆ, ೧ ಸಂಜೀವಿನಿ ಕಟ್ಟಡ ಹೀಗೆ ಒಟ್ಟು ೧೮೩ ಸಾರ್ವಜನಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ವರ್ಷದಿಂದ ವರ್ಷ ಪ್ರಗತಿ: ೨೦೨೧-೨೨ ರಲ್ಲಿ ಒಟ್ಟು ೯.೮೦ ಕೋಟಿ ರೂ. ಒಟ್ಟು ಅನುದಾನ ಬಳಕೆ ಮಾಡಿಕೊಂಡಿದ್ದು ೮ ಕೋಟಿ ರೂ. ಕೂಲಿ ಮೊತ್ತ ಹಾಗೂ ೧.೮೦ ಕೋಟಿ ರೂ. ಸಾಮಗ್ರಿ ಅನುದಾನವನ್ನು ಬಳಸಿಕೊಳ್ಳಲಾಗಿದೆ. ೨೦೨೦-೨೧ನೇ ಆರ್ಥಿಕ ವರ್ಷದಲ್ಲಿ ೨೪೯೪೮೩ ಮಾನವ ದಿನಗಳನ್ನು ಸೃಜಿಸುವ ಮೂಲಕ ೬.೭೫ ಕೋಟಿ ರೂ ಕೂಲಿ ಹಾಗೂ ೧.೫ ಕೋಟಿ ರೂ. ಸಾಮಗ್ರಿ ಒಟ್ಟು ೮.೨೫ ಕೋಟಿ ರೂ ಅನುದಾನವನ್ನು ಪಡೆದುಕೊಳ್ಳಲಾಗಿತ್ತು.

ಗ್ರಾಮ ಪಂಚಾಯತ್‌ಗಳ ಸಾಧನೆ: ಶಿರಾಡಿ ೨೪೯೮೫, ಗೋಳಿತೊಟ್ಟು ೨೪೮೫೭, ಬೆಳಂದೂರು ೨೩೧೨೪, ಸುಬ್ರಹ್ಮಣ್ಯ ೨೦೫೧೫, ಆಲಂಕಾರು ೧೬೪೧೯, ನೂಜಿಬಾಳ್ತಿಲ ೧೫೭೮೩, ನೆಲ್ಯಾಡಿ ೧೫೦೮೬, ಕುಟ್ರುಪಾಡಿ ೧೫೦೦೯, ಕೌಕ್ರಾಡಿ ೧೩೯೨೮, ಪೆರಾಬೆ ೧೩೩೪೮, ರಾಮಕುಂಜ ೧೩೩೦೫, ಸವಣೂರು ೧೧೬೦೩, ಕಾಣಿಯೂರು ೧೦೭೩೪, ಬಿಳಿನೆಲೆ ೧೦೫೮೫, ಎಡಮಂಗಲ ೯೨೦೬, ಕೊಯಿಲ ೮೭೧೭, ಬಳ್ಪ ೮೦೧೬, ಮರ್ದಾಳ ೭೦೮೧, ಕೊಂಬಾರು ೬೯೬೩, ಐತ್ತೂರು ೫೫೧೫, ಕೊಣಾಜೆ ೩೩೦೨ ಗ್ರಾಮ ಪಂಚಾಯತ್‌ಗಳು ಮಾನವ ದಿನಗಳನ್ನು ಸೃಜಿಸಿದೆ. ೨೦೨೦-೨೧ ಹಾಗೂ ೨೦೨೧-೨೨ ನೇ ಸಾಲಿನಲ್ಲಿ ತಾಲೂಕಿನ ಶಿರಾಡಿ, ಗೋಳಿತೊಟ್ಟು, ಬೆಳಂದೂರು, ಸುಬ್ರಹ್ಮಣ್ಯ ಗ್ರಾ.ಪಂ.ಗಳ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದು ಈ ೪ ಗ್ರಾ.ಪಂ. ಗಳು ಸತತ ಎರಡನೇ ವರ್ಷದಲ್ಲಿ ಅಂಕ ಮಾನವ ದಿನ ಸೃಜನೆಯನ್ನು ಮಾಡಿವೆ.

ಸತತ ಎರಡು ವರ್ಷ ರಾಜ್ಯ ಪ್ರಶಸ್ತಿ: ವಿಶೇಷವಾಗಿ ೨೦೨೦-೨೧ ನೇ ಸಾಲಿನಲ್ಲಿ ಶಿರಾಡಿ ಗ್ರಾ.ಪಂ. ಜಿಲ್ಲೆಯಲ್ಲೇ ಅತೀ ಹೆಚ್ಚು ಮಾನವ ದಿನ ಸೃಜಿಸಿದ ಸಾಧನೆಗೆ ರಾಜ್ಯ ಸರಕಾರ ಅಲ್ಲಿನ ಪಿಡಿಒ ವೆಂಕಟೇಶ್ ಅವರಿಗೆ ರಾಜ್ಯ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತ್ತು. ೨೦೨೧-೨೨ ರಲ್ಲಿ ಕಡಬ ತಾಲೂಕಿನ ನರೇಗಾ ಯೋಜನೆಯ ಮಾಹಿತಿ, ಶಿಕ್ಷಣ, ಸಂವಹನ ಸಂಯೋಜಕ ಭರತ್ ರಾಜ್ ಅವರಿಗೆ ನರೇಗಾ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಗಿತ್ತು. ಅದರೊಂದಿಗೆ ಶಿರಾಡಿ ಗ್ರಾ.ಪಂ. ಜಿಲ್ಲೆಯಲ್ಲಿ ಹೆಚ್ಚು ಮಾನವ ದಿನಗಳನ್ನು ಸೃಜಿಸಿದ ೨ ನೇ ಗ್ರಾ.ಪಂ. ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಡಬ ತಾಲೂಕು ಕಳೆದೆರಡು ವರ್ಷಗಳಲ್ಲಿ ವಿಶೇಷವಾಗಿ ನರೇಗಾ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದೆ. ವಿಶೇಷವಾಗಿ ಅಡಿಕೆ ಗಿಡ ನಾಟಿ ಹಾಗೂ ದನದ ಹಟ್ಟಿ ನಿರ್ಮಾಣ ಕಾಮಗಾರಿಗಳನ್ನು ಹೆಚ್ಚಾಗಿ ಅನುಷ್ಠಾನಿಸಲಾಗಿದೆ. ಕಳೆದ ವರ್ಷ ತಾಲೂಕಿನ ೪ ಗ್ರಾ.ಪಂ.ಗಳು ಜಿಲ್ಲೆಯಲ್ಲೇ ಗಣನೀಯ ಕಾರ್ಯವನ್ನು ಮಾಡಿವೆ. ಅದಕ್ಕೆ ಸಹಕರಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು, ನರೇಗಾ ತಾಂತ್ರಿಕ ಸಿಬ್ಬಂದಿಗಳು ಹಾಗೂ ಗ್ರಾ.ಪಂ. ಸಿಬ್ಬಂದಿಗಳು ಅಭಿನಂದನಾರ್ಹರು.
-ನವೀನ್ ಭಂಡಾರಿ ಎಚ್., ಕಾರ್ಯನಿರ್ವಾಹಕ ಅಧಿಕಾರಿ, ಕಡಬ ತಾ.ಪಂ.

೨ವರ್ಷಗಳಿಂದ ನರೇಗಾ ಯೋಜನೆಯಲ್ಲಿ ಮೇಲಾಧಿಕಾರಿಗಳ ಮಾರ್ಗದರ್ಶನ, ಗ್ರಾ.ಪಂ. ಆಡಳಿತ ವರ್ಗದ ಸಹಕಾರ ಮತ್ತು ನರೇಗಾ ತಂಡದ ಶ್ರಮದ ಫಲದಿಂದ ಗುರಿ ಮೀರಿ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಸಾಲಿನಲ್ಲಿಯೂ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಇನ್ನಷ್ಟು ಸಾಧನೆಗಳನ್ನು ಯಶಸ್ವಿಯಾಗಿ ಮಾಡಬೇಕಾಗಿದ್ದು ಎಲ್ಲರ ಸಹಕಾರ ಅವಶ್ಯಕವಾಗಿದೆ. ಚೆನ್ನಪ್ಪ ಗೌಡ ಕಜೆಮೂಲೆ, ಸಹಾಯಕ ನಿರ್ದೇಶಕರು (ಗ್ರಾ.ಉ.) ತಾ.ಪಂ. ಕಡಬ

LEAVE A REPLY

Please enter your comment!
Please enter your name here