ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಂದ ಸರ್ವಾಧಿಕಾರಿ ಧೋರಣೆ ಆರೋಪ-ಸಾರ್ವಜನಿಕರ ಸಭೆ: ಸಮಿತಿ ವಜಾಗೊಳಿಸುವಂತೆ, ನಾಗನ ಪ್ರತಿಷ್ಠೆಯನ್ನು ನಿಲ್ಲಿಸುವಂತೆ ಆಗ್ರಹ

0

  • ಸಾರ್ವಜನಿಕರ ತೀರ್ಮಾನವೇ ಅಂತಿಮ-ಪುಷ್ಪಾ ಎನ್
  • ಸರ್ವಾಧಿಕಾರಿ ಧೋರಣೆ ಬಿಡಬೇಕು-ಜಯಂತ ನಡುಬೈಲ್
  • ನಾಗನ ಪ್ರತಿಷ್ಠೆ ನಿಲ್ಲಿಸಿ, ಸಮಿತಿ ವಜಾ ಮಾಡಿ-ಅರುಣ್ ಪುತ್ತಿಲ
  • ಯಾವ ಮಾಹಿತಿಯೂ ಸಿಗುವುದಿಲ್ಲ-ಬಿ.ಟಿ ಸಾಲ್ಯಾನ್

ಪುತ್ತೂರು: ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯನ್ನು ವಜಾಗೊಳಿಸುವಂತೆ ಒತ್ತಾಯಿಸಿ ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಅವರ ಅಧ್ಯಕ್ಷತೆಯಲ್ಲಿ ದೇವಳದ ವಠಾರದಲ್ಲಿ ಮೇ.೩೦ರಂದು ಸಭೆ ನಡೆಯಿತು.

ಸರ್ವಾಧಿಕಾರಿ ಧೋರಣೆ ಬಿಡಬೇಕು-ಜಯಂತ ನಡುಬೈಲ್
ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ ದೇವಸ್ಥಾನ ಭಕ್ತರಿಗೆ ಸೇರಿದ್ದಾಗಿದ್ದು ಇಲ್ಲಿ ಸರ್ವಾಧಿಕಾರ ನಡೆಸಲು ಯಾರಿಗೂ ಅವಕಾಶವಿಲ್ಲ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ದೇವಸ್ಥಾನದ ಅಭಿವೃದ್ಧಿ ಕೆಲಸಗಳಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವುದನ್ನು ಬಿಡಬೇಕು ಎಂದು ಹೇಳಿದರು. ಪ್ರಸ್ತುತ ದೇವಸ್ಥಾನಕ್ಕೆ ಸಂಬಂಧಪಟ್ಟು ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ರದ್ದುಗೊಳಿಸಿ ಎಲ್ಲರ ವಿಶ್ವಾಸ ಪಡೆದ ಬಳಿಕ ಮುಂದುವರಿಸಬೇಕು. ನಾಗನ ಕಟ್ಟೆಯನ್ನು ಸರಿಯಾದ ರೀತಿಯಲ್ಲಿ ಕಟ್ಟಬೇಕು ಎಂದು ಅವರು ಹೇಳಿದರು.

ಯಾವ ಮಾಹಿತಿಯೂ ಸಿಗುವುದಿಲ್ಲ-ಬಿ.ಟಿ ಸಾಲ್ಯಾನ್
ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ಮಾತನಾಡಿ ಮೃತ್ಯುಂಜಯೇಶ್ವರ ದೇವಸ್ಥಾನ ಎಲ್ಲರಿಗೆ ಸೇರಿದ್ದು, ಇಲ್ಲಿ ಆಡಳಿತ ನಡೆಸುವವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕು. ಇಲ್ಲಿ ನಡೆಯುವ ಯಾವುದೇ ಕಾಯಕ್ರಮದ ಮಾಹಿತಿ ನಿಕಟಪೂರ್ವ ಅಧ್ಯಕ್ಷನಾಗಿರುವ ನನಗೂ ಸಿಗುತ್ತಿಲ್ಲ. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಯಾರನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ, ಭಕ್ತರಲ್ಲಿ ಮಾತನಾಡಲೂ ಅವರಿಗೆ ಕಷ್ಟ ಆಗುವುದಾದರೆ ಅಧ್ಯಕ್ಷರು ಅಧಿಕಾರ ಬಿಟ್ಟು ಹೊರ ಹೋಗಬೇಕು. ಅಭಿವೃದ್ಧಿ ಸಮಿತಿ ಮಾಡಿಯೇ ಮುಂದಿನ ಕಾರ್ಯಚಟುವಟಿಕೆ ನಡೆಯುವಂತಾಗಬೇಕು ಎಂದು ಅವರು ಹೇಳಿದರು.

ನಾಗನ ಕಟ್ಟೆ ನಿರ್ಮಾಣ ಸರಿಯಾಗಿ ಆಗಿಲ್ಲ-ಅಣ್ಣಿ ಪೂಜಾರಿ
ಜಾತ್ರೋತ್ದವ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಅಣ್ಣಿ ಪೂಜಾರಿ ಮಾತನಾಡಿ ನಾಗನ ಕಟ್ಟೆ ನಿರ್ಮಾಣ ಸರಿಯಾಗಿ ಆಗಿಲ್ಲ ಎಂದು ಅದನ್ನು ನೋಡುವಾಗಲೇ ಅಂದಾಜಾಗುತ್ತದೆ. ನಾಗನ ಪ್ರತಿಷ್ಠೆ ವಿಚಾರದಲ್ಲಿ ಊರವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಬಗ್ಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡರಲ್ಲಿ ತಿಳಿಸಿದ್ದೇನೆ, ಆದರೂ ಅವರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳಿದರು.

ನಾಗನ ಪ್ರತಿಷ್ಠೆ ನಿಲ್ಲಿಸಿ, ಸಮಿತಿ ವಜಾ ಮಾಡಿ-ಅರುಣ್ ಪುತ್ತಿಲ
ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿರುವ ಲೋಕಪ್ಪ ಗೌಡರವರು ಸರ್ವಾಧಿಕಾರದ ಮೂಲಕ ದೇವಸ್ಥಾನದಲ್ಲಿ ಆಡಳಿತ ನಡೆಸುತ್ತಿದ್ದು ಗ್ರಾಮಸ್ಥರಿಗೆ, ಭಕ್ತರಿಗೆ ಬೆಲೆ ನೀಡದೇ ತಮಗಿಚ್ಚೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ, ನಾಗನ ಕಟ್ಟೆ ನಿರ್ಮಾಣ ಮಾಡಲು ಸಾರ್ವಜನಿಕರ ಸಭೆ ಕರೆದು ಜೀರ್ಣೋದ್ಧಾರ ಸಮಿತಿ ರಚನೆ ಮಾಡಬೇಕೆಂಬ ಆಗ್ರಹವನ್ನು ವ್ಯವಸ್ಥಾಪನಾ ಸಮಿತಿಯವರೇ ಮಾಡಿದರು ಕೂಡಾ ಅದನ್ನು ಧಿಕ್ಕರಿಸಿ ಮಾಸ್ಟರ್ ಪ್ಲಾನರಿಯವರಿಗೆ ೩ ಲಕ್ಷದ ೮೦ ಸಾವಿರಕ್ಕೆ ಗುತ್ತಿಗೆ ನೀಡಿ ಧಾರ್ಮಿಕ ವ್ಯವಸ್ಥೆಯಲ್ಲಿ ಇಲ್ಲದ ಹಾಗೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿ ನಾಗನ ಸಾನಿಧ್ಯವನ್ನು ಕುಂಠಿತ ಮಾಡುವ ಪ್ರಯತ್ನ ಮತ್ತು ಇಡೀ ಊರಿಗೆ ದೋಷ ಬರುವಂತ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ನಾಡಿದ್ದು ೬ನೇ ತಾರೀಕಿಗೆ ನಡೆಯುವ ನಾಗನ ಪ್ರತಿಷ್ಠೆಯನ್ನು ನಿಲ್ಲಿಸಬೇಕು ಎಂಬುವುದು ನಮ್ಮೆಲ್ಲರ ಆಗ್ರಹವಾಗಿದೆ ಎಂದು ಅವರು ಹೇಳಿದರು.

೭೦-೭೫ ಲಕ್ಷ ರೂ ಹಣ ವ್ಯಯಿಸಿ ದೇವಸ್ಥಾನದ ಕೆರೆ ಅಭಿವೃದ್ಧಿ ಮಾಡಬೇಕಾಗಿದ್ದ ಗುತ್ತಿಗೆಯನ್ನೂ ಮಾಸ್ಟರ್ ಪ್ಲಾನರಿಯವರಿಗೆ ೨.೫ ಕೋಟಿಯಿಂದ ೩ ಕೋಟಿ ಅಂದಾಜಿಗೆ ಗುತ್ತಿಗೆ ನೀಡಿದ್ದು ಇದರಲ್ಲಿ ಅವ್ಯವಹಾರ ಎದ್ದು ಕಾಣುತ್ತಿದೆ. ಅಲ್ಲದೇ ದೇವಸ್ಥಾನದ ಬ್ಯಾಂಕ್ ಅಕೌಂಟ್‌ನಿಂದ ಹಣ ಡ್ರಾ ಮಾಡಿ ಧಾರ್ಮಿಕ ದತ್ತಿ ಇಲಾಖೆಗೆ ಮತ್ತು ಸರಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ ಅರುಣ್ ಕುಮಾರ್ ಪುತ್ತಿಲರವರು ಇದೆಲ್ಲವೂ ತನಿಖೆ ಆಗಬೇಕು ಮತ್ತು ತನಿಖೆಗೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಕೂಡಲೇ ವ್ಯವಸ್ಥಾಪನಾ ಸಮಿತಿಯನ್ನು ವಜಾ ಮಾಡಬೇಕು. ಸರ್ವಾಧಿಕಾರ ಮಾಡುತ್ತಿರುವ ಅಧ್ಯಕ್ಷ ಲೋಕಪ್ಪ ಗೌಡ ಹಾಗೂ ಕಾರ್ಯದರ್ಶಿ ಜನಾರ್ದನ ಜೋಯಿಸ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಸಾರ್ವಜನಿಕರ ತೀರ್ಮಾನವೇ ಅಂತಿಮ-ಪುಷ್ಪಾ ಎನ್
ಅಧ್ಯಕ್ಷತೆ ವಹಿಸಿದ್ದ ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಮಾತನಾಡಿ ಸಾರ್ವಜನಿಕರ ಮುಖಾಂತರ ಕಟ್ಟಿದ ದೇವಸ್ಥಾನ ಇದಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ, ಭಕ್ತರ ತೀರ್ಮಾನವೇ ಅಂತಿಮ. ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ನಾಗನ ಪ್ರತಿಷ್ಠಾಪನೆಯನ್ನು ಸಾರ್ವಜನಿಕರ ಅಭಿಲಾಷೆಯನ್ನು ಕೇಳಿಕೊಂಡು ಸರಿಯಾದ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಮಾಡಬೇಕು ಎಂದು ಅವರು ಹೇಳಿದರು.

ಮನೆಯಲ್ಲಿ ಸಭೆ ನಡೆದ ಮಾಹಿತಿಯಿದೆ-ಅಶೋಕ್ ಪುತ್ತಿಲ
ಮುಂಡೂರು ಗ್ರಾ.ಪಂ ಸದಸ್ಯ ಅಶೋಕ್ ಕುಮಾರ್ ಪುತ್ತಿಲ ಮಾತನಾಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಮನೆಯಲ್ಲಿ ಡಾ.ಎಂ.ಕೆ ಪ್ರಸಾದ್‌ರವರನ್ನು ಕರೆಸಿ ಸಭೆ ನಡೆದಿದೆ ಎನ್ನುವ ಮಾಹಿತಿ ತಿಳಿದು ಬಂದಿದ್ದು ಇದರಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ಕೆಲವೇ ಮಂದಿ ಪಾಲ್ಗೊಂಡಿದ್ದಾರೆ ಎನ್ನಲಾಗುತ್ತಿದೆ. ದೇವಸ್ಥಾನದ ಕಾರ್ಯಕ್ರಮಗಳು ಏನೇ ಇದ್ದರೂ ಅದು ದೇವಸ್ಥಾನದಲ್ಲೇ ಆಗಬೇಕು ಎಂದು ಹೇಳಿದರು.

ಸಭೆಯಲ್ಲಿ ಕೇಳಿ ಬಂದ ವಿವಿಧ ಅಭಿಪ್ರಾಯಗಳು:
ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಸುಂದರ ಗೌಡ ಮಾತನಾಡಿ ನಾಡಿದ್ದು ನಡೆಯುವ ಕಾರ್ಯಕ್ರಮ ರದ್ದು ಮಾಡಬೇಕು, ವ್ಯವಸ್ಥಾಪನಾ ಸಮಿತಿ ವಜಾ ಮಾಡಬೇಕು ಎಂದು ಹೇಳಿದರು.

ಮುಂಡೂರು ಹಾಲು ಸೊಸೈಟಿಯ ನಿರ್ದೇಶಕ ಅನಿಲ್ ಕುಮಾರ್ ಕರ್ಣ್ಣಾರ್ನೂಜಿ ಮಾತನಾಡಿ ದೇವಸ್ಥಾನದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ ಮಾಹಿತಿ ನಮಗೆ ಸಿಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಜಯಗುರು ಆಚಾರ್‌ರವರು ದೇವಸ್ಥಾನದ ಹಣದ ವ್ಯವಹಾರದ ವಿಚಾರವಾಗಿ ಮಾತನಾಡಿ ಲೋಕಾಯುಕ್ತಕ್ಕೆ ದೂರು ನೀಡುವಂತೆ ಆಗ್ರಹಿಸಿದರು.


ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ಸೀತರಾಮ ಗೌಡ, ಬಾಲಚಂದ್ರ ಗೌಡ ಕಡ್ಯ, ಮನು ರೈ, ಶ್ರೀರಂಗ ಶಾಸ್ತ್ರಿ, ಮೊದಲಾದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಜನಾರ್ದನ ಮೇಸ್ತ್ರಿ ಎಂಬವರು ಮಾತನಾಡಿ ತಾನು ೧೪ ವರ್ಷಗಳ ಹಿಂದೆ ದೇವಸ್ಥಾನದಲ್ಲಿ ಮಾಡಿದ ಕೆಲಸದ ಸಂಬಲ ರೂ.೫೦ ಸಾವಿರದ ಚೆಕ್ ನನಗೆ ನೀಡಿದ್ದು ಅದರಲ್ಲಿ ನನ್ನ ಹೆಸರು ತಪ್ಪಾಗಿ ಬರೆದ ಕಾರಣ ನನಗೆ ಬ್ಯಾಂಕ್‌ನಿಂದ ಹಣ ಪಡೆಯಲು ಸಾಧ್ಯವಾಗಿಲ್ಲ, ಆ ಹಣ ನನಗೆ ಇದುವರೆಗೂ ಸಿಕ್ಕಿಲ್ಲ ಎಂದು ಹೇಳಿದರು.


ಮುಂಡೂರು ಗ್ರಾ.ಪಂ ಸದಸ್ಯ ಅರುಣಾ ಕಣ್ಣಾರ್ನೂಜಿ, ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ನಾಯ್ಕ, ಮಾಜಿ ಸದಸ್ಯರುಗಳಾದ ಕೊರಗಪ್ಪ ನಾಯ್ಕ, ಗಣೇಶ್ ನಾಯ್ಕ ಹಾಗೂ ಶಕುಂತಳಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಮುಂಡೂರು ಗ್ರಾ.ಪಂ ಸದಸ್ಯ ಬಾಲಕೃಷ್ಣ ಕುರೆಮಜಲು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಮುಂಡೂರು ಗ್ರಾ.ಪಂ ಸದಸ್ಯ ಅಶೋಕ್ ಕುಮಾರ್ ಪುತ್ತಿಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನನ್ನ ವಿರುದ್ಧದ ಆರೋಪಗಳಲ್ಲಿ ಸತ್ಯಾಂಶವಿಲ್ಲ-ಲೋಕಪ್ಪ ಗೌಡ
ಸಭೆಯಲ್ಲಿ ವ್ಯಕ್ತವಾದ ಆರೋಪಗಳ ಬಗ್ಗೆ ಲೋಕಪ್ಪ ಗೌಡರವರನ್ನು ‘ಸುದ್ದಿ’ ಸಂಪರ್ಕಿಸಿದಾಗ ಸಭೆಯಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟು ಯಾವುದೇ ಆರೋಪಗಳು ಬಂದಿದ್ದರು ಕೂಡಾ ಅದು ಸತ್ಯಕ್ಕೆ ದೂರವಾದ ಆರೋಪವಾಗಿದೆ. ಪ್ರತೀ ತಿಂಗಳು ಎರಡನೇ ಬಾನುವಾರ ಸಂಜೆ ದೇವಸ್ಥಾನದಲ್ಲಿ ಸಭೆ ನಡೆಯುತ್ತಾ ಬಂದಿದ್ದು ಸದಸ್ಯರ ಗಮನಕ್ಕೆ ತಂದೇ ಸಭೆ ನಡೆಸಲಾಗುತ್ತದೆ. ಮೊನ್ನೆಯ ಸಭೆಗೆ ಇಬ್ಬರು ಸದಸ್ಯರು ಕಾರಣ ಹೇಳಿ ತಪ್ಪಿಸಿದ್ದು ಆ ಬಳಿಕ ಬೇರೆ ಸಭೆಯಲ್ಲಿ ಬಂದು ನನ್ನ ವಿರುದ್ಧವಾಗಲೀ, ವ್ಯವಸ್ಥಾಪನಾ ಸಮಿತಿಯ ವಿರುದ್ಧವಾಗಲೀ ಆರೋಪ ಮಾಡುವುದಕ್ಕೆ ಅರ್ಥವಿಲ್ಲ ಎಂದು ಅವರು ಹೇಳಿದರು.

ಅರುಣ್ ಕುಮಾರ್ ಪುತ್ತಿಲ ಅವರು ಜನರನ್ನು ಸೇರಿಸಿಕೊಂಡು ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದು ಒಂದು ವರ್ಷದಲ್ಲಿ ಬ್ರಹ್ಮಕಲಶೋತ್ಸವ ಮಾಡಬೇಕೆಂದು ನಾವು ಯೋಚಿಸಿದ್ದು ಅದು ನನ್ನ ಅವಧಿಯಲ್ಲಿ ಆಗಬಾರದು ಎಂಬುವುದು ಅವರ ಉದ್ದೇಶವಾಗಿದ್ದು ನನ್ನನ್ನು ಅಧ್ಯಕ್ಷ ಹುದ್ದೆಯಿಂದ ಇಳಿಸಿ ಅಧೀಕಾರ ಪಡೆಯಬೇಕು ಎಂಬುವುದೂ ಅವರ ಉದ್ದೇಶವಾಗಿದೆ . ಸದ್ಯ ನಾನು ಬೆಂಗಳೂರಿನಲ್ಲಿದ್ದು ಊರಿಗೆ ಬಂದ ಎಲ್ಲದಕ್ಕೂ ವಿವರವಾಗಿ ಉತ್ತರ ಕೊಡುತ್ತೇನೆ ಎಂದು ಲೋಕಪ್ಪ ಗೌಡ ಹೇಳಿದರು.

LEAVE A REPLY

Please enter your comment!
Please enter your name here