ಆತೂರು: ಹಲ್ಲೆ ಆರೋಪ-ದೂರು ದಾಖಲು

0

ಕಡಬ: ತಂದೆಯ ಮನೆಗೆ ಹೋಗಿದ್ದ ವೇಳೆ ಅವರ ಮೊದಲನೇ ಪತ್ನಿಯ ಮಗ ಕತ್ತಿ ಹಾಗೂ ಚೂರಿಯಿಂದ ಇರಿದು ಗಾಯಗೊಳಿಸಿದ್ದು ಅಲ್ಲದೇ ಆತನ ಕಾರಿನಿಂದ ನನ್ನ ಕಾರಿನ ಹಿಂಭಾಗಕ್ಕೆ ಗುದ್ದಿ ಜಖಂಗೊಳಿಸಿರುತ್ತಾನೆ ಎಂದು ಆರೋಪಿಸಿ ರಾಮಕುಂಜ ಗ್ರಾಮದ ಪಾಲೆತ್ತಡಿ ನಿವಾಸಿ ಮಹಮ್ಮದ್ ಎಂಬವರ ಪುತ್ರ ಜುಬೈರ್(36ವ.)ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೇ 27ರಂದು ಎಂದಿನಂತೆ ಸರ್ವೀಸ್ ಸ್ಟೇಷನ್‌ನಲ್ಲಿ ಕೆಲಸ ಮುಗಿಸಿ ಪತ್ನಿ ಹಾಗೂ ಮಕ್ಕಳೊಂದಿಗೆ ಆತೂರಿನ ಪಾಲೆತ್ತಡಿ ಎಂಬಲ್ಲಿರುವ ತಂದೆಯ ಮನೆಗೆ ಹೋಗಿ ರಾತ್ರಿ 9.30ರ ವೇಳೆಗೆ ತಂದೆ-ತಾಯಿಯೊಂದಿಗೆ ಮಾತನಾಡುತ್ತಿರುವಾಗ ತಂದೆಯ ಮೊದಲನೇ ಪತ್ನಿಯ ಮಗ ನಸೀಬ್, ನೀನು ಯಾಕೆ ವಿದೇಶದಲ್ಲಿರುವ ಅಣ್ಣ ಅನ್ಸರ್‌ನೊಂದಿಗೆ ಮಾತನಾಡುತ್ತಿಲ್ಲ ಎಂದು ಹೇಳಿ ನಂತರ ವಿಡಿಯೋ ಕರೆ ಮಾಡಿ ಮಾತನಾಡುವಂತೆ ಮೊಬೈಲ್ ನೀಡಿದಾಗ ವಿದೇಶದಲ್ಲಿದ್ದ ಅನ್ಸರ್ ಏಕಾಏಕಿ ತಂದೆಗೆ ಅವಾಚ್ಯವಾಗಿ ಬೈದು ನಿಂದಿಸಿದ್ದಾನೆ. ಈ ವೇಳೆ ನಾನು ಮಾತನಾಡದೇ ಮೊಬೈಲ್ ಅನ್ನು ನಸೀಬ್‌ಗೆ ನೀಡಿದ್ದು ಆ ಸಮಯದಲ್ಲಿ ನಸೀಬ್ ಮನೆಯ ಒಳಗೆ ಹೋಗಿ ಅಡುಗೆ ಕೋಣೆಯಿಂದ ಕತ್ತಿ, ಚೂರಿ ತಂದು ಹಲ್ಲೆ ಮಾಡಿದ ಪರಿಣಾಮ ನನ್ನ ಕುತ್ತಿಗೆಗೆ ಗೀರಿದ ಗಾಯ ಹಾಗೂ ಹೊಟ್ಟೆಯ ಎಡಬಾಗಕ್ಕೆ ರಕ್ತಗಾಯವಾಗಿರುತ್ತದೆ. ಅಲ್ಲದೆ ನೆಲಕ್ಕೆ ದೂಡಿ ಹಾಕಿ ಕಾಲಿನಿಂದ ತುಳಿದು ಬಟ್ಟೆಯನ್ನು ಹರಿದು ಅಲ್ಲಿಯೇ ಇದ್ದ ಪರೋಟ ಮಾಡುವ ತವಾದಿಂದ ತಲೆಗೆ ಗುದ್ದಿ ಗಾಯಗೊಳಿಸಿರುತ್ತಾನೆ. ಈ ಸಮಯ ಅಲ್ಲಿಯೇ ಇದ್ದ ನನ್ನ ಪತ್ನಿ, ತಾಯಿ ಹಾಗೂ ತಂದೆಯವರು ರಕ್ಷಣೆಗೆ ಬಂದಿದ್ದು ತಾಯಿಯನ್ನು ಸಹ ನಸೀಬ್ ದೂಡಿ ಹಾಕಿ ಅವರಿಗೂ ಕತ್ತಿಯಿಂದ ಹಲ್ಲೆಗೆ ಯತ್ನಿಸಿರುತ್ತಾನೆ. ಅವರಿಗೆ ಬಲಕೈ ಅಂಗೈಗೆ ರಕ್ತಗಾಯವಾಗಿರುತ್ತದೆ. ನಂತರ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಮನೆಯ ಹೊರಗೆ ಹೋಗಿ ಆತನು ಬಂದಿದ್ದ ಕಾರಿನಿಂದ ನನ್ನ ಕಾರಿನ ಹಿಂದುಗಡೆಗೆ ಗುದ್ದಿ ಜಖಂಗೊಳಿಸಿರುತ್ತಾನೆ. ಈ ವಿಚಾರ ತಿಳಿದು ನನ್ನ ಚಿಕ್ಕಪ್ಪನ ಮಗ ಅಬ್ದುಲ್ ಶರೀ ಮತ್ತು ನನ್ನ ಗೆಳೆಯ ಶಾಹುಲ್ ಹಮೀದ್‌ರವರು ಬಂದು ಗಾಯಗೊಂಡಿದ್ದ ನನ್ನನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂದು ಜುಬೈರ್‌ರವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಜುಬೈರ್‌ರವರು ನೀಡಿದ ದೂರಿನ ಮೇರೆಗೆ ಕಲಂ: 504, 324, 323, 341, 506, 427  R/W 34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here