ಶಿರಾಡಿ ಗ್ರಾ.ಪಂ.ಪಿಡಿಒ ಅಮಾನತು ವೈಯಕ್ತಿಕ, ರಾಜಕೀಯ ಪ್ರೇರಿತ-ಅಧ್ಯಕ್ಷ, ಉಪಾಧ್ಯಕ್ಷರ ಆರೋಪ

0

ನೆಲ್ಯಾಡಿ: ಗ್ರಾಮ ಪಂಚಾಯಿತಿ ಲೆಕ್ಕ ಪತ್ರಗಳ ನಿರ್ವಹಣೆಯಲ್ಲಿ ನಿಯಮಗಳ ಉಲ್ಲಂಘನೆ, ಶಿಷ್ಟಾಚಾರ ಪಾಲಿಸದಿರುವುದು ಮತ್ತು ಕರ್ತವ್ಯಲೋಪ ಎಸಗಿರುವ ಆರೋಪದಲ್ಲಿ ಕಡಬ ತಾಲೂಕು ಶಿರಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ವೆಂಕಟೇಶ್‌ರವರನ್ನು ಅಮಾನತುಗೊಳಿಸಿ ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕುಮಾರ್‌ರವರು ಮಾಡಿರುವ ಆದೇಶ ವೈಯಕ್ತಿಕ ಹಾಗೂ ರಾಜಕೀಯ ಪ್ರೇರಿತವಾಗಿದೆ. ಈ ಅಮಾನತು ಆದೇಶ ಕೂಡಲೇ ಹಿಂಪಡೆದು ಅವರು ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡಬೇಕೆಂದು ಶಿರಾಡಿ ಗ್ರಾ.ಪಂ.ಅಧ್ಯಕ್ಷೆ ವಿನೀತಾ ತಂಗಚ್ಚನ್ ಹಾಗೂ ಉಪಾಧ್ಯಕ್ಷ ಕಾರ್ತಿಕೇಯನ್‌ರವರು ಒತ್ತಾಯಿಸಿದ್ದಾರೆ.

ಪಿ.ವೆಂಕಟೇಶ್‌ರವರು ಗ್ರಾಮ ಪಂಚಾಯತ್‌ನಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಸರಕಾರದ ಅನುದಾನಗಳನ್ನು ಹಾಗೂ ಆದೇಶಗಳನ್ನು ಸಮರ್ಪಕವಾಗಿ ನಿಯಮಾನುಸಾರ ನಿರ್ವಹಿಸಿರುತ್ತಾರೆ. 15ನೇ ಹಣಕಾಸಿನ ಹಾಗೂ ಇತರ ಅನುದಾನದ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸಿರುತ್ತಾರೆ. ನರೇಗಾ ಯೋಜನೆಯಲ್ಲಿ 2020-21ನೇ ಸಾಲಿನಲ್ಲಿ ಸರಕಾರ 9232 ಮಾನವ ದಿನಗಳ ಗುರಿ ನೀಡಿದ್ದು 20732 ಮಾನವ ದಿನಗಳ ಗುರಿ ಮೀರಿದ ಸಾಧನೆ ಮಾಡಲಾಗಿದೆ. 2021-22ನೇ ಸಾಲಿನಲ್ಲಿ ಸರಕಾರ 12,732 ಮಾನವ ದಿನಗಳ ಗುರಿ ನೀಡಿದ್ದು 24867 ಮಾನವ ದಿನಗಳ ಸೃಜನೆ ಮಾಡಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಶಿರಾಡಿ ಗ್ರಾಮ ಪಂಚಾಯತ್‌ಗೆ ಕೀರ್ತಿ ತಂದಿದ್ದಾರೆ. ಸದ್ರಿ ಪಿಡಿಒರವರು ಗ್ರಾಮ ಪಂಚಾಯತಿನಲ್ಲಿ ನಿಯಮಗಳ ಉಲ್ಲಂಘನೆ ಮಾಡಿರುವ ಬಗ್ಗೆ ಗ್ರಾಮ ಪಂಚಾಯತ್‌ಗೆ ಯಾವುದೇ ದೂರು ಅರ್ಜಿಗಳು ಬಂದಿರುವುದಿಲ್ಲ. ಅಭಿವೃದ್ಧಿ ಅಽಕಾರಿಯವರ ವಿರುದ್ಧ ಆರೋಪಿಸಿರುವ ದೂರುಗಳು ಸತ್ಯಕ್ಕೆ ದೂರವಾದವು ಎಂದು 27-4-2022ರಂದು ನಡೆದ ಸಾಮಾನ್ಯ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಆದ್ದರಿಂದ ಈ ಅಮಾನತು ಆದೇಶ ಹಿಂಪಡೆದು ಅವರು ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡುವಂತೆ ಅಧ್ಯಕ್ಷೆ ವಿನೀತಾ ತಂಗಚ್ಚನ್ ಹಾಗೂ ಉಪಾಧ್ಯಕ್ಷ ಕಾರ್ತಿಕೇಯನ್‌ರವರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here