ದೆಹಲಿ ಸೂಪರ್ ಲೀಗ್ ಕ್ರಿಕೆಟ್: ಬೆಂಗಳೂರು ಬುಲ್ಸ್ ತಂಡಕ್ಕೆ ಕೂರ್ನಡ್ಕದ ನಿಶಾದ್, ಕಬಕದ ರಿಹಾಂ ಆಯ್ಕೆ

0

ಪುತ್ತೂರು: ದೆಹಲಿಯಲ್ಲಿ ಜೂ.15ರಿಂದ ನಡೆಯಲಿರುವ ದೆಹಲಿ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಪುತ್ತೂರಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಕೂರ್ನಡ್ಕ ಸಂಜಯ ನಗರದ ನಿಶಾದ್ ಹಾಗೂ ಕಬಕ ವಿದ್ಯಾಪುರದ ಮಹಮ್ಮದ್ ರಿಹಾಂ ಕರ್ನಾಟಕ ರಾಜ್ಯ ತಂಡವಾದ ಬೆಂಗಳೂರು ಬುಲ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ನಿಶಾದ್ ಅವರು ಅಂಡರ್-16 ತಂಡದಲ್ಲಿ ಸ್ಥಾನ ಪಡೆದಿದ್ದು ಮಹಮ್ಮದ್ ರಿಹಾಂ ಅವರು ಅಂಡರ್-19 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನಿಶಾದ್ ಹಾಗೂ ಮಹಮ್ಮದ್ ರಿಹಾಂ ಇಬ್ಬರು ಕೂಡಾ ಪುತ್ತೂರು ಕ್ರಿಕೆಟ್ ಅಕಾಡೆಮಿಯಲ್ಲಿ ಕೋಚ್ ಹರಿಶ್ಚಂದ್ರ ಆಚಾರ್ಯ ಅವರಿಂದ ತರಬೇತಿ ಪಡೆದಿದ್ದಾರೆ. ನಿಶಾದ್‌ರವರು ಹರಿಶ್ಚಂದ್ರ ಆಚಾರ್ಯರವರಿಂದ ಮೂರು ವರ್ಷ ತರಬೇತಿ ಪಡೆದುಕೊಂಡಿದ್ದು ಮಹಮ್ಮದ್ ರಿಹಾಂ ಅವರು ಒಂದು ವರ್ಷ ಕೋಚಿಂಗ್ ಪಡೆದು ಪ್ರಸ್ತುತ ಫಿಲೋಮಿನಾ ಕಾಲೇಜಿನ ಎಲ್ಯಾಸ್ ಪಿಂಟೋ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಇವರಿಬ್ಬರೂ ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡು ತಂಡಕ್ಕ ಸೇರ್ಪಡೆಗೊಂಡಿದ್ದಾರೆ.

ಕೂರ್ನಡ್ಕ ಸಂಜಯ ನಗರದ ಹಮೀದ್ ಮತ್ತು ಮಿಸ್ರಿಯಾ ದಂಪತಿ ಪುತ್ರರಾಗಿರುವ ನಿಶಾದ್ ಅವರು ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಗಮನ ಸೆಳೆದಿದ್ದು ಆಲ್‌ರೌಂಡರ್ ರೂಪದಲ್ಲಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸದ್ಯ ಇವರು ಪುತ್ತೂರು ಬೆಥನಿ ವಿದ್ಯಾಸಂಸ್ಥೆಯಲ್ಲಿ ೧೦ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಮಡಿಕೇರಿ ಸೋಮವಾರಪೇಟೆ ನಿವಾಸಿಯಾಗಿರುವ ಅಬ್ದುಲ್ ರಝಾಕ್ ಮತ್ತು ರಶೀದಾ ಕೆ ದಂಪತಿ ಪುತ್ರನಾಗಿರುವ ಮಹಮ್ಮದ್ ರಿಹಾಂ ಅವರು ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್‌ನಲ್ಲಿ ಗಮನಾರ್ಹ ಸಾಧನೆ ತೋರಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಬಕ ವಿದ್ಯಾಪುರದಲ್ಲಿರುವ ಅಜ್ಜಿ ಮನೆಯಲ್ಲಿ ವಾಸವಾಗಿರುವ ಮಹಮ್ಮದ್ ರಿಹಾಂ ಅವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದಾರೆ.

10 ರಾಜ್ಯಗಳ ತಂಡ
ದೆಹಲಿ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು 10 ರಾಜ್ಯಗಳ ತಂಡಗಳು ಭಾಗವಹಿಸಲಿದ್ದು ಕರ್ನಾಟಕ ರಾಜ್ಯದ ಪರವಾಗಿ ಬೆಂಗಳೂರು ಬುಲ್ಸ್ ತಂಡ ಭಾಗವಹಿಸಲಿದೆ. ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಭವಿಷ್ಯದ ಮೆಟ್ಟಿಲಾಗಿ ಈ ಪಂದ್ಯಾಟ ಸಹಕಾರಿಯಾಗಲಿದೆ.

ಪುತ್ತೂರು ಕ್ರಿಕೆಟ್ ಅಕಾಡೆಮಿಯಿಂದ ತರಬೇತಿ


ಕಳೆದ 12 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪುತ್ತೂರು ಕ್ರಿಕೆಟ್ ಅಕಾಡೆಮಿಯಲ್ಲಿ ಕೋಚಿಂಗ್ ಪಡೆದ ಅನೇಕ ವಿದ್ಯಾರ್ಥಿಗಳು ಕ್ರಿಕೆಟ್ ಕ್ಷೇತ್ರದ ವಿವಿಧ ಕಡೆಗಳಲ್ಲಿ ಮಿಂಚಿದ್ದಾರೆ. ಈ ಹಿಂದೆ ಇದೇ ಅಕಾಡೆಮಿಯಲ್ಲಿ ತರಬೇತಿ ಪಡೆದ 15ಮಂದಿ ವಿದ್ಯಾರ್ಥಿಗಳು ಇಂಡಿಯನ್ ಕ್ರಿಕೆಟ್ ಅಕಾಡೆಮಿಯಲ್ಲಿ ಆಡಿ ಉತ್ತಮ ಪ್ರದರ್ಶನ ನೀಡಿದ್ದರು. ಇತ್ತೀಚೆಗೆ ನಾಲ್ಕು ಆಟಗಾರರು ಪುಣೆಯಿಂದ ಸಲೆಕ್ಟ್ ಆಗಿ ಗೋವಾ ತಂಡಕ್ಕೆ ಆಡಿದ್ದರು. ಇದೀಗ ನಿಶಾದ್ ಹಾಗೂ ಮಹಮ್ಮದ್ ರಿಹಾಂ ಅವರು ದೆಹಲಿಯಲ್ಲಿ ನಡೆಯಲಿರುವ ದೆಹಲಿ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಆಯ್ಕೆಗೊಂಡಿದ್ದಾರೆ. ಇದು ನಮಗೆ ಸಂತೋಷ ತಂದಿದೆ.ಹರಿಶ್ಚಂದ್ರ ಆಚಾರ್ಯ, ಕೋಚ್

LEAVE A REPLY

Please enter your comment!
Please enter your name here