ಆಹಾರ ಅರಸಿ ಕೃಷಿ ತೋಟಗಳಿಗೆ ಲಗ್ಗೆ ಇಡುವ ಕಾಡಾನೆಗಳಿಂದಾಗಿ ಅಪಾರ ಕೃಷಿ ಹಾನಿ

0

  • ಹೈರಾಣಾಗಿರುವ ಕೊಂಬಾರು, ಸಿರಿಬಾಗಿಲು ಗ್ರಾಮಗಳ ಕೃಷಿಕರು
ಕೊಂಬಾರು, ಸಿರಿಬಾಗಿಲು ಗ್ರಾಮಗಳಲ್ಲಿ ಆನೆ ದಾಳಿಯಿಂದಾಗಿ ಕೃಷಿ ಹಾನಿಯಾಗಿರುವುದು

ಕಡಬ: ಮಲೆನಾಡ ತಪ್ಪಲಿನ ಕೊಂಬಾರು ಗ್ರಾ.ಪಂ. ವ್ಯಾಪ್ತಿಯ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮಗಳ ಕೃಷಿ ತೋಟಗಳಿಗೆ ಪಕ್ಕದ ಕಾಡಿನಿಂದ ಆಹಾರ ಅರಸಿಕೊಂಡು ಬರುವ ಕಾಡಾನೆಗಳಿಂದಾಗಿ ದಿನನಿತ್ಯ ಅಪಾರ ಪ್ರಮಾಣದ ಕೃಷಿ ಹಾನಿಯಾಗಿ ಪರಿಸರದ ಕೃಷಿಕರು ಹೈರಾಣಾಗಿದ್ದಾರೆ.

 


ಅಭಿವೃದ್ಧಿಯ ವಿಚಾರದಲ್ಲಿ ಸಾಕಷ್ಟು ಹಿಂದುಳಿದಿರುವ ಈ ಅವಳಿ ಗ್ರಾಮಗಳಲ್ಲಿ ಜನವಸತಿ ಪ್ರದೇಶಕ್ಕಿಂತ ಹೆಚ್ಚು ಅರಣ್ಯವೇ ಆವರಿಸಿಕೊಂಡಿದೆ. ಎರಡೂ ಗ್ರಾಮಗಳ ಒಟ್ಟು ವಿಸ್ತೀರ್ಣ ೧೭,೧೧೮.೩೩ ಎಕ್ರೆ ಪ್ರದೇಶವಾದರೆ ಅದರಲ್ಲಿ ೧೪,೪೩೭.೭೪ ಎಕ್ರೆ ಪ್ರದೇಶ ಅರಣ್ಯ. ಇಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿರುವ ಜನರನ್ನು ಆನೆಗಳ ಉಪಟಳ ನಿರಂತರವಾಗಿ ಕಾಡುತ್ತಿದೆ. ಕೃಷಿಕರ ಅಡಕೆ, ರಬ್ಬರ್, ಬಾಳೆ, ತೆಂಗು ಮತ್ತಿತರ ಬಹುತೇಕ ಕೃಷಿ ಹುಟ್ಟುವಳಿಗಳು ಆನೆಗಳ ದಾಳಿಗೆ ಒಳಗಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸುತ್ತಿದೆ. ಒಂದು ಅಂದಾಜಿನ ಪ್ರಕಾರ ವರ್ಷದಲ್ಲಿ ಕನಿಷ್ಠ ಎಂದರೂ ೩-೪ ಸಾವಿರ ಅಡಕೆ ಮರಗಳು, ಸಾವಿರಕ್ಕೂ ಮಿಕ್ಕಿ ರಬ್ಬರ್ ಗಿಡಗಳು, ನೂರಾರು ತೆಂಗಿನ ಮರಗಳು, ಸಾವಿರಾರು ಬಾಳೆ ಗಿಡಗಳು, ಕೃಷಿಗೆ ನೀರುಣಿಸುವ ನೀರಾವರಿ ಪೈಪುಗಳು ಆನೆಗಳಿಂದಾಗಿ ನಾಶವಾಗುತ್ತಿವೆ. ಈ ಹಾನಿಗಳಿಗೆ ಸರಕಾರದಿಂದ ಲಭಿಸುವ ಪರಿಹಾರ ಧನ ಮಾತ್ರ ಅತ್ಯಲ್ಪ. ೫ ವರ್ಷದ ಹಿಂದೆ ಇಲ್ಲಿನ ಕೃಷಿಕ ಗಣೇಶ್ ಪಿಲಿಕಜೆ ಅವರಿಗೆ ಸೇರಿದ ೩ ಎಕರೆ ಅಡಕೆ ತೋಟ ರಾತ್ರಿ ಬೆಳಗಾಗುವುದರೊಳಗೆ ಅನೆ ದಾಳಿಗೆ ತುತ್ತಾಗಿ ಸಂಪೂರ್ಣ ನಾಶವಾಗಿತ್ತು. ಗುಂಡ್ಯ ಸಮೀಪದ ದೇರಣೆ ಮಾಪಿಜಾಲು ನಿವಾಸಿ ರುಕ್ಮಯ್ಯ ಗೌಡ ಎಂಬವರಿಗೆ ಸೇರಿದ ಫಸಲು ಬರುತ್ತಿರುವ ಅಡಕೆ ತೋಟಕ್ಕೆ ನಿರಂತರ ೮ ಬಾರಿ ದಾಳಿ ನಡೆಸಿ ನೂರಾರು ಅಡಕೆ ಮರಗಳನ್ನು ನಾಶ ಮಾಡಿದ್ದ ಆನೆಗಳು, ಕಳೆದ ಕೆಲ ದಿನಗಳಿಂದ ಮತ್ತೆ ದಾಳಿ ನಡೆಸಿ ನೂರಕ್ಕೂ ಮಿಕ್ಕಿ ಫಸಲು ಬರುವ ಅಡಕೆ ಗಿಡಗಳನ್ನು ನಾಶ ಮಾಡಿವೆ. ಇಲ್ಲಿನ ಶೇ. ೭೫ ಕ್ಕೂ ಹೆಚ್ಚು ರೈತರು ಆನೆಗಳ ಉಪಟಳದಿಂದ ನಿರಂತರ ನಷ್ಟ ಅನುಭವಿಸುತ್ತಲೇ ಇದ್ದಾರೆ. ಕಳೆದ ಕೆಲ ದಿನಗಳಿಂದ ಸಿರಿಬಾಗಿಲು ಗ್ರಾಮದ ಬಾರ್ಯ ಪಿ.ಎಸ್.ಹೊನ್ನಪ್ಪ ಗೌಡರಿಗೆ ಸೇರಿದ ತೋಟಕ್ಕೆ ಆನೆಗಳು ಲಗ್ಗೆ ಇಟ್ಟು ಸುಮಾರು ೧೮೫ ಅಡಿಕೆ ಮರಗಳನ್ನು ಪುಡಿಗೈದಿವೆ.

ಶಿರಿಬಾಗಿಲು ಗ್ರಾಮದ ಪೆರ್ಜೆ, ಪಿಲಿಕಜೆ, ಅನಿಲ, ದೇರಣೆ, ಗುಂಡ್ಯ, ಬಾರ್ಯ, ರೆಂಜಾಳ, ಕೊಂಬಾರು ಗ್ರಾಮದ ಕಾಪಾರು, ಅಗರಿ, ಬಗ್ಪುಣಿ, ಕೋಲ್ಪೆ, ಮಿತ್ತಬೈಲು, ಕಮರ್ಕಜೆ, ಮರುವಂಜಿ, ಬೊಟ್ಟಡ್ಕ ಪ್ರದೇಶಗಳಿಗೆ ನಿತ್ಯ ಆನೆಗಳು ನಿರಂತರ ದಾಳಿ ನಡೆಸುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅತ್ಯಧಿಕ ಕೃಷಿ ನಾಶವಾಗಿದೆ. ಇಲ್ಲಿನ ದಟ್ಟವಾದ ಅರಣ್ಯ ಪ್ರದೇಶಗಳಲ್ಲಿ ಬೀಡುಬಿಟ್ಟಿರುವ ಆನೆಗಳು ಸಂಜೆಯಾಗುತ್ತಿದ್ದಂತೆ ನಾಡಿಗೆ ಇಳಿಯುತ್ತವೆ. ಕೃಷಿ ತೋಟಗಳಿಗೆ ದಾಂಗುಡಿ ಇಟ್ಟು ಮನಸೋ ಇಚ್ಚೆ ಕೃಷಿ ನಾಶದಲ್ಲಿ ತೊಡಗುತ್ತವೆ. ರೈತರು ಗರ್ನಾಲ್, ಪಟಾಕಿ ಸಿಡಿಸಿ ಆನೆಗಳನ್ನು ಓಡಿಸುವ ಪ್ರಯತ್ನ ನಡೆಸಿದರೂ ಅಷ್ಟೇನೂ ಪ್ರಯೋಜನಕ್ಕೆ ಬರುವುದಿಲ್ಲ. ಕೆಲವೊಮ್ಮೆ ಹಗಲಿನಲ್ಲೂ ಆನೆಗಳು ಇಲ್ಲಿ ಕಾಣ ಸಿಗುತ್ತವೆ. ಅದರಿಂದಾಗಿ ಜನ ಭಯಭೀತರಾಗಿ ರಸ್ತೆಗಳಲ್ಲಿ ಓಡಾಡಲೂ ಭಯಪಡುತ್ತಾರೆ.

ಅರಣ್ಯ ಇಲಾಖೆಯವರು ಕೃಷಿ ಹಾನಿ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡಿ ಸರಕಾರದ ಮಾರ್ಗಸೂಚಿ ಪ್ರಕಾರ ಸಿಗುವ ಪರಿಹಾರ ಮಾತ್ರ ಏನೇನೂ ಸಾಲದು. ಒಂದು ಅಡಕೆ ಗಿಡವನ್ನು ಸಾಕಿ ಬೆಳಸಿ ಫಸಲು ಬರುವಂತೆ ಮಾಡಬೇಕಾದರೆ ಕನಿಷ್ಟ ೩-೪ ಸಾವಿರ ರೂ. ಖರ್ಚಾಗುತ್ತದೆ. ಅಂತಹ ಗಿಡಗಳು ನಾಶವಾದರೆ ಒಂದು ಮರಕ್ಕೆ ಸಿಗುವ ಪರಿಹಾರ ಹೆಚ್ಚೆಂದರೆ ೮೦೦ ರೂ. ಮಾತ್ರ. ಆದುದರಿಂದ ಆನೆಗಳು ಜನವಸತಿ ಪ್ರದೇಶಕ್ಕೆ ಬಾರದಂತೆ ತಡೆಯಲು ಸರಕಾರ ಆಧುನಿಕ ರೀತಿಯ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಕೃಷಿ ಹಾನಿಗೆ ಸಮರ್ಪಕ ಪರಿಹಾರ ಸಿಗುವಂತೆ ಮಾಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

 


ನಮ್ಮ ತೋಟಕ್ಕೆ ಈ ಬಾರಿಯೂಆನೆಗಳು ಲಗ್ಗೆ ಇಟ್ಟು ಅಡಿಕೆ, ಬಾಳೆ ಕೃಷಿ ನಾಶವಾಗಿದೆ. ಕಳೆದ ಬಾರಿ ೧.೫ ಲಕ್ಷ ರೂ.ಗಳಿಗೂ ಮಿಕ್ಕಿ ನಷ್ಟವಾಗಿತ್ತು. ಆದರೆ ಕೃಷಿ ನಾಶ ವಾಗಿರುವುದಕ್ಕೆ ಕೇವಲ 32 ಸಾವಿರ ರೂ. ಪರಿಹಾರ ಮಂಜೂರು ಮಾಡಲಾಗಿದೆ. ಕೃಷಿ ಹಾನಿಗೆ ನಿಜವಾದ ನಷ್ಟವನ್ನು ಪರಿಹಾರವಾಗಿ ನೀಡಿದರೆ ಮಾತ್ರ ಕೃಷಿಕರಿಗೆ ಪ್ರಯೋಜನವಾಗಬಹುದು.ಗಣೇಶ್ ಪಿಲಿಕಜೆ, ಗ್ರಾ.ಪಂ. ಸದಸ್ಯ

 

ಆನೆಗಳು ಸಂಚರಿಸುವ ಪ್ರದೇಶಗಳಲ್ಲಿಸಾರ್ವಜನಿಕರು ಓಡಾಡದಂತೆ ಈಗಾಗಲೇ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಆನೆ ದಾಳಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಸರಕಾರದ ನಿಯಮಾನುಸಾರ ಪರಿಹಾರ ನೀಡಲಾಗುತ್ತಿದೆ.ರಾಘವೇಂದ್ರ, ವಲಯ ಅರಣ್ಯಾಧಿಕಾರಿ, ಸುಬ್ರಹ್ಮಣ್ಯ ವಲಯ

LEAVE A REPLY

Please enter your comment!
Please enter your name here